ಕ್ವಿಂಟನ್ ಡಿ ಕಾಕ್ ಮಾಡಿದ್ದು ಸರಿಯಾ ಎಂಬ ಚರ್ಚೆ ಜೋರಾಗುತ್ತಿದ್ದಂತೆ ಅವರದ್ದೇನೂ ತಪ್ಪಿಲ್ಲವೆಂದ ಫಖರ್ ಜಮಾನ್

|

Updated on: Apr 05, 2021 | 8:20 PM

ಡಿ ಕಾಕ್ ಅವರ ವರ್ತನೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದದ್ದು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಿಟ್ಟುಕೊಂಡಿದೆ. ಮೋಸದಿಂದ ಜಮಾನ್​ ಅವರನ್ನು ರನೌಟ್​ ಮಾಡಿದರೆಂದು ಡಿ ಕಾಕ್​ರನ್ನು ಜರಿಯಲಾಗುತ್ತಿದೆ.

ಕ್ವಿಂಟನ್ ಡಿ ಕಾಕ್ ಮಾಡಿದ್ದು ಸರಿಯಾ ಎಂಬ ಚರ್ಚೆ ಜೋರಾಗುತ್ತಿದ್ದಂತೆ ಅವರದ್ದೇನೂ ತಪ್ಪಿಲ್ಲವೆಂದ ಫಖರ್ ಜಮಾನ್
ಕ್ವಿಂಟನ್​ ಡಿ ಕಾಕ್ ಅವರು ಫಖರ್ ಜಮಾನ್​ರನ್ನು ರನೌಟ್​ ಮಾಡಿದ್ದು
Follow us on

ಪಾಕಿಸ್ತಾನದ ಆರಂಭ ಆಟಗಾರ ಫಖರ್ ಜಮಾನ್ ರವಿವಾರದಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಎರಡನೇ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ನಿಸ್ಸಂದೇಹವಾಗಿ ಇದುವರೆಗೆ ದಾಖಲಾಗಿರುವ ಶ್ರೇಷ್ಠ ಇನ್ನಿಂಗ್ಸ್​ಗಳಲ್ಲಿ ಒಂದನ್ನು ಆಡಿದರು. ಒಂದು ದಿನದ ಪಂದ್ಯಗಳಲ್ಲಿ ತಮ್ಮ ವೃತ್ತಿಬದುಕಿನ ಎರಡನೇ ದ್ವಿಶತಕ ಬಾರಿಸಿ, ಒಡಿಐಗಳಲ್ಲಿ ರೋಹಿತ್ ಶರ್ಮ ನಂತರ ವಿಶ್ವದ ಕೇವಲ ಎರಡನೇ ಬ್ಯಾಟ್ಸ್​ಮನ್ ಎಂಬ ಖ್ಯಾತಿಗೆ ಪಾತ್ರರಾಗಲಿದ್ದ ಜಮಾನ್ ದುರದೃಷ್ಟವಶಾತ್ ರನೌಟ್​ ಆದರು. ಆದರೆ ಅವರು ಔಟಾದ ಬಗೆ ಅಥವಾ ಔಟ್ ಮಾಡಿದ ರೀತಿ ಭಾರಿ ವಿವಾದವನ್ನು ಸೃಷ್ಟಿಸಿದೆ. ದಕ್ಷಿಣ ಆಫ್ರಿಕಾದ ವಿಕೆಟ್-ಕೀಪರ್ ಕ್ವಿಂಟನ್ ಡಿ ಕಾಕ್ ಅವರು ಜಮಾನ್ ಅವರನ್ನ ಮೋಸದಿಂದ ರನೌಟ್​ ಮಾಡಿದರು ಎಂಬ ಟೀಕೆಗಳು ಕೇಳಿ ಬಂದ ನಂತರ ಮೆರಿಲಿಬೋನ್ ಕ್ರಿಕೆಟ್​ ಕ್ಲಬ್ (ಎಮ್​ಸಿಸಿ) ಮಧ್ಯಪ್ರವೇಶ ಮಾಡಿದೆಯಾದರೂ ಘಟನೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ, ಅಂಪೈರ್​ಗಳು ಮತ್ತು ಮ್ಯಾಚ್ ರೆಫರಿಗೆ ಬಿಟ್ಟಿದ್ದು ಎಂದು ಹೇಳಿದೆ.

ಜಮಾನ್ ಅವರ ಅತ್ಯಮೋಘ ಇನ್ನಿಂಗ್ಸ್ ಕೊನೆ ಓವರ್​ನಲ್ಲಿ ಕೊನೆಗೊಂಡಿತು. 49ನೇ ಓವರ್ ಆರಂಭವಾದಾಗ 192 ರನ್ ಗಳಿಸಿ ಆಡುತ್ತಿದ್ದ ಜಮಾನ್ ಮೊದಲ ಎಸೆತವನ್ನು ಲಾಂಗಾಫ್ ಕಡೆ ಆಡಿ ಎರಡನೇ ರನ್​ಗಾಗಿ ಸ್ಟ್ರೈಕರ್ ಎಂಡ್​ ಕಡೆ ವಾಪಸ್ಸು ಓಡುತ್ತಿದ್ದರು. ಚೆಂಡನ್ನು ಐಡೆನ್ ಮಾರ್ಕ್ರಮ್ ಫೀಲ್ಡ್ ಮಾಡಿ ಡಿ ಕಾಕ್ ಕಡೆ ಎಸೆದ ನಂತರ ಜಮಾನ್ ಅವರ ಗಮನ ಬೇರೆಡೆ ಸೆಳೆಯಲು, ನಾನ್-ಸ್ಟ್ರೈಕರ್ ಕಡೆ ಅಂತ ಕೂಗಿದರು. ತಮ್ಮ ಜೊತೆಗಾರ ಎಲ್ಲಿ ರನೌಟ್​ ಅಗಲಿದ್ದಾನೋ ಅಂತ ತಮ್ಮ ಓಟವನ್ನು ನಿಧಾನಗೊಳಿಸಿ ನಾನ್-ಸ್ಟ್ರೈಕರ್ ಕಡೆ ತಿರುಗಿ ನೋಡುತ್ತಿದ್ದಾಗಲೇ ಮಾರ್ಕ್ರಮ್ ಅವರ ಥ್ರೋ ಕಲೆಕ್ಟ್​ ಮಾಡಿದ ಡಿ ಕಾಕ್ ಬೇಲ್ಸ್ ಹಾರಿಸಿ ಜಮಾನ್ ಆವರನ್ನು ರನ್​ಔಟ್ ಮಾಡಿದರು.

ಡಿ ಕಾಕ್ ಅವರ ವರ್ತನೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದದ್ದು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಿಟ್ಟುಕೊಂಡಿದೆ. ಮೋಸದಿಂದ ಜಮಾನ್​ ಅವರನ್ನು ರನೌಟ್​ ಮಾಡಿದರೆಂದು ಡಿ ಕಾಕ್​ರನ್ನು ಜರಿಯಲಾಗುತ್ತಿದೆ. ಈ ಸಂದರ್ಭದಲ್ಲೇ ಎಮ್​ಸಿಸಿ ಸದರಿ ಘಟನೆಗೆ ಸಂಬಂಧಪಟ್ಟ ನಿಯಮವನ್ನು ಟ್ಟಿಟ್ಟರ್​ ಮೂಲಕ ತಿಳಿಸುವ ಪ್ರಯತ್ನ ಮಾಡಿದೆ.

‘ನಿಯಮ 41.5.1 ಪ್ರಕಾರ ಯಾವುದೇ ಪೀಲ್ಡರ್ ಬ್ಯಾಟ್ಸ್​ಮನ್ ಎಸೆತವನ್ನು ಎದುರಿಸಿದ ನಂತರ ಉದ್ದೇಶಪೂರ್ವಕವಾಗಿ ಮಾತಿನಿಂದಾಲೀ, ಕಾರ್ಯದಿಂದಾಗಲೀ ಪಿಚ್​ ಮೇಲಿರುವ ಬ್ಯಾಟ್ಸ್​ಮನ್​ಗಳಲ್ ಗಮನವನ್ನು ಬೇರೆಡೆ ಸೆಳೆಯುವುದು, ಮೋಸ ಮಾಡುವುದು ಇಲ್ಲವೇ ಅವರಿಗೆ ಅಡಚಣೆಯನ್ನುಂಟು ಮಾಡುವುದು ಪ್ರಮಾದವೆನಿಸುತ್ತದೆ’ ಎಂದು ಎಮ್​ಸಿಸಿ ಟ್ವೀಟ್​ ಮಾಡಿದೆ.

ಮತ್ತೊಂದು ಟ್ವೀಟ್​ನಲ್ಲಿ ಎಮ್​ಸಿಸಿ ಹೀಗೆ ಹೇಳಿದೆ:

‘ನಿಯಮ ಇನ್ನೂ ಸ್ಪಷ್ಟವಾಗಿದೆ. ಇಲ್ಲಾಗಿರುವ ಪ್ರಮಾದವು ಬ್ಯಾಟ್ಸ್​ಮನ್​ನನ್ನು ನಿಜ ಆರ್ಥದಲ್ಲಿ ಮೋಸ ಮಾಡಿದ್ದಕ್ಕಿಂತ ಅಂಥ ಒಂದು ಪ್ರಯತ್ನವನ್ನು ಮಾಡಿರುವುದರಿಂದ ಅಸಲಿಗೆ ಏನು ನಡೆಯಿತು ಅನ್ನುವುದರ ಬಗ್ಗೆ ಮೈದಾನದಲ್ಲಿರುವ ಅಂಪೈರ್​ಗಳು ನಿರ್ಧಾರ ತೆಗೆದುಕೊಳ್ಳಬೇಕು. ಮೋಸ ನಡೆದಿದೆ ಅಂತ ಅವರಿಗೆ ಮನವರಿಕೆಯಾದರೆ. ಬ್ಯಾಟ್ಸ್​ಮನ್ ನಾಟ್​ ಔಟ್, 5 ಪೆನಾಲ್ಟಿ ರನ್​ಗಳನ್ನು ಬ್ಯಾಟಿಂಗ್ ತಂಡಕ್ಕೆ ನೀಡಬೇಕು, ಈ ಸಂದರ್ಭದಲ್ಲಿ ಬ್ಯಾಟ್ಸ್​ಮನ್​ಗಳು 2ರನ್ ಓಡಿದ್ದರಿಂದ ಆ ಟೀಮಿಗೆ ಒಟ್ಟಿ 7 ರನ್ ನೀಡಬೇಕು ಮತ್ತು ಯಾರ ಸ್ಟ್ರೈಕ್ ತೆಗೆದುಕೊಳ್ಳಬೇಕೆನ್ನುವ ನಿರ್ಧಾರವನ್ನು ಬ್ಯಾಟ್ಸ್​ಮನ್​ಗಳ ವಿವೇಚನೆಗೆ ಬಿಡಬೇಕು’ ಎಂದು ಹೇಳಿದೆ.

ಸೀಮಿತ ಓವರ್​ಗಳ ಕ್ರಿಕೆಟ್​ಗೆ ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿರುವ ತೆಂಬಾ ಬವುಮಾ ಅವರು ತಮ್ಮ ವಿಕೆಟ್-ಕೀಪರ್​ನನ್ನು ಸಮರ್ಥಿಸಿಕೊಂಡಿದ್ದಾರೆ. ‘ಕ್ವಿನ್ನಿ (ಡಿ ಕಾಕ್) ಬಹಳ ಜಾಣ್ಮೆಯನ್ನು ಪ್ರದರ್ಶಿಸಿದರು. ಅವರು ಮಾಡಿದ್ದು ಕ್ರೀಡಾ ಸ್ಫೂರ್ತಿಯಲ್ಲ ಎಂದು ಕೆಲವರು ಟೀಕಿಸಬಹುದು. ಅದರೆ ಜಮಾನ್ ಟಾರ್ಗೆಟ್​ ಹತ್ತಿರವಾಗುತ್ತಿದ್ದುದ್ದರಿಂದ ಅವರ ವಿಕೆಟ್​ ಪಡೆಯುವುದು ನಮಗೆ ಅತ್ಯವಶ್ಯಕವಾಗಿತ್ತು. ನಾನು ಮತ್ತೊಮ್ಮೆ ಅದನ್ನೇ ಹೇಳುತ್ತೇನೆ, ಕ್ವಿನ್ನಿ ಭಾರೀ ಜಾಣ್ಮೆ ಪ್ರದರ್ಶಿಸಿದರು’ ಎಂದು ಬವೂಮ ಹೇಳಿದ್ದಾರೆ.

‘ಮೈದಾನದಲ್ಲಿ ಪರಿಸ್ಥಿತಿ ನಾವಂದುಕೊಂಡಂತಾಗದೆ ಅದಕ್ಕೆ ತದ್ವಿರುದ್ಧವಾದಾಗ ಬೇರೆ ಉಪಾಯಗಳ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಕ್ವಿನ್ನಿ ಮಾಡಿದ್ದು ಆದನ್ನೇ. ಅವರರು ಯಾವುದೇ ನಿಯಯವನ್ನು ಉಲ್ಲಂಘಿಸದರೆಂದು ನಾನು ಬಾವಿಸುವುದಿಲ್ಲ,’ ಎಂದು ಬವೂಮ ಹೇಳಿದ್ಧಾರೆ. ಜಮಾನ್ ಸಹ ‘ಡಿ ಕಾಕ್ ಅವದ್ದೇನೂ ತಪ್ಪಿಲ್ಲ, ತಪ್ಪೆಲ್ಲ ನಂದೇ’ ಅಂತ ಹೇಳಿದ್ದಾರೆ

‘ತಪ್ಪು ನನ್ನದು. ಜೊತೆ ಆಟಗಾರ ಹ್ಯಾರಿಸ್ ರೌಫ್ ಕ್ರೀಸ್​ ತಲುಪಿದರೋ ಇಲ್ಲವೋ ಅಂತ ನೋಡುವುದರಲ್ಲಿ ನಾನು ಮಗ್ನನಾಗಿದ್ದೆ ಯಾಕೆಂದರೆ ಎರಡನೇ ರನ್​ಗೆ ಅವರು ತುಸು ಲೇಟಾಗಿ ಓಡಲಾರಂಭಿಸಿದ್ದರು. ಅವರು ತೊಂದರೆಯಲ್ಲಿರಬಹುದೆಂದು ನಾನು ಭಾವಿಸಿದ್ದೆ. ಮಿಕ್ಕಿದ್ದೆಲ್ಲಾ ಮ್ಯಾಚ್​ ರೆಫರಿ ಅವರಿಗೆ ಬಿಟ್ಟಿದ್ದು. ಆದರೆ, ನನ್ನ ಪ್ರಕಾರ ಕ್ವಿಂಟನ್ ಡಿ ಕಾಕ್​ ಅವರದ್ದೇನೂ ತಪ್ಪಿಲ್ಲ’ ಎಂದು ಜಮಾನ್ ಹೇಳಿದ್ದಾರೆ.

ಇದನ್ನೂ ಓದಿ: 2011 Cricket World Cup: ಧೋನಿಯ ಆ ಒಂದು ಸಿಕ್ಸರ್​ ವಿಶ್ವಕಪ್ ಗೆಲ್ಲಿಸಲಿಲ್ಲ.. ನನ್ನ ಪ್ರಕಾರ ಯುವಿ ವಿಶ್ವಕಪ್​ನ ನಿಜವಾದ ನಾಯಕ: ಗೌತಮ್ ಗಂಭೀರ್

Published On - 8:18 pm, Mon, 5 April 21