ಅಹಮದಾಬಾದ್: ಅಕ್ಷರ್ ಪಟೇಲ್ ಅವರನ್ನು ಕೇವಲ ಟಿ-20 ಸ್ಪೆಷಲಿಸ್ಟ್ ಅಂತ ಕೆಲವರು ಜರಿದರು, ಇನ್ನೂ ಕೆಲವರು ಟೀಮಿನ ಪ್ರಮುಖ ಸ್ಪಿನ್ನರ್ ರವೀಂದ್ರ ಜಡೇಜಾ ಗಾಯಗೊಂಡ ಕಾರಣ ಅವರಂತೆಯೇ ಎಡಗೈ ಸ್ಪಿನ್ನರ್ ಆಗಿರುವ ಪಟೇಲ್ಗೆ ಅವಕಾಶ ಸಿಕ್ಕಿದೆ ಅಂದರು. ಯಾರು ಏನಾದರೂ ಅಂದುಕೊಳ್ಳಲಿ ನನ್ನ ಪ್ರತಿಭೆ ನನ್ನೊಂದಿಗಿರಲಿದೆ, ನನಗೆ ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ, ಈ ಅವಕಾಶವನ್ನು ನಾನು ವ್ಯರ್ಥ ಹೋಗಲು ಬಿಡಲಾರೆ ಎಂಬ ಸಂಕಲ್ಪದೊಂದಿಗೆ ಸಾಂಪ್ರದಾಯಿಕ ಕ್ರಿಕೆಟ್ಗೆ ಚೆನೈಯಲ್ಲಿ ಪದಾರ್ಪಣೆ ಮಾಡಿದ ಪಟೇಲ್ ಕೇವಲ 2 ಟೆಸ್ಟ್ಗಳಲ್ಲಿ ಮಾಡಿರುವ ಕರಾಮತ್ತು ನೋಡಿದರೆ ಇವರನ್ನು ನಖಶಿಖಾಂತ ದ್ವೇಷಿಸುವ ವೈರಿಯೂ ‘ಭಲೇ ಪಟೇಲ್!’ ಎನ್ನದಿರಲಾರ. ಹೌದು, ಗುಜರಾತಿನ ನೀಳಕಾಯದ ಅಕ್ಷರ್ ಪಟೇಲ್ ಟೆಸ್ಟ್ ಕ್ರಿಕೆಟ್ ತಮ್ಮ ಆಗಮನವನ್ನು ಯಾರೂ ಊಹಿಸದ ರೀತಿಯಲ್ಲಿ ಘೋಷಿಸಿದ್ದಾರೆ.
ನಮಗೆಲ್ಲ ಗೊತ್ತಿದೆ. ಇಂಗ್ಲೆಂಡ್ ವಿರುದ್ಧ ಈಗ ಜಾರಿಯಲ್ಲಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿದ ಪಟೇಲ್, ಚೆನೈ ಮತ್ತು ಇಂದು ಎರಡೇ ದಿನಗಳಲ್ಲಿ ಮೊಟೆರಾ ಸ್ಟೇಡಿಯಂನಲ್ಲಿ ಕೊನೆಗೊಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ನೀಡಿರುವ ಪ್ರದರ್ಶನಗಳಾದರೂ ಎಂಥವು! ಚೆನ್ನೈನಲ್ಲಿ 2/40 ಮತ್ತು 5/60 ಹಾಗೂ ಮೊಟೆರಾದಲ್ಲಿ 6/38 ಮತ್ತು 5/32. ವಿಶ್ವದ ಯಾವುದೇ ಬೌಲರ್ ಇಂಥ ಪ್ರದರ್ಶನಗಳನ್ನು ತನ್ನ ಮೊದಲ ಎರಡು ಟೆಸ್ಟ್ಗಳಲ್ಲಿ ನೀಡುತ್ತೇನೆಂದು ಕನಸು ಕಂಡಿರಲಾರ.
ಮೊಟೆರಾದಲ್ಲಿ ಪಟೇಲ್ ಒಂದು ವಿಶೇಷವಾದ ದಾಖಲೆಯನ್ನು ನಿರ್ಮಿಸಿದ್ದಾರೆ. ಎರಡೂ ಇನ್ನಿಂಗ್ಸ್ಗಳಲ್ಲಿ ಅವರು ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದಿರುವುದು ಒಂದು ಅಪೂರ್ವ ದಾಖಲೆಯೇ. ಪಿಂಕ್-ಬಾಲ್ ಟೆಸ್ಟ್ ಪಂದ್ಯವೊಂದರಲ್ಲಿ ಅತಿಹೆಚ್ಚು ವಿಕೆಟ್ಗಳನ್ನು ಪಡೆದ ದಾಖಲೆಯನ್ನೂ ಪಟೇಲ್ ಗುರುವಾರದಂದು ತಮ್ಮ ಹೆಸರಿಗೆ ಬರೆದುಕೊಂಡರು. ಈ ಟೆಸ್ಟ್ನಲ್ಲಿ ಅವರು 70 ರನ್ಗಳಿಗೆ 11 ವಿಕೆಟ್ ಪಡೆದರು. ಮೂರನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆಯುವ ಮೂಲಕ ಅವರು ಸತತವಾಗಿ ಮೂರು ಬಾರಿ ಈ ಸಾಧನೆ ಮಾಡಿದಂತಾಗಿದೆ.
ತಮ್ಮ ಸಾಧನೆಯ ಮೂಲಕ ಪಟೇಲ್ ಟ್ವಿಟ್ಟರ್ಗೆ ಬಿಡುವಿಲ್ಲದ ಕೆಲಸ ನೀಡಿದ್ದಾರೆ. ಖ್ಯಾತ ಕಾಮೆಂಟೇಟರ್ ಹರ್ಷ ಭೋಗ್ಲೆ, ‘ಅಕ್ಷರ್ ಪಟೇಲ್ ಅವರಿಂದ ಅಮೋಘ ಸಾಧನೆ. ಕಂಡೀಷನ್ಗಳನ್ನು ಅದ್ಭುತವಾಗಿ ಬಳಸಿಕೊಂಡರು. ಚೆಂಡು ಸ್ಪಿನ್ ಅಗುತ್ತಿರುವುದನ್ನು ಕೂಡಲೇ ಕಂಡುಕೊಂಡ ಅವರ ಸ್ಕಿಡ್ ಅಗುವ ಎಸೆತಗಳು ಅಪಾಯಕಾರಿಯಾಗಲಿವೆ ಎನ್ನುವುದು ವಿದಿತವಾಗಿತ್ತು’ ಎಂದಿದ್ದಾರೆ.
Outstanding from Axar Patel. Used the conditions perfectly. And the moment he got one to turn early, his quicker, skiddier ball was going to be the danger.
— Harsha Bhogle (@bhogleharsha) February 24, 2021
ಶ್ರೇಯಾ ಹೆಸರಿನ ಅಭಿಮಾನಿಯೊಬ್ಬರು, ‘ಟೀಮನ್ನು ಅಕ್ಷರ್ ಪಟೇಲ್ ಡ್ರೆಸಿಂಗ್ ರೂಮಿಗೆ ಲೀಡ್ ಮಾಡಿದ ದೃಶ್ಯ ಕ್ರಿಕೆಟ್ನ ಅದ್ಭುತ ಸನ್ನಿವೇಶಗಳಲ್ಲಿ ಒಂದಾಗಿತ್ತು, ನಾಯಕ ಕೊಹ್ಲಿ ಮತ್ತು ಟೀಮಿನ ಸದಸ್ಯರು ಅವರನ್ನು ಬೆಂಬಲಿಸಿದ ರೀತಿ ಮನಸ್ಸಿಗೆ ಉಲ್ಲಾಸವನ್ನು ನೀಡಿತು’ ಎಂದು ಹೇಳಿ ಆ ದೃಶ್ಯದ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
Axar Patel leading India to the dressing room. One of the best sights of the match. Captain Kohli and co. supporting the talented bowler♥️ pic.twitter.com/6JrKMZZmoJ
— Shreya❤? (@criccrazyshreya) February 24, 2021
ಮೊಟೆರಾ ಕ್ರೀಡಾಂಗಣದಲ್ಲಿ ಅಕ್ಷರ್ ಪಟೇಲ್ ಮತ್ತೂ ಕೆಲ ದಾಖಲೆಗಳನ್ನು ಸೃಷ್ಟಿಸಿದರು. ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ಗಳನ್ನು ಪಡೆದ ಭಾರತದ 28 ನೇ ಬೌಲರ್ ಮತ್ತು ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ ಭಾರತದ 8ನೇ ಬೌಲರ್ ಎನಿಸಿಕೊಂಡರು. ಹಾಗೆಯೇ, ಮೊಟರಾ ಮೈದಾನದಲ್ಲಿ 10 ವಿಕೆಟ್ ಪಡೆದ 5ನೇ ಬೌಲರ್ ಮತ್ತು ಅನಿಲ್ ಕುಂಬ್ಳೆ ನಂತರ ಈ ಸಾಧನೆಯನ್ನು ಪುನರಾವರ್ತಿಸಿದ ಭಾರತದ 2ನೇ ಬೌಲರ್ ಪಟೇಲ್ ಆಗಿರುತ್ತಾರೆ. ಹಾಗೆಯೇ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಪಡೆದ 9ನೇ ಎಡಗೈ ಸ್ಪಿನ್ನರ್ ಎನಿಸಿಕೊಂಡರು.
ಮೊಟೆರಾ ಮೈದಾನದಲ್ಲಿ ಗುರುವಾರದಂದು ಮೂರು ಎಸೆತಗಳಲ್ಲಿ 2 ವಿಕೆಟ್ ಪಡೆದ ಅಕ್ಷರ್ ಪಟೆಲ್ ಕೊಂಚದರಲ್ಲೇ ಹ್ಯಾಟ್ರಿಕ್ ಮಾಡುವ ಸಾಧನೆಯನ್ನು ತಪ್ಪಿಸಿಕೊಂಡರು. ಎರಡನೇ ಇನ್ನಿಂಗ್ಸ್ನಲ್ಲಿ ಅವರು ಜಕ್ ಕ್ರಾಲೀ (0), ಜಾನಿ ಬೇರ್ಸ್ಟೋ (0) ಡಾಮ್ ಸಿಬ್ಲೀ (7), ಜೋ ರೂಟ್ (19) ಮತ್ತು ಬೆನ್ ಫೋಕ್ಸ್ (7) ಅವರ ವಿಕೆಟ್ಗಳನ್ನು ಪಡೆದರು.
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರವೀಂದ್ರ ಜಡೇಜಾ ಅವರು ಪಟೇಲ್ ಅವರ ಬೌಲಿಂಗ್ ಪರಾಕ್ರಮವನ್ನು ಮೆಚ್ಚಿದರೂ ತಮ್ಮ ಸ್ಥಾನದ ಬಗ್ಗೆ ಯೋಚಿಸಿ ಬೆಚ್ಚಿರಬಹುದು! ಆದರೆ, ತಂಡದಲ್ಲಿ ಸ್ಥಾನ ಗಿಟ್ಟಿಸಲು ಆರಂಭವಾಗಿರುವ ಆರೋಗ್ಯಕರ ಸ್ಪರ್ಧೆ ಕ್ರಿಕೆಟ್ ಪ್ರೇಮಿಗಳನ್ನಂತೂ ಖುಷಿಪಡಿಸಿದೆ.
ಇದನ್ನೂ ಓದಿ: India vs England: 3ನೇ ಟೆಸ್ಟ್ ಗೆದ್ದ ಭಾರತ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸು ಇನ್ನೂ ಜೀವಂತ
Published On - 10:46 pm, Thu, 25 February 21