India vs Australia Test Cricket 2020 | ರಹಾನೆ ಮೇಲೆ ದೊಡ್ಡ ಜವಾಬ್ದಾರಿ ಹೊರೆಸಿ ಸ್ವದೇಶಕ್ಕೆ ವಾಪಸ್ಸು ಹೊರಟ ಕೊಹ್ಲಿ
ಮೊದಲ ಟೆಸ್ಟ್ ಹೀನಾಯವಾಗಿ ಸೋತು ಕಂಗಾಲಾಗಿರುವ ಟೀಮ್ ಇಂಡಿಯಾದ ಸದಸ್ಯರನ್ನು ಉಳಿದ ಮೂರು ಪಂದ್ಯಗಳನ್ನಾಡಲು ಬಿಟ್ಟು ನಾಯಕ ವಿರಾಟ್ ಕೊಹ್ಲಿ ಇಂದು ಸ್ವದೇಶದತ್ತ ಪ್ರಯಾಣ ಬೆಳೆಸಿದರು. ಅವರ ಗೈರುಹಾಜರಿಯಲ್ಲಿ ಅಜಿಂಕ್ಯಾ ರಹಾನೆ ಟೀಮಿನ ನಾಯಕತ್ವ ವಹಿಸಲಿದ್ದಾರೆ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಪಿತೃತ್ವದ ರಜೆ ಪಡೆದಿರುವ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಂದು ಸ್ವದೇಶದ ಕಡೆ ತೆರಳುವ ವಿಮಾನ ಹತ್ತಿದರು. ಹೊರಡುವ ಮೊದಲು ಕೊಹ್ಲಿ ಅಡಿಲೇಡ್ ಟೆಸ್ಟ್ನಲ್ಲಿ ಅವಮಾನಕರ ಸೋಲು ಅನುಭವಿದ ತಮ್ಮ ತಂಡದ ಇತರ ಸದಸ್ಯರೊಂದಿಗೆ ಕೆಲ ಸಲಹೆಗಳನ್ನು ಹಂಚಿಕೊಂಡರು.
ಟೀಮ್ ಇಂಡಿಯಾ ಮೂಲದ ಪ್ರಕಾರ 2014ರಿಂದ ನಾಯಕತ್ವದ ಹೊರೆ ಹೊತ್ತಿರುವ ಕೊಹ್ಲಿ ತಮ್ಮ ಜೊತೆ ಆಟಗಾರರಿಗೆ, ಮೊದಲ ಟೆಸ್ಟ್ ಸೋಲಿನಿಂದ ಧೃತಿಗೆಡದೆ, ಅದರ ಕಹಿಯನ್ನು ಮರೆತು ಹೋರಾಟದ ಮನೋಭಾವ ತೋರುತ್ತಾ ಸರಣಿಯಲ್ಲಿ ಮುಂದುವರಿಯುವಂತೆ ಹೇಳಿದರು. ಇದುವರೆಗೆ ಪ್ರದರ್ಶಿಸಿರುವ ನಿರ್ಭೀತಿಯ ಆಟವನ್ನು ಮುಂದಿನ ಪಂದ್ಯಗಳಲ್ಲಿ ಆಡುವಂತೆಯೂ ಕೊಹ್ಲಿ ಹೇಳಿದರೆನ್ನಲಾಗಿದೆ.
ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್ನಲ್ಲಿ ಅಧಿಕಾರಯುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ದುರದೃಷ್ಟಕರ ರೀತಿಯಲ್ಲಿ ರನೌಟ್ ಆಗುವ ಮೊದಲು 74 ರನ್ ಬಾರಿಸಿದ್ದರು. ಅವರ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ ಟೀಮನ್ನು ಮುನ್ನಡೆಸಲಿದ್ದಾರೆ. ಎರಡು ರಾಷ್ಟ್ರಗಳ ನಡುವೆ ಎರಡನೆ ಟೆಸ್ಟ್ ಡಿಸೆಂಬರ್ 26ರಿಂದ ಮೆಲ್ಬರ್ನ್ನಲ್ಲಿ ನಡೆಯಲಿದೆ.
ಭಾರತದ ಆಸ್ಟ್ರೇಲಿಯಾ ಪ್ರವಾಸ ಆರಂಭಗೊಳ್ಳುವ ಮೊದಲೇ ಕೊಹ್ಲಿ ಪಿತೃತ್ವದ ರಜೆ ತೆಗೆದುಕೊಳ್ಳಲು ಬಿಸಿಸಿಐನಿಂದ ಅನುಮತಿ ಪಡೆದಿದ್ದರು. ಅವರ ತಾರಾ ಪತ್ನಿ ಅನುಷ್ಕಾ ಶರ್ಮ ಜನೆವರಿಯಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ನ್ಯೂಜಿಲೆಂಡ್ ಟೀಮಿನ ನಾಯಕ ಕೇನ್ ವಿಲಿಯಮ್ಸನ್ ಸಹ ಮೊನ್ನೆಯಷ್ಟೇ ಪಿತೃತ್ವದ ರಜೆ ಪಡೆದು ಹೆರಿಗೆ ಸಮಯದಲ್ಲಿ ತಮ್ಮ ಪತ್ನಿ ಸಾರಾ ಅವರೊಂದಿಗಿರಲು, ವೆಸ್ಟ್ ಇಂಡೀಸ್ ವಿರುದ್ಧ ಜಾರಿಯಲ್ಲಿರುವ ಟೆಸ್ಟ್ ಸರಣಿಯ ಎರಡನೆ ಪಂದ್ಯ ತಪ್ಪಿಸಿಕೊಂಡಿದ್ದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದಾಗಿದೆ. ಡಿಸೆಂಬರ್ 15 ರಂದು ಸಾರಾ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದರು.
ಈಗಾಗಲೇ ಅಸ್ಟ್ರೇಲಿಯಾ ತಲುಪಿರುವ ರೋಹಿತ್ ಶರ್ಮ ಸಿಡ್ನಿಯಲ್ಲಿ ಎರಡು ವಾರಗಳ ಕಠಿಣ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಅವರು ಮೂರನೆ ಟೆಸ್ಟ್ನಲ್ಲಿ ಆಡುವ ನಿರೀಕ್ಷೆಯಿದೆ. ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಸರಣಿಯಿಂದ ಹೊರಬಿದ್ದಿರುವುದು ರಹಾನೆಗೆ ದೊಡ್ಡ ಸಮಸ್ಯೆಯಾಗಲಿದೆ. ಮೆಲ್ಬರ್ನ್ ಟೆಸ್ಟ್ನಲ್ಲಿ ಭಾರತ 5 ಬೌಲರ್ಗಳೊಂದಿಗೆ ಮೈದಾಕ್ಕಿಳಿಯುವ ಯೋಚನೆ ಮಾಡುತ್ತಿದೆ.
Published On - 10:30 pm, Tue, 22 December 20