ಹಾಸನ: ಜೆಡಿಎಸ್(JDS) ಪಕ್ಷ ಅಧಿಕಾರಕ್ಕೆ ಬಂದರೆ ಶಾಸಕ ಎ.ಟಿ.ರಾಮಸ್ವಾಮಿ(A.T.Ramaswami) ಅವರಿಗೆ ಮಂತ್ರಿಗಿರಿ ಪಕ್ಕಾ ಎಂಬ ರೀತಿಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(H.D.Kumaraswami) ಹೇಳಿಕೆ ನೀಡಿದ್ದಾರೆ. ಹಾಸನದ ಮಲ್ಲಿತಮ್ಮನಹಳ್ಳಿಯಲ್ಲಿ ನಡೆದ ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ(H.D.Revanna) ಅವರು ಹೇಳಿದಂತೆ ರಾಮಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ದೇಗುಲ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಮಸ್ವಾಮಿ ಅವರು ಮಾತನಾಡುತ್ತಾ, ಕುಮಾರಸ್ವಾಮಿ ಅವರು ನನ್ನ ಸಲಹೆಗಳನ್ನು ಕೇಳುತ್ತಿದ್ದರೆ ಅವರು ಇಂದಿಗೂ ಮುಖ್ಯಮಂತ್ರಿಯಾಗಿರುತ್ತಿದ್ದರು ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸಚಿವ ರೇವಣ್ಣ ಅವರು, ರಾಮಸ್ವಾಮಿ ಅವರನ್ನ ಮಂತ್ರಿಯಾಗಿ ಮಾಡುವುದಾಗಿ ಹೇಳಿದರು. ಇದಕ್ಕೆ ರಾಮಸ್ವಾಮಿ, ನಾನು ಅಧಿಕಾರದ ಆಸೆಗಾಗಿ ರಾಜಕೀಯಕ್ಕೆ ಬಂದವನಲ್ಲ ಎಂದು ಪ್ರತಿಕ್ರಿಯಿಸಿದ್ದರು.
ಇದನ್ನು ಓದಿ: ಎ.ಟಿ.ರಾಮಸ್ವಾಮಿ
ರಾಮಸ್ವಾಮಿ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ ಕುಮಾರಸ್ವಾಮಿ, ರೇವಣ್ಣ ಅವರು ರಾಮಸ್ವಾಮಿ ಅವರನ್ನ ಮಂತ್ರಿ ಮಾಡಿ ಎಂದು ಹೇಳಿದ್ದಾರೆ. ಅದನ್ನ ದೇವೇಗೌಡರು ಮತ್ತು ನಾನು ಕೂತು ಮಾಡುತ್ತೇವೆ. ಅವರು ಸಚಿವರಾಗಲು ಜೆಡಿಎಸ್ 120 ಸ್ಥಾನಗಳನ್ನು ಗೆಲ್ಲಬೇಕು. ಹೀಗಾಗಿ ರಾಮಸ್ವಾಮಿ ಅವರನ್ನು ಪುನಃ ಗೆಲ್ಲಿಸೋ ಕೆಲಸ ಮಾಡಿ. ಏನೇ ಸಣ್ಣ ಪುಟ್ಟ ಸಮಸ್ಯೆ ದೋಷಗಳಿದ್ದರೂ ಅದನ್ನ ಸರಿಮಾಡಿಕೊಂಡು ರಾಮಸ್ವಾಮಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಅಂದು 2006-07ರಲ್ಲಿ ಕುಮಾರಸ್ವಾಮಿ ದೃಢ ನಿರ್ಧಾರ ಮಾಡಿದ್ದರೆ ಶಾಶ್ವತ ಸಿಎಂ ಆಗಿರುತ್ತಿದ್ದರು ಎಂದು ರಾಮಸ್ವಾಮಿ ಹೇಳಿದ್ದಾರೆ. ಆದರೆ ಕೆಲವು ರಾಜಕೀಯ ಸನ್ನಿವೇಶಕ್ಕೆ ಒಳಗಾಗಿ ವಿಧಿಯಿಲ್ಲದೆ ಕೆಲ ತೀರ್ಮಾನ ಆಯಿತು. ನಾನು ಮಾಡದ ತಪ್ಪಿಗೆ ನಾನು ಅಪವಾದ ಹೊತ್ತು ಕೊಳ್ಳಬೇಕಾಯಿತು. ಅಧಿಕಾರಕ್ಕಾಗಿ ರಾಮಸ್ವಾಮಿ ಯಾರ ಮನೆಗೂ ಹೋದವರಲ್ಲ. ಜೀವನದಲ್ಲಿ ತಮ್ಮದೇ ಆದ ನಡವಳಿಕೆ ಅಳವಡಿಸಿಕೊಂಡಿದ್ದಾರೆ ಎಂದರು.
ಇದನ್ನು ಓದಿ: ಕುಮಾರಸ್ವಾಮಿ
ರಾಮಸ್ವಾಮಿ ಅವರು ಸರ್ಕಾರಿ ಭೂಮಿ ಒತ್ತುವರಿ ತೆರವು ಸಮಿತಿಗೆ ಅಧ್ಯಕ್ಷರಾಗಿದ್ದರು. ನಾನು ಮೊದಲ ಬಾರಿಗೆ ಸಿಎಂ ಆಗಿದ್ದಾಗ ಸಮಿತಿ ಅಧ್ಯಕ್ಷರಾಗಿದ್ದರು. ಮನಸ್ಸು ಮಾಡಿದ್ದರೆ ಕೋಟಿ ಕೋಟಿ ಹಣ ಸಂಪಾದಿಸಬಹುದಿತ್ತು. ಆದರೆ ಎಂದೂ ಅವರು ಹಾಗೇ ಯೋಚನೆ ಮಾಡಿದವರಲ್ಲ ಎಂದರು.
ಸರ್ಕಾರಕ್ಕೆ ಅಂದು ಕೊಟ್ಟ ವರದಿ ಇನ್ನೂ ಜಾರಿ ಮಾಡಲು ಆಗಿಲ್ಲ. ಬೆಂಗಳೂರಲ್ಲಿ ಲಕ್ಷಾಂತರ ಕೋಟಿ ಸರ್ಕಾರಿ ಆಸ್ತಿ ಲೂಟಿ ಆಗಿದೆ. ಆ ವರದಿಯ ಮಾಹಿತಿಯನ್ನು ರಾಮಸ್ವಾಮಿ ಇನ್ನೂ ಇಟ್ಟಿದ್ದಾರೆ. ಸ್ಥಳೀಯವಾಗಿ ರಾಮಸ್ವಾಮಿಗೆ ನೋವಾಗಿದೆ, ಅದು ನನಗೂ ಗೊತ್ತಿದೆ. ದೇವೇಗೌಡರು, ರೇವಣ್ಣರಿಂದ ನೋವಾಗಿಲ್ಲ ಅಂತಾ ಅವರೇ ಹೇಳಿದ್ದಾರೆ ಎಂದರು.
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 6:18 pm, Tue, 17 May 22