ಆಷಾಢ ಪ್ರಥಮ ಏಕಾದಶಿ- ತಪ್ತ ಮುದ್ರಾ ಧಾರಣೆ ಸಮಯ: ವೈಷ್ಣವರಿಗೆ ಇದು ವಿಶೇಷ ಮಹತ್ವದ್ದು, ಯಾಕೆ?

|

Updated on: Jul 16, 2024 | 5:00 PM

Mudradharane ritual: ಸಂಸಾರ ದುಃಖ ಸಂತಪ್ತರಾದ ಜೀವಿಗಳು ಭಗವಂತನ ಒಲುಮೆಗೆ ಪಾತ್ರರಾಗಲು ಒದಗುವ ಸುಸಂದರ್ಭ ಇದಾಗಿದೆ. ಆಷಾಢಮಾಸದ ಏಕಾದಶಿಯಂದು ಪರಮಾತ್ಮ ಯೋಗನಿದ್ರೆಗೆ ತೊಡಗುತ್ತಾನೆ. ಆದ್ದರಿಂದ ಭಗವಂತ ಮಲಗಿದರೂ (ಯೋಗ ನಿದ್ರೆ) ನಾವು ಮಲಗದೇ ಎಚ್ಚೆತ್ತು ಸಾಧನೆ ನಡೆಸಿ ಸಾರ್ಥಕ್ಯ ಹೊಂದಬೇಕು ಎಂಬ ಭಾವವಿದೆ. ಆ ಎಚ್ಚರ ಮೂಡಲು ಬಿಸಿಯಾದ ಮುದ್ರೆಯಿಂದ ದೇಹವನ್ನು ಅಂಕಿತಗೊಳಿಸಬೇಕು. ಮುದ್ರಾಧಾರಣೆಯ ಮುದ್ರೆಯಲ್ಲಿ ವೈದಿಕ ಆಧ್ಯಾತ್ಮಿಕ ದೃಷ್ಟಿಕೋನವಿದ್ದಂತೆ, ಸೂಕ್ಷ್ಮವಾಗಿ ವೈಜ್ಞಾನಿಕ ವೈದ್ಯಕೀಯ ಉದ್ದೇಶವೂ ಇದೆ...

ಆಷಾಢ ಪ್ರಥಮ ಏಕಾದಶಿ- ತಪ್ತ ಮುದ್ರಾ ಧಾರಣೆ ಸಮಯ: ವೈಷ್ಣವರಿಗೆ ಇದು ವಿಶೇಷ ಮಹತ್ವದ್ದು, ಯಾಕೆ?
ಆಷಾಢ ಪ್ರಥಮ ಏಕಾದಶಿ- ತಪ್ತ ಮುದ್ರಾ ಧಾರಣೆ ಸಮಯ
Follow us on

ನಾಳೆ ಆಷಾಢ ಏಕಾದಶಿ. 17-0-702004. ನಾಡಿನಲ್ಲಿ ಬಹುತೇಕ ಎಲ್ಲ ಮಾಧ್ವ ಮಠಗಳಲ್ಲಿ ಬೆಳಗಿನ ಜಾವದಿಂದಲೇ ತಪ್ತ ಮುದ್ರಾಧಾರಣೆ ನಡೆಯಲಿದೆ. ತಪ್ತ ಮುದ್ರಾಧಾರಣೆ ಮತ್ತು ಚಾತುರ್ಮಾಸ ಪೂಜೆ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ ಇಲ್ಲಿ ನೀಡಲಾಗಿದೆ. ಆಷಾಢ ಮಾಸ ದಕ್ಷಿಣಾಯಣ ಪ್ರಾರಂಭವನ್ನು ಸೂಚಿಸುತ್ತದೆ. ಸೂರ್ಯನು ದಕ್ಷಿಣದ ಕಡೆಗೆ ಸಾಗುತ್ತಾ ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ, ಇದನ್ನು ಕರ್ಕಾಟಕ ಸಂಕ್ರಮಣ ಎಂದು ಕರೆಯಲಾಗುತ್ತದೆ. ಉತ್ತರಾಯಣದ ನಂತರ ನಿಖರವಾಗಿ ಆರು ತಿಂಗಳ ನಂತರ ಇದು ಸಂಭವಿಸುತ್ತದೆ. ಆಷಾಡ ಮಾಸದಲ್ಲಿ ಗುರುವಿನ ಪೂಜೆಯನ್ನು ಮಾಡಿದರೆ ಹೆಚ್ಚು ಫಲ ಸಿಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಅಲ್ಲದೇ ದೇವಿಯ ಪೂಜೆ ಮಾಡುವುದು ಕೂಡ ತುಂಬಾ ಮಂಗಳಕರ ಮತ್ತು ಶ್ರೇಯಸ್ಕರ ಎಂದು ನಂಬಲಾಗಿದೆ. ಈ ಮಾಸದಲ್ಲಿ ಶ್ರೀಹರಿ ವಿಷ್ಣುವಿನ ನಾಮಸ್ಮರಣೆ ಹಾಗೂ ಪೂಜೆ ಮಾಡುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ.

ಹಿಂದೂ ಧರ್ಮದಲ್ಲಿ ಏಕಾದಶಿ ತಿಥಿಗೆ ವಿಶೇಷ ಮಹತ್ವವಿದೆ. ಈ ತಿಥಿಯನ್ನು ತ್ರಿಮೂರ್ತಿಗಳಲ್ಲಿ ಒಬ್ಬರಾದ ಶ್ರೀ ಮಹಾ ವಿಷ್ಣುವಿಗೆ (Lord Vishnu, Goddess Lakshmi) ಸಮರ್ಪಿಸಲಾಗಿದೆ. ಒಂದು ವರ್ಷದಲ್ಲಿ ಒಟ್ಟು 24 ಏಕಾದಶಿ ತಿಥಿಗಳಿವೆ. ಅಂದರೆ ಪ್ರತಿ ತಿಂಗಳು 2 ಏಕಾದಶಿ ತಿಥಿಗಳು ಬರುತ್ತವೆ. ಒಂದೊಂದು ಏಕಾದಶಿಯನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತದೆ.

ಈ ಪವಿತ್ರ ದಿನವು ವೈಷ್ಣವರಿಗೆ ವಿಶೇಷ ಮಹತ್ವವುಳ್ಳದ್ದಾಗಿದೆ:

ಈ ದಿನ ವಿಠ್ಠಲ ರುಕುಮಾಯಿ ಪೂಜೆ ಮಾಡುತ್ತ, ಪ್ರಾರ್ಥನೆ, ಭಜನೆಗಳಲ್ಲಿ ಕಳೆಯುತ್ತಾರೆ. ಭಕ್ತರು ಉಪವಾಸವಿದ್ದು, ಮುಂದಿನ ನಾಲ್ಕು ತಿಂಗಳ ಕಾಲ (ಚಾತುರ್ಮಾಸ) ಆಚರಿಸಬೇಕಾದ ವ್ರತಗಳನ್ನು ಈ ದಿನ ಇಟ್ಟುಕೊಳ್ಳುತ್ತಾರೆ. ಇದು ಯಾವುದಾದರೂ ಆಹಾರ ಪದಾರ್ಥವನ್ನು ಬಿಡುವ ಬಗ್ಗೆ ಮತ್ತು ಪ್ರತಿ ಏಕಾದಶಿ ದಿನ ಉಪವಾಸವನ್ನು ಆಚರಿಸುವ ಬಗ್ಗೆ ಇರುತ್ತದೆ. ವಿಷ್ಣುವು ಕ್ಷೀರಸಾಗರದಲ್ಲಿ ಆದಿಶೇಷನ ಮೇಲೆ ಈ ದಿನ ಮಲಗಿ ಯೋಗನಿದ್ರೆ ಹೋಗುತ್ತಾನೆ ಎಂಬ ನಂಬಿಕೆಯು ಇದೆ. ಈ ಕಾರಣದಿಂದ ಇದನ್ನು ದೇವಶಯನಿ ಏಕಾದಶಿ ಅಥವಾ ಹರಿ-ಶಯನಿ ಎಂದು ಕರೆಯಲಾಗುತ್ತದೆ.

Also Read: ಯೋಗ ನಿದ್ರೆಯಲ್ಲಿ ಶ್ರೀವಿಷ್ಣು: ಆಷಾಢ ಏಕಾದಶಿ ಅಥವಾ ದೇವಶಯನಿ ಏಕಾದಶಿ ಯಾವಾಗ, ಮಹತ್ವ ಏನು, ಆಚರಣೆ ಹೇಗೆ?

ವಿಷ್ಣುವು ನಾಲ್ಕು ತಿಂಗಳ ನಂತರ ಬರುವ ಪ್ರಬೋಧಿನಿ ಏಕಾದಶಿಯಂದು ತನ್ನ ನಿದ್ದೆಯಿಂದ ಎಚ್ಚತ್ತುಕೊಳ್ಳುತ್ತಾನೆ. ಈ ನಾಲ್ಕು ತಿಂಗಳ ಅವಧಿಯು ಚಾತುರ್ಮಾಸ ಪೂಜೆ ಆಷಾಢ ಮಾಸದ ಶುಕ್ಲ ಪಕ್ಷದ ದ್ವಾದಶಿಯಿಂದ ಪ್ರಾರಂಭವಾಗುತ್ತದೆ.

ಸಂಸಾರ ದುಃಖ ಸಂತಪ್ತರಾದ ಜೀವಿಗಳಿಂದ ತಪ್ತ ಮುದ್ರಾ ಧಾರಣೆ:

ಸಂಸಾರ ದುಃಖ ಸಂತಪ್ತರಾದ ಜೀವಿಗಳು ಭಗವಂತನ ಒಲುಮೆಗೆ ಪಾತ್ರರಾಗಲು ಒದಗುವ ಸುಸಂದರ್ಭ ಇದಾಗಿದೆ. ಆಷಾಢಮಾಸದ ಏಕಾದಶಿಯಂದು ಪರಮಾತ್ಮ ಯೋಗನಿದ್ರೆಗೆ ತೊಡಗುತ್ತಾನೆ. ಆದ್ದರಿಂದ ಭಗವಂತ ಮಲಗಿದರೂ (ಯೋಗ ನಿದ್ರೆ) ನಾವು ಮಲಗದೇ ಎಚ್ಚೆತ್ತು ಸಾಧನೆ ನಡೆಸಿ ಸಾರ್ಥಕ್ಯ ಹೊಂದಬೇಕು ಎಂಬ ಭಾವವಿದೆ. ಆ ಎಚ್ಚರ ಮೂಡಲು ಬಿಸಿಯಾದ ಮುದ್ರೆಯಿಂದ ದೇಹವನ್ನು ಅಂಕಿತಗೊಳಿಸಬೇಕು.

ಮುದ್ರಾಧಾರಣೆಯ ಮುದ್ರೆಯಲ್ಲಿ ವೈದಿಕ ಆಧ್ಯಾತ್ಮಿಕ ದೃಷ್ಟಿಕೋನವಿದ್ದಂತೆ, ಸೂಕ್ಷ್ಮವಾಗಿ ವೈಜ್ಞಾನಿಕ ವೈದ್ಯಕೀಯ ಉದ್ದೇಶವೂ ಇದೆ…

ವೈಷ್ಣವ ದೇಹದ ಗುರುತಿಗಾಗಿ ಸುದರ್ಶನ ಹೋಮ ಮಾಡಿ ಗುರುಗಳಿಂದ ಅಭಿಮಂತ್ರಿತವಾದ ಮುದ್ರೆಯನ್ನು ಧರಿಸಬೇಕು. ಇದರಿಂದ ಈ ದೇಹ ಪರಮಾತ್ಮನಿಗೆ ಸೇರಿದ್ದು ಎಂದು ಸೂಚಿಸಿದಂತೆಯೇ ನಮ್ಮ ಪಾಪಗಳೆಲ್ಲಾ ಬಿಸಿಮುದ್ರೆಯಿಂದ ಸುಟ್ಟು ಹೋಗಿ ನಾವು ವಿಷ್ಣುವಿನ ಸೇವೆಗೆ ಅರ್ಹರಾಗುತ್ತೇವೆ. ಹೀಗಾಗಿ ವೈಷ್ಣವ ದೀಕ್ಷೆಯೊಂದಿಗೆ ವಿಷ್ಣು ಪ್ರಿಯವಾದ ಚಾತುರ್ಮಾಸ್ಯ ವ್ರತಕ್ಕೆ ನಮ್ಮ ಮನಸ್ಸಿಗೆ ಭದ್ರಬುನಾದಿ ದೊರಕುತ್ತದೆ.

ತಪ್ತ ಮುದ್ರಾಧಾರಣೆ ವಿಷ್ಣು ಭಕ್ತಿಯ ಸಕಲ ಸದ್ಗುಣಗಳಿಗೂ ಹೃದಯ ಸ್ಥಾನೀಯ ಎಂಬುದು ವೈಷ್ಣವರ ನಂಬಿಕೆ. ಹೀಗಾಗಿ ಇದು ವೈಷ್ಣವರ ವಿಶಿಷ್ಟ ಲಕ್ಷಣವೆನ್ನಿಸಿದೆ. ವೈಷ್ಣವತ್ವಕ್ಕೆ ಧ್ಯೋತಕವಾದ ಅತ್ಯಂತ ಪ್ರಮುಖ ಬಾಹ್ಯ ಲಕ್ಷಣ ಎಂಬುದು ಇದರ ಹಿರಿಮೆ. ಪ್ರತಿದಿನದ ಗೋಪಿಚಂದನದ ಊರ್ಧ್ವ ಪುಂಡ್ರಧಾರಣೆ, ಪಂಚಮುದ್ರ ಧಾರಣೆಯಂತೆ ಅತ್ಯಂತ ಮಹತ್ವಪೂರ್ಣವಾದ ಬಾಹ್ಯಸಂಸ್ಕಾರವಾಗಿ ಈ ತಪ್ತ ಮುದ್ರಾಧಾರಣೆ ನಡೆಯುತ್ತದೆ.

ಪ್ರತಿ ವರ್ಷವೂ ಶಯನೈಕಾದಶೀ ದಿನ ತಪ್ತ ಮುದ್ರಾಧಾರಣೆಯನ್ನು ಮಠಾಧೀಶರಿಂದಲೇ ಸ್ವೀಕರಿಸುವುದು ಶ್ರೇಷ್ಠ ಎಂದು ಶಾಸ್ತ್ರಗಳಲ್ಲಿದೆ. ಇಂತಹ (ತಪ್ತ) ಸುದರ್ಶನ ಧಾರಣೆಯು ನಿರ್ಮಲ ತತ್ತ್ವಜ್ಞಾನ ಪ್ರಾಪ್ತಿಯ ಅಪೂರ್ವ ಸಾಧನ ಎಂಬುದರಲ್ಲಿ ಅಪಾರ ಔಚಿತ್ಯವಿದೆ.

Also Read:  No Entry for Men Devotees – ಈ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ, ಅದರಲ್ಲಿ 2 ಪುರುಷರದ್ದೇ ದೇವಾಲಯಗಳು! ಯಾಕೀ ಶಾಪ, ಕಟ್ಟುಪಾಡು?

ಮುದ್ರಾಧಾರಣೆಗೆ ಬಳಸುವ ಸುದರ್ಶನ ಮತ್ತು ಪಾಂಚಜನ್ಯ ಮುದ್ರೆಗಳನ್ನು ಬೆಂಕಿಯಲ್ಲಿ ಕಾಯಿಸಿ ಮೈ ಮೇಲೆ ಮುದ್ರೆ ಹಾಕಲಾಗುತ್ತದೆ. ಬಲ ಭುಜ, ಬಲಸ್ತನ ಭಾಗದಲ್ಲಿ ಚಕ್ರವನ್ನು, ಎಡ ಭುಜ, ಎಡ ಸ್ತನ ಭಾಗದಲ್ಲಿ ಶಂಖವನ್ನು, ಹೊಟ್ಟೆಯ ಮೇಲೆ ಒಂದು ಚಕ್ರವನ್ನು ಮುದ್ರಿಸಬೇಕು.

ಪ್ರಯತ್ನಪೂರ್ವಕವಾಗಿ ಈ ಪಂಚಮುದ್ರೆಯನ್ನು ಧರಿಸಬೇಕು. ಉಪವೀತರಾಗದ ಬಾಲಕರಿಗೆ ಹೊಟ್ಟೆಯ ಮೇಲೆ ಮಾತ್ರ ಒಂದು ಚಕ್ರ, ಸ್ತ್ರೀಯರಿಗೆ ಬಲ, ಎಡ ಕೈಗಳ ಮೇಲೆ ಮಾತ್ರ ಕ್ರಮವಾಗಿ ಚಕ್ರ ಶಂಖಗಳನ್ನು ಮುದ್ರಿಸಬೇಕು.

ಯಾವ ವಸ್ತು ಯಾರ ಅಧೀನವೋ ಅದರ ಮೇಲೆ ಅವರ ಚಿಹ್ನೆ ಹಾಕುವ ನಿಯಮವಿದೆ. ಈ ದೇಹ (ನಮ್ಮದಲ್ಲ) ನಮ್ಮ ಅಧೀನವಾದದ್ದಲ್ಲ. ಭಗವಂತನ ಅಧೀನವಾದದ್ದು. ಭಗವಂತನ ಅಧೀನವಾದ ಈ ದೇಹದ ಮೇಲೆ ಭಗವಂತನ ಚಿಹ್ನೆಗಾದ ಶಂಖ-ಚಕ್ರಗಳು ಬೀಳಬೇಕು ಎನ್ನುವುದೂ ಸಹ ಇದರ ಹಿಂದಿನ ತತ್ವ.

ಈ ದೇಹಕ್ಕೆ ಎಷ್ಟು ರೀತಿಯಿಂದ ವಿಹಿತವಾದ ಕ್ಲೇಶಗಳನ್ನು (ದಂಡನೆಯನ್ನು) ಕೊಡುತ್ತೇವೆ ಅದೂ ಒಂದು ತಪಸ್ಸು. ಈ ದೃಷ್ಟಿಯಲ್ಲಿ ಶಾಸ್ತ್ರೋಕ್ತವಾದ ದೇಹ ದಂಡನೆಯೂ ಒಂದು ತಪಸ್ಸು ಎಂಬ ಕಾರಣಕ್ಕಾಗಿಯೂ ತಪ್ತಮುದ್ರಾಧಾರಣೆ ವಾಡಿಕೆಯಲ್ಲಿದೆ.

ತಪ್ತ ಮುದ್ರಾಧಾರಣೆ ಕ್ರಮ:

ತಪ್ತ ಮುದ್ರಾ ಧಾರಣೆ ಬಲ – ಎಡ ಭುಜಗಳಲ್ಲಿ ಮಾತ್ರ ಧರಿಸತಕ್ಕದ್ದು. ಶಾಸ್ತ್ರಗಳಲ್ಲಿ 5 ಮುದ್ರೆಗಳನ್ನು ಹಾಕುವ ಕ್ರಮವೂ ಉಂಟು. ಆದರೆ ನಮ್ಮ ಮಾಧ್ವ ಮತ ಸ್ಥಾಪನಾಚಾರ್ಯರಾದ ಶ್ರೀಮನ್ಮಧ್ವಾಚಾರ್ಯರು ತಾವು ತಮ್ಮ ಬಲ- ಎಡ ಭುಜಗಳಲ್ಲಿ ಚಕ್ರ ಶಂಖಗಳನ್ನು ಧಾರಣೆ ಮಾಡುತ್ತಿದ್ದರೆಂದು ಶ್ರೀ ಸುಮಧ್ವ ವಿಜಯ ಮಹಾ ಕಾವ್ಯದಲ್ಲಿದೆ. ಆಹಾ ಇತ್ಯಪಿ ಸುದರ್ಶನ ದ್ವಯಂ ಎಂಬುದಾಗಿ ವರ್ಣಿತವಾಗಿದೆ.

ಹಾಗಾಗಿ ಶ್ರೀಮನ್ಮಧ್ವಾಚಾರ್ಯರ ಸಾಕ್ಷಾತ್ ಪರಂಪರೆ – ಶ್ರೀಮನ್ಮಧ್ವಾಚಾರ್ಯರ ಸಾಕ್ಷಾತ್ ಸಂಪ್ರದಾಯದ ಮೂಲ ಮಠವಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಚಕ್ರ – ಶಂಖ 2 ಮುದ್ರೆಗಳನ್ನು ಹಾಕಿಕೊಳ್ಳುವುದೂ ಹಾಗೂ ಹಾಕುವಂಥಾದ್ದು ಶಾಸ್ತ್ರ ಮತ್ತು ಸಂಪ್ರದಾಯ ಹಾಗೂ ಶ್ರೀಮನ್ಮಧ್ವಾಚಾರ್ಯರಿಗೆ ಸಮ್ಮತವಾದದ್ದು.

ಆ ಚಕ್ರಾದಿ ಆಯುಧವನ್ನು ಧರಿಸುವುದು ಎಲ್ಲಾ ಕರ್ಮಗಳಿಗೂ ಅಂಗವಾದುದರಿಂದ ಮೊದಲು ಶ್ರೀ ಪರಮಾತ್ಮನ ಆಯುಧಗಳನ್ನು ಧರಿಸಬೇಕು. ಆ ಚಕ್ರ ಮತ್ತು ಶಂಖವನ್ನು ಕಾಸಿ ಬಿಸಿ ಮಾಡಿ ಭುಜಗಳಲ್ಲಿ ಧರಿಸಬೇಕೆಂದು ಪದ್ಮ ಪುರಾಣದಲ್ಲಿ ಹೇಳಲಾಗಿದೆ.

ಶಾಸ್ತ್ರೋಕ್ತವಾದ ವಿಧಾನದಿಂದ ಬೆಂಕಿಯಲ್ಲಿ (ಸುದರ್ಶನ ಹೋಮದ ಬೆಂಕಿಯಲ್ಲಿ) ಕಾಸಿದ ಸಾವಿರಾರು ಅರೆಕಾಲುಗಳುಳ್ಳ ಮತ್ತು ಹರಿತವಾದ ಅಲಗುಗಳುಳ್ಳ ಚಿನ್ನದ ಸುದರ್ಶನ ಚಕ್ರದಿಂದ ಹಂಸವೆಂಬ ಸಂನ್ಯಾಸಿಯು (ಪರಮಹಂಸರು) ನಮಸ್ಕರಿಸಿ ವಿನೀತನಾಗಿ ಕುಳಿತಿರುವ ಉತ್ತಮನಾದ ಶಿಷ್ಯನಿಗೆ ಮುದ್ರಾಧಾರಣ ಮಾಡಬೇಕು ಎಂದು ಬ್ರಹ್ಮಾಂಡ ಪುರಾಣದಲ್ಲಿ ಉಕ್ತವಾಗಿದೆ. ತಪ್ತ ಮುದ್ರಾಧಾರಣೆ ಭುಜಗಳಲ್ಲಿ ಮಾತ್ರ ಹಾಕಿಸಿಕೊಳ್ಳಬೇಕು ಎಂಬ ನಿಯಮವಿದೆ. ಶ್ರೀಮದಾಚಾರ್ಯರ ಮೂಲ ಪರಂಪರೆಗೆ ಸೇರಿದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಯತಿಗಳು ತಾವು ಹಾಗೂ ತಮ್ಮ ಶಿಷ್ಯ / ಭಕ್ತ ವೃಂದಕ್ಕೆ ಬಲ – ಎಡ ಭುಜಗಳಲ್ಲಿ ತಪ್ತ ಮುದ್ರಾ ಧಾರಣೆ ಮಾಡುತ್ತಾರೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)