India vs Australia Test Series | ಟೀಂ ಇಂಡಿಯಾಗೆ ಮತ್ತೊಂದು ಆಘಾತ, ಸರಣಿಯಿಂದ ಹೊರಗೆ ಕೆ.ಎಲ್.ರಾಹುಲ್
ಶನಿವಾರದಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸನಿರತರಾಗಿದ್ದ ಕೆ.ಎಲ್.ರಾಹುಲ್ ಎಡ ಮುಂಗೈ ಸ್ನಾಯು ಸೆಳೆತಕ್ಕೊಳಗಾಗಿ ಸರಣಿಯಿಂದ ಹೊರಬಿದ್ದಿದ್ದಾರೆ. ಟೀಮ್ ಇಂಡಿಯಾದ ಆಟಗಾರರು ಗಾಯಗೊಂಡು ಸರಣಿಯಿಂದ ಹೊರಬೀಳುತ್ತಿರುವುದು ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ.
ಗಾಯಾಳುಗಳಿಂದ ಬಸವಳಿದಿರುವ ಟೀಮ್ ಇಂಡಿಯಾಗೆ ಮತ್ತೊಂದು ಆಘಾತ ಎದುರಾಗಿದೆ. ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಸಹ ಈ ಪಟ್ಟಿಗೆ ಸೇರಿದ್ದು ಗಾವಸ್ಕರ್-ಬಾರ್ಡರ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕರ್ನಾಟಕದ ಬ್ಯಾಟ್ಸ್ಮನ್ ಇಷ್ಟರಲ್ಲೇ ಭಾರತಕ್ಕೆ ಹಿಂತಿರುಗಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಮೂರು ವಾರ ಅವಧಿಯ ರಿಹ್ಯಾಬ್ಗೆ ಒಳಗಾಗಲಿದ್ದಾರೆ.
ಬಿಸಿಸಿಐ ಮೂಲಗಳ ಪ್ರಕಾರ ಶನಿವಾರದಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸನಿರತರಾಗಿದ್ದ ರಾಹುಲ್ ಎಡ ಮುಂಗೈನ ಸ್ನಾಯು ಸೆಳೆತಕ್ಕೊಳಗಾದರು. ಅವರ ಗಾಯದ ಸಮಸ್ಯೆಯನ್ನು ರಾಹುಲ್ ಮತ್ತು ಟೀಮ್ ಮ್ಯಾನೇಜ್ಮೆಂಟ್ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ನೋವು ಹೆಚ್ಚುತ್ತಾ ಹೋದಾಗ ಅವರನ್ನು ಕರೆದೊಯ್ದು ಸ್ಕ್ಯಾನ್ ಮಾಡಿಸಲಾಗಿದೆ. ರಾಹುಲ್ಗೆ ಆಗಿರುವ ಗಾಯ ತೀವ್ರ ಸ್ವರೂಪದ್ದು ಮತ್ತು ಅದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಅವರಿಗೆ ಮೂರು ವಾರ ಬೇಕಾಗುತ್ತದೆಂದು ಗೊತ್ತಾದ ನಂತರ ಅವರನ್ನು ಭಾರತಕ್ಕೆ ವಾಪಸ್ಸು ಕಳಿಸುವ ನಿರ್ಧಾರವನ್ನು ಮಂಡಲಿ ತೆಗೆದುಕೊಂಡಿದೆ.
ಟೀಮ್ ಇಂಡಿಯಾದ ಆಟಗಾರರು ಗಾಯಗೊಂಡು ಸರಣಿಯಿಂದ ಹೊರಬೀಳುತ್ತಿರುವುದು ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಮೊದಲ ಟೆಸ್ಟ್ನಲ್ಲಿ ಬ್ಯಾಟಿಂಗ್ ಮಾಡುವಾಗ ಪ್ಯಾಟ್ ಕಮ್ಮಿನ್ಸ್ ಅವರ ಬೌಲಿಂಗ್ನಲ್ಲಿ ಎಡಗೈ ಮೂಳೆ ಮುರಿದುಕೊಂಡ ವೇಗದ ಬೌಲರ್ ಮೊಹಮ್ಮದ್ ಶಮಿ ಸರಣಿಯಿಂದ ಹೊರಬಿದ್ದವರಲ್ಲಿ ಮೊದಲಿಗರಾದರು. ಅದಾದ ಮೇಲೆ ಮೆಲ್ಬರ್ನ್ ಟೆಸ್ಟ್ನಲ್ಲಿ ಮತ್ತೊಬ್ಬ ವೇಗದ ಬೌಲರ್ ಉಮೇಶ್ ಯಾದವ್ ಮೀನಖಂಡದ ಸೆಳೆತಕ್ಕೆ ಒಳಗಾಗಿ ಕುಂಟುತ್ತಾ ಮೈದಾನದಿಂದ ಹೊರನಡೆದರಲ್ಲದೆ ಉಳಿದ ಟೆಸ್ಟ್ಗಳಿಗೂ ಅಲಭ್ಯರಾಗಿಬಿಟ್ಟರು. ಯಾದವ್ ಮತ್ತು ಶಮಿಯನ್ನು ರಿಹ್ಯಾಬ್ ಸಲುವಾಗಿ ಎನ್ಸಿಎಗೆ ಅದಾಗಲೇ ಕಳಿಸಲಾಗಿದೆ.
ಓದುಗರಿಗೆ ನೆನೆಪಿರಬಹುದು, ಟೀಮಿನ ಪ್ರಮುಖ ಮತ್ತು ಅನುಭವಿ ಫಾಸ್ಟ್ ಬೌಲರ್ ಇಶಾಂತ್ ಶರ್ಮಾ ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಆಡವಾಗ ಗಾಯಗೊಂಡವರು ಇದುವರೆಗೆ ಚೇತರಿಸಿಕೊಂಡಿಲ್ಲ. ಈ ಮೂವರ ಅಲಭ್ಯತೆ ಟೀಮ್ ಇಂಡಿಯಾದ ಬೌಲಿಂಗ್ ಶಕ್ತಿಯನ್ನು ಬಹಳ ದುರ್ಬಲಗೊಳಿಸಿದೆ. ಜಸ್ಪ್ರೀತ್ ಬುಮ್ರಾ ಮಾತ್ರ ಟೀಮಿನ ಪ್ರಮುಖ ವೇಗಿಯಾಗಿ ಉಳಿದರುವುದರಿಂದ ಅವರ ಮೇಲೆ ಜಾಸ್ತಿ ಒತ್ತಡ ಬೀಳುವುದು ನಿಶ್ಚಿತವಾಗಿದೆ. ಎರಡನೆ ಟೆಸ್ಟ್ನಲ್ಲಿ ಮೊಹಮ್ಮದ್ ಸಿರಾಜ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ 5 ವಿಕೆಟ್ ಪಡೆದರು. ನೆಟ್ಸ್ ಬೌಲರ್ ಆಗಿ ಟೀಮಿನೊಂದಿಗೆ ಆಸ್ಟ್ರೇಲಿಯಾಗೆ ಬಂದಿದ್ದ ತಂಗರಸು ನಟರಾಜನ್ ಅವರನ್ನು ಯಾದವ್ ಸ್ಥಾನದಲ್ಲಿ ಟೀಮಿಗೆ ಸೇರಿಸಿಕೊಳ್ಳಲಾಗಿದೆ.
ಏತನ್ಮಧ್ಯೆ, ವಿರಾಟ್ ಕೊಹ್ಲಿ ಪಿತೃತ್ವದ ರಜೆ ಪಡೆದು ಮೊದಲ ಟೆಸ್ಟ್ ನಂತರ ಭಾರತಕ್ಕೆ ಮರಳಿದರು. ಅವರು 2020ರಲ್ಲಿ ಒಂದೇ ಒಂದು ಶತಕ ಬಾರಿಸದೆ ಹೋದಾಗ್ಯೂ ನಿಸ್ಸಂದೇಹವಾಗಿ ಅವರು ತಂಡದ ಬ್ವಾಟಿಂಗ್ ಟ್ರಂಪ್ಕಾರ್ಡ್. ಆದರೆ ಮೆಲ್ಬರ್ನ್ ಟೆಸ್ಟ್ನಲ್ಲಿ ಶತಕ ಬಾರಿಸುವುದರೊಂದಿಗೆ, ಅಪ್ರತಿಮವಾಗಿ ಟೀಮನ್ನು ಮುನ್ನಡೆಸಿದ ಅಜಿಂಕ್ಯಾ ರಹಾನೆ, ಮೊದಲ ಟೆಸ್ಟ್ನಲ್ಲಿ ಅವಮಾನಕರ ರೀತಿಯಲ್ಲಿ ಸೋತಿದ್ದ ಭಾರತಕ್ಕೆ ಸಮಾಧಾನಪಟ್ಟುಕೊಳ್ಳುವಂತೆ ಮಾಡಿದರು.
4 ಟೆಸ್ಟ್ಗಳ ಸರಣಿ 1-1 ರಿಂದ ಸಮವಾಗಿದ್ದು ಮೂರನೆ ಪಂದ್ಯ ಸಿಡ್ನಿಯಲ್ಲಿ ಜನೆವರಿ 7 ರಿಂದ ಆರಂಭವಾಗಲಿದೆ.
Published On - 4:04 pm, Tue, 5 January 21