India vs Australia Test Cricket 2020 | ಪಂತ್ ಕೆಟ್ಟ ವಿಕೆಟ್​ಕೀಪರ್, ಸಹಾ ಉತ್ತಮ್ ಬ್ಯಾಟ್ಸ್​ಮನ್ ಅಲ್ಲ ಎಂಬ ವಾತಾವರಣ ಸೃಷ್ಟಿಸಲಾಗಿದೆ: ಚೋಪ್ರಾ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 23, 2020 | 1:26 PM

ಮೊದಲ ಟೆಸ್ಟ್ ಆಡಿದ ಭಾರತ ತಂಡದಲ್ಲಿ ಒಬ್ಬೇ ಒಬ್ಬ ಎಡಗೈ ಆಟಗಾರನಿಲ್ಲದೆ ಹೋಗಿದ್ದು ದುಬಾರಿಯಾಯಿತೆಂದು ಭಾವಿಸುವ ಮಾಜಿ ಓಪನರ್ ಮತ್ತು ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಎರಡನೇ ಟೆಸ್ಟ್​ನಲ್ಲಿ ವೃದ್ಧಿಮಾನ್ ಸಹಾ ಸ್ಥಾನದಲ್ಲಿ ರಿಷಬ್ ಪಂತ್​ರನ್ನು ಆಡಿಸಬೇಕೆಂದು ಹೇಳುತ್ತಾರೆ.

India vs Australia Test Cricket 2020 | ಪಂತ್ ಕೆಟ್ಟ ವಿಕೆಟ್​ಕೀಪರ್, ಸಹಾ ಉತ್ತಮ್ ಬ್ಯಾಟ್ಸ್​ಮನ್ ಅಲ್ಲ ಎಂಬ ವಾತಾವರಣ ಸೃಷ್ಟಿಸಲಾಗಿದೆ: ಚೋಪ್ರಾ
ವೃದ್ಧಿಮಾನ್ ಸಹಾ ಮತ್ತು ರಿಷಭ್ ಪಂತ್
Follow us on

ಬಾಕ್ಸಿಂಗ್ ಡೇ ಟೆಸ್ಟ್​ಗೆ ಬಹಳ ದಿನಗಳೇನೂ ಉಳಿದಿಲ್ಲ. ಆದರೆ, ಈ ಪಂದ್ಯಕ್ಕೆ ಟೀಮ್ ಇಂಡಿಯಾದ ಕಾಂಪೊಸಿಷನ್ ಕುರಿತು ಭಾರತದಾದ್ಯಂತ ಚರ್ಚೆಗಳು ನಡೆಯುತ್ತಿವೆ. ನಾಯಕ ವಿರಾಟ್ ಕೊಹ್ಲಿ ಹೆರಿಗೆಗೆ ಮುಂಚೆ ತಮ್ಮ ಪತ್ನಿಯನ್ನು ಸೇರಿಕೊಳ್ಳಲು ಅಸ್ಟ್ರೇಲಿಯಾದಿಂದ ಹೊರಬಿದ್ದಿದ್ದಾರೆ. ತಂಡದ ಪ್ರಮುಖ ಬೌಲರ್ ಮೊಹಮ್ಮದ್ ಶಮಿ ಮುಂಗೈ ಮೂಳೆ ಮರಿದುಕೊಂಡು ಸರಣಿಯಿಂದ ಈಗಾಗಲೇ ಹೊರಗಿದ್ದಾರೆ. ಅಡಿಲೇಡ್ ಟೆಸ್ಟ್​ನಲ್ಲಿ ಶೋಚನೀಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡ ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ.

ಮೊದಲ ಟೆಸ್ಟ್​ನಲ್ಲಿ ಉಳಿದವರಂತೆ ರನ್ ಗಳಿಸಲು ವಿಫಲರಾದ ವಿಕೆಟ್​ಕೀಪರ್ ವೃದ್ಧಿಮಾನ್ ಸಹಾರನ್ನು ಎರಡನೆ ಟೆಸ್ಟ್​ಗೆ ಟೀಮಿನಿಂದ ಕೈಬಿಟ್ಟು ರಿಷಭ್ ಪಂತ್ ಅವರನ್ನು ಆಡಿಸಬೇಕೆಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಪಂತ್ ಪರ ಬ್ಯಾಟ್​ ಮಾಡುತ್ತಿರುವವರು ಅವರು ಸಹಾಗಿಂತ ಉತ್ತಮ ಬ್ಯಾಟ್ಸ್​ಮನ್ ಎಂದು ವಾದಿಸುತ್ತಿದ್ದಾರೆ. ಆದರೆ, ಸಹಾ ಉತ್ತಮ ವಿಕೆಟ್​ಕೀಪರ್ ಎಂದು ಹೇಳುವವರ ಸಂಖ್ಯೆಯೇನೂ ಕಮ್ಮಿಯಿಲ್ಲ.

ಯಾರು ಉತ್ತಮರು ಈ ಇಬ್ಬರಲ್ಲಿ?

ಭಾರತದ ಮಾಜಿ ಓಪನರ್ ಮತ್ತು ಕ್ರೀಡೆಯನ್ನು ಅತ್ಯಂತ ಸೂಕ್ಷ್ಮವಾಗಿ ವಿಶ್ಲೇಷಿಸುವ ಆಕಾಶ್ ಚೋಪ್ರಾ, ಉತ್ತಮ ಬ್ಯಾಟ್ಸ್​ಮನ್, ಉತ್ತಮ ವಿಕೆಟ್​ಕೀಪರ್ ಎಂಬ ವಾದಗಳನ್ನೇ ಅಲ್ಲಗಳೆಯುತ್ತಾರೆ. ಪಂತ್ ವಿಕೆಟ್ ಹಿಂದೆ ಹಲವಾರು ಅದ್ಭುತವಾದ ಕ್ಯಾಚ್​ಗಳನ್ನು ಹಿಡಿದಿದ್ದಾರೆ ಮತ್ತು ಸಹಾ ಟೆಸ್ಟ್ ಕ್ರಿಕೆಟ್​ನಲ್ಲಿ ಶತಕ ಬಾರಿಸಿದ್ದಾರೆ ಎಂದು ಚೋಪ್ರಾ ಹೇಳಿದ್ದಾರೆ.

ಕ್ರಿಕೆಟ್​ ವಿಶ್ಲೇಷಕ ಆಕಾಶ್ ಚೋಪ್ರಾ

ಫೆಸ್​ಬುಕ್​ನಲ್ಲಿ ಸಹಾ ಮತ್ತು ಪಂತ್-ಇಬ್ಬರಲ್ಲಿ ಯಾರು ಉತ್ತಮರು ಎಂದು ಕ್ರಿಕೆಟ್ ಪ್ರೇಮಿಯೊಬ್ಬನ ಪ್ರಶ್ನೆಗೆ ಉತ್ತರಿಸಿರುವ ಚೋಪ್ರಾ,‘ಇವರಿಬ್ಬರಲ್ಲಿ ಪಂತ್ ಉತ್ತಮ್ ಬ್ಯಾಟ್ಸ್​ಮನ್, ಸಹಾ ಉತ್ತಮ ವಿಕೆಟ್​ಕೀಪರ್ ಅಂತ ಚರ್ಚೆ ಬಹಳ ದಿನಗಳಿಂದ ನಡೆಯುತ್ತಿದೆ ಹಾಗೂ ಸಹಾ ಕೆಟ್ಟ ಬ್ಯಾಟ್ಸ್​ಮನ್ ಮತ್ತು ಪಂತ್ ಕೆಟ್ಟ ವಿಕೆಟ್​ಕೀಪರ್ ಎಂಬ ವಾತಾವರಣವನ್ನು ಸೃಷ್ಟಿಸಲಾಗಿದೆ. ನಾನು ಹೇಳುವುದಿಷ್ಟೆ, ಪಂತ್ ಹಲವಾರು ಅಮೋಘ ಕ್ಯಾಚ್​ಗಳನ್ನು ಹಿಡಿದಿರುವುದು ನಾವು ನೋಡಿಲ್ಲವೇ? ಕಳೆದ ಬಾರಿ ಭಾರತದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅತಿಹೆಚ್ಚು ಕ್ಯಾಚ್​ಗಳನ್ನು ಪಂತ್ ಹಿಡಿದಿದ್ದರು. ಹಾಗೆಯೇ, ಸಹಾ ಟೆಸ್ಟ್ ಕ್ರಿಕೆಟ್​ನಲ್ಲಿ ಶತಕಗಳನ್ನು ಬಾರಿಸಿದ್ದಾರೆ. ಅವರ ನಡುವೆ ಅಂಥ ಹೋಲಿಕೆಯೇ ಸಲ್ಲದು’ ಎಂದಿದ್ದಾರೆ.

ರಿಷಭ್ ಪಂತ್

‘ಎರಡನೇ ಟೆಸ್ಟ್​ನಲ್ಲಿ ಕೊಹ್ಲಿ ಸ್ಥಾನಕ್ಕೆ ರಾಹುಲ್ ಅಥವಾ ಶುಭ್​ಮನ್ ಗಿಲ್ ಬರುತ್ತಾರೆ. ಟೀಮಿನ ಓಪನರ್​ಗಳಿಬ್ಬರೂ ಮೊದಲ ಟೆಸ್ಟ್​ನಲ್ಲಿ ಫೇಲಾದರು. ಅದರರ್ಥ ಟೀಮಿನ ಬ್ಯಾಟಿಂಗ್ ದುರ್ಬಲಗೊಂಡಂತೆಯೇ. ಈ ಹಿನ್ನೆಲೆಯಲ್ಲಿ ಪಂತ್​ರನ್ನು ಆಡಿಸುವುದು ಉತ್ತಮ ನಿರ್ಧಾರವಾಗಲಿದೆ. ಸಹಾ ಕಳಪೆ ಬ್ಯಾಟ್ಸ್​ಮನ್ ಎಂದು ನಾನು ಸರ್ವಥಾ ಹೇಳುತ್ತಿಲ್ಲ. ಅವರನ್ನೇ ಮುಂದುವರಿಸಿದರೆ ನಾನು ಖಂಡಿತ ಟೀಕಿಸಲಾರೆ. ಆದರೆ, ಪಂತ್ ಎಡಚನಾಗಿರುವುದು ಭಾರತಕ್ಕೆ ಪ್ರಯೋಜನಕಾರಿಯಾಗಲಿದೆ. ಭಾರತದ ಬ್ಯಾಟಿಂಗ್ ಲೈನಪ್​ನಲ್ಲಿ ಒಬ್ಬ ಎಡಗೈ ಆಟಗಾರನೂ ಆಡಿಲೇಡ್ ಪಂದ್ಯದಲ್ಲಿ ಇರಲಿಲ್ಲ. ಟೀಮಿನ ಬ್ಯಾಟಿಂಗ್ ವೈಫಲ್ಯಕ್ಕೆ ಅದೂ ಒಂದು ಕಾರಣವಾಗಿರಬಹುದು. ಹಾಗೆಯೇ, ಟೀಮ್ ಇಂಡಿಯಾಗೆ ಒಬ್ಬ ಗೇಮ್ ಚೇಂಜರ್​ನ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ನಾನು ಪಂತ್ ಅವರನ್ನು ಆಡಿಸಬೇಕೆಂದು ಹೇಳುತ್ತೇನೆಯೇ ಹೊರತು, ಒಬ್ಬ ಉತ್ತಮ ಮತ್ತೊಬ್ಬ ಕಳಪೆ ಅಂತ ಯಾವತ್ತೂ ಹೇಳಲಾರೆ’ ಎಂದು ಚೋಪ್ರಾ ಹೇಳಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿವಾದಾತ್ಮಕ ಬೌಲರ್ ಮೊಹಮ್ಮದ್ ಆಮಿರ್