IPL 2021: ಮಿಂಚಿದ ಹರ್ಷಲ್, ಡಿವಿಲಿಯರ್ಸ್​.. ವಾಡಿಕೆಯಂತೆ ಗೆದ್ದ ಆರ್​ಸಿಬಿ! ಮೊದಲ ಪಂದ್ಯದಲ್ಲಿ ಸೋತು ಸಂಪ್ರದಾಯ ಉಳಿಸಿಕೊಂಡ ಮುಂಬೈ

IPL 2021: ಏಕಾಂಗಿ ಹೋರಾಟ ನಡೆಸಿದ ಡಿವಿಲಿಯರ್ಸ್​ ತಂಡವನ್ನು ಗೆಲುವಿನ ಅಂಚಿಗೆ ತಂದು ರನ್​ ಔಟ್​ ಆದರು. ವಿಕೆಟ್​ಗೂ ಮುನ್ನ ಡಿವಿಲಿಯರ್ಸ್​ ಕೇವಲ 27 ಬಾಲ್​ಗಳಲ್ಲಿ 48 ರನ್​ ಗಳಿಸಿದ್ದರು.

IPL 2021: ಮಿಂಚಿದ ಹರ್ಷಲ್, ಡಿವಿಲಿಯರ್ಸ್​.. ವಾಡಿಕೆಯಂತೆ ಗೆದ್ದ ಆರ್​ಸಿಬಿ! ಮೊದಲ ಪಂದ್ಯದಲ್ಲಿ ಸೋತು ಸಂಪ್ರದಾಯ ಉಳಿಸಿಕೊಂಡ ಮುಂಬೈ
ಆರ್​ಸಿಬಿಗೆ ಗೆಲುವು ತಂದುಕೊಟ್ಟ ಡಿವಿಲಿಯರ್ಸ್​
Follow us
ಪೃಥ್ವಿಶಂಕರ
|

Updated on: Apr 09, 2021 | 11:40 PM

ಚೆನ್ನೈ: ಇಂದು ನಡೆದ ಐಪಿಎಲ್​ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 2 ವಿಕೆಟ್​ಗಳಿಂದ ಸೋಲಿಸಿ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ. ಆರ್​ಸಿಬಿ ಪರ ಮ್ಯಾಕ್ಸ್​ವೆಲ್ ಹಾಗೂ ಎಬಿ ಡಿವಿಲಯರ್ಸ್​ ಸಮಯೋಜಿತ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಹಕಾರಿಯಾದರು. ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ದುಕೊಂಡು ಮುಂಬೈ ಇಂಡಿಯನ್ಸ್ ತಂಡವನ್ನು 159 ರನ್​ಗಳಿಗೆ ಕಟ್ಟಿಹಾಕಿತು. ಆರ್​ಸಿಬಿ ಪರ ಹರ್ಷಲ್ ಪಟೇಲ್ 5 ವಿಕೆಟ್ ಪಡೆದು ಮಿಂಚಿದ್ದಾರೆ. ಮುಂಬೈ ಪರ ಲಿನ್ 49 ರನ್​ಗಳಿಸಿ ಉತ್ತಮ ಮೊತ್ತ ಕಲೆಹಾಕುವಲ್ಲಿ ಸಹಕಾರಿಯಾಗಿದ್ದರು.

ಹರ್ಷಲ್ 5 ವಿಕೆಟ್ ಪವರ್‌ಪ್ಲೇ ನಂತರ ದಾಳಿಗಿಳಿದ ಹರ್ಷಲ್​ಗೆ, ಕ್ರಿಸ್ ಲಿನ್ ಮತ್ತು ಸೂರ್ಯಕುಮಾರ್ ಯಾದವ್ ಮೊದಲ ಓವರ್‌ನಲ್ಲಿ 11 ರನ್ ಬಾರಿಸಿದರು. ಆದರೆ 16 ನೇ ಓವರ್‌ನಲ್ಲಿ ನಿಖರ ದಾಳಿ ಆರಂಭಿಸಿದ ಹರ್ಷಲ್, ಹಾರ್ದಿಕ್ ಪಾಂಡ್ಯ ಅವರನ್ನು ನಿಧಾನಗತಿಯ ಡಿಪ್ಪರ್‌ನಿಂದ ಔಟ್ ಮಾಡಿದರು. ಅಂತಿಮ ಓವರ್‌ನಲ್ಲಿ ಕ್ರುನಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ಮತ್ತು ಮಾರ್ಕೊ ಜಾನ್ಸೆನ್ ಮೂರು ವಿಕೆಟ್‌ಗಳನ್ನು ಕಬಳಿಸುವ ಮೊದಲು ಇಶಾನ್ ಕಿಶನ್ ಅವರನ್ನು ಇದೇ ಮಾದರಿಯಲ್ಲಿ ಔಟ್ ಮಾಡಿದ್ದರು.

3ನೇ ಭಾರತೀಯ ಆಟಗಾರ 2018 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಂಕಿತ್ ರಾಜ್‌ಪೂತ್ 5/14 ಮತ್ತು 2018 ರಲ್ಲಿ ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 20 ರನ್​ ನೀಡಿ 5 ವಿಕೆಟ್ ಕಬಳಿಸಿದ್ದರು. ಈ ಇಬ್ಬರ ನಂತರ ಐಪಿಎಲ್ ಇತಿಹಾಸದಲ್ಲಿ ಭಾರತೀಯರೊಬ್ಬರು ದಾಖಲಿಸಿದ ಮೂರನೇ ಅತ್ಯುತ್ತಮ ಇನ್ನಿಂಗ್ಸ್ ಇದಾಗಿದೆ.

ಆರ್​ಸಿಬಿ ಬ್ಯಾಟಿಂಗ್ ಮುಂಬೈ ನಿಡಿದ 160 ರನ್​ಗಳ ಟಾರ್ಗೆಟನ್ನು ಬೆನ್ನಟ್ಟಿದ ಆರ್​ಸಿಬಿಯ ಆರಂಭ ಅಷ್ಟು ಉತ್ತಮವಾಗಿರಲಿಲ್ಲ. ಆರಂಭಿಕನಾಗಿ ಬಂದ ಸುಂದರ್ 10 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ರಜತ್​ ಕೂಡ ಹೆಚ್ಚು ಸಮಯ ನಿಲ್ಲಲಿಲ್ಲ. ಕೊಹ್ಲಿ ಜೊತೆಗೂಡಿದ ಮ್ಯಾಕ್ಸ್​​ವೆಲ್ ಉತ್ತಮ ಆಟ ಆಡಿದರು. 28 ಎಸೆತ ಎದುರಿಸಿದ ಮ್ಯಾಕ್ಸ್​ವೆಲ್ 39 ರನ್ಗಳಿಸಿದರು. ಇದರಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದ್ದವು.

ಉತ್ತಮ ಜೊತೆಯಾಟ ಆಡುತ್ತಿದ್ದ ಕೊಹ್ಲಿ 33 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಡಿವಿಲಿಯರ್ಸ್​ ತಮ್ಮ ಎಂದಿನ ಆಟಕ್ಕೆ ಮುಂದಾದರು. ಒಂದು ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಮ್ಯಾಕ್ಸ್​ವೆಲ್ ಇಲ್ಲದ ಹೊಡೆತ ಆಡಲು ಹೋಗಿ ಔಟಾದರು. ಈ ವಿಕೆಟ್ ಬಳಿಕ ಏಕಾಂಗಿ ಹೋರಾಟ ನಡೆಸಿದ ಡಿವಿಲಿಯರ್ಸ್​ ತಂಡವನ್ನು ಗೆಲುವಿನ ಅಂಚಿಗೆ ತಂದು ರನ್​ ಔಟ್​ ಆದರು. ವಿಕೆಟ್​ಗೂ ಮುನ್ನ ಡಿವಿಲಿಯರ್ಸ್​ ಕೇವಲ 27 ಬಾಲ್​ಗಳಲ್ಲಿ 48 ರನ್​ ಗಳಿಸಿದ್ದರು. ಅಂತಿಮವಾಗಿ ಬೌಲಿಂಗ್​ನಲ್ಲಿ ಮಿಂಚಿದ್ದ ಹರ್ಷಲ್ ಪಟೇಲ್ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ಆರ್​ಸಿಬಿಗೆ ಗೆಲುವಿನ ಮಾಲೆ ತೋಡಿಸಿದರು.