ಚಿನ್ನಸ್ವಾಮಿಯಲ್ಲಿ ಡಿವಿಲಿಯರ್ಸ್​ ಪುತ್ಥಳಿ ಸ್ಥಾಪಿಸಲು ಆಂದೋಲನ; ದಿಗ್ಗಜರಿಂದಲೇ ವಿರೋಧ

ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿಡಿ ಆರ್​ಸಿಬಿಯ ಪ್ರಮುಖ ಬ್ಯಾಟ್ಸ್​ಮನ್​. ಅನೇಕ ಸೋಲುವ ಪಂದ್ಯಗಳನ್ನು ಗೆಲುವಿನ ದಡ ಮುಟ್ಟಿಸಿದ ಖ್ಯಾತಿ ಎಬಿಡಿಗೆ ಇದೆ.

ಚಿನ್ನಸ್ವಾಮಿಯಲ್ಲಿ ಡಿವಿಲಿಯರ್ಸ್​ ಪುತ್ಥಳಿ ಸ್ಥಾಪಿಸಲು ಆಂದೋಲನ; ದಿಗ್ಗಜರಿಂದಲೇ ವಿರೋಧ
ಎಬಿ ಡಿವಿಲಿಯರ್ಸ್​

Updated on: Apr 12, 2021 | 3:49 PM

ಪುತ್ಥಳಿ ವಿಚಾರದಲ್ಲಿ ಆಗಾಗ ಗಲಾಟೆಗಳು ಏಳುತ್ತಲೇ ಇರುತ್ತವೆ. ಪುತ್ಥಳಿಗೆ ಕಲ್ಲು ಹೊಡೆದು ಭಂಗ ಮಾಡಿದ ವಿಚಾರದಲ್ಲಂತೂ ಸಾಕಷ್ಟು ಗಲಭೆಗಳು ಎದ್ದಿವೆ. ಇನ್ನು, ಆಯಾ ಕ್ಷೇತ್ರದ ಅಭಿವೃದ್ಧಿಗೆ ಹೋರಾಡಿದವರಿಗಾಗಿ ಸ್ಟ್ಯಾಚ್ಯೂ ನಿರ್ಮಾಣ ಮಾಡಬೇಕು ಎನ್ನುವ ಆಗ್ರಹ ಕೇಳಿ ಬರುತ್ತಲೇ ಇರುತ್ತದೆ. ಅದೇ ರೀತಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್​​ಮನ್​ ಎ.ಬಿ. ಡಿವಿಲಿಯರ್ಸ್​ ಅವರ ಪುತ್ಥಳಿಯನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಎದುರು ಅನಾವರಣ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದಕ್ಕೆ ಸಾಕಷ್ಟು ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿಡಿ ಆರ್​ಸಿಬಿಯ ಪ್ರಮುಖ ಬ್ಯಾಟ್ಸ್​ಮನ್​. ಅನೇಕ ಸೋಲುವ ಪಂದ್ಯಗಳನ್ನು ಗೆಲುವಿನ ದಡ ಮುಟ್ಟಿಸಿದ ಖ್ಯಾತಿ ಎಬಿಡಿಗೆ ಇದೆ. ಕ್ರೂಷಿಯಲ್​ ಮ್ಯಾಚ್​ಗಳಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್​ ಪ್ರದರ್ಶನದ ಮೂಲಕ ಆರ್​ಸಿಬಿಗೆ ಗೆಲುವು ತಂದು ಕೊಟ್ಟಿದ್ದಾರೆ. ಹೀಗಾಗಿ, ಆರ್​ಸಿಬಿ ಪಾಲಿಗೆ ಎಬಿಡಿ ಆಪತ್​ಬಾಂಧವ. ಅನೇಕ ಅಭಿಮಾನಿಗಳು ಅವರನ್ನು ದೇವರಂತೆ ಕಾಣುತ್ತಾರೆ.

ಐಪಿಎಲ್​ 14ನೇ ಸೀಸನ್​ನ ಮೊದಲ ಪಂದ್ಯದಲ್ಲಿ ಆರ್​ಸಿಬಿ ಹಾಲಿ ಚಾಂಪಿಯನ್ಸ್​ ಮುಂಬೈ ತಂಡವನ್ನು ಎದುರಿಸಿತ್ತು. ಮುಂಬೈ ನೀಡಿದ 160ರನ್​ಗಳ ಟಾರ್ಗೆಟ್​ ಬೆನ್ನು ಹತ್ತಿದ ಆರ್​ಸಿಬಿ ಆರಂಭದಲ್ಲೇ ಆಘಾತ ಎದುರಿಸಿತ್ತು. ಆಗ ಬೆಂಗಳೂರು ತಂಡಕ್ಕೆ ಬೆನ್ನೆಲುಬಾಗಿ ನಿಂತವರು ಡಿವಿಲಿಯರ್ಸ್​. 27 ಬಾಲ್​ಗೆ 48 ರನ್​ ಸಿಡಿಸಿ ಆರ್​ಸಿಬಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಈ ಗೆಲುವಿನ ನಂತರದಲ್ಲಿ ಅಭಿಮಾನಿಗಳು ಸಾಕಷ್ಟು ಸಂತೋಷ ವ್ಯಕ್ತಪಡಿಸಿದ್ದವು. ಅಷ್ಟೇ ಅಲ್ಲ, ಆರ್​ಸಿಬಿಗೆ ಅವರು ನೀಡಿದ ಕೊಡುಗೆ ಗಮನಿಸಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಎದುರು ಎಬಿಡಿ ಅವರ ಒಂದು ಪುತ್ಥಳಿ ನಿರ್ಮಾಣ ಮಾಡಬೇಕು ಎನ್ನುವ ಆಗ್ರಹವನ್ನು ಅಭಿಮಾನಿಗಳು ಮಾಡಿದ್ದಾರೆ.

ಇದಕ್ಕೆ ಕೆಲವರು ಆಕ್ರೋಶ ಹೊರ ಹಾಕಿದ್ದಾರೆ. ಎರಪಲ್ಲಿ ಪ್ರಸನ್ನರಿಗೆ ಇಲ್ಲ, ಗುಂಡಪ್ಪ ವಿಶ್ವನಾಥ್​ ಅವರಿಗೆ ಇಲ್ಲ, ಚಂದ್ರರಿಗೂ ಇಲ್ಲ. ಈಗ ಬೆಂಗಳೂರಲ್ಲಿ ಎಬಿಡಿ ಪುತ್ಥಳಿ ಬೇಕಂತೆ. ಮುಂದಿನ ವರ್ಷ ಕೊಡೋದು ತಗೋಳೋದು ವ್ಯತ್ಯಾಸ ಆದರೆ ಬೇರೆ ಟೀಮ್​ಗೆ ಹೋಗಿ ನಿಮ್ಮ ಆರ್​ಸಿಬಿಗೆ ಎಬಿಡಿ ಗುನ್ನ ಇಡ್ತಾರೆ. ಬೇಕಿದ್ರೆ ನಿಮ್ಮ ಮನೆ ಮುಂದೆ ಪ್ರತಿಮೆ ಮಾಡ್ಕೋಳಿ ಎಂದು ರಾಮಚಂದ್ರ ಎಂಬುವವರು ಬರೆದುಕೊಂಡಿದ್ದಾರೆ.

ಇನ್ನು, ಇದಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ದೊಡ್ಡ ಗಣೇಶ್​ ಕೂಡ ಉತ್ತರ ನೀಡಿದ್ದಾರೆ. ನಮ್ಮ ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಯಾವುದಾದರೂ ಕ್ರಿಕೆಟಿಗರು ಪ್ರತಿಮೆಗೆ ಅರ್ಹರಾಗಿದ್ದರೆ ಎಂದರೆ ಅದು ಕರ್ನಾಟಕದ ಮಾಜಿ ನಾಯಕ ವಿ. ಸುಬ್ರಮಣ್ಯ. ರಾಜ್ಯವನ್ನು ಕ್ರಿಕೆಟ್​ನ ಶಕ್ತಿ ಕೇಂದ್ರವನ್ನಾಗಿ ಮಾಡಲು ಅವರು 60 ರ ದಶಕದಲ್ಲಿ ಶ್ರಮಿಸಿದ್ದರು ಎಂದಿದ್ದಾರೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಒಂದು ಪ್ರಾಂಚೈಸಿ ಅಷ್ಟೇ. ಇದಕ್ಕೂ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆಗೂ ಯಾವುದೇ ನೇರ ಸಂಬಂಧವಿಲ್ಲ. ಕರ್ನಾಟಕದ ಆಟಗಾರರ ಸಂಖ್ಯೆ ಕೂಡ ಕಡಿಮೆ. ಹೀಗಾಗಿ, ಬೆಂಗಳೂರಲ್ಲಿ ಎಬಿಡಿ ಪ್ರತಿಮೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಕೆಲವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: IPL 2021: ಮಿಂಚಿದ ಹರ್ಷಲ್, ಡಿವಿಲಿಯರ್ಸ್​.. ವಾಡಿಕೆಯಂತೆ ಗೆದ್ದ ಆರ್​ಸಿಬಿ! ಮೊದಲ ಪಂದ್ಯದಲ್ಲಿ ಸೋತು ಸಂಪ್ರದಾಯ ಉಳಿಸಿಕೊಂಡ ಮುಂಬೈ

IPL 2021: ನಾನೀಗಲೂ ಅತೀ ವೇಗದ ಚಿರತೆ! ಆರ್​ಸಿಬಿ ಜರ್ಸಿ ತೊಟ್ಟು, ಕೊಹ್ಲಿ- ಎಬಿಡಿಗೆ ಚಾಲೆಂಜ್ ಹಾಕಿದ ಬೋಲ್ಟ್

Published On - 3:46 pm, Mon, 12 April 21