Spiritual: ಅನಂತನ ಚತುರ್ದಶೀ ಉಪಾಸನೆ/ಅನಂತವ್ರತ ಎಂದರೇನು? ಏನಿದರ ಮಹತ್ವ? ಹೇಗೆ ಆಚರಣೆ? ಯಾವಾಗ ಆಚರಣೆ? ಇದರ ಫಲವೇನು?

ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ದಶಿಯಂದು (ಈ ಸಲ ದಿನಾಂಕ 9/09/22 ) ಈ ವ್ರತವನ್ನು ಆಚರಿಸುತ್ತಾರೆ. ಯಾಕೆ ಭಾದ್ರಪದ ಚತುರ್ದಶೀ ಎಂದರೆ - ಭಾದ್ರಪದ ಮಾಸದ ಏಕಾದಶಿಯಂದು ಮಹಾವಿಷ್ಣು ತನ್ನ ಯೋಗನಿದ್ರೆಯಲ್ಲಿ ಮಗ್ಗುಲನ್ನು ಬದಲಿಸುತ್ತಾನೆ.

Spiritual: ಅನಂತನ ಚತುರ್ದಶೀ ಉಪಾಸನೆ/ಅನಂತವ್ರತ ಎಂದರೇನು? ಏನಿದರ ಮಹತ್ವ? ಹೇಗೆ ಆಚರಣೆ? ಯಾವಾಗ ಆಚರಣೆ? ಇದರ ಫಲವೇನು?
Anantana Chaturdashi
Follow us
TV9 Web
| Updated By: ಡಾ. ಭಾಸ್ಕರ ಹೆಗಡೆ

Updated on:Sep 08, 2022 | 11:18 AM

ಭವಸಾಗರದಲ್ಲಿ ತೇಲುತ್ತಲಿರುವ ಮಾನವರು ಪ್ರಧಾನವಾಗಿ ಎರಡು ವಿಧ. ಒಂದು ಆಸ್ತಿಕರು. ಮತ್ತೊಬ್ಬರು ನಾಸ್ತಿಕರು ಎಂಬುದಾಗಿ. ಅಸ್ತಿ ಎನ್ನುವ ಮತಿಯುಳ್ಳವರು ಅಂದರೆ ಒಂದು ಚೈತನ್ಯವಿದೆ ಅದು ನಮ್ಮನ್ನು ಪಾಲಿಸುತ್ತದೆ ಮತ್ತು ಪೋಷಿಸುತ್ತದೆ ಎಂಬ ಭಾವವುಳ್ಳವರು ಆಸ್ತಿಕರು . ಇದರ ವಿರುದ್ಧ ಮತಿಯುಳ್ಳವರೇ ನಾಸ್ತಿಕರು. ಈ ಆಸ್ತಿಕರು ಧರ್ಮದ ಮೇಲೆ ಅಪಾರ ಶ್ರದ್ಧೆಯುಳ್ಳವರು. ಇವರ ಅಭ್ಯುದಯಕ್ಕಾಗಿ ಭಗವಂತ ಋಷಿ ಮುನಿಗಳ ಮೂಲಕ ಹಾಗೂ ಅವತಾರ ಪುರುಷರ ಮುಖಾಂತರ ಹಲವಾರು ವ್ರತಗಳನ್ನು, ನಿಯಮಗಳನ್ನು ಜಗತ್ತಿಗೆ ಸಾರಿದ್ದಾನೆ. ಅಂತಹ ವ್ರತಗಳಲ್ಲಿ ಅನಂತ ಚತುರ್ದಶೀ ವ್ರತವು ಬಹುಮುಖ್ಯವಾದ ಅನುಷ್ಠಾನವು.

ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ದಶಿಯಂದು (ಈ ಸಲ ದಿನಾಂಕ 9/09/22 ) ಈ ವ್ರತವನ್ನು ಆಚರಿಸುತ್ತಾರೆ. ಯಾಕೆ ಭಾದ್ರಪದ ಚತುರ್ದಶೀ ಎಂದರೆ – ಭಾದ್ರಪದ ಮಾಸದ ಏಕಾದಶಿಯಂದು ಮಹಾವಿಷ್ಣು ತನ್ನ ಯೋಗನಿದ್ರೆಯಲ್ಲಿ ಮಗ್ಗುಲನ್ನು ಬದಲಿಸುತ್ತಾನೆ. ಆಗ ಅವನ ಮುಖವು ಭೂಮಿಯ ಕಡೆ ತಿರುಗಿರುತ್ತದೆ. ಆದಾದ ಮೇಲೆ ಈರೀತಿ ಮಗ್ಗುಲು ಬದಲಿದ ನಂತರ ಈ ವ್ರತವನ್ನು ಆಚರಿಸುವುದು ವಾಡಿಕೆ.

ನೋಂಪಿ ಅಂದರೆ ಉಪವಾಸವೆಂಬ ಅರ್ಥವಿದೆ. ಪ್ರಾತಃಕಾಲದಿಂದ ಉಪವಾಸವಿದ್ದು , ಮಧ್ಯಾಹ್ನದ ವೇಳೆಗೆ ವಿಶೇಷ ಭಕ್ಷ್ಯಗಳನ್ನು ಮಾಡಿ ಭಗವಂತ ಶ್ರೀಮನ್ನಾರಾಯಣನ ಅನಂತ ರೂಪದ ಆರಾಧನೆ ಮಾಡುವುದರಿಂದ ಇದಕ್ಕೆ ಅನಂತನೋಂಪಿ ಎಂಬ ಹೆಸರು ಬಂತು. ಉಪಾಸನೆ ಅಂದರೆ ಉಪ+ಆಸನ = ಉಪಾಸನ ಆದರ ಭಾವವೇ ಉಪಾಸನೇ. ಅದರ ಅರ್ಥ ಭಗವಂತನ ಸಮೀಪದಲ್ಲಿ ಅರ್ಥಾತ್ ಅವನನ್ನೇ ಧ್ಯಾನಿಸುತ್ತಾ/ಪೂಜಿಸುತ್ತಾ ಅವನ ಅನುಗ್ರಹಕ್ಕಾಗಿ ಪ್ರಾರ್ಥಿಸುವುದು ಎಂದರ್ಥ. ಅನಂತನ ಅನುಗ್ರಹಕ್ಕಾಗಿ ಪ್ರಾರ್ಥಿಸುವ ದಿನವೇ ಅನಂತಚತುರ್ದಶೀ. ವ್ರತವೆಂದರೂ ಇದೇ ಅರ್ಥ.

ಏನಿದರ ಮಹತ್ವ?

ಪಾಂಡವವರು ದುರ್ಯೋಧನನ ಅತಿಯಾದ ಆಸೆ ಮತ್ತು ಕುತಂತ್ರದ ಕಾರಣದಿಂದಾಗಿ ತಮ್ಮ ವೈಭವೋಪೇತವಾದ ಅರಮನೆ, ರಾಜ್ಯ, ಗೌರವವೆಲ್ಲವನ್ನೂ ಅನೀರೀಕ್ಷಿತವಾಗಿ ಕಳೆದುಕೊಂಡು ಕಾಡನ್ನು ಸೇರಬೇಕಾಯಿತು. ವಾಸ್ತವವಾಗಿ ಇದರಲ್ಲಿ ಪಾಂಡವರ ತಪ್ಪೇನೂ ಇಲ್ಲ. ಆದರೂ ನಷ್ಟ ಅನುಭವಿಸಲೇ ಬೇಕಾಯಿತು. ಇದರ ಪರಿಹಾರ ಹೇಗೆಂದು ಶ್ರೀಕೃಷ್ಣನಲ್ಲಿ ಧರ್ಮರಾಯನು ಕೇಳಿದಾಗ ಭಗವಂತ ಈ ಅನಂತಚತುರ್ದಶೀ ವ್ರತವನ್ನು ಮಾಡಲು ಹೇಳುತ್ತಾನೆ. ಅನಂತವೆಂತರೆ ನಿರಂತರ ಅಥವಾ ತುಂಡಿಲ್ಲದೇ ಇರುವುವಂತಹದ್ದು ಎಂದರ್ಥ. ಈ ವ್ರತವನ್ನು ಆಚರಿಸುದರಿಂದ ನಿರಂತರವಾದ ಸಫಲತೆಯನ್ನು ಭಗವಂತ ಕರುಣಿಸುವನೆಂದು ಈ ವ್ರತದ ಕಥೆಯೇ ಹೇಳುತ್ತದೆ.

ಭಗವಂತನೇ ಪಾಂಡವರಿಗೆ ಹೇಳಿದ ಕಥೆಯ ಸಾರ ಹೀಗಿದೆ – ಕ್ರತಯುಗದಲ್ಲಿ ಸುಮಂತು ಎಂಬವನಿಗೆ ಜನಿಸಿದ ಹೆಣ್ಣು ಮಗುವೊಂದು ತನ್ನ ತಾಯಿಯನ್ನು ಕಳೆದುಕೊಂಡು, ಮಲತಾಯಿಯ ಆರೈಕೆಯಲ್ಲಿ ಬೆಳೆದು ಕೌಂಡಿನ್ಯನೆಂಬ ಮಹಾತ್ಮನನ್ನು ವರಿಸಿದಳು. ತನ್ನ ಮಲತಾಯಿಯ ಕಾರಣದಿಂದ ಏನೂ ಸಂಪನ್ಮೂಲ ಸಿಗದ ಸುಶೀಲೆಯಾದ ಈ ಹೆಣ್ಣುಮಗಳು ತನ್ನ ಪತಿಯೊಂದಿಗೆ ಸಾಗುತ್ತಿರುವಾಗ ಒಂದು ಸಮುದ್ರ ದಂಡೆಯಲ್ಲಿ ಕೆಲವು ಸಂಸ್ಕಾರವಂತ ಸ್ತ್ರೀಯರು ವ್ರತವನ್ನು ಆಚರಿಸುತ್ತಿರುವುದನ್ನು ನೋಡಿ ತಾನೂ ಅದರಲ್ಲಿ ಭಾಗಿಯಾದಳು. ಅದೇನೆಂದು ಕೇಳಿದಾಗ ಅನಂತವ್ರತವೆಂದು ಅವಳಿಗೆ ತಿಳಿಯಿತು. ಈ ವ್ರತದ ಆಚರಣೆಯ ಫಲವಾಗಿ ಅವಳಿಗೆ ವಿಫುಲವಾದ ಸಂಪತ್ತು ಪ್ರಾಪ್ತವಾಯಿತು. ಈ ಸಂಪತ್ತಿನ ಮದದಿಂದ ಅನಂತನನ್ನು ಕೌಂಡಿನ್ಯನು ತಿರಸ್ಕರಿಸಿ ತುಂಬಾ ನಷ್ಟವನ್ನು ಅನುಭವಿಸಿ, ಕೊನೆಗೆ ತನ್ನ ತಪ್ಪಿನ ಅರಿವಾಗಿ ಪುನಃ ಈ ವ್ರತದ ಆಚರಣೆ ಮಾಡಿ ಧನ್ಯನಾದನು. ಇದನ್ನು ಪಾಂಡವರು ಅರ್ಥೈಸಿ ವ್ರತವನ್ನಾಚರಿಸಿ ತಮ್ಮ ಕಷ್ಟಗಳಿಂದ ಪಾರಾದರು. ಹಾಗೆಯೇ ಮಾನವರು ತಮ್ಮ ಕಷ್ಟಸಂಕುಲದಿಂದ, ನಷ್ಟ ಚಕ್ರದಿಂದ ಹೊರಬರಲು ಈ ವ್ರತದ ಆಚರಣೆ ತುಂಬಾ ಸಹಕಾರಿ.

ವ್ರತದ ವಿಧಾನ 

ಪ್ರಾತಃಕಾಲ ಸ್ನಾನ ಮಾಡಿ ಶುಭ್ರಮನಸ್ಸಿಂದ ಕಲಶದಲ್ಲಿ ನೀರು ತುಂಬಿ ಆ ಕಲಶಕ್ಕೆ ಯಮುನೆಯನ್ನು ಆಹ್ವಾನಿಸಬೇಕು. ಆನಂತರ ಹಿಟ್ಟಿನಿಂದ ಶೇಷನ ಬಿಂಬವನ್ನು ಮಾಡಿ ಅದನ್ನು ಪೂಜಿಸಬೇಕು. ಆದಾದ ಮೇಲೆ ಮಹಾವಿಷ್ಣುವಿನ ಬಿಂಬದ ಮುಂದೆ ಅಕ್ಕಿಯ ಮೇಲೆ ದರ್ಭೆಯನ್ನಿಟ್ಟು ಅದರ ಮೇಲೆ ಕಲಶವನ್ನಿಟ್ಟು ಹಳದೀ ಬಣ್ಣದ ವಸ್ತ್ರವನ್ನಿರಿಸಿ ಅನಂತನೆಂಬ ಹೆಸರಿನ ಭಗವಂತ ರೂಪವನ್ನು ಧ್ಯಾನಿಸುತ್ತಾ ಪೂಜಿಸಬೇಕು. ಹಳದೀ ಬಣ್ಣದ ದಾರಕ್ಕೆ ಕುಂಕುಮವನ್ನು ಲೇಪಿಸಿ ಅದಕ್ಕೆ ಹದಿನಾಲ್ಕು ಗಂಟುಗಳನ್ನು ಹಾಕಿ, ಮಧ್ಯಗಂಟಿಗೆ ಹೂವನ್ನಿರಿಸಿ ಶೇಷ ಸಹಿತ,ಲಕ್ಷ್ಮೀ ಸಮೇತನಾದ ನಾರಾಯಣನ್ನು ಆವಾಹನೆಮಾಡಿ (ಧ್ಯಾನಿಸಿ) ಪೂಜಿಸಬೇಕು. ಸಾಧ್ಯವಿದ್ದಲ್ಲಿ ದಂಪತಿಗಳನ್ನು ಬರಮಾಡಿಸಿ ಅವರಿಗೆ ಬಾಗಿನ ನೀಡಿ, ಸಿಹಿ ಹಂಚಿ ಆಶೀರ್ವಾದ ಪಡೆಯಬೇಕು. ಪೂಜೆಯ ಕೊನೆಯಲ್ಲಿ ಭಗವಂತನನ್ನು ಭಕ್ತಿಯಿಂದ ಪ್ರಾರ್ಥಿಸುತ್ತಾ ದಾರವನ್ನು ಪುರುಷರು ಬಲಗೈಗೂ, ಮಾತೆಯರು ಎಡಗೈಗೂ ಧಾರಣೆ ಮಾಡಬೇಕು.

ಪ್ರಾರ್ಥನೆ ಮಾಡುವ ಮಂತ್ರ ಹೀಗಿದೆ 

ಅನಂತಾಯ ನಮಸ್ತುಭ್ಯಂ ಸಹಸ್ರಶಿರಸೇ ನಮಃ |

ನಮೋಸ್ತು ಪದ್ಮನಾಭಾಯ ನಾಗಾನಾಂ ಪತಯೇ ನಮಃ ||

ದಾರವನ್ನು ಸ್ವೀಕರಿಸುವ ಮತ್ತು ಧರಿಸುವ ಮಂತ್ರ 

ಸ್ವೀಕರೋಮಿ ಶುಭಂ ಸೂತ್ರಂ ಮಮ ವಿಜ್ಞಾನದೋ ಭವ |

ದೋರರೂಪೇಣ ಮಾಂ ರಕ್ಷ ಪುರಾಣ ಪುರುಷೋತ್ತಮ ||

ಅನಂತ ಸರ್ವದೇವೇಶ ಭುಕ್ತಿಮುಕ್ತಿ ಪ್ರದಾಯಕ |

ಸರ್ವೇಷ್ಟಮಿದಂ ಸೂತ್ರಂ ಧಾರಯಾಮಿ ತವ ಪ್ರಿಯ ||

ಈ ರೀತಿಯಾಗಿ ವ್ರತ ಮಾಡಿದಲ್ಲಿ ಮತ್ತು ದಾರಧಾರಣೆ ಮಾಡಿಕೊಂಡಲ್ಲಿ ಸರ್ವಾಭೀಷ್ಟ ಸಿದ್ಧಿಸುವುದು ನಿಶ್ಚಿತ.

ಡಾ.ಕೇಶವ ಕಿರಣ ಬಿ,  ಪ್ರಾಧ್ಯಾಪಕರು

S.R.B.S.S College ಹೊನ್ನಾವರ, kkmanasvi@gamail.com

Published On - 9:40 am, Thu, 8 September 22