ಮುಂಬೈ: ಫೆಬ್ರವರಿ 14 ರಂದು ಮುಂಬೈನಲ್ಲಿ ನಡೆದ 73 ನೇ ಪೊಲೀಸ್ ಆಹ್ವಾನ ಶೀಲ್ಡ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಎ ಗುಂಪಿನ ಎರಡನೇ ಸುತ್ತಿನಲ್ಲಿ 31 ಎಸೆತಗಳಲ್ಲಿ ಅಜೇಯ 77 ರನ್ ಗಳಿಸಿದ ಅವರು ಬೌಲಿಂಗ್ನಲ್ಲಿ 41 ರನ್‌ಗಳಿಗೆ ಮೂರು ವಿಕೆಟ್ ಪಡೆದರು. ಇದರಿಂದಾಗಿ ಎಂಐಜಿ ಕ್ರಿಕೆಟ್ ಕ್ಲಬ್, ಇಸ್ಲಾಂ ಜಿಮ್ಖಾನಾ ತಂಡವನ್ನು 194 ರನ್‌ಗಳಿಂದ ಸೋಲಿಸಿತು.
ಈ ಪಂದ್ಯಾವಳಿಯನ್ನು ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂಸಿಎ) ಅಡಿಯಲ್ಲಿ ಆಯೋಜಿಸಲಾಗುತ್ತಿದ್ದು ಕೊರೊನಾ ವೈರಸ್‌ನಿಂದ ಉಂಟಾದ ಲಾಕ್‌ಡೌನ್ ನಂತರ ನಗರದ ಮೊದಲ ಕ್ರಿಕೆಟ್ ಸ್ಪರ್ಧೆ ಇದಾಗಿದೆ. 21 ವರ್ಷದ ಅರ್ಜುನ್ ತಮ್ಮ ಅದ್ಭುತ ಇನ್ನಿಂಗ್ಸ್ನಲ್ಲಿ ಐದು ಬೌಂಡರಿ ಮತ್ತು ಎಂಟು ಸಿಕ್ಸರ್ಗಳನ್ನು ಬಾರಿಸಿದರು. ಅಲ್ಲದೆ ಆಫ್ ಸ್ಪಿನ್ನರ್ ಹಶೀರ್ ದಫೆದಾರ್ ಅವರ ಓವರ್‌ನಲ್ಲಿ ಐದು ಸಿಕ್ಸರ್ ಹೊಡೆದರು.
ಅರ್ಜುನ್ ಅವರ ಅದ್ಭುತ ಬ್ಯಾಟಿಂಗ್ ಜೊತೆಗೆ, ಓಪನರ್ ಕೆವಿನ್ ಡಿಎಲ್ಮೆಡಾ (96 ರನ್) ಮತ್ತು ನಾಲ್ಕನೇ ನಂಬರ್ ಬ್ಯಾಟ್ಸ್‌ಮನ್ ಪ್ರಣೀಶ್ ಖಂಡಿಲೆವಾರ್ (112 ರನ್) ಎಂಐಜಿಯ ಅದ್ಭುತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಟಾಸ್ ಗೆದ್ದ ನಂತರ ಎಂಐಜಿ ಬ್ಯಾಟಿಂಗ್ ಮಾಡಲು ನಿರ್ಧರಿಸಿ 45 ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 385 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ಲಾಂ ಜಿಮ್ಖಾನಾ ತಂಡವನ್ನು 41.5 ಓವರ್‌ಗಳಲ್ಲಿ ಕೇವಲ 191 ರನ್‌ಗಳಿಗೆ ಆಲೌಟ್ ಆಯಿತು. ಅರ್ಜುನ್ ಜೊತೆಯಲ್ಲಿ ಅಂಕುಶ್ ಜೈಸ್ವಾಲ್ (31 ರನ್‌ಗೆ 3 ವಿಕೆಟ್) ಮತ್ತು ಶ್ರೇಯಸ್ ಗುರಾವ್ (34 ರನ್‌ಗೆ 3 ವಿಕೆಟ್) ವಿಕೆಟ್ ಪಡೆದು ಮಿಂಚಿದರು.
ಮುಂಬೈನ ಹಿರಿಯ ತಂಡಕ್ಕೆ ಪಾದಾರ್ಪಣೆ
ಅರ್ಜುನ್ ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವ ಮೂಲಕ ಮುಂಬೈ ಹಿರಿಯ ತಂಡಕ್ಕೆ ಪಾದಾರ್ಪಣೆ ಮಾಡಿದರು. ಆದಾಗ್ಯೂ, ಈ ಪಂದ್ಯಾವಳಿಯ ಎರಡು ಪಂದ್ಯಗಳಲ್ಲಿ ಅವರ ಸಾಧನೆ ಸೌಮ್ಯವಾಗಿತ್ತು. ಮುಂಬೈ ತಂಡವು ಐದು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಅದೇ ಸಮಯದಲ್ಲಿ, ವಿಜಯ್ ಹಜಾರೆ ಟ್ರೋಫಿಗೆ ಅರ್ಜುನ್ ತೆಂಡೂಲ್ಕರ್ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ತಂಡದ ಆಯ್ಕೆಗೆ ಮುಂಚಿನ ಅಭ್ಯಾಸ ಪಂದ್ಯಗಳಲ್ಲಿ, ಅವರು ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರಲಿಲ್ಲ. ಈ ಕಾರಣದಿಂದಾಗಿ ಅವರು ತಂಡದಿಂದ ಹೊರಗುಳಿದಿದ್ದರು.
ಫೆಬ್ರವರಿ 18 ರಂದು ಚೆನ್ನೈನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಾಗುವ ಆಟಗಾರರ ಪಟ್ಟಿಯಲ್ಲಿ ಅರ್ಜುನ್ ಹೆಸರೂ ಇದೆ. ಹೀಗಾಗಿ ಅರ್ಜುನ್ ನೀಡಿರುವ ಈ ಅದ್ಭುತ ಪ್ರದರ್ಶನ ಐಪಿಎಲ್ ಹರಾಜಿನಲ್ಲಿ ಪರಿಣಾಮಕಾರಿಯಾಗಬಹುದು.