ಜೂನ್ 24 ಗುರುವಾರ ಅತ್ಯಂತ ಶುಭ ದಿನವಾಗಿದೆ. ಏಕೆಂದರೆ ಈ ಒಂದೇ ದಿನದಲ್ಲಿ ಕಾರ ಹುಣ್ಣಿಮೆ, ವಟಸಾವಿತ್ರಿ ವ್ರತ ಮತ್ತು ಈ ಹಿಂದೆ ಎಂದೂ ಸಂಭವಿಸದ ಒಂದು ಪ್ರಾಕೃತಿಕ ಗ್ರಹ ನಕ್ಷತ್ರ ರೇಖೆ ಈ ಹುಣ್ಣಿಮೆಯಲ್ಲಿ ಸಂಭವಿಸಲಿದೆ. ಈ ಎಲ್ಲಾ ಶುಭಗಳು ಒಂದೇ ದಿನ ಆಗುವುದರಿಂದ ಈ ದಿನ ವಿಶೇಷವಾಗಿದೆ. ಹೀಗಾಗಿ ಈ ದಿನದ ವಿಶೇಷತೆ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.
ಒಂದೇ ಸರಳ ರೇಖೆಯಲ್ಲಿ ಸೂರ್ಯ ಮತ್ತು ಚಂದ್ರ
ಈ ದಿನ ಪ್ರಕೃತಿಯಲ್ಲಿ ಧನಾತ್ಮಕ ಲಹರಿಗಳು ಹೆಚ್ಚಾಗಿರಲಿದ್ದು, ಮಹತ್ತರವಾದ ಬದಲಾವಣೆಯಾಗುವ ಗೋಚಾರವಾಗಿದೆ. ಚಂದ್ರ ಧನಸ್ಸು ರಾಶಿ, ಮೂಲಾ, ಕೇತು ನಕ್ಷತ್ರದಲ್ಲಿ ಸಂಚಾರ ಮಾಡಲಿದ್ದಾನೆ. ಹಾಗೂ ಸೂರ್ಯ ಮಿಥುನ ರಾಶಿಯ ಆರ್ದ್ರಾ, ರಾಹು ನಕ್ಷತ್ರದಲ್ಲಿ ಸಂಚಾರ ಮಾಡಲಿದ್ದಾನೆ. ಹೀಗಾಗಿ ರಾಶಿ ಫಲದಲ್ಲಿ ಬದಲಾವಣೆಯಾಗಲಿದೆ. ಸೂರ್ಯ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಸಂಚಾರದ, ಆತ್ಮಕಾರಕ ಮನಃ ಕಾರಕರ ನೇರಾನೇರ, ಮತ್ತು ಸಾವಿತ್ರಿಯಂತೆ ತಮ್ಮ ಗಂಡನಿಗೂ ಪೂರ್ಣ ಆಯಸ್ಸು ಬೇಡುವ ಪ್ರಾರ್ಥಿಸುವ ದಿನವಾಗಿರುವುದರಿಂದ ಈ ದಿನ ಮಾಡುವ ಜಪ, ಸಂಕಲ್ಪ, ಪೂಜೆ ವರ್ಷವೆಲ್ಲಾ ಮಾಡಿದ ಫಲವನ್ನು ನೀಡುತ್ತದೆ. ವರ್ಷವೆಲ್ಲಾ ದೇವರಿಗೆ ಪೂಜೆ ಮಾಡಿದರೆ ಸಿಗುವ ಫಲವನ್ನು ಈ ಬಂದೇ ದಿನದಲ್ಲಿ ಪಡೆಯಬಹುದು.
ಇನ್ನು ಚಂದ್ರ ಹಾಗೂ ಸೂರ್ಯ ಒಂದೇ ಸರಳ ರೇಖೆಯಲ್ಲಿ ಸಂಚರಿಸುವುದರಿಂದ ದ್ವಾದಶ ರಾಶಿಗಳ ಮೇಲೆ, ಹಾಗೂ ಪಂಚಭೂತಗಳ ಮೇಲೆ ಕೆಲವು ಬದಲಾವಣೆಗಳಾಗಲಿವೆ. ಧನಸ್ಸು, ಮಿಥುನ, ಸಿಂಹ, ಕಟಕ ರಾಶಿಯವರು ಜಾಗ್ರತೆವಹಿಸುವ ಅವಶ್ಯಕತೆ ಇದೆ. ಈ ದಿನ ಶ್ರದ್ಧೆ ಭಕ್ತಿಯಿಂದ ಗಣಪತಿ ಆರಾಧನೆ ಮಾಡಿದರೆ ಶುಭವಾಗುತ್ತೆ. ಅಂದುಕೊಂಡಂತಾಗಿ ಕಷ್ಟಗಳು ನಿವಾರಣೆಯಾಗುತ್ತವೆ. ಇನ್ನು ಜ್ಯೋತಿಷಿಗಳು ಹೇಳುವ ಪ್ರಕಾರ ಈ ಶುಭ ದಿನದ ಬಳಿಕವೇ ಕೊರೊನಾ ಲಸಿಕೆ ಕೆಲಸ ಮಾಡಲು ಶುರು ಮಾಡುತ್ತೆ. ಲಸಿಕೆಯ ಪರಿಣಾಮ ತಿಳಿಯುತ್ತೆ. ಜಗತ್ತಿಗೆ, ಜನರಿಗೆ ಒಳ್ಳೆದಾಗುವ ಸಮಯ ಸನಿಹವಾಗಿದೆ ಎಂದು ಹೇಳುತ್ತಾರೆ.
ಕಾರ ಹುಣ್ಣಿಮೆ
ದೇಶಕ್ಕೆ ರೈತ ಬೆನ್ನೆಲುಬಾದ್ರೆ, ರೈತರಿಗೆ ಮಾತ್ರ ಎತ್ತುಗಳು ಬೆನ್ನೆಲುಬು. ಹೌದು ಎತ್ತುಗಳು ರೈತರ ಬೆನ್ನೆಲುಬಾಗಿ ಕೃಷಿ ಭೂಮಿಯಲ್ಲಿ ದುಡಿಯುತ್ತವೆ. ಹೀಗಾಗಿ ರೈತರು ಎತ್ತುಗಳನ್ನು ಪೂಜನೀಯ ಭಾವದಿಂದ ಕಾಣುತ್ತಾರೆ. ಪ್ರತಿ ವರ್ಷ ರೈತರು ಉಳುಮೆಗೆ ಎತ್ತುಗಳನ್ನು ಬಳಸುತ್ತಾರೆ. ಬೇಸಿಗೆಯಲ್ಲಿ ಸುಡು ಬಿಸಿಲಿನಲ್ಲಿ ಎತ್ತುಗಳಿಂದ ಉಳುಮೆ ಮಾಡುವ ರೈತರು, ಕಾರ ಹುಣ್ಣಿಮೆಯ ದಿನದಂದು ಎತ್ತುಗಳಿಗೆ ತಮ್ಮ ಕೃತಜ್ಞತೆಯನ್ನು ಸಮರ್ಪಿಸುತ್ತಾರೆ. ಅವುಗಳನ್ನು ಪೂಜೆ ಮಾಡಿ, ಅವುಗಳ ಸೇವೆಯನ್ನು ಸ್ಮರಿಸುತ್ತಾರೆ. ಕಾರ ಹುಣ್ಣಿಮೆಯಂದು ರೈತರು ಎತ್ತುಗಳ ಮೈ ತೊಳೆದು, ಅವುಗಳಿಗೆ ಬಣ್ಣ ಹಚ್ಚುತ್ತಾರೆ. ಅವುಗಳ ಕೊರಳಲ್ಲಿ ಗೆಜ್ಜೆ ಸರ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಹಾಕುತ್ತಾರೆ.
ಹೋಳಿಗೆ ಸೇರಿದಂತೆ ವಿವಿಧ ರೀತಿ ಸಿಹಿ ಅಡುಗೆಯನ್ನು ಮನೆಯಲ್ಲಿ ಮಾಡ್ತಾರೆ. ತಮ್ಮ ಮನೆಯಲ್ಲಿರುವ ಎತ್ತುಗಳಿಗೆ ಹೋಳಿಗೆ ಸೇರಿದಂತೆ ಸಿಹಿ ತಿನಿಸುಗಳನ್ನು ತಿನ್ನಿಸುತ್ತಾರೆ. ನಂತರ ದೇವಸ್ಥಾನಗಳಿಗೆ ಎತ್ತುಗಳನ್ನು ಓಯ್ದು, ಕರಿ ಹರಿದು, ಎತ್ತುಗಳಿಗೆ ಏನು ತೊಂದರೆಯಾಗದಂತೆ ದೇವರಲ್ಲಿ ಸ್ಮರಿಸಿ ಬರ್ತಾರೆ.
ವಟಸಾವಿತ್ರಿ ವ್ರತ
ಮದುವೆಯಾದ ಮಹಿಳೆಯರು ಪತಿಯ ಆಯಸ್ಸು ವೃದ್ಧಿಯಾಗಲೆಂದು ವಟ ಸಾವಿತ್ರಿ ವ್ರತವನ್ನು ಮಾಡುತ್ತಾರೆ. ಈ ವ್ರತವನ್ನು ಸತ್ಯವಾನ್ ಸಾವಿತ್ರಿಯನ್ನು ನೆನೆದು ಆಚರಿಸಲಾಗುತ್ತೆ. ಒಮ್ಮೆ ಸಾವಿತ್ರಿಯು ತನ್ನ ಪತಿ ಸತ್ಯವಾನ್ನನ್ನು ಯಮನಿಂದ ಉಳಿಸಿಕೊಳ್ಳಲು ಈ ವ್ರತವನ್ನು ಆಚರಿಸುತ್ತಾಳೆ. ಇದರಿಂದ ಯಮನು ಸಂತಸಗೊಂಡು ಸತ್ಯವಾನ್ನನ್ನು ಆಕೆಗೆ ಒಪ್ಪಿಸುತ್ತಾನೆ. ಈ ರೀತಿ ಈ ವ್ರತ ಗಂಡನ ಆಯಸ್ಸನ್ನು ಹೆಚ್ಚಿಸಲು ಮಾಡಲಾಗುತ್ತೆ. ಈ ದಿನ ಮಹಿಳೆಯರು ಆಲದ ಮರಕ್ಕೆ ಪೂಜೆ ಮಾಡಿ, ಪ್ರದಕ್ಷಿಣೆಯನ್ನು ಹಾಕುತ್ತಾರೆ. ಆಲದ ಮರದ ಸುತ್ತದಾರವನ್ನು ಕಟ್ಟಿ, ತಾಮ್ರ ಅಥವಾ ಯಾವುದೇ ನಾಣ್ಯಗಳನ್ನಿಟ್ಟು ಪತಿಯ ಆಯುಷ್ಯ ವೃದ್ಧಿಗೆ ಪ್ರಾರ್ಥಿಸುತ್ತಾರೆ.
ಇದನ್ನೂ ಓದಿ: Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು
Published On - 6:59 am, Wed, 23 June 21