ಶಿವಪೂಜೆಯಲ್ಲಿ ಕೇದಿಗೆ ಹೂ ಬಳಸದಿರಲು ಕಾರಣವೇನು? ಪುರಾಣ ಕಥೆ ಇಲ್ಲಿದೆ
ಶಿವ ಪುರಾಣದ ಪ್ರಕಾರ, ಬ್ರಹ್ಮ ಮತ್ತು ವಿಷ್ಣುವಿನ ನಡುವಿನ ವಾದದ ನಂತರ, ಬ್ರಹ್ಮನು ಶಿವಲಿಂಗದ ಮೂಲವನ್ನು ಕಂಡುಹಿಡಿಯಲು ಸಾಧ್ಯವಾಗದೇ ಸುಳ್ಳು ಹೇಳಿದನು. ಈ ಸುಳ್ಳಿನಲ್ಲಿ ಕೇದಿಗೆ ಹೂವು ಸಹ ಭಾಗಿಯಾಗಿತ್ತು. ಕೋಪಗೊಂಡ ಶಿವನು ಬ್ರಹ್ಮನಿಗೆ ಪೂಜೆ ನಿಷೇಧಿಸಿ ಮತ್ತು ಕೇದಿಗೆ ಹೂವನ್ನು ಶಿವಪೂಜೆಯಲ್ಲಿ ಬಳಸದಂತೆ ಶಾಪ ನೀಡಿದನು. ಈ ನಿಷೇಧದ ಹಿಂದಿನ ಪೌರಾಣಿಕ ಕಥೆ ಇಲ್ಲಿದೆ.

ಮಹಾಶಿವರಾತ್ರಿ ಹಬ್ಬವು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ವರ್ಷ ಮಹಾಶಿವರಾತ್ರಿಯನ್ನು ಫೆಬ್ರವರಿ 26 ರಂದು ಆಚರಿಸಲಾಗುವುದು. ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ, ಶಿವಪೂಜೆಯಲ್ಲಿ ಕೇದಿಗೆ ಹೂ ನಿಷಿದ್ಧ. ಇದರ ಹಿಂದೆ ಒಂದು ಪೌರಾಣಿಕ ಕಥೆ ಇದೆ. ಹಿಂದೂ ಧರ್ಮಗ್ರಂಥಗಳಲ್ಲಿ ಶಿವನಿಗೆ ಕೇದಿಗೆ ಹೂವುಗಳನ್ನು ಅರ್ಪಿಸುವುದನ್ನು ಏಕೆ ನಿಷೇಧಿಸಲಾಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಪೌರಾಣಿಕ ಕಥೆ:
ವಾಸ್ತವವಾಗಿ, ಶಿವ ಮತ್ತು ಕೇದಿಗೆ ಹೂವಿನ ಈ ಕಥೆ ತ್ರೇತಾಯುಗದದ್ದಾಗಿದೆ. ಈ ಕಥೆಯ ವಿವರಣೆಯು ಶಿವ ಪುರಾಣದಲ್ಲಿಯೂ ಉಲ್ಲೇಖಿಸಲಾಗಿದೆ. ಕಥೆಯ ಪ್ರಕಾರ, ಒಮ್ಮೆ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ಬಗ್ಗೆ ವಿವಾದ ಉಂಟಾಯಿತು. ಈ ವಿವಾದವನ್ನು ಪರಿಹರಿಸಲು ಇಬ್ಬರೂ ಶಿವನ ಬಳಿಗೆ ಹೋದರು. ನಂತರ ಶಿವನು ಜ್ಯೋತಿರ್ಲಿಂಗ ರೂಪದಲ್ಲಿ ಪ್ರತ್ಯಕ್ಷನಾದನು. ನಿಮ್ಮಿಬ್ಬರಲ್ಲಿ ಯಾರು ಈ ಜ್ಯೋತಿರ್ಲಿಂಗದ ಆರಂಭ ಮತ್ತು ಅಂತ್ಯವನ್ನು ಕಂಡುಕೊಳ್ಳುತ್ತಾರೋ ಅವರನ್ನು ಶ್ರೇಷ್ಠರೆಂದು ಕರೆಯಲಾಗುತ್ತದೆ ಎಂದು ಮಹಾದೇವನು ಬ್ರಹ್ಮ ಮತ್ತು ವಿಷ್ಣುವಿಗೆ ಹೇಳಿದನು. ಇದಾದ ನಂತರ, ವರಾಹ ರೂಪದಲ್ಲಿ ವಿಷ್ಣು ಮತ್ತು ಹಂಸ ರೂಪದಲ್ಲಿ ಬ್ರಹ್ಮ ಜ್ಯೋತಿರ್ಲಿಂಗದ ಆರಂಭ ಮತ್ತು ಅಂತ್ಯವನ್ನು ಹುಡುಕಲು ಪ್ರಾರಂಭಿಸಿದರು. ವರಾಹ ರೂಪದಲ್ಲಿ ವಿಷ್ಣು ಜ್ಯೋತಿರ್ಲಿಂಗದ ಆರಂಭ ಮತ್ತು ಅಂತ್ಯವನ್ನು ಹುಡುಕಲು ಭೂಮಿಯ ಗರ್ಭಕ್ಕೆ ಹೋದನು. ಇನ್ನೊಂದೆಡೆ ಹಂಸದ ರೂಪದಲ್ಲಿ ಬ್ರಹ್ಮನು ಆಕಾಶದಿಂದ ಜ್ಯೋತಿರ್ಲಿಂಗದ ಆರಂಭ ಮತ್ತು ಅಂತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸಿದನು. ಕೊನೆಗೆ ವಿಷ್ಣು ಮಹಾದೇವನಿಗೆ ಜ್ಯೋತಿರ್ಲಿಂಗದ ಮೂಲವನ್ನು ಕಂಡುಹಿಡಿಯುವಲ್ಲಿ ತಾನು ವಿಫಲನಾಗಿದ್ದೇನೆಂದು ಹೇಳಿದನು. ಮತ್ತೊಂದೆಡೆ, ಬ್ರಹ್ಮನೂ ಶಿವಲಿಂಗದ ತುದಿಯನ್ನು ತಲಪಲು ವಿಫಲನಾದ್ರೂ ಸೋಲೊಪ್ಪಿಕೊಳ್ಳಲು ಮನಸ್ಸಿಲ್ಲದೆ ಇನ್ನೂ ಹಾರಾಡುತ್ತಿದ್ದ .ಆಗ ಆಕಾಶದಲ್ಲಿ ಒಂದು ಕೇದಗೆ ಪುಷ್ಪವು ಮೇಲಿಂದ ಕೆಳಕ್ಕೆ ಬರುತ್ತಿರುವುದನ್ನು ಕಂಡನು. ಆ ಕೇದಗೆಯು ತಾನು ಶಿವಲಿಂಗದ ಮೇಲಿರಿಸಿದ ಹೂವೆಂದು ಹೇಳಿತು. ಆಗ ಬ್ರಹ್ಮನು, ತಾನು ಶಿವಲಿಂಗದ ಆದಿಯನ್ನು ತಲುಪಿರುವುದರ ಬಗ್ಗೆ ಸಾಕ್ಷ್ಯ ನುಡಿಯಬೇಕೆಂದು ಕೇದಗೆಗೆ ಹೇಳಿದನು.
ಇದನ್ನೂ ಓದಿ: ಮಹಾಶಿವರಾತ್ರಿಯಂದು ಮಹಾಕುಂಭದಲ್ಲಿ ಕೊನೆಯ ರಾಜ ಸ್ನಾನ; ದಿನಾಂಕ ಮತ್ತು ಶುಭ ಮುಹೂರ್ತ ತಿಳಿಯಿರಿ
ಬಳಿಕ ಬ್ರಹ್ಮ ಮತ್ತು ಕೇದಗೆ ಶಿವನ ಬಳಿಗೆ ಹೋದರು. ಬ್ರಹ್ಮನು ತಾನು ಶಿವಲಿಂಗದ ತುದಿಯನ್ನು ತಲುಪಿದೆನೆಂದು ಹೇಳಿದಾಗ, ಕೇದಗೆಯು ಇದನ್ನು ತಾನೂ ನೋಡಿದೆನೆಂದು ಸುಳ್ಳು ಹೇಳಿತು. ಇವರ ಸುಳ್ಳುಕಥೆ ಕೇಳಿ ಕೋಪಗೊಂಡ ಶಿವ, ಇನ್ಮುಂದೆ ಬ್ರಹ್ಮನಿಗೆ ಎಲ್ಲಿಯೂ ಪೂಜೆ ಸಲ್ಲಬಾರದು , ಕೇದಗೆಯನ್ನು ಶಿವಪೂಜೆಗೆ ಬಳಸಬಾರದೆಂದೂ ಶಾಪ ನೀಡಿದನು. ಈ ಕಾರಣದಿಂದಾಗಿ ಕೇದಗೆ ಹೂವನ್ನು ಶಿವಪೂಜೆಗೆ ನಿಷಿದ್ಧವಾಯಿತು ಎಂದು ಹೇಳಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




