Kalasarpa Yoga: ಕಾಳಸರ್ಪ ಯೋಗವೆಂದರೇನು? ಈ ಕುರಿತಾಗಿ ಶಾಸ್ತ್ರ ಏನು ಹೇಳುತ್ತದೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 26, 2023 | 7:11 AM

ಈ ಯೋಗ ಶುಭಯೋಗವಲ್ಲ. ಪುರುಷರಿಗಾದರೂ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ. ಆದರೆ ಸ್ತ್ರೀ ಕುಂಡಲಿಯಲ್ಲಿ ಈ ಯೋಗ ಕಂಡು ಬಂದರೆ ಅಶುಭ ಫಲ ಉಂಟಾಗುವ ಸಂಭವ ಹೆಚ್ಚು. ಏನು ಅಶುಭಗಳು ಎಂದು ಹೇಳುವುದಾದರೆ ವಿಧವೆಯಾಗುವ ಸಾಧ್ಯತೆ ಇರುತ್ತದೆ ಹಾಗೆಯೇ ಪುರುಷ ಮೋಸ ಹೋಗುವ ಸಂಭವವಿರುತ್ತದೆ ಅಪಮೃತ್ಯು ಇತ್ಯಾದಿ ಕಂಟಕ ಸಂಭವಿಸುವ ಸಾಧ್ಯತೆ ಇದೆ.

Kalasarpa Yoga: ಕಾಳಸರ್ಪ ಯೋಗವೆಂದರೇನು? ಈ ಕುರಿತಾಗಿ ಶಾಸ್ತ್ರ ಏನು ಹೇಳುತ್ತದೆ?
ಸಾಂದರ್ಭಿಕ ಚಿತ್ರ
Follow us on

ನಮ್ಮ ಜನನ ಸಮಯಕ್ಕನುಗುಣವಾಗಿ ಜಾತಕ ಅಥವಾ ಕುಂಡಲಿಯನ್ನು ಶಾಸ್ತ್ರ ಪ್ರಕಾರ ಬರೆಯಲಾಗುತ್ತದೆ. ಹಾಗೆ ಬರೆಯುವ ಸಂದರ್ಭದಲ್ಲಿ ನಮ್ಮ ನಕ್ಷತ್ರ ರಾಶಿ ಇತ್ಯಾದಿಗಳು ತಿಳಿದು ಬರುತ್ತದೆ. ಈ ಕುಂಡಲಿಯ ಆಧಾರದಿಂದ ನಮ್ಮ ಜೀವನ ಚಕ್ರ ಹೇಗಿರುತ್ತದೆ ? ನಾವು ಯಾವ ಕಾಲದಲ್ಲಿ ಜಾಗ್ರತೆಯಿಂದ ಇರಬೇಕು? ಯಾವ ಸ್ವರೂಪದ ವಿದ್ಯಾಭ್ಯಾಸ ಮಾಡಬೇಕು? ಈ ರೀತಿಯಾಗಿ ಹಲವಾರು ಭವಿಷ್ಯದ ನಿರ್ಧಾರಗಳಿಗೆ ಈ ಕುಂಡಲಿ ತುಂಬಾ ಸಹಕಾರಿ. ಅಂತಯೇ ನಾವು ಹುಟ್ಟುತ್ತಲೇ ನಮ್ಮೊಂದಿಗೆ ಹಲವು ಯೋಗಗಳು ಬಂದಿರುತ್ತವೆ. ಅದನ್ನು ನಾವು ಹುಟ್ತಿದ ಗ್ರಹಸ್ಥಿತಿಯ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ. ಯೋಗ ಎಂದಾಕ್ಷಣ ಎಲ್ಲಾ ಒಳ್ಳೆಯೆದು ಎಂದರ್ಥವಲ್ಲ. ಸ್ವಾಭಾವಿಕವಾಗಿ ಯೋಗ ಎನ್ನುವುದು ನಮ್ಮ ಜನ್ಮಾಂತರದ ಕರ್ಮವನ್ನು ಆಧರಿಸಿರುತ್ತದೆ. ಅಂತಹದ್ದರಲ್ಲಿ ಶುಭಯೋಗಗಳು ಅಶುಭಯೋಗಗಳು ಎಂದು ಮುಖ್ಯವಾಗಿ ಎರಡು ವಿಧ. ಇನ್ನೊಂದು ವಿಭಾಗವಿದೆ ಅದು ಶುಭಾಶುಭಯೋಗ ಎಂದು. ಈ ಯೋಗವೇನಿದೆ ಅದು ಸ್ತ್ರೀ ಪುಂ ಬೇಧದ ಮೇಲೆ ತನ್ನ ಫಲವನ್ನು ಬೇರೆ ಬೇರೆ ರೀತಿಯಾಗಿ ನೀಡುತ್ತದೆ.

ಅಂತಹ ಯೋಗಗಳಲ್ಲಿ ಈ ಕಾಳಸರ್ಪ ಯೋಗ ಒಂದು. ಏನೀ ಕಾಳಸರ್ಪ ಯೋಗವೆಂದರೆ? ನವಗ್ರಹರಲ್ಲಿ ಸರ್ಪ ಸಂಬಂಧಿತವಾದ ಅಂದರೆ ಸರ್ಪ ರೂಪದಲ್ಲಿರುವ ಎರಡು ಗ್ರಹಗಳಿವೆ. ಅವುಗಳೇ ರಾಹು ಮತ್ತು ಕೇತು. ಈ ರಾಹು ಕೇತು ಎಂಬ ಎರಡು ವಿಭಾಗವೇನಿದೆ ಅದು ವಾಸ್ತವವಾಗಿ ಒಂದೇ. ಅಮೃತ ಪಾನದ ಸಂದರ್ಭದಲ್ಲಿ ವಿಷ್ಣುವಿನಿಂದ ರುಂಡ ಮುಂಡ ಬೇರ್ಪಡಿಸಲ್ಪಟ್ಟ ಕಾರಣ ಒಂದೇ ಜೀವ ಎರಡಾಗಿ ಪರಿಣಮಿಸಿತು.

ಈ ಎರಡು ಗ್ರಹಗಳು ಪಾಪಗ್ರಹಗಳು. ಇವುಗಳ ಮಧ್ಯೆ ಉಳಿದ ಏಳು ಗ್ರಹರು ಬಂದರೆ ಕಾಳಸರ್ಪ ಯೋಗ ಎಂದು ಹೇಳುತ್ತಾರೆ. ಉದಾಹರಣೆಗೆ ನಿಮ್ಮ ಜಾತಕ ಕುಂಡಲಿಯಲ್ಲಿ ಲಗ್ನ ಅಂತ ಬರೆದ ಒಂದು ಕೋಣೆ (ಮನೆ) ಇರುತ್ತದೆ. ಆ ಕೋಣೆಯ ನಂತರ ರಾಹುವಿದ್ದು ನಂತರ ಉಳಿದ ಏಳು ಗ್ರಹರು ಆದ ನಂತರದಲ್ಲಿ ಕೇತು ಗ್ರಹವಿದ್ದರೆ ಅಥವಾ ಇದು ವಿಪರೀತವಾಗಿದ್ದರೂ ಕಾಳಸರ್ಪ ಯೋಗ ಅಂತ ಕರೆಯುತ್ತಾರೆ.

ಇದನ್ನೂ ಓದಿ: Spiritual: ಉಪಾಕರ್ಮ ಎಂದರೇನು? ಮಹತ್ವ, ಆಚರಿಸುವ ಬಗೆ ಮತ್ತು ಪೂಜಾ ವಿಧಿ ಮಾಹಿತಿ ಇಲ್ಲಿದೆ

ಈ ಯೋಗ ಶುಭಯೋಗವಲ್ಲ. ಪುರುಷರಿಗಾದರೂ ಸ್ವಲ್ಪ ಮಟ್ಟಿಗೆ ಪರವಾಗಿಲ್ಲ. ಆದರೆ ಸ್ತ್ರೀ ಕುಂಡಲಿಯಲ್ಲಿ ಈ ಯೋಗ ಕಂಡು ಬಂದರೆ ಅಶುಭ ಫಲ ಉಂಟಾಗುವ ಸಂಭವ ಹೆಚ್ಚು. ಏನು ಅಶುಭಗಳು ಎಂದು ಹೇಳುವುದಾದರೆ ವಿಧವೆಯಾಗುವ ಸಾಧ್ಯತೆ ಇರುತ್ತದೆ ಹಾಗೆಯೇ ಪುರುಷ ಮೋಸ ಹೋಗುವ ಸಂಭವವಿರುತ್ತದೆ ಅಪಮೃತ್ಯು ಇತ್ಯಾದಿ ಕಂಟಕ ಸಂಭವಿಸುವ ಸಾಧ್ಯತೆ ಇದೆ. ಪುರುಷರಿಗದರೆ ಅಪಮಾನ ಮೋಸಹೋಗುವಿಕೆ ವ್ಯವಹಾರದಲ್ಲಿ ಸೋಲು ಇತ್ಯಾದಿ ಅಶುಭಗಳು ಸಂಭವನೀಯ.

ಹಾಗದರೆ ಇದಕ್ಕೆ ಪರಿಹಾರವೇ ಇಲ್ಲವೇ? ಅಂದರೆ ನಿಶ್ಚಯವಾಗಿಯೂ ಇದೆ. ಕಾಳಸರ್ಪ ಶಾಂತಿ ಎಂಬ ಹವನವನ್ನು ಮಾಡಿಸುವುದು ಹವನ ಮಾಡಿಸಲು ಅನುಕೂಲವಿಲ್ಲ ಎಂದಾದಲ್ಲಿ ನಲುವತ್ತೆಂಟು ಷಷ್ಠಿ ಉಪವಾಸ ಮಾಡುವುದು. ಸರ್ಪಕ್ಷೇತ್ರ ಅಥವಾ ಸುಬ್ರಹ್ಮಣ್ಯ ಕ್ಷೇತ್ರದ ದರ್ಶನ ಮಾಡಿ ಸೇವೆ ಮಾಡುವುದು. ಕನಿಷ್ಠ ಎಂಟು ಬ್ರಹ್ಮಚಾರಿಗಳಿಗೆ ವಸ್ತ್ರ ಹಣ್ಣುಗಳನ್ನು ದಾನ ಮಾಡಿ ಅವರ ಆಶೀರ್ವಾದ ಪಡೆಯುವುದು ಅಥವಾ ಉತ್ತಮ ಆಚಾರವಂತರ ಬಳಿಯಲ್ಲಿ ರಾಹು ಕೇತು ಸರ್ಪ ಸುಬ್ರಹ್ಮಣ್ಯ ಮಂತ್ರಗಳನ್ನು ಜಪಮಾಡಿಸಿ ರಕ್ಷೆ ಮಾಡಿಕೊಳ್ಳುವುದರಿಂದ ಈ ಯೋಗದ ಅಶುಭ ಫಲವನ್ನು ತಡೆಯಬಹುದು. ಆದರೆ ಈ ಯೋಗವುಳ್ಳವರು ಅತ್ಯಂತ ಧೈರ್ಯ ಶಾಲಿಗಳಾಗಿರುತ್ತಾರೆ. ನಿರಂತರ ಭಗವಂತನ ಸೇವೆ ಮಾಡುವುದರಿಂದ ಯಾವುದೇ ಅಶುಭಯೋಗವೂ ಅಷ್ಟಾಗಿ ಬಾಧಿಸಲಾರದು. ಏಕೆಂದರೆ ಭಗವಂತ ಭಕ್ತವತ್ಸಲನಾಗಿದ್ದಾನೆ ಅಲ್ಲವೇ?

ಡಾ.ಗೌರಿ ಕೇಶವಕಿರಣ ಬಿ

ಧಾರ್ಮಿಕಚಿಂತಕರು