Akshaya Tritiya: ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವುದು ಅದೃಷ್ಟ ತರುತ್ತದೆಯಾ? ಇಲ್ಲಿದೆ ಪೂರ್ಣ ಮಾಹಿತಿ
Akshaya Tritiya: ಇದೇ ಮೇ 14ನೇ ತಾರೀಕಿನಂದು ಅಕ್ಷಯ ತೃತೀಯ ಇದೆ. ಆ ದಿನವನ್ನು ಚಿನ್ನವನ್ನು ಖರೀದಿ ಮಾಡಿ ಎಂದು ಹಲವರು ಹೇಳುತ್ತಾರೆ. ಏಕೆ ಹಾಗೆ ಹೇಳುತ್ತಾರೆ ಎಂಬ ಬಗ್ಗೆ ಇಲ್ಲಿದೆ ವಿವರಣೆ.
ಇದೇ ವರ್ಷದ, ಅಂದರೆ 2021ರ ಮೇ 14ನೇ ತಾರೀಕಿನ ಶುಕ್ರವಾರದಂದು ಅಕ್ಷಯ ತೃತೀಯ ಇದೆ. ವರ್ಷದಲ್ಲಿ ಮೂರೂವರೆ ದಿನವನ್ನು ಶುಭ ದಿನಗಳೆಂದು ಗುರುತಿಸಲಾಗುತ್ತದೆ. ಒಂದು, ಯುಗಾದಿಯ ಮರು ದಿನ. ಎರಡು, ಅಕ್ಷಯ ತೃತೀಯ. ಮೂರನೇ ದಿನ ವಿಜಯ ದಶಮಿ ಹಾಗೂ ಕಾರ್ತೀಕ ಮಾಸದ ಶುಕ್ಲ ಪಕ್ಷದ ಪಾಡ್ಯದ ಅರ್ಧ ದಿನದಂದು ಶುಭ ಮುಹೂರ್ತ ಎಂದು ಪರಿಗಣಿಸಲಾಗುತ್ತದೆ. ಹಿಂದಿಯಲ್ಲಿ ಈ ಮೂರೂವರೆ ದಿನವನ್ನು ಸಾಡೇತೀನ್ ಮುಹೂರ್ತ ಅಂತಲೂ ಕರೆಯಲಾಗುತ್ತದೆ. ಈ ದಿನಗಳಲ್ಲಿ ತಾರಾಬಲವೂ ಉತ್ತಮವಾಗಿದ್ದು, ಶುಭ ಕಾರ್ಯಗಳನ್ನು ಮಾಡುವುದಾದಲ್ಲಿ ಅತ್ಯುತ್ತಮ ದಿನಗಳು ಇವು. ಇಂದಿನ ಲೇಖನದಲ್ಲಿ ಅಕ್ಷಯ ತೃತೀಯದ ಬಗ್ಗೆ ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಟಿವಿ9 ಡಿಜಿಟಲ್ ಕನ್ನಡ ಓದುಗರಿಗಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅಕ್ಷಯ ತೃತೀಯ ಅಂದರೆ ಹೆಸರೇ ಹೇಳುವಂತೆ ಕ್ಷಯ ಇಲ್ಲದ ದಿನ. ಸಮುದ್ರ ಮಂಥನದ ಕಾಲದಿಂದಲೂ ಅಕ್ಷಯ ತೃತೀಯದ ವಿವರಣೆ ಇದೆ. ಅಷ್ಟೇ ಅಲ್ಲ, ಮಹಾಭಾರತದಲ್ಲೂ ಈ ಬಗ್ಗೆ ಪ್ರಸ್ತಾವ ಇದೆ. ಆದರೆ ನಮ್ಮೆಲ್ಲರಿಗೂ ಮೊದಲು ಗೊತ್ತಾಗಬೇಕಿದ್ದು ಏನೆಂದರೆ, ಈ ದಿನ ದಾನಕ್ಕೆ ಮಹತ್ವ ಹೆಚ್ಚು. ಆದ್ದರಿಂದ ನಿಮ್ಮಿಂದ ಅದೆಷ್ಟು ಸಣ್ಣ ಪ್ರಮಾಣದ ಚಿನ್ನವನ್ನಾದರೂ ಖರೀದಿಸಿ, ದಾನ ಮಾಡಿದರೆ ಅದರ ಫಲ ಅಧಿಕವಾಗುತ್ತದೆ. ನಿಮಗೆ ಪರಿಚಿತರು ಇದ್ದು ಅಥವಾ ಮದುವೆಗೋ ಅಥವಾ ಬೇರೆ ಯಾವುದೋ ಉದ್ದೇಶಕ್ಕೆ ಸ್ವಲ್ಪ ಪ್ರಮಾಣವಾದರೂ ಚಿನ್ನವನ್ನು ದಾನ ಮಾಡಿದರೆ ಅದರ ಫಲ ಅಕ್ಷಯ ಆಗುತ್ತದೆ. ಆ ದಾನವನ್ನು ಅಕ್ಷಯ ತೃತೀಯದಂದು ಮಾಡಬೇಕು.
ಇನ್ನು ಅಕ್ಷಯ ತೃತೀಯದಂದು ದೇವರ ಪೂಜೆ, ಸೇವೆ, ಕೈಂಕರ್ಯಗಳನ್ನು ಮಾಡಿದರೆ ಆ ಭಗವಂತ ನೀಡುವ ಆಶೀರ್ವಾದದ ಫಲ ಕೂಡ ಅಕ್ಷಯವಾಗುತ್ತದೆ. ಈಗ ಹೇಗಿದ್ದರೂ ವೈಶಾಖ ಮಾಸ. ಮಾವಿನಹಣ್ಣು ದೊರೆಯುತ್ತದೆ. ಅದರ ಜೊತೆಗೆ ಈಗಿನ ಬೇಸಿಗೆಗೆ ಪಾನ- ಕೋಸಂಬರಿಯನ್ನು ಬ್ರಾಹ್ಮಣ- ಮುತ್ತೈದೆಯರಿಗೆ ದಾನ ಮಾಡಬೇಕು. ಅವರ ಆಶೀರ್ವಾದ ಫಲ ಕೂಡ ಅಕ್ಷಯ ಆಗುತ್ತದೆ. ಈ ಸಂದರ್ಭದಲ್ಲಿ (ಕೋವಿಡ್ ಇರುವುದರಿಂದ) ಕನಿಷ್ಠ ಇಬ್ಬರು ಬ್ರಾಹ್ಮಣ- ಮುತ್ತೈದೆಯರಿಗೆ ಮಾವಿನಹಣ್ಣು, ಪಾನಕ-ಕೋಸಂಬರಿಗಳನ್ನು ನೀಡಬಹುದು. ನೆನಪಿಡಿ, ನಿಮ್ಮ ಪರಿಸ್ಥಿತಿಯನ್ನು ಅರಿತುಕೊಂಡು ಇವುಗಳನ್ನು ಮಾಡಿ. ಏಕೆಂದರೆ, ಅಕ್ಷಯ ತೃತೀಯ ಅಲ್ಲದೆ ಉಳಿದ ಒಂದೂವರೆ ದಿನದ ಅತ್ಯುತ್ತಮ ಮುಹೂರ್ತ ಈ ವರ್ಷದಲ್ಲಿ ಇನ್ನೂ ಬಾಕಿ ಇದೆ.
ಚಿನ್ನದ ಖರೀದಿ ವಿಚಾರಕ್ಕೆ ಬರೋಣ. ಮನೆಯಲ್ಲಿ ಮಕ್ಕಳ ಮದುವೆ ಉದ್ದೇಶಕ್ಕೋ ಅಥವಾ ಬೇರೆ ಯಾರಿಗೇ ಆಗಲಿ ಚಿನ್ನವನ್ನು ಖರೀದಿ ಮಾಡಬೇಕು ಅಂತಿದ್ದಲ್ಲಿ ಅಕ್ಷಯ ತೃತೀಯ ದಿನದಿಂದ ಆರಂಭಿಸಿ. ಅದೆಷ್ಟು ಸಣ್ಣ ಪ್ರಮಾಣದಲ್ಲಿಯಾದರೂ ಸರಿ, ಉಳಿತಾಯವನ್ನು ಶುರು ಮಾಡಬಹುದು. ಇಷ್ಟೇ- ಅಷ್ಟೇ ಅಂತೇನೂ ಆಲೋಚಿಸಬೇಡಿ; ಗುಲಗಂಜಿ ಗಾತ್ರದಲ್ಲಿಯಾದರೂ ಖರೀದಿಸಬಹುದು. ಹಾಗಂತ ಸಾಲ ಮಾಡಲು ಹೋಗದಿರಿ. ಅಕ್ಷಯ ತೃತೀಯಕ್ಕೆ ಈ ಬಾರಿ ಚಿನ್ನವನ್ನು ಖರೀದಿ ಮಾಡುವಂತಿದ್ದಲ್ಲಿ ಆನ್ಲೈನ್ನಲ್ಲೇ ಮಾಡಿ. ಯಾವುದೇ ಕಾರಣಕ್ಕೆ ಹೊರಗೆ ಹೋಗಬೇಡಿ.
ಮಹಾಭಾರತದ ದ್ರೌಪದಿ ವಸ್ತ್ರಾಪಹರಣದ ವೇಳೆ ಶ್ರೀಕೃಷ್ಣ ವಸ್ತ್ರ ನೀಡಿದ್ದು ಅಕ್ಷಯ ಆಗುತ್ತಾ ಹೋಯಿತು. ಇನ್ನು ವನವಾಸದ ವೇಳೆಯಲ್ಲಿ ನೀಡಿದಂಥ ಅಕ್ಷಯಪಾತ್ರೆ ನೀಡಿದ್ದು ನೆನಪಿಸಿಕೊಳ್ಳಿ. ಅಕ್ಷಯ ಅಂದರೆ ಅದೇ ಕ್ಷಯ ಇಲ್ಲದಂಥದ್ದು ಅಂತ. ಆ ಭಗವಂತನ ಕೈಂಕರ್ಯ ಮಾಡಿ. ದಾನ- ಧರ್ಮ ಮಾಡಿ. ಇನ್ನು ಮನೆಗಾಗಿ ಉಳಿತಾಯ ಮಾಡುವುದನ್ನು ಆರಂಭಿಸುವುದಿದಲ್ಲಿ ಕೂಡ ಈ ದಿನ ಬಹಳ ಸೂಕ್ತವಾದದ್ದು. ಆದರೆ ನಿಮ್ಮ ಯಥಾಶಕ್ತಿ ಮಾಡಿ. ನಿಮ್ಮ ಕೈ ಮೀರಿ, ಸಾಲ ಪಡೆದು ಇದೆಲ್ಲ ಮಾಡಲು ಹೋಗಬೇಡಿ.
ಪಂಡಿತ್ ಜೋತಿಷಿ ವಿಠ್ಠಲ್ ಭಟ್ ಸಂಪರ್ಕ ಸಂಖ್ಯೆ 6361335497
ಇದನ್ನೂ ಓದಿ: Akshaya Tritiya 2021: ಈ ಬಾರಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸಲು ಯಾವ ಮುಹೂರ್ತ ಒಳ್ಳೆಯದು?
ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯಕ್ಕೆ ಸ್ಟಾಕ್ ಎಕ್ಸ್ಚೇಂಜ್ನಿಂದಲೇ ಖರೀದಿಸಬಹುದು ಸವರನ್ ಗೋಲ್ಡ್ ಬಾಂಡ್
(Why Akshaya Tritiya believed to to be auspicious day to purchase gold, here is an analysis according to Astrology)
Published On - 1:53 pm, Mon, 10 May 21