Vinay Kumar Retirement: ಎಲ್ಲಾ ವಿಧದ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ದಾವಣಗೆರೆ ಎಕ್ಸ್ಪ್ರೆಸ್ ವಿನಯ್ ಕುಮಾರ್
ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ ಹಾಗೂ ವಿರಾಟ್ ಕೊಹ್ಲಿ ಜತೆ ಆಟವಾಡಿದ್ದಕ್ಕೆ ಖುಷಿ ಇದೆ ಎಂದು ವಿನಯ್ ಕುಮಾರ್ ಹೇಳಿದ್ದಾರೆ.
ದಾವಣಗೆರೆ ಎಕ್ಸ್ಪ್ರೆಸ್ ಎಂದೇ ಖ್ಯಾತಿ ಪಡೆದಿದ್ದ ಕನ್ನಡಿಗ ಹಾಗೂ ಟೀಂ ಇಂಡಿಯಾದ ವೇಗಿ ವಿನಯ್ ಕುಮಾರ್ ಇಂದು ಎಲ್ಲಾ ವಿಧದ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ತಮ್ಮ ನಿವೃತ್ತಿ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ, ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ ಹಾಗೂ ವಿರಾಟ್ ಕೊಹ್ಲಿ ಮಾರ್ಗದರ್ಶನ ಸಿಕ್ಕಿರುವುದಕ್ಕೆ ಖುಷಿಯಾಗಿದ್ದಾರೆ.
ದಾವಣಗೆರೆ ಎಕ್ಸ್ಪ್ರೆಸ್ ಸಾಕಷ್ಟು ನಿಲ್ದಾಣಗಳನ್ನು ಸಾಗಿ ಬಂದಿದೆ. ಈಗ ನಿವೃತ್ತಿ ಎನ್ನುವ ಕೊನೆಯ ನಿಲ್ದಾಣಕ್ಕೆ ಬಂದು ನಿಂತಿದೆ. ಮಿಶ್ರ ಭಾವನೆಯೊಂದಿಗೆ ನಾನು ಎಲ್ಲಾ ವಿಧದ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡುತ್ತಿದ್ದೇನೆ ಎಂದು ವಿನಯ್ ಕುಮಾರ್ ತಮ್ಮ ಪತ್ರವನ್ನು ಆರಂಭಿಸಿದ್ದಾರೆ.
Thankyou all for your love and support throughout my career. Today I hang up my boots. ??❤️ #ProudIndian pic.twitter.com/ht0THqWTdP
— Vinay Kumar R (@Vinay_Kumar_R) February 26, 2021
ಭಾರತ ಶ್ರೇಷ್ಠ ಆಟಗಾರರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಎಂ.ಎಸ್. ಧೋನಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ರೋಹಿತ್ ಶರ್ಮಾ ಅವರ ಜತೆ ಆಡಿರುವುದಕ್ಕೆ ಖುಷಿದೆ ಇದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಮೆಂಟರ್ ಆಗಿದ್ದರು ಎನ್ನುವುದು ನನ್ನ ಪಾಲಿನ ಅದೃಷ್ಟ ಎಂದು ಬರೆದುಕೊಂಡಿದ್ದಾರೆ.
ನಾನು ನನ್ನ ಕನಸನ್ನು ನನಸಾಗಿಸಿಕೊಳ್ಳಲು ದಾವಣಗೆರೆಯಿಂದ ಬೆಂಗಳೂರಿಗೆ ಬಂದೆ. ರಾಜ್ಯ ತಂಡವನ್ನು ಪ್ರತಿನಿಧಿಸಲು ನನಗೆ ಅವಕಾಶ ನೀಡಿದ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಗೆ ಕೃತಜ್ಞನಾಗಿದ್ದೇನೆ. ಅಲ್ಲಿಂದ ನಾನು ಭಾರತ ಪರ ಆಡಲು ಹೋದೆ ಮತ್ತು ಕ್ರಿಕೆಟ್ನ ಎಲ್ಲಾ ಸ್ವರೂಪಗಳಲ್ಲಿ ದೇಶವನ್ನು ಪ್ರತಿನಿಧಿಸಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ವಿನಯ್ ಕುಮಾರ್.
ವಿನಯ್ ಕುಮಾರ್ ಒಂದು ಟೆಸ್ಟ್, 31 ಏಕದಿನ ಹಾಗೂ 9 ಟಿ20ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಮೂರು ವಿಧದ ಕ್ರಿಕೆಟ್ನಿಂದ ವಿನಯ್ ಒಟ್ಟು 49 ವಿಕೆಟ್ ಕಿತ್ತಿದ್ದಾರೆ. 2011ರಲ್ಲಿ ದೆಹಲಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ವಿನಯ್ ಕುಮಾರ್ 30 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಇದು ಅವರ ಜೀವಮಾನದ ಅತ್ಯುತ್ತಮ ಸಾಧನೆ ಆಗಿದೆ.
ಕರ್ನಾಟಕ ರಣಜಿ ತಂಡವನ್ನು ವಿನಯ್ ಕುಮಾರ್ ಮುನ್ನಡೆಸಿದ್ದಾರೆ. ಇವರ ನಾಯಕತ್ವದಲ್ಲಿ 2013-14 ಮತ್ತು 2014-15ರಲ್ಲಿ ಕರ್ನಾಟಕ ತಂಡ ರಣಜಿ ಕಪ್ ಗೆದ್ದಿತ್ತು. 2018ರಲ್ಲಿ ಅವರು ರಣಜಿ ಟ್ರೋಫಿಯಲ್ಲಿ 100ನೇ ಮ್ಯಾಚ್ ಆಡಿದ್ದಾರೆ. ಕರ್ನಾಟಕ ತಂಡದಿಂದ ಕೈಬಿಟ್ಟ ನಂತರ ಅವರು ಪಾಂಡಿಚೇರಿಗೆ ತೆರಳಿದ್ದರು.
ಇದನ್ನೂ ಓದಿ: ಮತ್ತೊಂದು ವಿಭಿನ್ನ ಕ್ರಿಕೆಟ್! ಈ ಬಾರಿ ಹಾಸನದಲ್ಲಿ: ಗೆದ್ದವರಿಗೆ ಜೋಡಿ ಟಗರು, 2 ಬಾಟಲಿ ವಿಸ್ಕಿ.. ಬೇಗ ನೀವೂ ತಂಡ ಕಟ್ಟಿ
Published On - 3:39 pm, Fri, 26 February 21