ಕ್ಯಾನ್ಬೆರಾ: ಭಾರತ-ಆಸ್ಟ್ರೇಲಿಯಾ ನಡುವಣ ನಿಗದಿತ 50 ಓವರ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಗೆಲುವಿನ ನಗೆ ಬೀರಿ, ಮುಂದಿನ ಟೆಸ್ಟ್ ಸರಣಿಗಾಗಿ ಒಂದಿಷ್ಟು ಆತ್ಮವಿಶ್ವಾಸವನ್ನು ಬಗಲಿಗೇರಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಭಾರತ 5 ವಿಕೆಟ್ನಷ್ಟಕ್ಕೆ 302 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 49.3 ಓವರ್ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು 289 ರನ್ ಗಳಿಸಿತು.
ಈ ಪಂದ್ಯದಲ್ಲಿ 63 ರನ್ ಗಳಿಸಿ, ಸಚಿನ್ ತೆಂಡುಲ್ಕರ್ಗಿಂತಲೂ ಬೇಗ 12,000 ರನ್ ಗಳಿಸಿದ ಶ್ರೇಯಕ್ಕೆ ವಿರಾಟ್ ಕೊಹ್ಲಿ ಪಾತ್ರರಾದರು. ಆದರೆ, ಫಸ್ಟ್ ಡೌನ್ ಬಂದ ಅವರು 63 ರನ್ ಗಳಿಸಲು ಎದುರಿಸಿದ್ದು 78 ಬಾಲ್. ಕೊಹ್ಲಿ ಮಾಡಿದ ದಾಖಲೆಗಾಗಿ ಅವರನ್ನು ಅಭಿನಂದಿಸಿದ ಅಭಿಮಾನಿಗಳು, ಸಂಕಷ್ಟ ಸಮಯದಲ್ಲಿ ತಂಡಕ್ಕೆ ಆಸರೆಯಾಗಲಿಲ್ಲ ಎಂದು ಬೇಸರವನ್ನೂ ವ್ಯಕ್ತಪಡಿಸಿದರು.
ಭಾರತದ ಗೆಲುವಿಗೆ ಭದ್ರಬುನಾದಿ ಹಾಕಿದವರು ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜ. ಹಾರ್ದಿಕ್ 76 ಬಾಲ್ಗಳಲ್ಲಿ ಬಿರುಸಿನ 92 ರನ್ ಸಿಡಿಸಿದರೆ, ರವೀಂದ್ರ 50 ಬಾಲ್ಗಳಲ್ಲಿ ರನ್ ಬಾರಿಸಿದರು.
ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಮತ್ತು ಶುಭಮನ್ ಗಿಲ್ ಜೋಡಿ ಹೆಚ್ಚುಹೊತ್ತು ನಿಲ್ಲಲಿಲ್ಲ. ಆಶ್ಟನ್ ಅಗರ್ಗೆ ಎಲ್ಬಿಡಬ್ಲ್ಯು ಆಗುವ ಮೊದಲು 39 ಬಾಲ್ಗೆ 33 ರನ್ ಗಳಿಸಿದ ಶುಭಮನ್ ಗಿಲ್ ಆಟ ಪ್ರೇಕ್ಷಕರಿಗೆ ತುಸು ಖುಷಿಕೊಟ್ಟಿತು. ಆದರೆ ಶಿಖರ್ ಧವನ್ರಿಂದ ನಿರೀಕ್ಷೆಯ ಆಟ ಬರಲಿಲ್ಲ. 27 ಬಾಲ್ ಎದುರಿಸಿದ ಧವನ್, 16 ರನ್ ಹೊಡೆದು ಆಶ್ಟನ್ ಅಗರ್ಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು.
ಕೆ.ಎಲ್.ರಾಹುಲ್ (5) ಸಹ ಆಶ್ಟನ್ ಅಗರ್ ಅವರ ಎಲ್ಬಿಡಬ್ಸ್ಯು ಬಲೆಗೆ ಬಿದ್ದರು. ಶ್ರೇಯಸ್ ಅಯ್ಯರ್ (19 ರನ್) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಈ ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪೇರಿಸಿದ್ದ ಬೃಹತ್ ಮೊತ್ತಕ್ಕೆ ಇಂದು ಭಾರತ ಗಳಸಿದ ಮೊತ್ತವನ್ನು ಹೋಲಿಸಿದರೆ ಕಡಿಮೆ ಎನಿಸುವುದು ಸಹಜ. ಆದರೆ ಮೊದಲ ಎರಡು ಪಂದ್ಯಗಳು ನಡೆದದ್ದು ಸಿಡ್ನಿ ಕ್ರೀಡಾಂಗಣದಲ್ಲಿ, ಇಂದಿನ ಪಂದ್ಯ ನಡೆದದ್ದು ಕ್ಯಾನ್ಬೆರಾದಲ್ಲಿ. ಪಿಚ್ ವರ್ತನೆಯು ಬೌಲರ್ಗಳ ಕ್ಷಮತೆಯ ಪರಿಣಾಮ ಬೀರುತ್ತವೆ ಎನ್ನುವುದನ್ನು ನಾವು ಗಮನದಲ್ಲಿರಿಸಿಕೊಳ್ಳಬೇಕು.
ಈ ಪಂದ್ಯದ ಗೆಲುವಿನಿಂದ ಭಾರತ ಪಾಳಯದ ಆತ್ಮವಿಶ್ವಾಸ ವೃದ್ಧಿಸಿದ್ದಂತೂ ದಿಟ. ಇದು ಭಾರತ ತಂಡದ ಆಟಗಾರರ ದೇಹಭಾಷೆಯಲ್ಲಿಯೂ ಎದ್ದು ಕಾಣುತ್ತಿತ್ತು.
ಸಿಡ್ನಿಯಲ್ಲಿ ನ.27 ಮತ್ತು ನ.29ರಂದು ನಡೆದಿದ್ದ ಇದೇ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾವೇ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಬೃಹತ್ ಮೊತ್ತ ಪೇರಿಸಿತ್ತು. ಭಾರತ ಸೋಲನುಭವಿಸಿತ್ತು. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 375 ರನ್ಗಳ ಗುರಿ ನೀಡಿತ್ತು. ಭಾರತಕ್ಕೆ 308 ರನ್ ಗಳಿಸಲಷ್ಟೇ ಶಕ್ತವಾಯಿತು. ಸೋಲಿನ ಅಂತರ 66 ರನ್.
2ನೇ ಪಂದ್ಯದಲ್ಲಿ 390 ರನ್ಗಳ ಬೆಟ್ಟದಂಥ ಸವಾಲನ್ನೇ ಆಸ್ಟ್ರೇಲಿಯಾ ಮುಂದೊಡ್ಡಿತ್ತು. ಇದನ್ನು ಬೆನ್ನತ್ತಿದ್ದ ಭಾರತ ತಂಡಕ್ಕೆ ಗಳಿಸಲು ಸಾಧ್ಯವಾಗಿದ್ದು 338 ರನ್ ಮಾತ್ರ. ಸೋಲಿನ ಅಂತರ 51 ರನ್ ಆಗಿತ್ತು.