ಕುಸ್ತಿ ಫೆಡರೇಶನ್‌ ಅಮಾನತು; ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದೇನು?

Brij Bhushan Singh: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ನಂತರ ಈ ಬಗ್ಗೆ ಮಾತನಾಡಿದ ಬ್ರಿಜ್ ಭೂಷಣ್ ಶರಣ್ ಸಿಂಗ್, ‘ಈಗ ಕುಸ್ತಿ ಸಂಘಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಪ್ರಸ್ತುತ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಜಯ್ ಸಿಂಗ್ ನನ್ನ ಸಂಬಂಧಿ ಅಲ್ಲ ಎಂದಿದ್ದಾರೆ.

ಕುಸ್ತಿ ಫೆಡರೇಶನ್‌ ಅಮಾನತು; ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದೇನು?
ಬ್ರಿಜ್ ಭೂಷಣ್ ಶರಣ್ ಸಿಂಗ್

Updated on: Dec 24, 2023 | 3:39 PM

ಭಾರತ ಕುಸ್ತಿ ಒಕ್ಕೂಟದ (Wrestling Federation of India) ಮೇಲೆ ಕ್ರೀಡಾ ಸಚಿವಾಲಯದ ಕ್ರಮದ ನಂತರ, ಕುಸ್ತಿ ಅಸೋಸಿಯೇಷನ್​ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ನಂತರ ಈ ಬಗ್ಗೆ ಮಾತನಾಡಿದ ಬ್ರಿಜ್ ಭೂಷಣ್ ಶರಣ್ ಸಿಂಗ್, ‘ಈಗ ಕುಸ್ತಿ ಸಂಘಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಪ್ರಸ್ತುತ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಜಯ್ ಸಿಂಗ್ ನನ್ನ ಸಂಬಂಧಿ ಅಲ್ಲ. ಕುಸ್ತಿ ಸಂಘದಲ್ಲಿ ನನ್ನ ಪಾತ್ರ ಕೊನೆಗೊಂಡಿದೆ. 12 ವರ್ಷಗಳಿಂದ ಕುಸ್ತಿ ಸಂಘದಲ್ಲಿ ನಾನು ಕೆಲಸ ಮಾಡಿದ್ದೇನೆ. ಸದ್ಯ ನಾನು ಕುಸ್ತಿ ಸಂಘದಿಂದ ನಿವೃತ್ತಿ ಹೊಂದಿದ್ದೇನೆ ಮತ್ತು ಈಗ ಕುಸ್ತಿ ಸಂಘಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಎಲ್ಲ ವಿಚಾರವನ್ನು ರಾಜಕೀಯಗೊಳಿಸಿದ್ದಾರೆ

ಮುಂದುವರೆದು ಮಾತನಾಡಿದ ಅವರು, ‘ನಾನು ಲೋಕಸಭೆ ಚುನಾವಣೆ ತಯಾರಿಯಲ್ಲಿ ನಿರತನಾಗಿದ್ದೇನೆ. ಇನ್ನು ಕುಸ್ತಿ ಸಂಘದ ಬಗ್ಗೆ ತೆಗೆದುಕೊಳ್ಳಬೇಕಾದ ನಿರ್ಧಾರವನ್ನು ಆಯ್ಕೆಯಾದವರು ಮಾತ್ರ ತೆಗೆದುಕೊಳ್ಳುತ್ತಾರೆ. ಈಗ ಕುಸ್ತಿ ಸಂಘವು ನ್ಯಾಯಾಲಯದ ಮೊರೆ ಹೋಗುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಹೊಸ ಒಕ್ಕೂಟದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ ಅಥವಾ ಸಂಜಯ್ ಸಿಂಗ್ ನನ್ನ ಸಂಬಂಧಿಯೂ ಅಲ್ಲ. ಈಗ ನಾನು ಕುಸ್ತಿ ಸಂಘದ ಚುನಾವಣೆಗೂ ಸ್ಪರ್ಧಿಸಲು ಹೋಗುತ್ತಿಲ್ಲ. ಅಲ್ಲದೆ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಕೇಸ್ ಕೋರ್ಟ್​ನಲ್ಲಿದೆ. ಕೇಸ್ ಕೋರ್ಟ್​ನಲ್ಲಿರುವುದರಿಂದ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕಾಂಗ್ರೆಸ್, ಆಪ್, ತುಕ್ಡೇ ತುಕ್ಡೇ ಗ್ಯಾಂಗ್ ಸೇರಿಕೊಂಡು ಆರೋಪಿಸುತ್ತಿವೆ. ಒಟ್ಟಾರೆ ಎಲ್ಲ ವಿಚಾರವನ್ನು ರಾಜಕೀಯಗೊಳಿಸಿದ್ದಾರೆ ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.

Bajrang Punia: ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ ಕುಸ್ತಿಪಟು ಬಜರಂಗ್ ಪುನಿಯಾ

ಚುನಾವಣಾ ಫಲಿತಾಂಶ ಹೀಗಿತ್ತು

ಬ್ರಿಜ್ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಅವರ ಸಮಿತಿಯು 15 ರಲ್ಲಿ 13 ಸ್ಥಾನಗಳನ್ನು ಗೆದ್ದಿತ್ತು. ಈ ಚುನಾವಣೆಯಲ್ಲಿ ಸಂಜಯ್ ಸಿಂಗ್ 40 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಹಾಗೂ ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆಯೋರಾನ್ ಅವರು ಕೇವಲ ಏಳು ಮತಗಳನ್ನು ಪಡೆದಿದ್ದರು. ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ಸಂಜಯ್ ಸಿಂಗ್, ‘ಕಳೆದ ಏಳೆಂಟು ತಿಂಗಳಲ್ಲಿ ಸೋತಿರುವ ದೇಶದ ಸಾವಿರಾರು ಕುಸ್ತಿಪಟುಗಳ ಗೆಲುವು ಇದು ಎಂದಿದ್ದರಯ. ಇನ್ನು ಒಕ್ಕೂಟದೊಳಗೆ ನಡೆಯುತ್ತಿರುವ ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಸಂಜಯ್ ಸಿಂಗ್, ‘ರಾಜಕೀಯದಿಂದ ರಾಜಕೀಯಕ್ಕೆ ಉತ್ತರ ನೀಡುತ್ತೇವೆ, ಕುಸ್ತಿಗೆ ಕುಸ್ತಿಯಿಂದ ಉತ್ತರ ನೀಡುತ್ತೇವೆ’ ಎಂದಿದ್ದರು.

ಏನಿದು ವಿವಾದ?

ಕಳೆದ ಜನವರಿಯಲ್ಲಿ ಆರಂಭವಾದ ಭಾರತ ಕುಸ್ತಿ ಒಕ್ಕೂಟದೊಳಗಿನ ವಿವಾದಕ್ಕೆ ಇಂದಿಗೂ ತೆರೆಬಿದ್ದಿಲ್ಲ. ಹಲವು ಕುಸ್ತಿಪಟುಗಳು, ಒಕ್ಕೂಟದ ಅಂದಿನ ಮುಖ್ಯಸ್ಥ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಬೀದಿಗಿಳಿದು ಹೋರಾಟ ನಡೆಸಿದ್ದರು. ಆ ಬಳಿಕ ತಿಂಗಳುಗಳ ನಂತರ ಬ್ರಿಜ್ ಭೂಷಣ್ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಆ ಬಳಿಕ ತೆರವಾಗಿದ್ದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಹುದ್ದೆಗೆ ಚುನಾವಣೆ ಕೂಡ ನಡೆದಿತ್ತು.

ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಅವರ ಆಪ್ತ ಸಂಜಯ್ ಸಿಂಗ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಸಂಜಯ್ ಸಿಂಗ್ ಚುನಾವಣೆಯಲ್ಲಿ ಗೆದ್ದ ನಂತರ, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದರು. ಅಷ್ಟೇ ಅಲ್ಲ, ಇಬ್ಬರೂ ಭಾರತ ಸರ್ಕಾರದಿಂದ ಪಡೆದ ಎಲ್ಲಾ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಘೋಷಿಸಿದ್ದರು. ಇದಾದ ಬಳಿಕ ನೂತನ ಭಾರತೀಯ ಕುಸ್ತಿ ಅಸೋಸಿಯೇಷನ್ ​​ಸಮಿತಿ ಮೇಲೆ ಪ್ರಶ್ನೆಗಳು ಎದ್ದಿದ್ದು, ಇದೀಗ ಕೇಂದ್ರ ಸರ್ಕಾರ ಭಾರತೀಯ ಕುಸ್ತಿ ಫೆಡರೇಶನ್‌ ಅನ್ನು ಅಮಾನತುಗೊಳಿಸುವ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ