Garuda Purana: ಗರುಡಪುರಾಣದಲ್ಲಿ ಸ್ತ್ರೀಯರಿಗೆ ನೀಡಿದ ಸ್ಥಾನವೇನು? ಬ್ರಹ್ಮರಾಕ್ಷಸನಿಗೂ ತಪ್ಪಿಲ್ಲ ಸ್ತ್ರೀ ಶಾಪ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 08, 2023 | 11:14 AM

ಅಷ್ಟು ಮಾತ್ರವಲ್ಲದೇ "ಪರಸ್ಯ ಯೋಷಿತಂ ಹೃತ್ವಾ ಜಾಯತೇ ಬ್ರಹ್ಮರಾಕ್ಷಸಃ" ಬೇರೆಯವರಿಗೆ ಸಂಬಂಧಿಸಿದ ಅಥವಾ ತನಗೆ ಅಧಿಕಾರವಿಲ್ಲದ ಸ್ತ್ರೀಯನ್ನು ಅಪಹರಿಸಿದರೆ ಮತ್ತು ಅನುಚಿತವಾಗಿ ನಡೆದುಕೊಂಡರೆ ಬ್ರಹ್ಮರಾಕ್ಷಸನೇ ಮೊದಲಾದ ಅವಸ್ಥೆ ಉಂಟಾಗುವುದು ಎಂದು ಗರುಡಪುರಾಣ ಹೇಳುತ್ತದೆ.

Garuda Purana: ಗರುಡಪುರಾಣದಲ್ಲಿ ಸ್ತ್ರೀಯರಿಗೆ ನೀಡಿದ ಸ್ಥಾನವೇನು? ಬ್ರಹ್ಮರಾಕ್ಷಸನಿಗೂ ತಪ್ಪಿಲ್ಲ ಸ್ತ್ರೀ ಶಾಪ
ಸಾಂದರ್ಭಿಕ ಚಿತ್ರ
Follow us on

ಜಗತ್ತಿನಲ್ಲಿ ಸಾಮಾನ್ಯವಾಗಿ ಹೆಚ್ಚಿನವರು ಹೇಳುತ್ತಿರುತ್ತಾರೆ ಸ್ತ್ರೀಯರಿಗೆ ಸರಿಯಾದ ಸ್ಥಾನ ಮಾನಗಳನ್ನು ಪುರಾಣದಲ್ಲಿ ಅಥವಾ ವೇದಗಳಲ್ಲಿ ಸ್ಮೃತಿಗಳಲ್ಲಿ ನೀಡಿಲ್ಲ ಎಂದು. ಅಲ್ಲದೇ ಅವರ ಮೇಲೆ ನಿರಂತರ ಶೋಷಣೆ ನಡೆದಿದೆ ಎಂದು . ಹಾಗೆಯೇ ಅವರಿಗೆ ಸಮಾಜದಲ್ಲಿ ಸರಿಯಾದ ಸ್ಥಾನ ಗೌರವಗಳನ್ನು ನೀಡಿಲ್ಲ ಎಂಬ ಆಕ್ಷೇಪಗಳು ಸದಾ ಕೇಳುತ್ತಲೇ ಇರುತ್ತದೆ. ಮೇಲ್ನೋಟಕ್ಕೆ ಇದು ಸತ್ಯವಾಗಿ ಕಂಡರೂ ಸರಿಯಾಗಿ ಅಧ್ಯಯನ ಮಾಡಿದಾಗ ನಿಜಾಂಶ ತಿಳಿಯುತ್ತದೆ. ಚಿನ್ನ ಮಣ್ಣಲ್ಲೇ ಲಭ್ಯವಾದರೂ ಅದಕ್ಕೆ ನೀಡುವ ಅತ್ಯುತ್ಕೃಷ್ಟ ಸಂಸ್ಕಾರದ ಪ್ರಭಾವದಿಂದ ಅದು ಅತ್ಯಂತ ಬೆಲೆಬಾಳುವ ವಸ್ತುವಾಗಿದೆ ಮತ್ತು ಅದನ್ನು ತುಂಬಾ ಜೋಪಾನವಾಗಿ ಸಂರಕ್ಷಿಸಲೂ ಬೇಕು. ಅದನ್ನು ಭದ್ರವಾಗಿ ಸಂರಕ್ಷಿಸಿದ ಮಾತ್ರಕ್ಕೆ ಅದಕ್ಕೆ ಮಹತ್ವವಿಲ್ಲ ಎಂದಾಗುತ್ತದೆಯೇ? ಇಲ್ಲ ಅಲ್ಲವೇ?

ಹಾಗೆಯೇ ಮಹತ್ತರವಾದ ಶ್ರೇಷ್ಠ ವ್ಯಕ್ತಿಗೆ ವಸ್ತುವಿಗೆ ಸಂರಕ್ಷಣೆಯ ಅಗತ್ಯತೆ ಇದ್ದೇ ಇದೆ. ಪೂಜೆಗೆ ಬಳಸುವ ಹೂವಿನಿಂದ ಆರಂಭಿಸಿ ಪ್ರತಿಯೊಂದೂ ಶ್ರೇಷ್ಠತೆಗೆ ಕಾರಣವಾಗುವ ದ್ರವ್ಯಗಳಿಗೆ ಚೌಕಟ್ಟು ಅತೀ ಅಗತ್ಯ. ಹಾಗೆಯೇ ಸ್ತ್ರೀಯೂ ಕೂಡ. ಅವಳು ಬಾಲ್ಯದಲ್ಲಿ ತಂದೆಯಿಂದ ಯೌವನದಲ್ಲಿ ಪತಿಯಿಂದ ವೃದ್ಧಾಪ್ಯದಲ್ಲಿ ಮಕ್ಕಳಿಂದ ರಕ್ಷಿಸಲ್ಪಡಬೇಕು. ಯಾಕೆ ಅವಳಿಗೆ ಸ್ವಾತಂತ್ರ್ಯವಿಲ್ಲವೇ ಎಂದರೆ ಅದಕ್ಕುತ್ತರ ಅವಳು ಪರಮ ಪೂಜನೀಯಳು ಆದ್ದರಿಂದ ತಂದೆ ಪತಿ ಮಗ ಇವರುಗಳು ಈ ಸ್ತ್ರೀಯನ್ನು ತಮ್ಮ ಕರ್ತವ್ಯವೆಂಬಂತೆ ರಕ್ಷಿಸಬೇಕು ಎಂದು ಶಾಸ್ತ್ರ ಹೇಳುತ್ತದೆ.

ಹಾಗೆಯೇ ಇವಳಿಗೆ (ಸ್ತ್ರೀಗೆ) ಕಷ್ಟವೆನಿಸುವ ಅಧರ್ಮಯುತವಾದ ಯಾವುದೇ ಸಂದರ್ಭವನ್ನು ಉಂಟುಮಾಡಬಾರದು ಮಾಡಿದರೆ ಅದು ಮಹಾನ್ ಅಪರಾಧವಾಗುತ್ತದೆ ಎಂಬುದು ಗರುಡಪುರಾಣದ ಮಾತಾಗಿದೆ. ಗರುಡ ಪುರಾಣವೆನ್ನುವುದು ಪಾಪಗಳಿಗೆ ಮತ್ತು ಪುಣ್ಯಗಳಿಗೆ ಸರಿಯಾದ ಫಲವನ್ನು ಸೂಚಿಸುವ ಪರಮಪ್ರಾಮಾಣಿಕವಾದ ಗ್ರಂಥ/ಪುರಾಣವಾದ್ದರಿಂದ ಇದರಲ್ಲಿ ಈ ಮಾತಿನ ಉಲ್ಲೇಖವಿದೆ ಎಂದಾದರೆ ಆಸ್ತಿಕರು ಒಪ್ಪಲೆಬೇಕು ಅಲ್ಲವೇ?

ಅಷ್ಟು ಮಾತ್ರವಲ್ಲದೇ “ಪರಸ್ಯ ಯೋಷಿತಂ ಹೃತ್ವಾ ಜಾಯತೇ ಬ್ರಹ್ಮರಾಕ್ಷಸಃ” ಬೇರೆಯವರಿಗೆ ಸಂಬಂಧಿಸಿದ ಅಥವಾ ತನಗೆ ಅಧಿಕಾರವಿಲ್ಲದ ಸ್ತ್ರೀಯನ್ನು ಅಪಹರಿಸಿದರೆ ಮತ್ತು ಅನುಚಿತವಾಗಿ ನಡೆದುಕೊಂಡರೆ ಬ್ರಹ್ಮರಾಕ್ಷಸನೇ ಮೊದಲಾದ ಅವಸ್ಥೆ ಉಂಟಾಗುವುದು ಎಂದು ಗರುಡಪುರಾಣ ಹೇಳುತ್ತದೆ.

ಇದನ್ನೂ ಓದಿ:Garuda Purana 2023: ಗರುಡ ಪುರಾಣದ ಪ್ರಕಾರ, ಹೀಗೆಲ್ಲ ಮಾಡಿದರೆ ಮನೆಯಲ್ಲಿ ಬಹಳಷ್ಟು ಕಷ್ಟ-ದುಃಖಗಳು ಎದುರಾಗುತ್ತವೆ

ಬ್ರಹ್ಮರಾಕ್ಷಸ ಅವಸ್ಥೆ ಎಂದರೆ ಮರಣೋತ್ತರದಲ್ಲಿ ಸದ್ಗತಿಯಾಗದೇ ಒದ್ದಾಡುವ ಸ್ಥಿತಿ ಎಂದು ಹೇಳಬಹುದು. ಇದು ಪುರಾಣಗಳ ಪ್ರಕಾರ ಅತ್ಯಂತ ಹೀನಾಯ ಕಠೋರ ಸ್ಥಿತಿಯಾಗಿದೆ. ಇಂತಹ ಸ್ಥಿತಿ ಸ್ತ್ರೀ ಪೀಡಕನಿಗೆ ಪ್ರಾಪ್ತವಾಗುವುದು ಎಂದು ಗರುಡಪುರಾಣ ಹೇಳುತ್ತದೆ ಎಂದಾದರೆ ಪುರಾಣಗಳಲ್ಲಿ ಸ್ತ್ರೀಯರಿಗೆ ನೀಡಿದ ಸ್ಥಾನ ಮಾನ ಗೌರವದ ಬಗ್ಗೆ ಯೋಚಿಸಿ.

ಸಂಸ್ಕಾರವಂತರಾಗಿ ವಿದ್ಯಾವಿನಯ ಸಂಪನ್ನರಾಗಿ ಗೌರವಯುತವಾಗಿ ನಡೆದುಕೊಳ್ಳುವ ಸ್ತ್ರೀಯನ್ನು ಗೌರವಿಸಿದರೆ ಅಲ್ಲಿ ದೇವತೆಗಳೂ ಸಂತೋಷದಿಂದ ಇರುವರು ಎಂದು ಮನುಸ್ಮೃತಿಯಲ್ಲಿ ಹೇಳಿದೆ. ಈಗ ಯೋಚಿಸಿ ಪುರಾಣಗಳು ಎಂದಿಗೂ ಸ್ತ್ರೀ ಶೋಷಣೆಯನ್ನು ಒಪ್ಪಿಕೊಂಡಿಲ್ಲ ಮತ್ತು ಅದೊಂದು ವಿಶೇಷ ಭಾವನಾತ್ಮಕ ಸ್ಥಾನವೆಂಬಂತೆ ಗೌರವಿಸಿದೆ. ಇದಕ್ಕೆ ಸಾಕಷ್ಟು ಉಲ್ಲೇಖಗಳು ಗರುಡ ಪುರಾಣವೇ ಮೊದಲಾದ ಕಡೆಗಳಲ್ಲಿ ಕಾಣಬಹುದು.

ಲೇಖನ: ಡಾ.ಗೌರಿ ಕೇಶವಕಿರಣ ಬಿ

ಧಾರ್ಮಿಕಚಿಂತಕರು

Published On - 11:14 am, Thu, 8 June 23