ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಟೆಸ್ಟ್ನಲ್ಲಿ ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ತಂಡ ಹೀನಾಯವಾಗಿ ಸೋತಿತ್ತು. ಈ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ 3-1 ಅಂತರದಲ್ಲಿ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ಅಚ್ಚರಿ ಎಂದರೆ, ಫೈನಲ್ ಟೆಸ್ಟ್ನಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಒಂದೇ ವಾರದಲ್ಲಿ 5 ಕೆಜಿ ತೂಕ ಕಳೆದುಕೊಂಡಿದ್ದಾರಂತೆ.
ನಾಲ್ಕನೇ ಟೆಸ್ಟ್ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 205 ರನ್ ಕಲೆ ಹಾಕಿತ್ತು. ಇದನ್ನು ಬೆನ್ನು ಹತ್ತಿದ್ದ ಭಾರತ 365 ರನ್ ಗಳಿಸಿತ್ತು. ಈ ಮೂಲಕ 160ರನ್ಗಳ ಲೀಡ್ ಲೀಡ್ ಕಾಪಾಡಿಕೊಂಡಿತ್ತು. ಆದರೆ, ಈ ಗುರಿ ಮುಟ್ಟಲಾರದೆ ಇಂಗ್ಲೆಂಡ್ ಇನ್ನೂ 25 ರನ್ ಬೇಕಿರುವಾಗಲೇ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು. ಈ ಸೋಲಿನ ಬಗ್ಗೆ ಬೆನ್ ಸ್ಟೋಕ್ಸ್ ಮಾತನಾಡಿದ್ದಾರೆ.
ಕೊನೆಯ ಟೆಸ್ಟ್ ಪಂದ್ಯ ನಡೆಯುತ್ತಿದ್ದ ದಿನಗಳಲ್ಲಿ ನಾನು ಐದು ಕೆಜಿ ಕಳೆದುಕೊಂಡಿದ್ದೇನೆ. ಡಾಮ್ ಸಿಬ್ಲೆ 4 ಕೆಜಿ, ಆ್ಯಂಡ್ರ್ಯೂಸನ್ 3 ಕೆಜಿ ಕಳೆದುಕೊಂಡಿದ್ದರು. ಹೀಗೆ ಅನೇಕ ಆಟಗಾರರ ತೂಕ ಇಳಿದಿದೆ. ಇಲ್ಲಿಯ ಬಿಸಿಲು ಇದಕ್ಕೆ ಕಾರಣ ಇರಬಹುದು. ಇನ್ನು, ಜ್ಯಾಕ್ ಲೀಚ್ ಹೊಟ್ಟೆ ನೋವಿಗೆ ತುತ್ತಾಗಿ ಹೆಚ್ಚು ಸಮಯವನ್ನು ಟಾಯ್ಲೆಟ್ನಲ್ಲೇ ಕಳೆಯುತ್ತಿದ್ದರು ಎಂದು ಸ್ಟೋಕ್ಸ್ ಬೇಸರ ಹೊರ ಹಾಕಿದ್ದಾರೆ.
ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ನಮ್ಮ ತಂಡ ಕೂಡ ಭಾರತಕ್ಕೆ ಟಫ್ ಪ್ರದರ್ಶನ ನೀಡಲು ಪ್ರಯತ್ನಿಸಿದೆ. ಆದರೆ, ಅದು ವ್ಯರ್ಥವಾಯಿತು ಎಂದು ಹೇಳಿದ್ದಾರೆ. ನಮ್ಮ ತಂಡದಲ್ಲಿ ಅನೇಕರು ಯಂಗ್ಸ್ಟರ್ಗಳಿದ್ದರು. ಅವರದ್ದು ಭಾರತಕ್ಕೆ ಮೊದಲ ಪ್ರವಾಸ. ಹೀಗಾಗಿ, ಅವರಿಗೆ ನಿದ್ದೆ ಸಮಸ್ಯೆಯೂ ಕಾಡಿತ್ತು. ಇದು ಕೂಡ ಸೋಲಲು ಕಾರಣವಿರಬಹುದು ಎಂದು ಬೆನ್ ಸ್ಟೋಕ್ಸ್ ಅಭಿಪ್ರಾಯಪಟ್ಟಿದ್ದಾರೆ.
ಮಾರ್ಚ್ 12ರಿಂದ ಟಿ-20 ಪಂದ್ಯ ಆರಂಭವಾಗಲಿದೆ. ಐದೂ ಮ್ಯಾಚ್ಗಳು ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ನಡೆಯಲಿದೆ. 12,14,16,18,20ರಂದು ಟಿ-20 ಪಂದ್ಯಗಳು ಆರಂಭಗೊಳ್ಳಲಿವೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯನ್ನು ನೋಡಲು 1800 ಕಿ.ಮೀ. ಪ್ರಯಾಣಿಸಿದ ಅಭಿಮಾನಿ!
Published On - 8:35 pm, Tue, 9 March 21