ಶ್ರೀ ವಿಷ್ಣು ಸಹಸ್ರನಾಮದ ಬಗ್ಗೆ ಬಹುತೇಕರು ಕೇಳಿರುತ್ತಾರೆ. ಆದರೆ, ಅದರಿಂದ ಏನು ಉಪಯೋಗವೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಇದನ್ನು ಪ್ರತಿದಿನ ಪಠಿಸುವುದರಿಂದ ಅನೇಕ ಪ್ರಯೋಜನಗಳಿದ್ದು, ಜೀವನದಲ್ಲಿ ಏಳಿಗೆ ಕಾಣುತ್ತಾ ಹೋಗಬಹುದಾಗಿದೆ (Spiritual). ನಿಮ್ಮ ಕೈಗೂಡದ ಕನಸುಗಳೂ ನನಸಾಗುತ್ತವೆ. ಇದಕ್ಕಾಗಿ ಏಕಾಗ್ರತೆಯಿಂದ ಪ್ರತಿದಿನ ಜಪನಾಮ ಮಾಡಬೇಕಷ್ಟೇ. ಹೀಗಾಗಿ ಈ ಜಪನಾಮವನ್ನು ದಿನವೂ ಪಠಿಸುವುದರಿಂದ ಏನೆಲ್ಲ ಅನುಕೂಲಗಳಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ವಿಷ್ಣು ಸಹಸ್ರನಾಮ ಪಠಿಸುವುದರ ಮಹತ್ವ ಹಾಗೂ ಅದರ ಉಪಯೋಗವನ್ನು ಇಲ್ಲಿ ವಿವರಿಸಲಾಗಿದೆ (Sri Vishnu Sahasranama Stotram).
ಅಂದುಕೊಂಡಿದ್ದು ನೆರವೇರುತ್ತಿಲ್ಲ, ಯಾವ ಕೆಲಸವೂ ಕೈಹಿಡಿಯುತ್ತಿಲ್ಲ, ಹಣೆಬರಹವೇ ಹೀಗೆ… ಎಂದೆಲ್ಲ ಅಂದುಕೊಂಡು ಸುತ್ತಿದ ದೇವಸ್ಥಾನಗಳಿಲ್ಲ, ಸಂಧಿಸಿದ ಜ್ಯೋತಿಷಿಗಳಿಲ್ಲ ಎಂದೆಲ್ಲ ಕೆಲವರು ಬೇಸರಿಸಿಕೊಳ್ಳುವುದು ಉಂಟು. ಇದಕ್ಕೆ ಪರಿಹಾರವೇ ಇಲ್ಲವೇ ಎಂದು ಕೆಲವರು ಅಂದುಕೊಳ್ಳುವುದುಂಟು. ವಿಷ್ಣು ಸಹಸ್ರನಾಮವೇ ಇದಕ್ಕೆ ಉತ್ತರ ಎಂದು ಹಲವರು ಕಂಡುಕೊಂಡಿದ್ದಾರೆ.
ಭಗವಂತನ ಕೀರ್ತಿಯನ್ನು ಕೊಂಡಾಡುವ ಶ್ರೇಷ್ಠವಾದ ಸಹಸ್ರನಾಮ ಶ್ರೀ ವಿಷ್ಣು ಸಹಸ್ರನಾಮ. ಇದೊಂದು ಮಹಾಮಂತ್ರ. ನಾಮಗಳಲ್ಲಿ ಎರಡು ವಿಧ. ಒಂದು ಲೌಕಿಕ ನಾಮ, ಇನ್ನೂಂದು ದಿವ್ಯನಾಮ. ಇಲ್ಲಿ ಬರುವುದು ಭಗವಂತನ ದಿವ್ಯನಾಮಗಳು. ವಿಷ್ಣು ಸಹಸ್ರನಾಮವನ್ನು ಯಾರು ಭಕ್ತಿಯಿಂದ ಪಠಿಸುತ್ತಾರೋ ಅವರಿಗೆ ಎಂದೂ ಕೆಡಕಾಗುವುದಿಲ್ಲ. ಶ್ರೀ ವಿಷ್ಣು ಸಹಸ್ರನಾಮವನ್ನು ಯಾರು ಬೇಕಾದರೂ ಜಾತಿ ಲಿಂಗ ಬೇಧವಿಲ್ಲದೇ, ಎಲ್ಲಿ ಬೇಕಾದರೂ ಪಠಿಸಬಹುದು. ಇದಕ್ಕೆ ಬೇಕಾಗಿರುವುದು ಭಕ್ತಿ ಮಾತ್ರ. ಶ್ರೀ ವಿಷ್ಣು ಸಹಸ್ರನಾಮವನ್ನು ಯಾರು ಆಲಿಸುತ್ತಾರೋ, ಪಠಿಸುತ್ತಾರೋ ಅವರಿಗೆ ಇಹ-ಪರದಲ್ಲಿ ಕೇಡು ಇರುವುದಿಲ್ಲ.
ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಬ್ರಾಹ್ಮಣನಿಗೆ ಜ್ಞಾನ ವೃದ್ದಿ, ವೈಶ್ಯನ ವ್ಯಾಪಾರ, ಕ್ಷತ್ರಿಯನ ಬಲ ಮತ್ತು ಶೂದ್ರನ ಸುಖ ವೃದ್ದಿಯಾಗುತ್ತದೆ. ಶ್ರೀ ವಿಷ್ಣು ಸಹಸ್ರನಾಮ ಜಪದಿಂದ ಜನರ ಮಧ್ಯೆ ಕೀರ್ತಿ ಮತ್ತು ಗೌರವ ಸಿಗುತ್ತದೆ. ಇದರಿಂದ ಕರಗದ ಜ್ಞಾನ ಸಂಪತ್ತು, ಶ್ರೇಯಸ್ಸು, ಮುಂದಾಳುತನ , ಅಳಿಯದ ಸಿರಿಯನ್ನು ಷಡೆಯುತ್ತಾನೆ. ವಿಶೇಷ ಕಾಂತಿ, ವರ್ಚಸ್ಸು, ಮನೋಬಲ, ದೇಹಬಲ, ಇಂದ್ರಿಯ ಬಲ ಪಡೆಯುತ್ತಾನೆ. ತೇಜಸ್ವಿಯಾಗುತ್ತಾರೆ, ಆರೋಗ್ಯವಂತರಾಗಿ ಕಾಂತಿ, ಬಲ, ರೂಪ, ಗುಣಗಳಿಂದ ಕೂಡಿದವರಾಗುತ್ತಾರೆ. ಶ್ರೀ ವಿಷ್ಣು ಸಹಸ್ರನಾಮ ಪಠಿಸುವುದರಿಂದ ರೋಗ ಪೀಡಿತನು ರೋಗದಿಂದ ಪಾರಾಗುತ್ತಾನೆ, ತೊಂದರೆಯಲ್ಲಿರುವವನು ತೊಂದರೆಯಿಂದ ಬಿಡುಗಡೆಯಾಗುತ್ತಾನೆ. ಹುಟ್ಟು, ಸಾವು, ಮುಪ್ಪು, ರೋಗ ರುಜಿನ ಭಯ ಉಂಟಾಗುವುದೇ ಇಲ್ಲ. ಸುಖ, ಸಂಪತ್ತು, ಧೈರ್ಯ, ನೆನಪು ಮತ್ತು ಕೀರ್ತಿಗಳು ಲಭಿಸುತ್ತವೆ.
ಜೀವನದಲ್ಲಿ ಒಂದು ದೃಢ ಸಂಕಲ್ಪದಿಂದ ಇದನ್ನು ಪಠಿಸುತ್ತೀರೆಂದರೆ ಬೇರೆ ಯಾವುದೇ ಪರಿಹಾರೋಪಾಯಗಳ ಅವಶ್ಯಕತೆಯೇ ಇಲ್ಲ. ಅತ್ಯಂತ ಪ್ರಭಾವಶಾಲಿ ಜಪ ಇದಾಗಿದ್ದು, ಇದನ್ನು ದಿನವೂ ಪಠಿಸಿದರೆ ಒಳ್ಳೆಯದಾಗಲಿದೆ. ಹಾಗಾದರೆ ಇದರ ಬಗ್ಗೆ ಒಂದು ನೋಟ.
ಬಾಣದ ಹಾಸಿಗೆ ಮೇಲೆ ಮಲಗಿದ್ದ ಭೀಷ್ಮನ ಬಳಿ ಬಂದು ಧರ್ಮರಾಜ ಹೀಗೆ ಕೇಳುತ್ತಾನೆ, ಎಲ್ಲರಿಗೂ ಸರ್ವೋಚ್ಛ ಆಶ್ರಯ ಕೊಡುವವನು ಯಾರು? ಅವನಿಂದ ಶಾಂತಿ ಸಿಗಬೇಕು. ಎಲ್ಲ ಭವ ಸಾಗರದ ಕಷ್ಟಗಳಿಂದ ಮುಕ್ತಿ ಸಿಗಲು ಯಾರ ಮೊರೆಹೋಗಬೇಕು? ಎಂಬ ಬಗ್ಗೆ ಹೇಳಿ ಎಂದು ಕೇಳುತ್ತಾನೆ. ಆಗ ಭೀಷ್ಮ ಹೀಗೆ ಹೇಳುತ್ತಾರೆ, ಇದಕ್ಕೆಲ್ಲ ಪರಿಹಾರವೆಂದರೆ ವಿಷ್ಣು. ಹೀಗಾಗಿ ವಿಷ್ಣು ಸಹಸ್ರನಾಮ ಜಪಿಸಿದರೆ ಎಲ್ಲ ಸಂಕಷ್ಟಗಳೂ ದೂರವಾಗಿ ನೆಮ್ಮದಿ-ಜಯ ಲಭಿಸುತ್ತದೆ ಎಂದು ಹೇಳುತ್ತಾರೆ.
ಯಾಕೆ ಈ ಜಪ ಪಠಿಸಬೇಕು: ಇದರಿಂದ ಮನೆ-ಮನದಲ್ಲಿ ಶಾಂತಿ ನೆಲೆಸುತ್ತದೆ, ಸುಖಸಮೃದ್ಧಿಯನ್ನು ತಂದುಕೊಡುತ್ತದೆ. ಮೋಕ್ಷ ಮಾರ್ಗವನ್ನೂ ಕರುಣಿಸುತ್ತದೆ. ಇದರಲ್ಲಿ ವಿಷ್ಣುವಿನ ಸಾವಿರ ಹೆಸರು ಇರುತ್ತದೆ. ಜೀವನದಲ್ಲಿ ನಿಮಗೆ ಕಷ್ಟಗಳೇ ಎದುರಾಗುತ್ತಿವೆ ಎಂತಾಗಿದ್ದರೆ, ಸಂಸಾರ ನಡೆಸಲು ಕಷ್ಟವಾಗುತ್ತದೆ ಎಂದಿದ್ದರೆ, ಆರ್ಥಿಕ ಸಮಸ್ಯೆ ಕಾಣಿಸಿಕೊಂಡರೆ, ನಿಮ್ಮ ಮೇಲೆ ಯಾರಾದರೂ ವಾಮಾಚಾರದ ಪ್ರಯೋಗ ಮಾಡಿದ್ದರೆ, ನಿಮ್ಮ ಕುಟುಂಬಕ್ಕೆ ಯಾರದ್ದಾದರೂ ಕೆಟ್ಟ ದೃಷ್ಟಿ ಬಿದ್ದಿದ್ದರೆ ಅಂಥವರು ವಿಷ್ಣು ಸಹಸ್ರನಾಮವನ್ನು ಅವಶ್ಯಕವಾಗಿ ಜಪಿಸಬೇಕು.