ರೋಲ್ಯಾಂಡ್ ಗ್ಯಾರೋಸ್ನಲ್ಲಿ ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
Frech Open 2025: ಈ ಬಾರಿಯ ಫ್ರೆಂಚ್ ಓಪನ್ ಫೈನಲ್ ಪಂದ್ಯ ನಡೆದದ್ದು ಬರೋಬ್ಬರಿ 5 ಗಂಟೆ 29 ನಿಮಿಷಗಳು. ಅಂದರೆ ರೋಲ್ಯಾಂಡ್ ಗ್ಯಾರೋಸ್ನಲ್ಲಿ ನಡೆದ ಈ ಯುಗದ ಅತ್ಯಂತ ದೀರ್ಘಾವಧಿಯ ಫೈನಲ್ ಪಂದ್ಯ ಇದಾಗಿದೆ. ಇದಕ್ಕೂ ಮುನ್ನ ಓಪನ್ ಯುಗದಲ್ಲಿ ಅತಿ ದೀರ್ಘಾವಧಿಯ ಫ್ರೆಂಚ್ ಓಪನ್ ಫೈನಲ್ ನಡೆದದ್ದು 1982 ರಲ್ಲಿ.
ಪ್ಯಾರಿಸ್ನ ರೋಲ್ಯಾಂಡ್ ಗ್ಯಾರೋಸ್ ಮೈದಾನದಲ್ಲಿ ನಡೆದ ಫ್ರೆಂಚ್ ಓಪನ್ ಫೈನಲ್ನಲ್ಲಿ ಯಾನಿಕ್ ಸಿನ್ನರ್ ಅವರನ್ನು ಸೋಲಿಸಿ ಕಾರ್ಲೋಸ್ ಅಲ್ಕರಾಝ್ (Carlos Alcaraz) ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಇದು ಕ್ಲೇ ಕೋರ್ಟ್ನಲ್ಲಿ 22 ವರ್ಷದ ಅಲ್ಕರಾಝ್ ಅವರ 2ನೇ ಪ್ರಶಸ್ತಿ ಎಂಬುದು ವಿಶೇಷ.
ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲ ಸೆಟ್ ಅನ್ನು ಯಾನಿಕ್ ಸಿನ್ನರ್ 4-6 ಅಂತರದಿಂದ ಗೆದ್ದುಕೊಂಡಿದ್ದರು. ದ್ವಿತೀಯ ಸೆಟ್ನಲ್ಲಿ ಅಲ್ಕರಾಝ್ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದರೂ ಅಂತಿಮವಾಗಿ 6-7 ಅಂತರದಿಂದ ಸೋಲೊಪ್ಪಿಕೊಂಡರು.
ಆದರೆ ಮೂರನೇ ಸೆಟ್ನಲ್ಲಿ ಅತ್ಯುತ್ತಮ ಸರ್ವ್ಗಳ ಮೂಲಕ ಗಮನ ಸೆಳೆದ ಕಾರ್ಲೋಸ್ ಅಲ್ಕರಾಝ್ 6-4 ಅಂತರದಿಂದ ಯಾನಿಕ್ ಸಿನ್ನರ್ಗೆ ಸೋಲುಣಿಸುವಲ್ಲಿ ಯಶಸ್ವಿಯಾದರು. ಆ ಬಳಿಕ ನಡೆದ ಎರಡು ಸೆಟ್ಗಳು ರಣರೋಚಕ ಕಾಳಗಕ್ಕೆ ಸಾಕ್ಷಿಯಾಯಿತು. ದಾಳಿಗೆ ಪ್ರತಿದಾಳಿ ಎಂಬಂತೆ ಕಂಡು ಬಂದ 4ನೇ ಸೆಟ್ ಅನ್ನು ಅಲ್ಕರಾಝ್ 7-6 ಗೆದ್ದುಕೊಂಡರು.
ಇದಾಗ್ಯೂ ಕೊನೆಯ ಸೆಟ್ನಲ್ಲಿ ತನ್ನ ಅನುಭವವನ್ನು ಧಾರೆಯೆರೆದ ಯಾನಿಕ್ ಸಿನ್ನರ್ ಕಾರ್ಲೊಸ್ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾದರು. ಆದರೆ ಅಂತಿಮ ಸುತ್ತಿನಲ್ಲಿ ಛಲದಂಕ ಮಲ್ಲನಂತೆ ಚಲಿಸಿದ ಕಾರ್ಲೋಸ್ ಅಲ್ಕರಾಝ್ 7-6 ಅಂತರದಿಂದ ಗೆದ್ದುಕೊಂಡರು.
ಈ ಮೂಲಕ 4-6, 6-7 (4), 6-4, 7-6 (3), 7-6 (2) ಸೆಟ್ಗಳ ಅಂತರದ ಮೂಲಕ ಯಾನಿಕ್ ಸಿನ್ನರ್ಗೆ ಸೋಲುಣಿಸಿ ಕಾರ್ಲೋಸ್ ಅಲ್ಕರಾಝ್ ಎರಡನೇ ಬಾರಿ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಹೊಸ ಇತಿಹಾಸ:
ಈ ಬಾರಿಯ ಫ್ರೆಂಚ್ ಓಪನ್ ಫೈನಲ್ ಪಂದ್ಯ ನಡೆದದ್ದು ಬರೋಬ್ಬರಿ 5 ಗಂಟೆ 29 ನಿಮಿಷಗಳು. ಅಂದರೆ ರೋಲ್ಯಾಂಡ್ ಗ್ಯಾರೋಸ್ನಲ್ಲಿ ನಡೆದ ಈ ಯುಗದ ಅತ್ಯಂತ ದೀರ್ಘಾವಧಿಯ ಫೈನಲ್ ಪಂದ್ಯ ಇದಾಗಿದೆ. ಇದಕ್ಕೂ ಮುನ್ನ ಓಪನ್ ಯುಗದಲ್ಲಿ ಅತಿ ದೀರ್ಘಾವಧಿಯ ಫ್ರೆಂಚ್ ಓಪನ್ ಫೈನಲ್ ನಡೆದದ್ದು 1982 ರಲ್ಲಿ. ಅಂದು ಮ್ಯಾಟ್ಸ್ ವಿಲಾಂಡರ್ ಹಾಗೂ ಗಿಲ್ಲೆರ್ಮೊ ವಿಲಾಸ್ 4 ಗಂಟೆ 47 ನಿಮಿಷಗಳ ಫೈನಲ್ ಮ್ಯಾಚ್ ಆಡಿ ಇತಿಹಾಸ ನಿರ್ಮಿಸಿದ್ದರು.
ಈ ಬಾರಿ ಇಟಲಿಯ ಯಾನಿಕ್ ಸಿನ್ನರ್ ಹಾಗೂ ಸ್ಟೇನ್ನ ಕಾರ್ಲೋಸ್ ಅಲ್ಕರಾಝ್ ನಡುವೆ ಕಂಡು ಬಂದ ಫೈನಲ್ ಪಂದ್ಯವು ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಈ ಇತಿಹಾಸದೊಂದಿಗೆ ಅಲ್ಕರಾಝ್ ಫ್ರೆಂಚ್ ಓಪನ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ.