
ಗೋವಿಗೆ ಕೈಯಿಂದ ಆಹಾರ ತಿನ್ನಿಸುವುದರಿಂದ ಆಗುವ ದೈವಿಕ ಮತ್ತು ಜ್ಯೋತಿಷ್ಯ ಲಾಭಗಳ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, ಪಶು, ಪ್ರಾಣಿ, ಪಕ್ಷಿ ಸೇರಿದಂತೆ ಪ್ರಕೃತಿಯ ಎಲ್ಲ ಜೀವಿಗಳು ಭಗವಂತನ ಸ್ವರೂಪಗಳಾಗಿವೆ. ಅದರಲ್ಲಿಯೂ ಅನಾದಿ ಕಾಲದಿಂದಲೂ ಗೋವನ್ನು ಮೂರು ಕೋಟಿ ಅಥವಾ ಮೂವತ್ತಮೂರು ಕೋಟಿ ದೇವತೆಗಳ ಸ್ವರೂಪವೆಂದು ಪೂಜಿಸಲಾಗುತ್ತದೆ. ನಮ್ಮ ಕಣ್ಣೆದುರಿಗಿರುವ ಈ ದೈವೀ ಸ್ವರೂಪ ಮನುಕುಲದ ಒಳಿತಿಗೆ ನೆರವಾಗುತ್ತದೆ. ಗೋವು ಕೇವಲ ಒಂದು ಪ್ರಾಣಿಯಲ್ಲ, ಅದು ಮಹಾಲಕ್ಷ್ಮಿಯ ಸ್ವರೂಪ ಮತ್ತು ಕಾಮಧೇನುವಿನ ಪ್ರತೀಕವೂ ಆಗಿದೆ.
ನಮ್ಮ ಸ್ವಂತ ಕೈಗಳಿಂದ ಗೋವಿಗೆ ಆಹಾರವನ್ನು ನೀಡಿದಾಗ, ಅದರ ಫಲಗಳು ಅಪಾರ. ಇದು ನಮ್ಮ ಜಾತಕ ಚಕ್ರವನ್ನು ಬದಲಾಯಿಸಿ, ಕಷ್ಟ, ನಷ್ಟ, ಸುಖ, ದುಃಖಗಳ ನಡುವೆ ನೀತಿಯಿಂದ ಮತ್ತು ಧರ್ಮದಿಂದ ಬದುಕುವವರಿಗೆ ಭಗವಂತ ನೀಡಿದ ಒಂದು ಮಹತ್ವದ ಅವಕಾಶ. ಗೋಸೇವೆ ಮಾಡುವುದರಿಂದ ನವಗ್ರಹಗಳ ಕಾಟದಿಂದ ಮುಕ್ತಿ ದೊರೆಯುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಬಡ್ಡಿ ವ್ಯಾಪಾರ ಮಾಡುವುದು ಶುಭವೇ, ಅಶುಭವೇ? ಧರ್ಮಶಾಸ್ತ್ರಗಳು ಹೇಳುವುದೇನು?
ಗೋವಿಗೆ ಕೈಯಿಂದ ಆಹಾರ ನೀಡುವಾಗ ನಮ್ಮ ಕೈಯಲ್ಲಿರುವ ರೇಖೆಗಳು ಕೂಡ ಧನಾತ್ಮಕವಾಗಿ ಬದಲಾವಣೆಗೊಳ್ಳುವ ಸಾಧ್ಯತೆ ಇರುತ್ತದೆ. ಸಾಡೇಸಾತಿ ಶನಿ, ಪಂಚಮ ಶನಿ, ಅರ್ಧಾಷ್ಟಮ ಶನಿಯಂತಹ ಗ್ರಹಗಳ ದೋಷಗಳ ಪ್ರಭಾವವೂ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಹಿಂದಿನ ಕಾಲದಲ್ಲಿ ಯಾವ ಯಜ್ಞಕ್ಕೂ ಗೋಗ್ರಾಸವಿಲ್ಲದೆ ಪ್ರಾರಂಭಿಸುತ್ತಿರಲಿಲ್ಲ. ಗೋಗ್ರಾಸವನ್ನು ಇಟ್ಟು ಯಜ್ಞಗಳನ್ನು ಮಾಡುತ್ತಿದ್ದರು.
ನಿಮ್ಮ ಮನೆಯಲ್ಲಿ ಶ್ರೀಕೃಷ್ಣನ ಫೋಟೋ, ಸುತ್ತಲೂ ಗೋವುಗಳಿರುವ ಚಿತ್ರವನ್ನು ಇಟ್ಟುಕೊಂಡರೆ ಸಾಕಷ್ಟು ಶುಭಗಳು ಮತ್ತು ಒಳ್ಳೆಯದಾಗುತ್ತವೆ. ಅಂತಿಮವಾಗಿ, ವಾರಕ್ಕೆ ಒಮ್ಮೆಯಾದರೂ ಗೋವಿಗೆ ಕೈಯಿಂದ ಆಹಾರವನ್ನು ನೀಡಿದರೆ, ಇದು ಯಾವುದೇ ಪೂಜೆ ಅಥವಾ ಯಜ್ಞಗಳನ್ನು ಮಾಡಿದಷ್ಟೇ ಫಲವನ್ನು ನೀಡುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:47 am, Tue, 11 November 25