Spiritual: ಪೂಜೆ ಎಂದರೇನು? ನಮ್ಮ ಪೂಜೆಯು ಸಾರ್ಥಕ್ಯವಾಗುವುದು ಹೇಗೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 12, 2022 | 7:05 AM

ಭಗವಂತ ಮಹಾಜ್ಯೋತಿ ನಾವು ಅಂಧಕಾರದಿಂದ ಕೂಡಿದ (ತಮೋಮಯವಾದ ದೇಹದಿಂದ ಕೂಡಿದ ) ಜ್ಯೋತಿ. ಈ ಅಂಧಕಾರದ ನಿವಾರಣೆಯೇ ಅಜ್ಞಾನದ ದೂರೀಕರಣ. ಆಗ ನಾವ್ಯಾರು ಎಂಬ ನಿಜವಾದ ಅರಿವು ಬರುತ್ತದೆ. ಆಗ ಪರಮಾನಂದವೆಂಬ ಪೂಜಾಫಲದ ಪ್ರಾಪ್ತಿ.

Spiritual: ಪೂಜೆ ಎಂದರೇನು? ನಮ್ಮ ಪೂಜೆಯು ಸಾರ್ಥಕ್ಯವಾಗುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಪೂಜೆ ಅನ್ನುವ ಪದವನ್ನು ಎಲ್ಲರೂ ಕೇಳಿರುತ್ತೀರಿ. ಏನೀ ಪೂಜೆ ಅಂದರೆ ? ಅದರ ಸಾರ್ಥಕತೆ ಎಲ್ಲಿ? ಪೂಜೆ ಎನ್ನುವುದೂ ಕೇವಲ ಒಂದುವರ್ಗಕ್ಕೆ ಮಾತ್ರ ಸೀಮಿತವೇ ? ಸಾಮಾನ್ಯರು ಏನುಮಾಡಬಹುದು ? ಎಂಬಿತ್ಯಾದಿ ಪ್ರಶ್ನೆಗಳ ಸರಮಾಲೆಗಳೇ ನಮ್ಮ ಮನೋಭೂಮಿಕೆಯಲ್ಲಿ ಅರಳುತ್ತವೆ. ಇದರ ಕುರಿತಾಗಿ  ನಡೆಸೋಣ.

“ದೇಹೋ ದೇವಾಲಯಃ ಪ್ರೋಕ್ತಃ ಜೀವೋ ದೇವಸ್ಸದಾಶಿವಃ |

ತ್ಯಜೇತ್ ಅಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್ ||

ಇದನ್ನೂ ಓದಿ
Indian book of Record: ಚಂದ್ರಹಾಸ ಅವರ ಕೃತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವ
Gallstone: ಶಸ್ತ್ರಚಿಕಿತ್ಸೆಯಿಲ್ಲದೆ ಪಿತ್ತಕೋಶದ ಕಲ್ಲುಗಳನ್ನು ತೆಗೆಯಲು ಸಾಧ್ಯವೆ! ಇಲ್ಲಿದೆ ಮನೆಮದ್ದು

ನಮ್ಮ ದೇಹವನ್ನು ದೇವಾಲಯದಂತೆ ಸ್ವಚ್ಛವಾಗಿಸಿ, ನಮ್ಮ ಪ್ರಾಣ ಶಕ್ತಿಯನ್ನು ಭಗವಂತನೆಂದು ಭಾವಿಸಿ, ಅಜ್ಞಾನವೆಂಬ ಅಂಧಕಾರದಿಂದ ಹೊರಬರುವುದಕ್ಕೋಸ್ಕರ ತಾನೇ ಅವನೆಂಬ ಭಾವದಿಂದ ಪೂಜಿಸಿ. ಎಂಬುದು ಮೇಲಿನ ಶ್ಲೋಕದ ಭಾವಾರ್ಥ.
ಮೊದಲನೇಯ ಅಂಶ ದೇಹಶುದ್ಧಿ. ಕೇವಲ ಸ್ನಾನದಿಂದ ಮಾತ್ರ ದೇಹಶುದ್ಧಿ ಆಗುವುದಿಲ್ಲ. ದೇವ ಪೂಜೆಗೆ ಯೋಗಾಸನಾದಿಗಳಿಂದ ದೇಹವನ್ನು ಪಕ್ವಗೊಳಿಸಿರಬೇಕು. ಭಗವತ್ಕಾರ್ಯ ಮಾಡುವಾಗ ಶರೀರಕ್ಕೆ ನೋವಿನ ಬಾಧೆ ಆಗದಿರುವ ರೀತಿ ದೇಹವನ್ನು ಸಿದ್ಧಪಡಿಸಿಕೊಂಡಲ್ಲಿ ಮುಂದಿನ ಅಂಶಗಳು ಸುಲಭವಾಗಿ ಅನುಭವಕ್ಕೆ ಬರುವುದು. ಎರಡನೇಯ ಅಂಶ ಜೀವ ದೇವರಲ್ಲಿ ಭೇದವಿಲ್ಲ ಎನ್ನುವ ಭಾವ ಅನುಭವಕ್ಕೆ ಬರುವಂತಹದು. ಇದು ಹೇಳಿದಷ್ಟು ಮತ್ತು ಕೇಳುವಷ್ಟು ಸುಲಭದ ವಿಚಾರವಲ್ಲ. ಒಂದು ಉದಾಹರಣೆಯ ಮೂಲಕ ತಿಳಿಯೋಣ.

ನಿಮ್ಮಲ್ಲಿ ಒಂದು ಲಾಟಾನುದೀಪ ಇದೆ ಎಂದು ಭಾವಿಸಿ. ಆ ದೀಪ ಗಾಜಿನಿಂದ ಆವರಿಸಿರುತ್ತದೆ. ಲಾಟಾನು ಉರಿದಾಗಲೆಲ್ಲ ಅದರಿಂದ ಬರುವ ಹೊಗೆಯ ಕಾರಣದಿಂದ ದೀಪದ ಬೆಳಕನ್ನು ರಕ್ಷಿಸಲಿರುವ ಗಾಜು ನಿಧಾನವಾಗಿ ಮಬ್ಬಾಗುತ್ತಾ ಬರುತ್ತದೆ. ಬೆಳಕಿನ ಪ್ರಮಾಣ ಕಡಿಮೆ ಆಗಲು ಆರಂಭವಾಗುತ್ತದೆ. ಒಂದು ದಿನ ಅದು ಉರಿಯುವುದು ಮಾತ್ರ ಕಾಣಿಸುತ್ತದೆ ಅದರಿಂದ ಬೆಳಕು ಪ್ರಸಾರ ಆಗುವುದೇ ಇಲ್ಲ. ಈಗ ಆ ಬೆಳಕಿನ ಅನುಭವ ನಮಗೆ ಸರಿಯಾಗಿ ಆಗಬೇಕಾದರೆ ನಾವೇನು ಮಾಡಬೇಕು? ಲಾಟಾನಿನ ಗಾಜನ್ನು ಜೋಪಾನವಾಗಿ ಹೊರತೆಗೆದು ಸ್ವಚ್ಛವಾದ ಬಟ್ಟೆಯಿಂದ ತುಂಬಾ ಜಾಗರೂಕರಾಗಿ ಶುಭ್ರಮಾಡಬೇಕು.

ಅದು ತೆಳುವಾದ ಗಾಜಾದ್ದರಿಂದ ಸ್ವಲ್ಪ ಎಡವಿದರೂ ಗಾಜು ನಷ್ಟವಾದೀತು ಅಲ್ಲವೇ? ಈ ರೀತಿಯಾಗಿ ಸ್ವಚ್ಛಗೊಳಿಸಿದ ಗಾಜನ್ನು ಪುನಃ ಲಾಟಾನಿಗೆ ಸೇರಿಸಿದಾಗ ಬೆಳಕು ಪೂರ್ಣಪ್ರಮಾಣದಲ್ಲಿ ಅನುಭವಕ್ಕೆ ಬರುತ್ತದೆ. ಅದೇ ಶುಭ್ರದೀಪವನ್ನು ಪ್ರಖರವಾದ ಸೂರ್ಯನ ಬೆಳಕಿನಲ್ಲಿಟ್ಟರೆ ಆ ಬೆಳಕಿನೊಂದಿಗೆ ಅದೂ ಬೆರೆತು ಎರಡೂ ಬೆಳಕು ಒಂದೇ ಎಂಬ ಅನುಭವವಾಗುತ್ತದೆ ಅಲ್ಲವೇ?
ಅದೇರೀತಿ ನಮ್ಮ ಅಂತರಂಗದ ಶಕ್ತಿ. ನಾವು ಆತ್ಮ, ಹೃದಯ, ಜೀವ, ಪ್ರಾಣ ಎಂದೇನು ಹೇಳುತ್ತೆವೆ ಅದೇ ಈ ಗಾಜಿನೊಳಗಿರುವ ದೀಪ. ಲಾಟಾನು ಅಂದರೆ ನಮ್ಮ ದೇಹ.

ಗಾಜು ಅಂದರೆ ನಮ್ಮ ಚಿತ್ತ (ಮನಸು/ಬುದ್ಧಿ). ಅಜ್ಞಾನವೆಂಬ ಮಸಿ ನಮ್ಮ ಅಂತಃಶಕ್ತಿಯನ್ನು ಹೊರಕಾಣದಂತೆ / ಅನುಭವಕ್ಕೆ ಬಾರದಂತೆ ಮಾಡುತ್ತದೆ. ಅದಕ್ಕಾಗಿ ನಾವು ಪೂಜೆ ಮಾಡಬೇಕು. ಶಿಲೆ/ಮೂರ್ತಿಗೆ/ಚಿತ್ರಕ್ಕೆ ಮಾಡುವುದು ಮಾತ್ರ ಪೂಜೆಯಲ್ಲ ಭಾವಶುದ್ಧಿಯೂ ಒಂದು ಪೂಜೆ. ನಮ್ಮ ಚಿತ್ತವನ್ನು ಸರಿಯಾದ ರೀತಿಯಲ್ಲಿ ಸದ್ಗುರುವಿನ ಮಾರ್ಗದರ್ಶನದಲ್ಲಿ ಶುಭ್ರವಾಗಿಸಿ(ಏಕೆಂದರೆ ಚಿತ್ತ ಎನ್ನುವುದು ಗಾಜಿನಂತೆ; ಜಾಗರೂಕತೆ ಇರಬೇಕು ಈ ವಿಚಾರದಲ್ಲಿ) ಒಳ್ಳೆಯ ಭಾವದಿಂದ ಪೂಜಿಸಿದರೆ ಅದು ಪ್ರಾಮಾಣಿಕ ಪೂಜೆ ಅನಿಸುವುದು. ಇಲ್ಲಿ ಯಾವ ವರ್ಗ ಬೇಧವೂ ಇರುವುದಿಲ್ಲ. ಹೇಗೆ ಸೂರ್ಯನ ಬೆಳಕಿನಲ್ಲಿ ಲಾಟಾನಿನ ಬೆಳಕು ಬೇರೆಯಾಗಿ ಕಾಣುವುದಿಲ್ಲವೋ ಅದೇ ರೀತಿ ಭಗವಂತನ ಪೂಜೆಯ ವಿಚಾರದಲ್ಲಿ ಶುದ್ಧಾಂತರಂಗವಿರುವ ಸಾಮಾನ್ಯನೂ ಆ ಪರಮ ಚೈತನ್ಯದಲ್ಲಿ ಬೇರೆಯಾಗುವುದಿಲ್ಲ.

ಭಗವಂತ ಮಹಾಜ್ಯೋತಿ ನಾವು ಅಂಧಕಾರದಿಂದ ಕೂಡಿದ (ತಮೋಮಯವಾದ ದೇಹದಿಂದ ಕೂಡಿದ ) ಜ್ಯೋತಿ. ಈ ಅಂಧಕಾರದ ನಿವಾರಣೆಯೇ ಅಜ್ಞಾನದ ದೂರೀಕರಣ. ಆಗ ನಾವ್ಯಾರು ಎಂಬ ನಿಜವಾದ ಅರಿವು ಬರುತ್ತದೆ. ಆಗ ಪರಮಾನಂದವೆಂಬ ಪೂಜಾಫಲದ ಪ್ರಾಪ್ತಿ.

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

S.R.B.S.S College ಹೊನ್ನಾವರ
kkmanasvi@gamail.com