Vastu Tips: ಮಲಗುವಾಗ ಮೊಬೈಲ್, ಪರ್ಸ್​, ನೀರಿನ ಬಾಟಲಿಯನ್ನು ತಲೆಯ ಪಕ್ಕ ಇಟ್ಟುಕೊಳ್ಳುತ್ತೀರಾ? ತಪ್ಪದೇ ಈ ಅಂಶಗಳನ್ನು ಗಮನಿಸಿ

ಕನ್ನಡಿಯನ್ನು ತಲೆಯ ಪಕ್ಕದಲ್ಲಿ, ಹಾಸಿಗೆಯ ಹತ್ತಿರ ಅಥವಾ ಮಲಗುವ ನೇರ ದಿಕ್ಕಿಗೆ ಇರಿಸಿದ್ದರೆ ಅದು ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ.

Vastu Tips: ಮಲಗುವಾಗ ಮೊಬೈಲ್, ಪರ್ಸ್​, ನೀರಿನ ಬಾಟಲಿಯನ್ನು ತಲೆಯ ಪಕ್ಕ ಇಟ್ಟುಕೊಳ್ಳುತ್ತೀರಾ? ತಪ್ಪದೇ ಈ ಅಂಶಗಳನ್ನು ಗಮನಿಸಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Skanda

Updated on: Aug 01, 2021 | 7:09 AM

ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆಗೆ ಹೆಚ್ಚು ಮಹತ್ವ. ಕೆಲವೊಂದು ವಿಚಾರಗಳನ್ನು ಅನುಸರಿಸುವುದರಿಂದ ಒಳಿತಾಗುತ್ತದೆ ಎಂದಾದಾಗ ಜನರು ಅದನ್ನು ಶ್ರದ್ಧೆಯಿಂದ ಪರಿಪಾಲಿಸಿಕೊಂಡು ಹೋಗುತ್ತಾರೆ. ಅದರಲ್ಲಿ ವಾಸ್ತು ಕೂಡಾ ಪ್ರಮುಖ ಅಂಶವಾಗಿದ್ದು, ಅದನ್ನು ನಂಬುವುದರಿಂದ ಹಲವರು ತಮಗೆ ಒಳಿತಾಗಿದೆ ಎಂದು ಹೇಳಿಕೊಳ್ಳುತ್ತಾರೆ. ವಾಸ್ತು ಕೇವಲ ಮನೆಯ ಬಾಗಿಲಿನ ದಿಕ್ಕು, ಅಡುಗೆ ಕೋಣೆಯ ದಿಕ್ಕಿಗೆ ಸೀಮಿತವಾಗಿರದೇ ಹಲವು ವಿಚಾರಗಳಿಗೆ ಅನ್ವಯಿಸುತ್ತದೆ. ಅದರಂತೆ, ನಮ್ಮ ಸುಖ ನಿದ್ರೆಗೂ ವಾಸ್ತುವಿಗೂ ಸಂಬಂಧವಿದೆ ಎನ್ನಲಾಗುತ್ತದೆ.

ಕೆಲವರಿಗೆ ಮಲಗಿದಾಗ ಕೆಟ್ಟ ಕನಸು ಬೀಳುವುದು, ನಿದ್ರೆಯಿಂದ ಪದೇ ಪದೇ ಎಚ್ಚರವಾಗುವುದು ಆಗುತ್ತಿರುತ್ತದೆ. ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಬಾರದೇ ಹೊರಳಾಡುವಂತಾಗುತ್ತದೆ. ಅದು ಅವರ ಆರೋಗ್ಯ, ಮಾನಸಿಕ ನೆಮ್ಮದಿ ಮೇಲೂ ಪರಿಣಾಮ ಬೀರಿ ಮನಸ್ಸಿನಲ್ಲಿ ಋಣಾತ್ಮಕ ಆಲೋಚನೆಗಳನ್ನು ಹೆಚ್ಚಿಸಲು ಕಾರಣವಾಗುತ್ತವೆ. ಈ ಸಮಸ್ಯೆಗಳನ್ನು ಎದುರಿಸುತ್ತಿರುವವರು ಕೆಲ ಸರಳ ಉಪಾಯಗಳನ್ನು ಪಾಲಿಸುವ ಮೂಲಕ ತೊಂದರೆಯಿಂದ ಪಾರಾಗಬಹುದು. ಅದಕ್ಕಾಗಿ ವಾಸ್ತು ಶಾಸ್ತ್ರದ ಪ್ರಕಾರ ಈ ನಿಯಮಗಳನ್ನು ಪಾಲಿಸುವುದು ಉತ್ತಮ ಎಂದೆನ್ನಲಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿ ಹೇಳುವಂತೆ ಮಲಗುವಾಗ ಪರ್ಸ್​, ಔಷಧಗಳನ್ನು ತಲೆಯ ಬಳಿ ಇಟ್ಟುಕೊಳ್ಳುವುದು ಒಳಿತಲ್ಲವಂತೆ. ಸದಾ ಔಷಧವನ್ನು ತಲೆಯ ಪಕ್ಕದಲ್ಲಿಟ್ಟುಕೊಳ್ಳುವವರ ಆರೋಗ್ಯ ಎಂದಿಗೂ ಸುಧಾರಿಸುವುದಿಲ್ಲವಂತೆ. ಅಲ್ಲದೇ ತಲೆಯ ಬಳಿ ಪರ್ಸ್ ಇಟ್ಟುಕೊಳ್ಳುವುದೂ ಆರ್ಥಿಕ ನಷ್ಟಕ್ಕೆ ಹಾದಿಯಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಮಲಗುವಾಗ ಪರ್ಸ್​, ಔಷಧವನ್ನು ತಲೆಯ ಪಕ್ಕ ಇಟ್ಟುಕೊಳ್ಳುವ ಅಭ್ಯಾಸವಿದ್ದರೆ ಅದನ್ನು ಬಿಟ್ಟುಬಿಡಿ.

ನೀರಿನ ಬಾಟಲಿಯನ್ನು ಪಕ್ಕದಲ್ಲಿಟ್ಟುಕೊಂಡು ಮಲಗುವ ಅಭ್ಯಾಸವೂ ಅನೇಕರಿಗೆ ಇರುತ್ತದೆ. ರಾತ್ರಿ ಎಚ್ಚರವಾದಾಗ ಸುಲಭವಾಗಿ ಕೈಗೆಟುಕಲಿ ಎಂದು ಅನೇಕರು ತಲೆಯ ಹತ್ತಿರದಲ್ಲೇ ನೀರಿನ ಬಾಟಲಿಯನ್ನು ಇಟ್ಟುಕೊಳ್ಳುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ತಲೆಯ ಬಳಿ ನೀರಿನ ಬಾಟಲಿ ಇಟ್ಟುಕೊಂಡರೆ ಅದು ಜಾತಕದಲ್ಲಿ ಚಂದ್ರನ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ನಂಬಿಕೆ ಇದೆ. ಅದು ಮನಸ್ಸಿನ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುವುದಕ್ಕೆ ಕಾರಣವಾಗುತ್ತದೆಯಂತೆ.

ಚಪ್ಪಲಿ, ಶೂಗಳನ್ನು ಹಾಸಿಗೆಯ ಪಕ್ಕದಲ್ಲಿ ಇಟ್ಟುಕೊಳ್ಳುವ ಅಭ್ಯಾಸ ಕೆಲವರಿಗೆ ಇರುತ್ತದೆ. ಆದರೆ, ಇದು ಮನೆಯಲ್ಲಿ, ಮನಸ್ಸಿನಲ್ಲಿ ಋಣಾತ್ಮಕ ಶಕ್ತಿ ಹೆಚ್ಚಲು ಕಾರಣವಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಅಲ್ಲದೇ, ಅದು ಮಾನಸಿಕ ಒತ್ತಡವನ್ನು ಉಂಟುಮಾಡುವುದರಿಂದ ಜೀವನದಲ್ಲಿ ಖುಷಿ, ನೆಮ್ಮದಿ ಎಲ್ಲವೂ ಕಾಣೆಯಾಗುತ್ತವಂತೆ.

ಕನ್ನಡಿಯನ್ನು ತಲೆಯ ಪಕ್ಕದಲ್ಲಿ, ಹಾಸಿಗೆಯ ಹತ್ತಿರ ಅಥವಾ ಮಲಗುವ ನೇರ ದಿಕ್ಕಿಗೆ ಇರಿಸಿದ್ದರೆ ಅದು ವಾಸ್ತು ಶಾಸ್ತ್ರದ ಪ್ರಕಾರ ಒಳ್ಳೆಯದಲ್ಲ. ಅದು ಮನೆಯೊಳಗೆ ಆಂತರಿಕ ಸಮಸ್ಯೆಯನ್ನು ಹೆಚ್ಚಿಸಿ ಬಿರುಕು, ಭಿನ್ನಾಭಿಪ್ರಾಯಗಳಿಗೆ ನಾಂದಿ ಹಾಡುತ್ತದೆಯಂತೆ. ಬಹುಮುಖ್ಯವಾಗಿ ಸುಗಮ ದಾಂಪತ್ಯ ಜೀವನಕ್ಕೆ ಇದು ಮಾರಕ ಎನ್ನುವ ನಂಬಿಕೆ ಚಾಲ್ತಿಯಲ್ಲಿದೆ.

ಎಲೆಕ್ಟ್ರಾನಿಕ್ ಉತ್ಪನ್ನಗಳಾದ ಲ್ಯಾಪ್​ಟಾಪ್​, ಮೊಬೈಲ್ ಫೋನ್ ಇತ್ಯಾದಿಗಳನ್ನು ತಲೆಯ ಪಕ್ಕದಲ್ಲಿ ಇಟ್ಟುಕೊಳ್ಳುವ ಅಭ್ಯಾಸವಿದ್ದರೆ ಅದನ್ನು ಇಂದೇ ಬಿಟ್ಟುಬಿಡಿ. ಈ ವಸ್ತುಗಳಿಂದ ಹೊರಸೂಸುವ ವಿಕಿರಣಗಳು ನಮ್ಮ ಆರೋಗ್ಯಕ್ಕೆ ಹಾನಿ ಮಾಡುವುದಷ್ಟೇ ಅಲ್ಲದೇ ಇಡೀ ಮನೆಯ ಮಾನಸಿಕ ನೆಮ್ಮದಿಗೆ ಭಂಗ ತರುವುದಕ್ಕೂ ಕಾರಣ ಎಂದೆನ್ನಲಾಗುತ್ತದೆ.

ಎಣ್ಣೆಯನ್ನು ತಲೆಯ ಪಕ್ಕದಲ್ಲಿ ಇಟ್ಟುಕೊಳ್ಳುವುದು ಕೂಡಾ ವಾಸ್ತುಪ್ರಕಾರದ ಪ್ರಕಾರ ಒಳ್ಳೆಯದಲ್ಲ. ಅದು ಅನೇಕ ಸಮಸ್ಯೆಗಳನ್ನು ನಮಗೆ ಅಂಟಿಸುವುದಕ್ಕೆ ದಾರಿಯಾಗುತ್ತದೆ ಎಂಬ ನಂಬಿಕೆ ಇದೆ. ಅಂತೆಯೇ ಮಲಗುವಾಗ ವಾಹನದ ಕೀಗಳನ್ನು ಪಕ್ಕದಲ್ಲಿ ಇಟ್ಟುಕೊಳ್ಳುವುದೂ ಉಚಿತವಲ್ಲ ಎನ್ನಲಾಗಿದ್ದು, ಅದು ಕಳ್ಳತನದ ಭಯಕ್ಕೆ ನಾಂದಿಯಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳುತ್ತಾರೆ.

ಇದನ್ನೂ ಓದಿ: ಕಡಿಮೆ ನಿದ್ರೆ ಅಂದರೆ ಹಲವು ತೊಂದರೆ; ನಿದ್ರಾಹೀನತೆಯಿಂದ ಬಳಲುತ್ತಿರುವವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ 

Vastu Tips: ನೀವು ಮಲಗುತ್ತಿರುವುದು ವಾಸ್ತು ಪ್ರಕಾರ ಸರಿ ಇದೆಯೇ? ಮನಸ್ಸಿಗೆ ಕಿರಿಕಿರಿ ಇದ್ದರೆ ಇವುಗಳನ್ನು ಪಾಲಿಸಿ ನೋಡಿ

(Vastu Tips for Good Sleep do not put these things bedside while sleeping)