ಇಂಗ್ಲೆಂಡ್ ಕ್ರಿಕೆಟ್ ಟೀಮಿನ ಶ್ರೀಲಂಕಾ ಪ್ರವಾಸದ ಮೇಲೆ ಪರಿಣಾಮ ಬೀರಿರುವ ರೂಪಾಂತರಗೊಂಡ ವೈರಸ್
ರೂಪಾಂತರಗೊಂಡು ಮನುಕುಲವನ್ನು ಮತ್ತೊಮ್ಮೆ ಹೆದರಿಸುತ್ತಿರುವ ಕೊರೊನಾ ವೈರಸ್ ಕ್ರೀಡಾ ಚಟುವಟಿಕೆಗಳ ಮೇಲೂ ತನ್ನ ಪ್ರಭಾವ ಬೀರಲಾರಂಭಿಸಿದೆ.
ಯುನೈಟೆಡ್ ಕಿಂಗ್ಡಮ್ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್ ಸೃಷ್ಟಿಸಿರುವ ತಲ್ಲಣ ಕುರಿತು ಶ್ರೀಲಂಕಾ ಕ್ರಿಕೆಟ್ ಮಂಡಳಿಯ (ಎಸ್ ಎಲ್ ಬಿ) ವೈದ್ಯಕೀಯ ಟೀಮ್ ಅತಂಕಗೊಂಡಿದೆಯಾದರೂ ಜನೆವರಿಯಲ್ಲಿ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ಎರಡು-ಟೆಸ್ಟ್ ಪಂದ್ಯಗಳ ಸರಣಿ ನಿಗದಿಯಂತೆ ನಡೆಯುವ ಬಗ್ಗೆ ಎರಡೂ ದೇಶಗಳ ಮಂಡಳಿಗಳು ಸಕಾರಾತ್ಮಕ ಮನೋಭಾವ ತಳೆದಿವೆ.
ಈ ಹೊಸ ಬೆಳವಣಿಗೆಯಿಂದಾಗಿ ಇಂಗ್ಲೆಂಡ್ ಅಟಗಾರರು ಸ್ವದೇಶದಿಂದ ಹೊರಡುವ ಮೊದಲು ಅಥವಾ ಶ್ರೀಲಂಕಾದಲ್ಲಿ ಕಾಲಿಟ್ಟ ನಂತರ ಹೆಚ್ಚುವರಿ ಮತ್ತು ಕಠಿಣ ವೈದ್ಯಕೀಯ ಶಿಷ್ಟಾಚಾರಗಳಿಗೆ ಒಳಗಾಗಬೇಕಾಗಿದೆ. ಮಂಗಳವಾರ ಎಸ್ ಎಲ್ ಬಿ ಆಧಿಕಾರಿಗಳು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಅಧಿಕಾರಿಗಳೊಂದಿಗೆ ಈ ವಿಷಯ ಕುರಿತು ಚರ್ಚೆ ನಡೆಸಿದರು. ಅವರ ನಡುನೆ ನಡೆದ ಮಾತುಕತೆಯ ಮುಖ್ಯಾಂಶ ಸೋಂಕು ಇಂಗ್ಲಿಷ್ ಆಟಗಾರರಿಂದ ಶ್ರೀಲಂಕಾದ ಆಟಗಾರರರಿಗೆ ಹಬ್ಬುವುದನ್ನು ಹೇಗೆ ತಡೆಗಟ್ಟಬಹುದು ಎನ್ನುವುದರ ಮೇಲೆ ಕೇಂದ್ರೀಕೃತವಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.
‘‘ಇಂಗ್ಲೆಂಡ್ ಪ್ರವಾಸವನ್ನು ರದ್ದು ಮಾಡುವ ಕುರಿತು ನಾವು ಚರ್ಚಿಸಲಿಲ್ಲ. ಆದರೆ ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದ್ದೇಯಾದರೆ, ಸರಣಿಯನ್ನು ರದ್ದುಗೊಳಿಸುವ ಅವಶ್ಯಕತೆ ಇಲ್ಲ. ನಾವು ಹೆಚ್ಚು ಜಾಗ್ರತೆ ವಹಿಸುವ ಅಗತ್ಯವಿದೆಯೇ ಹೊರತು ಪ್ರವಾಸವನ್ನು ಮುಂದೂಡುವ ಇಲ್ಲವೇ ರದ್ದು ಮಾಡುವ ಪ್ರಮೇಯ ಉದ್ಭವಿಸುವುದಿಲ್ಲ’’ ಎಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದ ಶ್ರೀಲಂಕಾ ಟೀಮಿನ ಫಿಸಿಯೋ ಡಾ. ದಮಿಂದಾ ಅತ್ತನಾಯಿಕೆ ಕೊಲಂಬೋದಲ್ಲಿ ಇಂದು ಸುದ್ದಿಗಾರರಿಗೆ ತಿಳಿಸಿದರು.
ಈಗಾಗಲೇ ನಿಗದಿಯಾಗಿರುವ ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿ ಪ್ರಕಾರ ಆ ದೇಶದ ಆಟಗಾರರು ಮತ್ತು ಸಪೋರ್ಟ್ ಸ್ಟಾಫ್ ಬಾಡಿಗೆ ವಿಮಾನವೊಂದರ ಮೂಲಕ ಜನೆವರಿ 2ರಂದು ಕೊಲಂಬೊದಲ್ಲಿ ಬಂದಿಳಿಯಲಿದ್ದಾರೆ. ನಂತರ ಅವರನ್ನು ಮೂರು ದಿನಗಳ ಕಾಲ ಪ್ರತ್ಯೇಕವಾದ ಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ. ಅದಾದ ಮೇಲೆ ಅವರ ಪಿಸಿಆರ್ ಟೆಸ್ಟ್ಗಳು ನೆಗೆಟಿವ್ ಬಂದಲ್ಲಿ ಮಾತ್ರ ಅವರು ಗುಂಪಾಗಿ ಅಭ್ಯಾಸ ಶುರುಮಾಡಲು ಅನುಮತಿ ನೀಡಲಾಗುತ್ತದೆ. ಹತ್ತು ದಿನಗಳ ನಂತರವೇ ಇಂಗ್ಲಿಷ್ ಆಟಗಾರರಿಗೆ ಶ್ರೀಲಂಕಾದ ಅಟಗಾರರೊಂದಿಗೆ ಬೆರೆಯಲು ಅವಕಾಶ ಸಿಗಲಿದೆ. ಈ ಶಿಷ್ಟಾಚಾರಗಳನ್ನು ಅನೂಚಾನಾಗಿ ಪಾಲಿಸಲಾಗುವುದೆಂದು ಅತ್ತನಾಯಿಕೆ ಹೇಳಿದರು.