ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 92.97 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದ ಅರ್ಷದ್ ನದೀಮ್ ಇದೀಗ ಪಾಕಿಸ್ತಾನದಲ್ಲಿ ಸ್ಟಾರ್ ಎನಿಸಿಕೊಂಡಿದ್ದಾರೆ. ಪಾಕಿಸ್ತಾನದ ಪ್ರತಿಯೊಂದು ಮಾಧ್ಯಮಗಳು ಕೂಡ ಅರ್ಷದ್ ಅವರನ್ನು ಸಂದರ್ಶಿಸಲು ನಾ ಮುಂದೆ ತಾ ಮುಂದೆ ಎಂಬಂತೆ ಪೈಪೋಟಿಗೆ ಬಿದ್ದಿವೆ. ಇದಕ್ಕೆ ಕಾರಣವೂ ಇದ್ದು, ಅಧಿಕ ಸವಲತ್ತುಗಳಿಲ್ಲದೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನದೀಮ್ ಪಾಕಿಸ್ತಾನದ ಅದೇಷ್ಟೋ ವರ್ಷಗಳ ಪದಕದ ಬರವನ್ನು ನೀಗಿಸಿದರು. ಹೀಗಾಗಿ ನದೀಮ್ ಮೇಲೆ ಪಾಕಿಸ್ತಾನದಲ್ಲಿ ಬಹುಮಾನಗಳ ಮಳೆಯೇ ಹರಿಯುತ್ತಿದೆ. ಅದರಲ್ಲಿ ಎಲ್ಲರಿಗೂ ಕುತೂಹಲ ಮೂಡಿಸಿದ ಬಹುಮಾನವೆಂದರೆ, ನದೀಮ್ ಅವರ ಮಾವ ನದೀಮ್ ಅವರಿಗೆ ಒಂದು ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದು. ತಮ್ಮ ಮಾವನವರಿಂದ ಎಮ್ಮೆಯನ್ನು ಉಡುಗೊರೆಯಾಗಿ ಪಡೆದಿದ್ದ ನದೀಮ್ ಇದೀಗ ಸಂದರ್ಶನವೊಂದರಲ್ಲಿ ಆ ಉಡುಗೊರೆಯ ಬಗ್ಗೆ ತಮ್ಮ ಮಾವನರನ್ನು ವ್ಯಂಗ್ಯ ಮಾಡಿದ್ದಾರೆ.
ವಾಸ್ತವವಾಗಿ ಅಲ್ಲಿನ ಸಂಪ್ರದಾಯದ ಪ್ರಕಾರ, ಎಮ್ಮೆಯನ್ನು ಉಡುಗೊರೆಯನ್ನಾಗಿ ನೀಡುವುದು ಪದ್ಧತಿಯಾಗಿದೆ. ಹೀಗಾಗಿ ಅರ್ಷದ್ ಅವರಿಗೆ ಅವರ ಮಾವ ಎಮ್ಮೆಯನ್ನು ಉಡುಗೊರೆಯನ್ನಾಗಿ ನೀಡಿದ್ದರು. ಆದರೆ ಇದೀಗ ಅರ್ಷದ್ ನದೀಮ್ ತನ್ನ ಪತ್ನಿಯೊಂದಿಗೆ ಪಾಕಿಸ್ತಾನಿ ಪತ್ರಕರ್ತರಿಗೆ ನೀಡಿರುವ ಸಂದರ್ಶನದ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅವರು ತಮ್ಮ ಮಾವ ನೀಡಿರುವ ಉಡುಗೊರೆಯ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ.
ವಾಸ್ತವವಾಗಿ ಪಾಕಿಸ್ತಾನದ ಪತ್ರಕರ್ತರೊಬ್ಬರು ಉಡುಗೊರೆಯಾಗಿ ಪಡೆದ ಎಮ್ಮೆ ಬಗ್ಗೆ ಅರ್ಷದ್ ಬಳಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ತಮಾಷೆಯಾಗಿ ಉತ್ತರಿಸಿರುವ ನದೀಮ್, ಎಮ್ಮೆ ಬದಲು 5-6 ಎಕರೆ ಜಮೀನು ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದಿದ್ದಾರೆ. ದೇವರ ದಯೆಯಿಂದ ನಮ್ಮ ಮಾವನವರು ಉಳ್ಳವರಾಗಿದ್ದು, ಎಮ್ಮೆಯ ಬದಲು ಜಮೀನನ್ನು ಉಡುಗೊರೆಯನ್ನಾಗಿ ನೀಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ತಮ್ಮ ಮಾವನವರನ್ನು ಗೇಲಿ ಮಾಡಿದ್ದಾರೆ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
Arshad Nadeem’s reaction on his father gifting him a buffalo after winning the Gold medal 😂😂😂
He wanted 5-6 acre plot from his father-in-law and not a buffalo. Man, he’s so simple 😭❤️ #Paris2024 pic.twitter.com/EzRv68GyAl
— Farid Khan (@_FaridKhan) August 16, 2024
ಅರ್ಷದ್ ನದೀಮ್ ಅವರ ಮಾವ ಮುಹಮ್ಮದ್ ನವಾಜ್ ಅವರಿಗೆ ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮಕ್ಕಳಿದ್ದಾರೆ. ಇದು ಅವರ ಸಮುದಾಯದ ಹಳೆಯ ಸಂಪ್ರದಾಯವಾಗಿರುವುದರಿಂದ ಅರ್ಷದ್‌ಗೆ ಎಮ್ಮೆಯನ್ನು ಉಡುಗೊರೆಯನ್ನಾಗಿ ನೀಡಿರುವುದಾಗಿ ಮಾವ ಮುಹಮ್ಮದ್ ನವಾಜ್ ಹೇಳಿಕೊಂಡಿದ್ದಾರೆ. ಇನ್ನು ಜಾವೆಲಿನ್ ಥ್ರೋನಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಯಶಸ್ಸಿನ ಹೊರತಾಗಿಯೂ, ನದೀಮ್ ತನ್ನ ಪೋಷಕರು ಮತ್ತು ಸಹೋದರರೊಂದಿಗೆ ಪಂಜಾಬ್‌ನ ಖನೇವಾಲ್‌ನಲ್ಲಿಯೇ ವಾಸಿಸುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ