Pitru Paksha 2022: ಪಿಂಡಪ್ರದಾನದ ಸ್ವರೂಪ ಮತ್ತು ಪ್ರೇತವೆಂದರೇನು? ಪಿತೃಗಳಿಗೆ ಪಿಂಡಪ್ರದಾನ ಮಾಡುವ ಉದ್ದೇಶವೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 19, 2022 | 9:55 AM

ಜನಿಸಿದ ಪ್ರತಿಯೊಂದು ಮಾನವ ಜೀವಿಗೂ ತನ್ನ ಜನ್ಮವಾದ ಧರ್ಮಕ್ಕನುಸಾರವಾಗಿ ಮಾಡಲೇಬೇಕಾದ ವಿಹಿತ ಕರ್ಮಗಳು ಇವೆ. ಆದರೆ ಇಂದು ನಾವೆಲ್ಲರೂ ಧನದಾಹಿಗಳಾಗಿ ಕರ್ತವ್ಯವನ್ನು ಮರೆತು ಧನಸಂಪಾದನೆಯೇ ಜೀವನದ ಪರಮೋದ್ದೇಶವೆಂಬಂತೆ ವ್ಯವಹರಿಸುತ್ತಿದ್ದೇವೆ.

Pitru Paksha 2022: ಪಿಂಡಪ್ರದಾನದ ಸ್ವರೂಪ ಮತ್ತು ಪ್ರೇತವೆಂದರೇನು? ಪಿತೃಗಳಿಗೆ ಪಿಂಡಪ್ರದಾನ ಮಾಡುವ ಉದ್ದೇಶವೇನು?
Spiritual
Follow us on

ಪಿತೃಪಕ್ಷದಲ್ಲಿ ಮತ್ತು ಉಳಿದ ದಿನಗಳಲ್ಲಿ ಹೇಗೆ ಪಿಂಡಪ್ರದಾನ ಮಾಡಬೇಕು? ಮಹಾಲಯ ಅಮಾಸ್ಯೆಯಲ್ಲಿ ಪ್ರದಾನ ಮಾಡಬೇಕಾದ ಪಿಂಡಗಳ ಸಂಖ್ಯೆಯೆಷ್ಟು ? ಪ್ರೇತವೆಂದರೇನು ?ಮಾನವ ತನ್ನ ಜೀವನದ ಮೂಲ ಉದ್ದೇಶವನ್ನು ಸರಿಯಾಗಿ ಪಾಲಿಸುವಲ್ಲಿ ವಿಫಲನಾದಾಗ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಈ ನೆಮ್ಮದಿಯ ಮೂಲ ತಿಳಿಯದೇ ದುಷ್ಟಚಟಗಳ ದಾಸನಾಗಿ ತಾನು ಮತ್ತು ತನ್ನವರ ಜೀವನಾವಸ್ಥೆಯನ್ನು ನರಕ ಮಾಡುತ್ತಿರುವ ಸ್ಥಿತಿ ಇಂದು ಹತ್ತು ಮನೆಗಳಿಗೊಂದರಂತೆ ಕಾಣುತ್ತದೆ ಎಂದರೆ ತಪ್ಪಿಲ್ಲ.

ಜನಿಸಿದ ಪ್ರತಿಯೊಂದು ಮಾನವ ಜೀವಿಗೂ ತನ್ನ ಜನ್ಮವಾದ ಧರ್ಮಕ್ಕನುಸಾರವಾಗಿ ಮಾಡಲೇಬೇಕಾದ ವಿಹಿತ ಕರ್ಮಗಳು ಇವೆ. ಆದರೆ ಇಂದು ನಾವೆಲ್ಲರೂ ಧನದಾಹಿಗಳಾಗಿ ಕರ್ತವ್ಯವನ್ನು ಮರೆತು ಧನಸಂಪಾದನೆಯೇ ಜೀವನದ ಪರಮೋದ್ದೇಶವೆಂಬಂತೆ ವ್ಯವಹರಿಸುತ್ತಿದ್ದೇವೆ. ಇದರಿಂದ ಮಾನಸಿಕ ಅಸಮತೋಲನವಾಗಿ ಆರೋಗ್ಯ,ಸಂಬಂಧಗಳಲ್ಲಿ ಬಹುರೀತಿಯ ಬಿರುಕು ಉಂಟಾಗಿ ಹೇಗೇಗೋ ಜೀವನಕಳೆಯುತ್ತಿದ್ದೇವೆ.

ಹಾಗಾದರೆ ನಮ್ಮ ಆದ್ಯ ಕರ್ತವ್ಯಗಳೇನು ? ನಾವುಗಳು ನೆಮ್ಮದಿಯಿಂದರಬೇಕು ಎಂದಾದರೆ ಪಿತೃಕಾರ್ಯವನ್ನು ಮಾಡಲೇಬೇಕು. ಅದುಹೇಗೆ ಎಂದರೆ. ಮುಖ್ಯವಾಗಿ ನಮ್ಮ ಹಿರಿಯರ ಮರಣದ ನಂತರ ಮಾಡಬೇಕಾದ ಕಾರ್ಯವನ್ನು ಸರಿಯಾಗಿ ಮಾಡಬೇಕು. ಮರಣವಾದ ಹನ್ನೊಂದನೇಯ ದಿನ 365 ಪಿಂಡಗಳನ್ನು ಒಂದು ವರ್ಷದ ಉದ್ದೇಶದಿಂದ ಮತ್ತು ಹನ್ನೆರಡು ತಿಂಗಳ ಕುರಿತಾಗಿ 12 ಪಿಂಡ ಮತ್ತು ಮಾಸಿಕಶ್ರಾದ್ಧದ ಕುರಿತಾಗಿ 16/17 ಪಿಂಡಗಳನ್ನು ಪ್ರದಾನ ಮಾಡಬೇಕು. ಇದಕ್ಕೆ ಸಂಬಂಧಿಸಿದ ಮಂತ್ರಗಳಿವೆ ಬಲ್ಲವರಿಂದ ಮಾಡಿಸಿ. ಹನ್ನೆರಡನೆಯ ದಿನ “ಸಪಿಂಡೀಕರಣ” ಎಂಬ ಶ್ರಾದ್ಧವನ್ನು ಮಾಡಬೇಕು. ಅಂದು 3+1 ಪಿಂಡವನ್ನು ಪ್ರದಾನ ಮಾಡಬೇಕು. ಅದರಲ್ಲಿ ಎರಡು ಪಿತೃ ಪಿಂಡಗಳು ಮತ್ತು ಒಂದು ಪ್ರೇತ ಪಿಂಡ.

ಪ್ರೇತವೆಂದರೆ ಪ್ರ+ಇತಃ = ಇಲ್ಲಿಂದ ಕಳಿಸಿದ್ದು ಎಂದರ್ಥ. ಅಂದರೆ ನಮ್ಮ ಪಿತೃಗಳನ್ನು ಸಂಸ್ಕರಿಸಿ ಭಗವಂತನ ಪರಂಧಾಮಕ್ಕೆ ಕಳುಹಿಸಿರುತ್ತೇವೆ ಆ ಅವಸ್ಥೆ/ವ್ಯವಸ್ಥೆಗೆ ಪ್ರೇತ ಎಂದು ಹೆಸರು. ಅದು ಸರಿಯಾಗದೇ ಇದ್ದಲ್ಲಿ ಆ ವ್ಯವಸ್ಥೆಯಿಂದ ತೊಂದರೆಯಾಗುತ್ತದೆ. ಅದಕ್ಕೆ ಪ್ರೇತಬಾಧೆ ಎನ್ನುವರು. ಪ್ರೇತವೆಂದಾಕ್ಷಣ ಭಯಪಡುವ ಅವಶ್ಯಕತೆಯಿಲ್ಲ. ನಾವು ಸರಿಯಾದ ರೀತಿಯಲ್ಲಿ ಧರ್ಮಕಾರ್ಯ ಮತ್ತು ಪಿತೃಕಾರ್ಯವನ್ನು ಮಾಡಿದ್ದೇ ಆದಲ್ಲಿ ಪಿತೃಕೋಪ/ಪ್ರೇತಬಾಧೆ ಉಂಟಾಗುವುದಿಲ್ಲ.

ಅಕಸ್ಮಾತ್ತಾಗಿ ನಮಗೆ ಹಿರಿಯರ ಮರಣಕಾಲದಲ್ಲಿ ಕರ್ಮಾಂಗವನ್ನು ಮಾಡಲಾಗಲಿಲ್ಲ ಎಂದಾದರೆ ಅಥವಾ ಅವರು ಸ್ವರ್ಗಸ್ಥರಾದ ತಿಥಿ ಮರೆತು ಹೋಗಿದ್ದರೆ ನಾವು ಪಿತೃಪಕ್ಷದಲ್ಲಿ 3 ಪಿಂಡಗಳನ್ನಿಟ್ಟು ಕಾರ್ಯವನ್ನು ಮಾಡಬೇಕು. ಇನ್ನು ಮಹಾಲಯ ಅಮಾವಾಸ್ಯೆಯದಿನ ಶಾಸ್ತ್ರದ ಪ್ರಕಾರ ನಮ್ಮ ತಂದೆಯ ಕಡೆಯವರ ಮೂರು ತಲೆಮಾರು, ತಾಯಿಯ ಕಡೆಯ ಮೂರು ತಲೆಮಾರು, ಸೋದರಮಾವಂದಿರಿಗೆ (ಅವರ ವ್ಯಾಪ್ತಿಗೆ/ಶಾಖೆಗೆ ಅನುಗುಣವಾಗಿ) , ವಿದ್ಯಾದಾನ ಮಾಡಿದ ಗುರುಗಳ ಸಲುವಾಗಿ ಒಂದು (ಇವರಲ್ಲಿ ಯಾರು ಜೀವಿತದಲ್ಲಿದ್ದರೋ ಅವರಿಗೆ ಬೇಡ) ಈ ರೀತಿಯಾಗಿ ಪಿಂಡಪ್ರದಾನವನ್ನು ಮಾಡಬೇಕು.

ವಾರ್ಷಿಕವಾಗಿ ಶ್ರಾದ್ಧದದಿನ ಮೂರು ಪಿಂಡಗಳನ್ನಿಟ್ಟು ತಿಲತರ್ಪಣಾದಿಗಳನ್ನು ಮಾಡಿ ಸಂತರ್ಪಣೆ ಮಾಡುವುದು. ಹೇಗೆ ನಮಗೆ ಆಹಾರವಿಲ್ಲದಿದ್ದರೆ ಅನಾನುಕೂಲವೋ ಹಾಗೇ ಪಿತೃಗಳಿಗೆ ಪಿಂಡಪ್ರದಾನ ಮಾಡದಿದ್ದರೆ ಸಮಸ್ಯೆ. ಪಿಂಡಪ್ರದಾನದಿಂದ ಸತ್ಸಂತಾನ, ಮಾನಸಿಕ ನೆಮ್ಮದಿ,ಭೂಲಾಭ, ಕೀರ್ತಿಲಾಭ ಇತ್ಯಾದಿ ಸತ್ಫಲಗಳು ಪ್ರಾಪ್ತವಾಗುತ್ತದೆ.

( ಶ್ರಾದ್ಧಾದಿಗಳ ವಿಚಾರ ತುಂಬಾ ಸೂಕ್ಷ್ಮ ತಿಳಿದು ಮಾಡಿರಿ. ಇನ್ನೂ ಹೆಚ್ಚಿನ ವಿಚಾರಗಳಿವೆ ಮುಂದೆ ತಿಳಿಯೋಣ )

ಡಾ.ಕೇಶವ ಕಿರಣ ಬಿ, ಪ್ರಾಧ್ಯಾಪಕರು

S.R.B.S.S College ಹೊನ್ನಾವರ, 
kkmanasvi@gamail.com

Published On - 9:52 am, Mon, 19 September 22