ಹೆಮ್ಮೆ ತಂದ ಅರ್ಷದ್ ನದೀಮ್‌ಗೆ ಎಮ್ಮೆ ಗಿಫ್ಟ್
Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 92.97 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ಪಾಕಿಸ್ತಾನದ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದುಕೊಂಡರೆ, 89.45 ಮೀಟರ್ ಮೂಲಕ ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಇನ್ನು ಗ್ರೆನೆಡಾದ ಪೀಟರ್ 88.54 ಮೀಟರ್ನೊಂದಿಗೆ ಕಂಚಿನ ಪದಕಕ್ಕೆ ಕೊರೊಳೊಡ್ಡಿದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪಾಕಿಸ್ತಾನದ ಭರ್ಜಿ ಎಸೆತಗಾರ ಅರ್ಷದ್ ನದೀಮ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಪಾಕ್ ಪರ ಪದಕ ಗೆದ್ದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಇದೀಗ ಚಿನ್ನದ ಪದಕದೊಂದಿಗೆ ತವರಿಗೆ ಹಿಂತಿರುಗಿರುವ ನದೀಮ್‌ಗೆ ಭವ್ಯ ಸ್ವಾಗತ ಕೋರಲಾಗಿದೆ. ಈ ಸ್ವಾಗತದೊಂದಿಗೆ ಪಾಕ್ನ ಚಿನ್ನದ ಹುಡುಗನಿಗೆ ಉಡುಗೊರೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಉಡುಗೊರೆಗಳಲ್ಲಿ ಎಲ್ಲರ ಗಮನ ಸೆಳೆದಿದ್ದು ಎಮ್ಮೆಯ ಗಿಫ್ಟ್.
ಹೌದು, ಅರ್ಷದ್ ನದೀಮ್‌ಗೆ ಅವರ ಮಾವ ಮೊಹಮ್ಮದ್ ನವಾಝ್ ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅತ್ತ ಮಾವ ನೀಡಿದ ಉಡುಗೊರೆಯನ್ನು ಅರ್ಷದ್ ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಇದೀಗ ಈ ಗಿಫ್ಟ್ ಸುದ್ದಿಯು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಗೌರವದ ಸೂಚಕ:
ಅಂದಹಾಗೆ ಅರ್ಷದ್ ನದೀಮ್‌ಗೆ ಅವರ ಮಾವ ಎಮ್ಮೆಯನ್ನು ಉಡುಗೊರೆಯಾಗಿ ನೀಡಲು ಮುಖ್ಯ ಕಾರಣ ಅಲ್ಲಿನ ಸಂಪ್ರದಾಯ. ಅವರ ಗ್ರಾಮದಲ್ಲಿ ಎಮ್ಮೆಯನ್ನು ಉಡುಗೊರೆಯಾಗಿ ನೀಡುವುದು ಅತ್ಯಂತ ಮೌಲ್ಯಯುತ ಮತ್ತು ಗೌರವದ ಸೂಚಕ.
ಅರ್ಷದ್ ನದೀಮ್ ಯಾವಾಗಲೂ ತಮ್ಮ ಪರಂಪರೆಯನ್ನು ಗೌರವಿಸುವ ವ್ಯಕ್ತಿ. ತಾನು ನಡೆದು ಬಂದ ಹಾದಿಯ ಬಗ್ಗೆ ಹೆಮ್ಮೆ ಪಡುತ್ತಾನೆ. ಅಷ್ಟೇ ಅಲ್ಲದೆ ಈ ಹಿಂದೆಯೇ ಯಶಸ್ಸಿನ ಉತ್ತುಂಗಕ್ಕೇರಿದರೂ ಅವರು ಯಾವತ್ತೂ ತಮ್ಮ ಹಳ್ಳಿಯನ್ನು ತೊರೆದಿಲ್ಲ. ಈಗಲೂ ತನ್ನ ಹೆತ್ತವರು ಮತ್ತು ಸಹೋದರರೊಂದಿಗೆ ಹಳ್ಳಿಯಲ್ಲೇ ವಾಸಿಸುತ್ತಿದ್ದಾರೆ. ಹೀಗಾಗಿಯೇ ಅವರಿಗೆ ಗೌರವ ಸೂಚಿಸಲು ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದೇವೆ ಎಂದು ಮಾವ ಮೊಹಮ್ಮದ್ ನವಾಝ್ ತಿಳಿಸಿದ್ದಾರೆ.
ಮೊಹಮ್ಮದ್ ನವಾಝ್ ಅವರಿಗೆ 4 ಗಂಡು ಮತ್ತು 3 ಹೆಣ್ಣು ಮಕ್ಕಳಿದ್ದು, ಅದರಲ್ಲಿ ಕಿರಿಯ ಮಗಳು ಆಯೇಷಾಳನ್ನು ಅರ್ಷದ್ ನದೀಮ್ ಮದುವೆಯಾಗಿದ್ದಾರೆ. ತನ್ನ ಕಿರಿಯ ಮಗಳನ್ನು ನದೀಮ್‌ಗೆ ಮದುವೆ ಮಾಡಲು ನಿರ್ಧರಿಸಿದಾಗ, ಅವರು ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಇದಾಗ್ಯೂ ನದೀಮ್ ಮೊದಲಿನಿಂದಲೂ ಜಾವೆಲಿನ್ ಕ್ರೀಡೆಯ ಬಗ್ಗೆ ತುಂಬಾ ಒಲವು ಹೊಂದಿದ್ದರು. ಅಲ್ಲದೆ ಗದ್ದೆಗಳಲ್ಲಿ ಜಾವೆಲಿನ್ ಎಸೆಯುವುದನ್ನು ಅಭ್ಯಾಸ ಮಾಡುತ್ತಿದ್ದರು.
ಇದನ್ನೂ ಓದಿ: Aman Sehrawat: ಒಲಿಂಪಿಕ್ಸ್‌ನಲ್ಲಿ ಹೊಸ ಇತಿಹಾಸ ಬರೆದ ಅಮನ್ ಸೆಹ್ರಾವತ್
ಇದೀಗ ಕಠಿಣ ಪರಿಶ್ರಮದ ಫಲವಾಗಿ ಅರ್ಷದ್ ನದೀಮ್ ಒಲಿಂಪಿಯಾಡ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನ ಜಾವೆಲಿನ್ ಥ್ರೋನಲ್ಲಿ 92.97 ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಅತೀ ದೂರ ಭರ್ಜಿ ಎಸೆದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
Published On - 1:02 pm, Mon, 12 August 24