Daily Devotional: ವಿದ್ಯಾರ್ಥಿಗಳು ಯಶಸ್ಸಿಗೆ ಈ ಅಭ್ಯಾಸ ರೂಡಿಸಿಕೊಳ್ಳಿ; ಜ್ಯೋತಿಷ್ಯ ಸಲಹೆ ಇಲ್ಲಿದೆ

ವಿದ್ಯಾರ್ಥಿ ಜೀವನದ ಯಶಸ್ಸಿಗೆ ಶಿಸ್ತು, ಸಂಯಮ, ತಾಳ್ಮೆ, ಏಕಾಗ್ರತೆ ಹಾಗೂ ಜ್ಞಾನಾರ್ಜನೆ ಅತ್ಯಾವಶ್ಯಕ. ಸೂರ್ಯೋದಯಕ್ಕೆ ಮುನ್ನ ಏಳುವುದು, ಸಮತೋಲಿತ ಆಹಾರ ಸೇವಿಸುವುದು ಮತ್ತು ಲೌಕಿಕ ಆಕರ್ಷಣೆಗಳಿಂದ ದೂರವಿರುವುದು ಆದರ್ಶ ವಿದ್ಯಾರ್ಥಿಯ ಲಕ್ಷಣಗಳು. ಕಾಕಚೇಷ್ಟ, ಬಕೋಧ್ಯಾನಂ, ಶ್ವಾನನಿದ್ರಾ ಸೂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

Daily Devotional: ವಿದ್ಯಾರ್ಥಿಗಳು ಯಶಸ್ಸಿಗೆ ಈ ಅಭ್ಯಾಸ ರೂಡಿಸಿಕೊಳ್ಳಿ; ಜ್ಯೋತಿಷ್ಯ ಸಲಹೆ ಇಲ್ಲಿದೆ
ವಿದ್ಯಾರ್ಥಿಗಳು ಯಶಸ್ಸಿಗೆ ಈ ಅಭ್ಯಾಸ ರೂಡಿಸಿಕೊಳ್ಳಿ
Image Credit source: Pinterest

Updated on: Jun 06, 2026 | 8:25 AM

ವಿದ್ಯಾರ್ಥಿ ಜೀವನವು ಪ್ರತಿಯೊಬ್ಬರ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಘಟ್ಟವಾಗಿದೆ. ವಿದ್ಯೆಯನ್ನು ಗಳಿಸಲು ಹಂಬಲಿಸುವವನೇ ವಿದ್ಯಾರ್ಥಿ. ಆದರೆ, ಎಲ್ಲರೂ ಯಶಸ್ವಿ ವಿದ್ಯಾರ್ಥಿಗಳಾಗುವುದಿಲ್ಲ. ಯಶಸ್ಸನ್ನು ಸಾಧಿಸಲು ಕೇವಲ ಅದೃಷ್ಟವಷ್ಟೇ ಸಾಕಾಗುವುದಿಲ್ಲ, ಬದಲಿಗೆ ಕೆಲವು ಸದ್ಗುಣಗಳನ್ನು ಮತ್ತು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ವಿದ್ಯಾರ್ಥಿ ಜೀವನದಲ್ಲಿ ಗುರಿ ಸಾಧನೆಗೆ ಶಿಸ್ತು, ಸಂಯಮ, ತಾಳ್ಮೆ, ಸಹನೆ, ಮತ್ತು ಆಲೋಚನಾ ಶಕ್ತಿಗಳು ಅತ್ಯಂತ ಮುಖ್ಯ. ಈ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಅಧ್ಯಯನದಲ್ಲಿ ಸಂಪೂರ್ಣ ಯಶಸ್ಸು ಗಳಿಸಲು ಸಾಧ್ಯ. ಉದಾಸೀನತೆ, ನಿರ್ಲಕ್ಷ್ಯ ಮತ್ತು ನಕಾರಾತ್ಮಕ ಆಲೋಚನೆಗಳು ವಿದ್ಯಾರ್ಥಿಯ ಪ್ರಗತಿಗೆ ಅಡ್ಡಿಯಾಗುತ್ತವೆ ಮತ್ತು ಜೀವನದ ಪರಿಪೂರ್ಣತೆಯನ್ನು ತಡೆಯುತ್ತವೆ.

ವಿದ್ಯೆಯ ಮಹತ್ವವನ್ನು ಸಾರುವ ವಿದ್ಯಾದದಾತಿ ವಿನಯಂ ಶ್ಲೋಕವು ಬಹಳ ಪ್ರಸ್ತುತ. ವಿದ್ಯೆಯಿಂದ ವಿನಯ, ವಿನಯದಿಂದ ಅರ್ಹತೆ, ಅರ್ಹತೆಯಿಂದ ಸಂಪತ್ತು, ಮತ್ತು ಸಂಪತ್ತಿನಿಂದ ಸುಖಮಯ ಜೀವನವನ್ನು ರೂಪಿಸಿಕೊಳ್ಳಬಹುದು. ಬಾಲ್ಯದಿಂದಲೇ, ವಿಶೇಷವಾಗಿ ಐದನೇ ತರಗತಿಯ ನಂತರ, ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಒಳ್ಳೆಯ ಸಂಸ್ಕಾರ, ಶಿಸ್ತು ಮತ್ತು ಗುರಿಯ ಕಡೆಗೆ ಒಲವನ್ನು ಬೆಳೆಸುವುದು ಅವರ ಭವಿಷ್ಯಕ್ಕೆ ಅಡಿಪಾಯ ಹಾಕಿದಂತೆ. ರಾಜನಿಗೆ ತನ್ನ ರಾಜ್ಯದಲ್ಲಿ ಮಾತ್ರ ಗೌರವ ಸಿಕ್ಕರೆ, ವಿದ್ಯಾವಂತನಿಗೆ ಪ್ರಪಂಚದಾದ್ಯಂತ ಗೌರವ ಸಿಗುತ್ತದೆ ಎಂಬ ಮಾತು ವಿದ್ಯಾವಾನ್ ಸರ್ವತ್ರ ಪೂಜ್ಯತೆ ಎಂಬುದನ್ನು ದೃಢೀಕರಿಸುತ್ತದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ಕತ್ತಿನಲ್ಲಿರುವ ತುಳಸಿ ಮಾಲೆ ಗಮನಿಸಿದ್ದೀರಾ? ಧರಿಸುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ

ಆದರ್ಶ ವಿದ್ಯಾರ್ಥಿಯು ಹೊಂದಿರಬೇಕಾದ ಐದು ಪ್ರಮುಖ ಗುಣಲಕ್ಷಣಗಳನ್ನು ಈ ರೀತಿ ವಿವರಿಸಲಾಗಿದೆ:

  • ಸೂರ್ಯೋದಯಕ್ಕೆ ಮುನ್ನ ಏಳುವುದು: ಮುಂಜಾನೆ ಬೇಗ ಏಳುವ ಅಭ್ಯಾಸವು ಮನಸ್ಸನ್ನು ಚುರುಕುಗೊಳಿಸುತ್ತದೆ. ತಡವಾಗಿ ಏಳುವ ವಿದ್ಯಾರ್ಥಿಯ ಮನಸ್ಸು ಮಂದವಾಗುವ ಸಾಧ್ಯತೆ ಇರುತ್ತದೆ.
  • ಕಾಕಚೇಷ್ಟ (ಕಾಗೆಯಂತೆ ಗಮನ): ಕಾಗೆಯು ಸುತ್ತಮುತ್ತಲಿನ ಪರಿಸರದ ಬಗ್ಗೆ ನಿರಂತರವಾಗಿ ಗಮನವಿಡುವಂತೆ, ವಿದ್ಯಾರ್ಥಿಯು ತನ್ನ ಗುರಿಯ ಬಗ್ಗೆ ಎಚ್ಚರದಿಂದಿರಬೇಕು. ಯಾವುದೇ ಸಣ್ಣ ಅಡೆತಡೆಯೂ ತನ್ನ ಗುರಿಯಿಂದ ವಿಮುಖರಾಗದಂತೆ ನೋಡಿಕೊಳ್ಳಬೇಕು.
  • ಬಕೋಧ್ಯಾನಂ (ಕೊಕ್ಕರೆಯಂತೆ ಏಕಾಗ್ರತೆ): ಕೊಕ್ಕರೆಯು ನೀರಿನಲ್ಲಿ ಮೀನು ಹಿಡಿಯುವಾಗ ಯಾವುದೇ ಬೇರೆ ವಿಷಯಗಳಿಗೆ ಗಮನ ಕೊಡದೆ ಏಕಾಗ್ರತೆಯಿಂದ ಇರುವಂತೆ, ವಿದ್ಯಾರ್ಥಿಯು ತನ್ನ ಅಧ್ಯಯನದಲ್ಲಿ ಸಂಪೂರ್ಣ ಏಕಾಗ್ರತೆಯನ್ನು ಸಾಧಿಸಬೇಕು.
  • ಶ್ವಾನನಿದ್ರಾ (ನಾಯಿಯಂತೆ ಎಚ್ಚರ): ನಾಯಿಯು ನಿದ್ರಿಸುತ್ತಿದ್ದರೂ ಸಣ್ಣ ಶಬ್ದಕ್ಕೂ ಎಚ್ಚರಗೊಳ್ಳುವಂತೆ, ವಿದ್ಯಾರ್ಥಿಯು ಯಾವುದೇ ಪಾಠವನ್ನು ಅತಿ ಜಾಗರೂಕತೆಯಿಂದ ಗ್ರಹಿಸುವ ಶಕ್ತಿಯನ್ನು ಹೊಂದಿರಬೇಕು.
  • ಸಮತೋಲಿತ ಆಹಾರ ಮತ್ತು ಲೌಕಿಕ ಆಕರ್ಷಣೆಗಳಿಂದ ದೂರವಿರುವುದು: ಆರೋಗ್ಯಕರ ಮತ್ತು ಸಮತೋಲಿತ ಆಹಾರವು ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕಾರಣವಾಗುತ್ತದೆ. ಮನಸ್ಸಿನ ಶಾಂತಿಗೆ ಇದು ಅತ್ಯಗತ್ಯ. ಇದಲ್ಲದೆ, ಲೌಕಿಕ ಆಕರ್ಷಣೆಗಳು, ಮನರಂಜನೆ ಮತ್ತು ಅನಗತ್ಯ ವಿಷಯಗಳಲ್ಲಿ ಸಮಯ ಕಳೆಯುವುದನ್ನು ತಪ್ಪಿಸಿ, ತನ್ನ ಗುರಿ ಮತ್ತು ಪಠ್ಯಕ್ರಮದ ಮೇಲೆ ಗಮನ ಹರಿಸುವುದು ಯಶಸ್ವಿ ವಿದ್ಯಾರ್ಥಿಯ ಲಕ್ಷಣವಾಗಿದೆ.

ಜ್ಞಾನ ಸಂಪಾದನೆ ಮುಖ್ಯ. ಹೊಸ ವಿಷಯಗಳನ್ನು ಕಲಿಯುವ ಹಂಬಲ, ಅದರ ಬಗ್ಗೆ ಆಳವಾದ ತಿಳುವಳಿಕೆ ಪಡೆಯುವ ನಿರಂತರ ಪ್ರಯತ್ನ, ಇವೆಲ್ಲವೂ ಆದರ್ಶ ವಿದ್ಯಾರ್ಥಿಯ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕುತ್ತವೆ. ಈ ಗುಣಗಳನ್ನು ಅಳವಡಿಸಿಕೊಂಡರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಯಶಸ್ಸಿನ ಮೆಟ್ಟಿಲೇರಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 am, Sat, 6 June 26

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us