ಭಾರತದ ಮಾಜಿ ಆಲ್‌ರೌಂಡರ್ ಯೂಸುಫ್ ಪಠಾಣ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಅಣ್ಣ ಯೂಸುಫ್ ಎರಡು ಬಾರಿ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಯೂಸುಫ್ ಪಠಾಣ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ತಾವಾಡಿದ 2 ತಂಡಗಳನ್ನು 3 ಬಾರಿ ಚಾಂಪಿಯನ್ ಆಗಿ ಮಾಡಿದ್ದಾರೆ. 2012, 2014 ರಲ್ಲಿ ಎರಡು ಬಾರಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಚಾಂಪಿಯನ್ ಆಗಿತ್ತು. ಜೊತೆಗೆ 2008ರಲ್ಲಿ ರಾಜಸ್ಥಾನ್ ರಾಯಲ್ಸ್ ಪ್ರಶಸ್ತಿ ಗೆದ್ದಾಗ ಯೂಸುಫ್ ಪಠಾಣ್ ತಂಡದ ಸದಸ್ಯರಾಗಿದ್ದರು.
ತಮ್ಮ ನಿವೃತ್ತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಯೂಸುಫ್, ತನ್ನ ಬೆಂಬಲಕ್ಕೆ ನಿಂತ ನನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳು, ತಂಡಗಳು, ತರಬೇತುದಾರರು ಮತ್ತು ಇಡೀ ದೇಶಕ್ಕೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.
ಯೂಸುಫ್ 2007 ರಲ್ಲಿ ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ಭಾರತಕ್ಕಾಗಿ 57 ಏಕದಿನ ಮತ್ತು 22 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ ಯೂಸುಫ್, ಐಸಿಸಿ ಟಿ20 ವಿಶ್ವಕಪ್ 2007 ಮತ್ತು ಐಸಿಸಿ ಕ್ರಿಕೆಟ್ ವಿಶ್ವಕಪ್ 2011 ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮತ್ತು ಹ್ಯಾಂಡಿ ಆಫ್ ಸ್ಪಿನ್ನರ್ ಆಗಿದ್ದ ಯೂಸುಫ್, ಭಾರತಕ್ಕಾಗಿ 810 ಏಕದಿನ ರನ್ ಮತ್ತು ಟಿ20 ಪಂದ್ಯಗಳಲ್ಲಿ 236 ರನ್ ಗಳಿಸಿದ್ದರು. ಸೀಮಿತ ಓವರ್‌ಗಳ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 46 ವಿಕೆಟ್‌ಗಳನ್ನು ಸಹ ಯೂಸುಫ್ ಪಡೆದಿದ್ದಾರೆ.
I thank my family, friends, fans, teams, coaches and the whole country wholeheartedly for all the support and love. #retirement pic.twitter.com/usOzxer9CE
— Yusuf Pathan (@iamyusufpathan) February 26, 2021