ಪಾಕ್ ಭಯೋತ್ಪಾದಕನ ಜೊತೆ ಕಾಣಿಸಿಕೊಂಡ ಅರ್ಷದ್ ನದೀಮ್

Arshad Nadeem: ಪ್ಯಾರಿಸ್ ಒಲಿಂಪಿಕ್ಸ್​ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 92.97 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದುಕೊಂಡರೆ, 89.45 ಮೀಟರ್ ಮೂಲಕ ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇನ್ನು ಗ್ರೆನೆಡಾದ ಪೀಟರ್ 88.54 ಮೀಟರ್​ನೊಂದಿಗೆ ಕಂಚಿನ ಪದಕಕ್ಕೆ ಕೊರೊಳೊಡ್ಡಿದರು.

ಪಾಕ್ ಭಯೋತ್ಪಾದಕನ ಜೊತೆ ಕಾಣಿಸಿಕೊಂಡ ಅರ್ಷದ್ ನದೀಮ್
Harris Dar - Arshad Nadeem
Follow us
|

Updated on: Aug 14, 2024 | 1:57 PM

ಪ್ಯಾರಿಸ್ ಒಲಿಂಪಿಕ್ಸ್​ನ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸಂಚಲನ ಸೃಷ್ಟಿಸಿದ ಅರ್ಷದ್ ನದೀಮ್ ಇದೀಗ ಬೇಡದ ಕಾರಣದಿಂದ ಸುದ್ದಿಯಾಗಿದ್ದಾರೆ. ಅದು ಕೂಡ ಭಯೋತ್ಪಾದಕ ಹ್ಯಾರಿಸ್ ದಾರ್ ಜೊತೆ ಕಾಣಿಸಿಕೊಳ್ಳುವ ಮೂಲಕ ಎಂಬುದೇ ಅಚ್ಚರಿ. ಪ್ಯಾರಿಸ್ ಒಲಿಂಪಿಕ್ಸ್​ನ ಭರ್ಜಿ ಎಸೆತದಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಅರ್ಷದ್ ನದೀಮ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಪಾಕಿಸ್ತಾನಿ ಎನಿಸಿಕೊಂಡಿದ್ದರು. ಅದರಲ್ಲೂ 92.97 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಒಲಿಂಪಿಕ್ಸ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದರು.

ಈ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದ ಅರ್ಷದ್ ನದೀಮ್ ಇದೀಗ ತವರಿಗೆ ಹಿಂತಿರುಗಿದ್ದಾರೆ. ಹೀಗೆ ಪಾಕ್​ಗೆ ಮರಳಿದ ಜಾವೆಲಿನ್ ಎಸೆತಗಾರನಿಗೆ ಭರ್ಜರಿ ಸ್ವಾಗತ ಲಭಿಸಿದೆ. ಅಲ್ಲದೆ ಅನೇಕರು ಅರ್ಷದ್ ನದೀಮ್ ಅವರಿಗೆ ವಿವಿಧ ರೀತಿಯ ಉಡುಗೊರೆಗಳನ್ನು ನೀಡುತ್ತಿದ್ದಾರೆ.

ಇವೆಲ್ಲದರ ನಡುವೆ ಅರ್ಷದ್ ನದೀಮ್  ಪಾಕ್ ಭಯೋತ್ಪಾದಕ ಹ್ಯಾರಿಸ್ ದಾರ್ ಜೊತೆ ಕಾಣಿಸಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಕುಖ್ಯಾತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ನಾಯಕನ ಜೊತೆ ಸಂಭ್ರಮಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋದಲ್ಲಿ ಲಷ್ಕರ್ ಭಯೋತ್ಪಾದಕ ಹ್ಯಾರಿಸ್ ದಾರ್​ನೊಂದಿಗೆ ಅರ್ಷದ್ ನದೀಮ್ ಪಕ್ಕದಲ್ಲೇ ಕುಳಿತಿರುವುದು ಕಾಣಬಹುದು. ಅಲ್ಲದೆ ಅರ್ಷದ್ ಅವರನ್ನು ಅಭಿನಂದಿಸುತ್ತಾ ಉಗ್ರ ಹಾಡಿ ಹೊಗಳುತ್ತಿದ್ದಾನೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಒಲಿಂಪಿಕ್ ಪದಕ ವಿಜೇತ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅರ್ಷದ್ ನದೀಮ್-ಹ್ಯಾರಿಸ್ ದಾರ್ ವಿಡಿಯೋ:

ಯಾರು ಈ ಹ್ಯಾರಿಸ್ ದಾರ್?

ಅರ್ಷದ್ ನದೀಮ್ ಹಾಗೂ ಹ್ಯಾರಿಸ್ ದಾರ್ ಜೊತೆಗಿನ ವಿಡಿಯೋ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ತನ್ನ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ಜಗತ್ತಿನ ಅತ್ಯಂತ ಅಪಾಯಕಾರಿ ಭಯೋತ್ಪಾದಕ ಸಂಘಟನೆಗಳಲ್ಲೊಂದಾದ ಲಷ್ಕರ್​ನ ಭಾಗವಾಗಿರುವುದು ಅರ್ಷದ್​ಗೆ ತಿಳಿದಿಲ್ಲವೇ? ಎಂದು ಅನೇಕರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹೆಮ್ಮೆ ತಂದ ಅರ್ಷದ್ ನದೀಮ್​ಗೆ ಎಮ್ಮೆ ಗಿಫ್ಟ್

ಲಷ್ಕರ್-ಎ-ತೊಯ್ಬಾದ ಉಗ್ರ ಸಂಘಟನೆಯ ಹಣಕಾಸು ಕಾರ್ಯದರ್ಶಿಯಾಗಿರುವ ಹ್ಯಾರಿಸ್ ದಾರ್, ಈಗಾಗಲೇ ಪಾಕಿಸ್ತಾನದ ಪೈಸಲಾಬಾದ್ ಸೇರಿದಂತೆ ಅನೇಕ ಕಡೆ ಉಗ್ರ ಚಟುವಟಿಕೆಗಳ ಶಿಬಿರಗಳನ್ನು ಆಯೋಜಿಸಿದ್ದಾರೆ. ಅಷ್ಟೇ ಅಲ್ಲದೆ ವಿಶ್ವಸಂಸ್ಥೆಯ ಕುಖ್ಯಾತ ಭಯೋತ್ಪಾದಕರ ಪಟ್ಟಿಯಲ್ಲೂ ಹ್ಯಾರಿಸ್ ದಾರ್ ಹೆಸರಿದೆ. ಇದಾಗ್ಯೂ ಅರ್ಷದ್ ನದೀಮ್ ಉಗ್ರನೊಂದಿಗೆ ಕಾಣಿಸಿಕೊಂಡಿರುವುದು ಅಚ್ಚರಿಯೇ ಸರಿ.