PV Sindhu: ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಪಿವಿ ಸಿಂಧು

| Updated By: ಝಾಹಿರ್ ಯೂಸುಫ್

Updated on: Aug 08, 2022 | 2:49 PM

CWG 2022 Badminton: ಎದುರಾಳಿಯ ಫೋರ್‌ಹ್ಯಾಂಡ್ ರಿಟರ್ನ್ ಶಾಟ್ ತಪ್ಪುಗಳನ್ನು ಬಳಸಿಕೊಂಡ ಸಿಂಧುಗೆ ಬ್ಯಾಕ್ ಟು ಬ್ಯಾಕ್ ಪಾಯಿಂಟ್​ಗಳಿಸುತ್ತಾ ಒತ್ತಡ ಹಾಕುವಲ್ಲಿ ಯಶಸ್ವಿಯಾಗಿದ್ದರು.

PV Sindhu: ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಪಿವಿ ಸಿಂಧು
ಸಿಂಧು
Follow us on

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು (PV Sindhu) ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ (CWG 2022) ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಹಿಳಾ ಸಿಂಗಲ್ಸ್​ ಬ್ಯಾಡ್ಮಿಂಟನ್​ ಫೈನಲ್​ನಲ್ಲಿ ಕೆನಡಾದ ಮಿಶೆಲ್ ಲಿ ಅವರನ್ನು 21-15, 21-13 ನೇರ ಸೆಟ್​ಗಳಿಂದ ಸೋಲಿಸುವ ಮೂಲಕ ಸಿಂಧು ಸ್ವರ್ಣ ಪದಕಕ್ಕೆ ಕೊರೊಳೊಡ್ಡಿದ್ದರು. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತದ ಒಟ್ಟಾರೆ ಚಿನ್ನದ ಪದಕದ ಸಂಖ್ಯೆಯನ್ನು 19 ಕ್ಕೇರಿಸಿದರು.

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದ ಮೊದಲ ಸೆಟ್ ಅನ್ನು ಪಿವಿ ಸಿಂಧು 21-15 ಅಂತರದಿಂದ ಗೆದ್ದುಕೊಂಡರು. ಇನ್ನು 2ನೇ ಸೆಟ್​ನಲ್ಲಿ ಆರಂಭದಲ್ಲೇ 6-3 ಅಂತರದಿಂದ ಮುನ್ನಡೆ ಕಾಯ್ದುಕೊಂಡ ಭಾರತೀಯ ಆಟಗಾರ್ತಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅಷ್ಟೇ ಅಲ್ಲದೆ ಮಿಶೆಲ್ 6 ಪಾಯಿಂಟ್ ಕಲೆಹಾಕುವ ವೇಳೆಗೆ ಸಿಂಧು 12 ಪಾಯಿಂಟ್ ಗಳಿಸಿದ್ದರು.ಆದರೆ ಇದಾದ ಬಳಿಕ ಕಂಬ್ಯಾಕ್ ಮಾಡಿದ ಕೆನಡಾ ಆಟಗಾರ್ತಿ ಬ್ಯಾಕ್ ಟು ಬ್ಯಾಕ್ ಪಾಯಿಂಟ್ ಗಳಿಸಿ ಅಂತರವನ್ನು 15-11 ಕ್ಕೆ ತಂದು ನಿಲ್ಲಿಸಿದರು. ಈ ಹಂತದಲ್ಲಿ ಆಕ್ರಮಣಕಾರಿ ಆಟವಾಡುವ ಮೂಲಕ ತಮ್ಮ ಅನುಭವವನ್ನು ತೆರೆದಿಟ್ಟ  ಪಿವಿ ಸಿಂಧು ಎದುರಾಳಿ ಮೇಲೆ ಒತ್ತಡ ಹೆಚ್ಚಿಸಿದರು. ಅಲ್ಲದೆ  21 – 13 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಮಾಜಿ ವಿಶ್ವ ಚಾಂಪಿಯನ್ ಪಿವಿ ಸಿಂಧು 2014 ಮತ್ತು 2018 ರ ಕಾಮನ್​ವೆಲ್ತ್​ ಆವೃತ್ತಿಗಳಲ್ಲಿ ಕಂಚು ಮತ್ತು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು. ಇದೀಗ ಚಿನ್ನದ ಪದಕ ಗೆಲ್ಲುವ ಮೂಲಕ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತಕ್ಕಾಗಿ ಮೂರು ವಿಭಿನ್ನ ಪದಕಗಳನ್ನು ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದಕ್ಕೂ ಮುನ್ನ ಸೆಮಿಫೈನಲ್​ನಲ್ಲಿ ಸಿಂಗಾಪುರದ ಯೆಯೊ ಜಿಯಾ ಮಿನ್ ಅವರನ್ನು 21-19 21-17 ಅಂತರದಿಂದ ಸೋಲಿಸಿ ಫೈನಲ್​ಗೆ ಲಗ್ಗೆಯಿಟ್ಟಿದ್ದರು. ಈ ಬಾರಿಯ ಕ್ರೀಡಾಕೂಟದಲ್ಲಿ ತನ್ನ ತಾಂತ್ರಿಕ ಕುಶಾಗ್ರಮತಿಯನ್ನು ಪ್ರದರ್ಶಿಸಿದ್ದ ಸಿಂಧು ಆರಂಭದಿಂದಲೂ ಪ್ರತಿ ಆಟಗಾರರ ವಿರುದ್ದ ಮೇಲುಗೈ ಸಾಧಿಸುತ್ತಾ ಬಂದಿದ್ದರು.

ಅದರಲ್ಲೂ ಸ್ಟಾರ್ ಆಟಗಾರ್ತಿ ಯೆಯೊ ಜಿಯಾ ಮಿನ್ ಸೆಮಿಫೈನಲ್​ನಲ್ಲಿ ಭಾರೀ ಪೈಪೋಟಿ ಎದುರಿಸಬೇಕಾಯಿತು. ಇದಾಗ್ಯೂ ಪರಿಪೂರ್ಣವಾದ ನೆಟ್ ಶಾಟ್‌ನೊಂದಿಗೆ 19-12 ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಎದುರಾಳಿಯ ಫೋರ್‌ಹ್ಯಾಂಡ್ ರಿಟರ್ನ್ ಶಾಟ್ ತಪ್ಪುಗಳನ್ನು ಬಳಸಿಕೊಂಡ ಸಿಂಧುಗೆ ಬ್ಯಾಕ್ ಟು ಬ್ಯಾಕ್ ಪಾಯಿಂಟ್​ಗಳಿಸುತ್ತಾ ಒತ್ತಡ ಹಾಕುವಲ್ಲಿ ಯಶಸ್ವಿಯಾಗಿದ್ದರು.

ಅದರಂತೆ 49 ನಿಮಿಷಗಳ ಕಾದಾಟದಲ್ಲಿ ಅಂತಿಮವಾಗಿ ಯೊಯೊ ಜಿಯಾರನ್ನು 21-19 21-17 ನೇರ ಸೆಟ್​ಗಳಿಂದ ಸೋಲಿಸಿ ಫೈನಲ್​ಗೆ ಲಗ್ಗೆಯಿಟ್ಟಿದ್ದರು. ಫೈನಲ್​ನಲ್ಲಿ ಮಿಶೆಲ್ ಲಿ ಅವರಿಗೆ ಸೋಲುಣಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.

ಕಾಮನ್​ವೆಲ್ತ್ ಗೇಮ್ಸ್​ 2022 ರಲ್ಲಿ ಪಿವಿ ಸಿಂಧು ಅವರ ಫೈನಲ್ ಪಯಣ ಸಂಕ್ಷಿಪ್ತ ನೋಟ: 

  • 64 ರ ಸುತ್ತು – ಬೈ
  • 32 ರ ಸುತ್ತು – ಮಾಲ್ಡೀವ್ಸ್‌ನ ಅಬ್ದುಲ್ ರಜಾಕ್ ಫಾತಿಮತ್ ನಬಾಹಾ ಅವರನ್ನು 21-4, 21-11 ಸೆಟ್​​ಗಳಿಂದ ಸೋಲಿಸಿದ್ದರು.
  • 16 ರ ಸುತ್ತು – ಉಗಾಂಡಾದ ಹುಸಿನಾ ಕೊಬುಗಾಬೆ ಅವರನ್ನು 21-10, 21-9 ಸೆಟ್​​ಗಳಿಂದ ಮಣಿಸಿದ್ದರು.
  • ಕ್ವಾರ್ಟರ್‌ಫೈನಲ್‌ – ಮಲೇಷ್ಯಾದ ಗೊಹ್ ಜಿನ್ ವೀ ವಿರುದ್ಧ 19-21, 21-14, 21-18 ಸೆಟ್​ಗಳಿಂದ ಪರಾಜಯಗೊಳಿಸಿದ್ದರು.
  • ಸೆಮಿಫೈನಲ್ – ಸಿಂಗಾಪುರದ ಯೋ ಜಿಯಾ ಮಿನ್ ಅವರನ್ನು 21-19, 21-17 ನೇರ ಸೆಟ್​ಗಳಿಂದ ಸೋಲಿಸಿದ್ದರು.