21 ನಿಮಿಷ, 27 ಎಸೆತ.. ಅಬ್ಬರದ ಶತಕ! ಎದುರಾಳಿ ತಂಡದ ಬೌಲರ್​ಗಳನ್ನು ನಿದ್ದೆಯಲ್ಲೂ ಕಾಡಿದ ಬ್ಯಾಟ್ಸ್​ಮನ್ ಕತೆಯಿದು

ಟೋನಿ ಕೋಟ್ ಕೇವಲ 6 ಓವರ್‌ಗಳಲ್ಲಿ 121 ರನ್ ನೀಡಿದ್ದರೆ ಮತ್ತೊಬ್ಬ ಬೌಲರ್ ಮ್ಯಾಥ್ಯೂ ಮೇನಾರ್ಡ್ 6 ಓವರ್‌ಗಳಲ್ಲಿ 110 ರನ್ ಬಿಟ್ಟುಕೊಟ್ಟರು.

21 ನಿಮಿಷ, 27 ಎಸೆತ.. ಅಬ್ಬರದ ಶತಕ! ಎದುರಾಳಿ ತಂಡದ ಬೌಲರ್​ಗಳನ್ನು ನಿದ್ದೆಯಲ್ಲೂ ಕಾಡಿದ ಬ್ಯಾಟ್ಸ್​ಮನ್ ಕತೆಯಿದು
ಪ್ರಾತಿನಿಧಿಕ ಚಿತ್ರ

ಕಳೆದ ವರ್ಷ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಮಾಡಿತ್ತು. ಈ ಸಮಯದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಪೂಜಾರ ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ಟೀಕೆಗೆ ಗುರಿಯಾಗಿದ್ದರು. ಹೆಚ್ಚಿನ ಇನ್ನಿಂಗ್ಸ್‌ಗಳಲ್ಲಿ, ಖಾತೆಯನ್ನು ತೆರೆಯಲು ಪೂಜಾರ 20 ರಿಂದ 25 ಎಸೆತಗಳು ಅಥವಾ ಅದಕ್ಕಿಂತ ಹೆಚ್ಚು ಎಸೆತಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಒಬ್ಬ ಬ್ಯಾಟ್ಸ್‌ಮನ್ ತನ್ನ ರನ್ ಖಾತೆ ತೆರೆಯುವುದಕ್ಕೂ ಮೊದಲು, ಇನ್ನೊಂದು ತುದಿಯಲ್ಲಿದ್ದ ಆಟಗಾರ ಭರ್ಜರಿ ಶತಕ ಬಾರಿಸಿದ ಬಗ್ಗೆ ನಿಮಗೇನಾದರೂ ಗೊತ್ತಿದ್ದೇಯಾ. ಹೌದು.. ಈ ಬ್ಯಾಟ್ಸ್‌ಮನ್‌ ಕೇವಲ 21 ನಿಮಿಷಗಳ ಆಟದ ಅವಧಿಯಲ್ಲಿ 27 ಎಸೆತಗಳನ್ನು ಎದುರಿಸಿ ವಿನಾಶಕಾರಿ ಶತಕವನ್ನು ಗಳಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದರು. ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಯಿಂದ ಎದುರಾಳಿ ತಂಡದ ಬೌಲರ್​ಗಳನ್ನು ನಿದ್ದೆಯಲ್ಲೂ ಕಾಡಿದ್ದರು.

21 ನಿಮಿಷಗಳಲ್ಲಿ 27 ಎಸೆತಗಳನ್ನು ಎದುರಿಸಿ ಶತಕ
ಜುಲೈ 19 ರಂದು ಗ್ಲೆನ್ ಚಾಪೆಲ್ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಪಂದ್ಯವು 1993 ರಲ್ಲಿ ಓಲ್ಡ್ ಟ್ರಾಫರ್ಡ್‌ನಲ್ಲಿ ಗ್ಲಾಮೋರ್ಗನ್ ವಿರುದ್ಧವಾಗಿತ್ತು. ಚಾಪೆಲ್ ಲಂಕಾಷೈರ್ ಪರ ಆಡಿದ್ದರು. ಚಾಪೆಲ್ ಕೇವಲ 21 ನಿಮಿಷಗಳಲ್ಲಿ 27 ಎಸೆತಗಳನ್ನು ಎದುರಿಸಿ ಶತಕ ಬಾರಿಸಿದರು. ಇದು ಅತಿ ವೇಗದ ಪ್ರಥಮ ದರ್ಜೆ ಶತಕದ ದಾಖಲೆಯನ್ನು ಸಮನಾಗಿಸಿತ್ತು. ಗ್ಲಾಮೊರ್ಗನ್ ತಂಡದ ಇಬ್ಬರು ಬೌಲರ್‌ಗಳ ಪರಿಸ್ಥಿತಿ ಹೇಳತ್ತೀರದಾಗಿತ್ತು. ಈ ಪೈಕಿ ಟೋನಿ ಕೋಟ್ ಕೇವಲ 6 ಓವರ್‌ಗಳಲ್ಲಿ 121 ರನ್ ನೀಡಿದ್ದರೆ ಮತ್ತೊಬ್ಬ ಬೌಲರ್ ಮ್ಯಾಥ್ಯೂ ಮೇನಾರ್ಡ್ 6 ಓವರ್‌ಗಳಲ್ಲಿ 110 ರನ್ ಬಿಟ್ಟುಕೊಟ್ಟರು. ಆದರೆ, ಅವರು ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಲಂಕಾಷೈರ್ 12 ಓವರ್‌ಗಳಲ್ಲಿ 235 ರನ್‌ಗಳಿಸಿ ತಮ್ಮ ಇನ್ನಿಂಗ್ಸ್ ಘೋಷಿಸಿತು. ಚಾಪೆಲ್ 109 ರನ್ ಗಳಿಸಿದರು.

8,000 ಕ್ಕೂ ಹೆಚ್ಚು ರನ್, 985 ವಿಕೆಟ್
ಇಂಗ್ಲೆಂಡ್ ಬಲಗೈ ಬ್ಯಾಟ್ಸ್‌ಮನ್ ಗ್ಲೆನ್ ಚಾಪೆಲ್ ರಾಷ್ಟ್ರೀಯ ತಂಡಕ್ಕಾಗಿ ಕೇವಲ 1 ಪಂದ್ಯವನ್ನು ಮಾತ್ರ ಆಡಿದ್ದಾರೆ. ಇದರಲ್ಲಿ ಅವರು 14 ರನ್ ಗಳಿಸಿದರು. ಒಂದು ವಿಕೆಟ್ ಕೂಡ ತೆಗೆದುಕೊಳ್ಳಲಿಲ್ಲ. ಆದರೆ ಅವರು ಪ್ರಥಮ ದರ್ಜೆಯಲ್ಲಿ ದಾಖಲೆಗಳನ್ನು ನಿರ್ಮಿಸಿದರು. ಗ್ಲೆನ್ 315 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಅವರು 436 ಇನ್ನಿಂಗ್ಸ್‌ಗಳಲ್ಲಿ 24.16 ರ ಸರಾಸರಿಯಲ್ಲಿ 8725 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 155 ಆಗಿತ್ತು. ಇದರಲ್ಲಿ 6 ಶತಕಗಳು ಮತ್ತು 37 ಅರ್ಧಶತಕಗಳು ಸೇರಿವೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 985 ವಿಕೆಟ್‌ಗಳನ್ನು ಪಡೆದರು. 283 ಲಿಸ್ಟ್ ಎ ಪಂದ್ಯಗಳಲ್ಲಿ ಅವರು 17.77 ಸರಾಸರಿಯಲ್ಲಿ 2062 ರನ್ ಗಳಿಸಿದ್ದಾರೆ. ಇದರಲ್ಲಿ ಒಂಬತ್ತು ಅರ್ಧಶತಕಗಳಿವೆ. ಪಟ್ಟಿ ಎ ಯಲ್ಲಿ ಅವರ ಗರಿಷ್ಠ ಸ್ಕೋರ್ ಔಟಾಗದೆ 81 ರನ್ ಆಗಿದೆ. 320 ವಿಕೆಟ್​ಗಳನ್ನು ಪಡೆದಿದ್ದಾರೆ.