ಭಾರತದ ಮೊಟಾರ್ ರೇಸಿಂಗ್ ಇತಿಹಾಸದಲ್ಲಿ ಹೊಸ ಭಾಷ್ಯ ಬರೆಯಲಿರುವ ರೇಸಿಂಗ್ ಟೀಮ್ ಇಂಡಿಯಾ
ಎಲ್ಲ ಭಾರತೀಯರನ್ನೊಳಗೊಂಡ ರೇಸಿಂಗ್ ಟೀಮ್ ಇಂಡಿಯ ಫೆಬ್ರುವರಿಯಲ್ಲಿ ನಡೆಯಲಿರುವ ಏಷ್ಯನ್ ಲಿ ಮ್ಯಾನ್ಸ್ ರೇಸಿಂಗ್ ಸ್ಫರ್ಧೆಯಲ್ಲಿ ಭಾಗವಹಿಸಿ ಇತಿಹಾಸ ಸೃಷ್ಟಿಸಲಿದೆ. ಟೀಮಿನ ನಾಯಕತ್ವವನ್ನು ಖ್ಯಾತ ಉದ್ಯಮಿ ಮತ್ತು ಖುದ್ದು ರೇಸಿಂಗ್ ಡ್ರೈವರ್ ಆಗಿರುವ ಗೌತಮ್ ಸಿಂಘಾನಿಯ ವಹಿಸಲಿದ್ದಾರೆ.
ಫೆಬ್ರುವರಿ ತಿಂಗಳು ಅಬು ಧಾಬಿಯಲ್ಲಿ ನಡೆಯಲಿರುವ2021 ಏಷ್ಯನ್ ಲಿ ಮ್ಯಾನ್ಸ್ ರೇಸಿಂಗ್ ಸ್ಫರ್ಧೆಯಲ್ಲಿ ಭಾಗವಹಿಸುವ ಮೂಲಕ ಜಾಗತಿಕಮಟ್ಟದ ರೇಸಿಂಗ್ ಈವೆಂಟೊಂದರಲ್ಲಿ ಪಾಲ್ಗೊಂಡ ಮೊದಲ ಎಲ್ಲ-ಭಾರತೀಯರನ್ನೊಳಗೊಂಡ ಟೀಮ್ ಎಂಬ ಕೀರ್ತಿಗೆ ಭಾರತದ ವಿಖ್ಯಾತ ರೇಸಿಂಗ್ ಚಾಂಪಿಯನ್ ನಾರಾಯಣ ಕಾರ್ತಿಕೇಯನ್ ಅವರೊನ್ನಳಗೊಂಡ ರೇಸಿಂಗ್ ಟೀಮ್ ಇಂಡಿಯ ಭಾಜನವಾಗಲಿದೆ.
ಕಾರ್ತಿಕೇಯನ್ ಜತೆ ಅರ್ಜುನ್ ಮೈನಿ, ನವೀನ್ ರಾವ್ ಇರುವ ಭಾರತದ ತಂಡ 2021 ಕೊನೆಭಾಗದಲ್ಲಿ ನಡೆಯಲಿರುವ 24 ಅವರ್ಸ್ ಲಿ ಮ್ಯಾನ್ಸ್ ರೇಸಿಂಗ್ ಸ್ಫರ್ಧೆಯ ಮೇಲೂ ಕಣ್ಣಿಟ್ಟಿದೆ.
ಅಬು ಧಾಬಿಯಲ್ಲಿ ನಡೆಯುವ ರೇಸಿಂಗ್ ಚಾಂಪಿಯನ್ಶಿಪ್ ಎರಡು ಲೆಗ್ನದ್ದಾಗಿರಲಿದೆ. ಮೊದಲ ಲೆಗ್ ಫೆಬ್ರುವರಿ 5 ಮತ್ತು 6 ರಂದು ನಡೆದರೆ ಎರಡನೆಯದ್ದು ಅದೇ ತಿಂಗಳಿನ 19 ಮತ್ತು 20 ರಂದು ನಡೆಯಲಿದೆ. ಮೂಲಗಳ ಪ್ರಕಾರ ಈ ರೇಸಿಂಗ್ ಚಾಂಪಿಯನ್ಶಿಪ್ ಒಟ್ಟು 4 ರೇಸ್ಗಳನ್ನೊಳಗೊಂಡಿದ್ದು ವಾರಾಂತ್ಯಗಳಲ್ಲಿ ಎರಡೆರಡು ರೇಸ್ಗಳು ನಡೆಯಲಿವೆ.
ಭಾರತದ ತಂಡ ಒಆರ್ಈಸಿಎ-07 ಎಲ್ಎಮ್ಪಿ ಕ್ಲಾಸ್ 2 ಕಾರನ್ನು ಓಡಿಸಲಿದ್ದು ಅದಕ್ಕೆ ತಾಂತ್ರಿಕ ನೆರವನ್ನು ಚಾಂಪಿಯನ್ಶಿಪ್ ಗೆದ್ದಿರುವ ಅಲ್ಗಾರ್ವೆ ಪ್ರೊ ರೇಸಿಂಗ್ ಟೀಮ್ ಒದಗಿಸಲಿದೆ.
‘‘ಲಿ ಮ್ಯಾನ್ಸ್ ರೇಸೀಂಗ್ ಈವೆಂಟ್ನಲ್ಲಿ ಭಾಗವಹಿಸಲು ಬಹಳ ಸಮಯದಿಂದ ನಾನು ಜಾತಕಪಕ್ಷಿಯಂತೆ ಕಾಯುತ್ತಿದ್ದೆ. ನನ್ನ ಬಹು ದಿನಗಳ ಕನಸು ಈಗ ಕೈಗೂಡುತ್ತಿದೆ. ನನ್ನ ರೇಸಿಂಗ್ ಕರೀಯರ್ನ ಅತ್ಯಂತ ರೋಮಾಂಚಕ ಸ್ಫರ್ಧೆ ಇದಾಗಲಿದೆ,’’ ಎಂದು ಭಾರತದ ಮೊಟ್ಟಮೊದಲ ಫಾರ್ಮುಲಾ ವನ್ ಡ್ರೈವರ್ ಕಾರ್ತಿಕೇಯನ್ ಸುದ್ದಿಸಂಸ್ಥೆಯೊಂದರ ಜತೆ ಮಾತಾಡುತ್ತಾ ಹೇಳಿದ್ದಾರೆ.
ವರ್ಲ್ಡ್ ಮೊಟಾರ ಸ್ಪೋರ್ಟ್ ಕೌನ್ಸಿಲ್ ಭಾಗವಾಗಿರುವ ಎಫ್ಐಎ (ಫೆಡರೇಶನ್ ಇಂಟರ್ನ್ಯಾಶನೇಲ್ ಡಿ ಐ’ಆಟೊಮೊಬೀಲ್) ಸದಸ್ಯರಾಗಿರುವುದರ ಜತೆಗೆ ಖುದ್ದು ಒಬ್ಬ ಪರಿಣಿತ ರೇಸಿಂಗ್ ಡ್ರೈವರ್ ಕೂಡ ಆಗಿರುವ ಖ್ಯಾತ ಉದ್ಯಮಿ ಗೌತಮ್ ಸಿಂಘಾನಿಯ ಭಾರತ ರೇಸಿಂಗ್ ಟೀಮಿನ ನೇತೃತ್ವವಹಿಸಲಿದ್ದಾರೆ.
‘‘ಎಲ್ಲ ಭಾರತೀಯರನ್ನೊಳಗೊಂಡ ರೇಸಿಂಗ್ ಟೀಮಿನ ನಾಯಕತ್ವ ವಹಿಸಿರುವುದು ನನಗೆ ಸಂದ ಗೌರವವಾಗಿದೆ. ಭಾರತದ ತಂಡ ಅದ್ಭುತವಾಗಿದೆ. ಈ ಸರಣಿಯಲ್ಲಿ ಉತ್ಕೃಷ್ಟ ಪ್ರದರ್ಶನ ನೀಡಿ ಭಾರತದ ಮೊಟಾರ್ ಸ್ಪೋರ್ಟ್ ಇತಿಹಾಸದಲ್ಲಿ ಶಾಶ್ವತ ಛಾಪು ಮೂಡಿಸುವ ಗುರಿ ನಮ್ಮ ಟೀಮಿಗಿದೆ,’’ ಎಂದು ಸಿಂಘಾನಿಯಾ ಹೇಳಿದ್ದಾರೆ.
ಬೆಂಗಳೂರಿನ ನಿವಾಸಿಯಾಗಿರುವ ಅರ್ಜುನ್ ಮೈನಿ ಅವರ ಫಾರ್ಮುಲಾ ರೇಸಿಂಗ್ ಅನುಭವ ಭಾರತದ ಟೀಮಿಗೆ ಬಹಳ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.