Temple: ದೇವಾಲಯದ ದೇವರೆದುರಿನ ಗಂಟೆ ಏನಾದರೂ ಹೇಳುವುದುಂಟೇ..?

| Updated By: ವಿವೇಕ ಬಿರಾದಾರ

Updated on: Jul 09, 2023 | 8:33 AM

ದೇವಾಲಯದಲ್ಲಿ ಗಂಟೆಯನ್ನು ಯಾಕೆ ಜೋತು ಬಿಡುತ್ತಾರೆ? ಆ ಗಂಟೆ ಹೇಗಿರಬೇಕು? ಯಾಕೆ ಗಂಟೆಯನ್ನು ದೇವಾಲಯದ ಒಳಗೆ ಪ್ರವೇಶ ಮಾಡಿದ ಕೂಡಲೇ ಬಾರಿಸಬೇಕು? ಇತ್ಯಾದಿ ವಿಚಾರಗಳು ಇಲ್ಲಿವೆ

Temple: ದೇವಾಲಯದ ದೇವರೆದುರಿನ ಗಂಟೆ ಏನಾದರೂ ಹೇಳುವುದುಂಟೇ..?
ಗಂಟೆ
Follow us on

ದೇವಾಲಯದ ಎದುರು ಗಂಟೆಯನ್ನು ಜೋತು ಬಿಟ್ಟಿರುತ್ತಾರೆ. ಅದರ ಶಬ್ದವೋ ಕರ್ಣಕಠೋರ. ಕಿವಿಯಿಂದ ರಕ್ತ ಬರುಬುದು ಬಾಕಿ. ಅಷ್ಟು ಕರ್ಕಶವಾದ ಗಂಟೆಗಳೂ ಇರುತ್ತವೆ. ದೇವಾಲಯದಲ್ಲಿ ಗಂಟೆಯನ್ನು ಯಾಕೆ ಜೋತು ಬಿಡುತ್ತಾರೆ? ಆ ಗಂಟೆ ಹೇಗಿರಬೇಕು? ಯಾಕೆ ಗಂಟೆಯನ್ನು ದೇವಾಲಯದ ಒಳಗೆ ಪ್ರವೇಶ ಮಾಡಿದ ಕೂಡಲೇ ಬಾರಿಸಬೇಕು? ಇತ್ಯಾದಿ ವಿಚಾರಗಳನ್ನು ನೋಡೋಣ.

ಎಷ್ಟೇ ಶ್ರೀಮಂತರಾಗಿರಲಿ, ಏನೇ ಇರಲಿ ಗಂಟೆಯು ಬಂಗಾರದ್ದಾರೆ ಪ್ರಶಸ್ತವಲ್ಲ. ಗಂಟೆಯಿಂದ ಆಗಬೇಕಾದುದ್ದು ಶ್ರೀಂಮತಿಕೆಯ ಪ್ರದರ್ಶನವಲ್ಲ, ಆತ್ಮದರ್ಶನ. ಹಾಗಾಗಿ ಗಂಟೆಯು ಸಾಮಾನ್ಯವಾಗಿ ಕಂಚಿನದ್ದೇ ಆಗಿರುತ್ತದೆ. ಆ ಗಂಟೆಯಿಂದ ಮಾತ್ರ ಒಳ್ಳೆಯ ನಾದ ಬರುತ್ತದೆ. ಉಳಿದ ಗಂಟೆಗಳಿಂದ ಅಲ್ಲ. ಅದರಲ್ಲಿಯೂ ಲೋಹಗಳ ಪ್ರಮಾಣವಿರುತ್ತದೆ. ಹಾಗೆ ಮಾಡಿ ತಯಾರಿಸಿದ ಗಂಟೆಯಲ್ಲಿ ಓಂಕಾರವು ಬರುತ್ತದೆ. ಗಂಟೆಯಿಂದ ಬರಬೇಕಾದುದೂ ಇದೇ ನಾದವೇ.

ಗಂಟೆಯನ್ನು ಬಳಸುವುದು ಪೂಜೆಯ ಸಂದರ್ಭದಲ್ಲಿ. ಅದನ್ನು ಬಿಟ್ಟು ಬೇರೆ ಕಡೆ ಬಳಸುವುದು ಕಡಿಮೆ. ಇನ್ನು ದೇವಾಲಯಗಳ ಹೊರಭಾಗದಲ್ಲಿ ಗಂಟೆಯನ್ನು ಜೋತು ಬಿಡುತ್ತಾರೆ. ದೇವರ ಮುಂದೆ ಭಕ್ತರಿಗೆ ಬಾರಿಸಲು ಗಂಟೆ ಏಕೆ ಬೇಕು? ಅಲ್ವಾ? ಪೂಜೆಗೆ ಬೇಕಾದ ಗಂಟೆ ದೇವರ ಬಳಿಯಲ್ಲಿ ಇರುತ್ತದಲ್ಲ ಎಂದನಿಸಬಹುದು. ಆದರೆ ದೇವಾಲಯ ಹೊರ ಭಾಗಲ್ಲಿ ಇಡುವ ಗಂಟೆಯ ಕ್ರಮವೇ ಬೇರೆಯದ್ದು. ಕೆಲವರು ಇದನ್ನು ಯಾಕೆ ಬಾರಿಸಬೇಕು ಎಂದರೆ ದೇವರಿಗೆ ನಾವು ಬಂದಿರುವುದು ಗೊತ್ತಾಗಲಿ ಎಂಬುದಕ್ಕೆ ಬಾರಿಸಬೇಕು ಎನ್ನುತ್ತಾರೆ. ಅದು ಹೌದಾಗಿರಬಹುದು. ಆದರೆ ಅದಕ್ಕೆ ಗಂಟೆಯೇ ಏಕೆ ಬೇಕು ಎನ್ನುವುದು ಪ್ರಶ್ನೆ. ಶಬ್ದವನ್ನೇ ಮಾಡಿ ಎಚ್ಚರಿಸಬೇಕಾದರೇ ಬೇರೆ ಯಾವುದಾದರೂ ಆಗಬಹುದಲ್ಲವೇ? ಗಂಟೆಯೇ ಯಾಕೆ? ಚಪ್ಪಾಳೆಯನ್ನೂ ಹೊಡೆಯಬಹುದು, ಅಲ್ವಾ?

ಆದರೆ ಅದಕ್ಕೋಸ್ಕರ ಬಂದಿರುವುದಲ್ಲ ಅದು. ಮೊದಲೇ ಹೇಳಿದಂತೆ ಗಂಟೆಯು ಓಂಕಾರವನ್ನು ಹೋರ ಹಾಕುತ್ತದೆ ಮತ್ತು ಹೊರ ಹಾಕಬೇಕು. ಅದು ಮಾತ್ರ ಗಂಟೆಯಾಗುವುದು. ದೇವಾಲಯದಲ್ಲಿರುವ ಗಂಟೆ ಹಾಗಿದ್ದಾಗ ಅಂತಹ ಗಂಟೆಯನ್ನು ಬಾರಿಸಿದರೆ ಅದರಿಂದ ಬರುವ ಓಂಕಾರವು ನಮ್ಮನ್ನು ದೇವರತ್ತ ಕೊಂಡೊಯ್ಯಲು, ಮನಸ್ಸು ಆ ನಾದವನ್ನು ಕೇಳುತ್ತ ಏಕಾಗ್ರವಾಗಲು ಸಹಾಯವಾಗಲಿ ಎಂಬ ಕಾರಣಕ್ಕೆ ದೇವಾಲಯದಲ್ಲಿ ಗಂಟೆಯನ್ನು ಪದ್ಧತಿಯಾಗಿ ತಂದರು. ಹೊರಗಿನಿಂದ ಬರುವಾಗ ನಮ್ಮ ಮನಸ್ಸು ವಿಧವಾಗಿ ಆಲೋಚನೆಗಳನ್ನು ಮಾಡುತ್ತದೆ. ದೇವಾಲಯಕ್ಕೆ ಬಂದಾಗ ಅಲ್ಲಿ ಮನಸ್ಸು ಏಕಾಗ್ರವಾಗಲು ಏನಾದರೊಂದು ಸಾಧನ ಬೇಕು. ನಮ್ಮ‌ ಮನಸ್ಸು ದೇವರ ಕಡೆಗೆ ತಿರುಗಲು ಗಂಟೆ ಸಾಧನವಾಗುತ್ತದೆ. ನಕಾರಾತ್ಮಕ ಚಿಂತನೆಗಳು ದೂರವಾಗಿ, ಸಕಾರಾತ್ಮಕ ಆಲೋಚನೆಗಳನ್ನು ಮಾಡುತ್ತೇವೆ. ಹಾಗಾಗಿ ದೇವಾಲಯದ ಗಂಟೆ ಬಹಳ ಮುಖ್ಯವಾಗಿರುತ್ತದೆ.

ಇನ್ನು ಈ ಗಂಟೆಯು ಎಲ್ಲ ದುಷ್ಟ ಶಕ್ತಿಗಳನ್ನು ದೂರ ಸರಿಸುತ್ತದೆ ಎಂಬ ಮಾತಿದೆ. ಅದು ಓಂಕಾರ ಯುಕ್ತವಾದ ಗಂಟೆಯಿಂದ ಮಾತ್ರ ಆಗುವಂತದ್ದು. ಎಲ್ಲ ಗಂಟೆಯಿಂದ ಅಲ್ಲ.

ಆಗಮಾರ್ಥಂ ತು ದೇವಾನಾಂ
ಗಮನಾರ್ಥಂ ತು ರಕ್ಷಸಾಮ್ |
ಆದೌ ಘಂಟಾ ರವಂ ನಿತ್ಯಂ
ದೇವತಾಹ್ವಾನಲಕ್ಷಣಮ್ ||
ಎಂಬುದಾಗಿ ಪ್ರಾಚೀನವಾದ ಒಂದು ಮಾತು.

ದೇವರ ಆಗಮನಕ್ಕೆ ಹಾಗೂ ರಾಕ್ಷಸರ ನಿರ್ಗಮನಕ್ಕೆ ದೇವರ ಪೂಜೆಯ ಮೊದಲು ಘಂಟೆಯನ್ನು ಬಾರಿಸಬೇಕು ಎಂದು.

ಹೀಗೆ ಒಂದೊಂದೂ ಅರ್ಥವತ್ತಾದ ಆಚರಣೆ, ವಿಧಾನಗಳನ್ನು ಹಿಂದಿನ ಕಾಲದಲ್ಲಿ ರೂಢಿಸಿದ್ದರು. ಆದರೆ ಅದು ಕಾಲಕ್ರಮೇಣ ಅರ್ಥವನ್ನು ಕಳೆದುಕೊಂಡು ಅಥವಾ ಅಪಾರ್ಥವಾಗಿ ಇಂದು ಉಳಿದುಕೊಂಡಿದೆ.
ದೇವರ ಮುಂದಿರುವ ಘಂಟೆ, ಸೌಂದರ್ಯಕ್ಕೆ ಮಾತ್ರ ಅಲ್ಲ, ಅದರ ಹಿಂದೆ ಅನೇಕ ಸತ್ಯಗಳೂ ಅಡಗಿರುತ್ತವೆ. ಕೇಳುವ ಕಿವಿ ಬೇಕು, ನೋಡುವ ಕಣ್ಣು ಬೇಕಷ್ಟೇ.

-ಲೋಹಿತಶರ್ಮಾ