CWG 2022: ಬರೋಬ್ಬರಿ 346 ಕೆ.ಜಿ ಭಾರ ಎತ್ತಿ ಭಾರತಕ್ಕೆ ಪದಕ ತಂದುಕೊಟ್ಟ ವಿಕಾಸ್ ಠಾಕೂರ್

| Updated By: ಝಾಹಿರ್ ಯೂಸುಫ್

Updated on: Aug 03, 2022 | 10:19 AM

CWG 2022: ವಿಕಾಸ್ ಠಾಕೂರ್​ಗೆ ಇದು ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಮೂರನೇ ಪದಕವಾಗಿದೆ. ಇದಕ್ಕೂ ಮುನ್ನ ಅವರು 2014ರ ಗೇಮ್ಸ್‌ನಲ್ಲಿ 86 ಕೆಜಿಯಲ್ಲಿ ಬೆಳ್ಳಿ ಗೆದ್ದರೆ, ಗೋಲ್ಡ್ ಕೋಸ್ಟ್ 2018ರಲ್ಲಿ 94 ಕೆಜಿಯಲ್ಲಿ ಕಂಚಿನ ಪದಕ ಗೆದ್ದಿದ್ದರು.

CWG 2022: ಬರೋಬ್ಬರಿ 346 ಕೆ.ಜಿ ಭಾರ ಎತ್ತಿ ಭಾರತಕ್ಕೆ ಪದಕ ತಂದುಕೊಟ್ಟ ವಿಕಾಸ್ ಠಾಕೂರ್
Vikas Thakur
Follow us on

ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತದ ವೇಟ್‌ಲಿಫ್ಟರ್‌ಗಳು ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ . ಕಳೆದ ಮೂರು ದಿನಗಳಂತೆ ನಾಲ್ಕನೇ ದಿನವೂ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಮತ್ತೊಂದು ಪದಕ ಲಭಿಸಿದೆ. ಈ ಬಾರಿ ವಿಕಾಸ್ ಠಾಕೂರ್ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಪುರುಷರ 96 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಕಾಣಿಸಿಕೊಂಡ ವಿಕಾಸ್ ಠಾಕೂರ್ ಒಟ್ಟು 346 ಕೆಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟರು. ಇನ್ನು ಸಮೋವಾದ ಡಾನ್ ಒಪೊಲಾಗ್ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಅಷ್ಟೇ ಅಲ್ಲದೆ ಒಪೊಲಾಗ್ 381 ಕೆಜಿ ಭಾರ ಎತ್ತುವ ಮೂಲಕ ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಲೂಧಿಯಾನದ 28 ವರ್ಷದ ವಿಕಾಸ್ ಠಾಕೂರ್ ಅವರು ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್‌ನ ಒಟ್ಟು 6 ಪ್ರಯತ್ನಗಳಲ್ಲಿ ತಮ್ಮ ನಿಗದಿತ ತೂಕವನ್ನು 5 ಬಾರಿ ಯಶಸ್ವಿಯಾಗಿ ಎತ್ತಿದರು. ಎರಡು ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತ ವಿಕಾಸ್, ಸ್ನ್ಯಾಚ್‌ನಲ್ಲಿ 155 ಕೆಜಿಯೊಂದಿಗೆ ತಮ್ಮ ಅತ್ಯಧಿಕ ತೂಕವನ್ನು ಎತ್ತಿದರು. ಈ ಸುತ್ತಿನ ನಂತರ ಅವರು ಜಂಟಿ ಮೂರನೇ ಸ್ಥಾನ ಪಡೆದರು. ಆದಾಗ್ಯೂ, ಸಮೋವಾ ಲಿಫ್ಟರ್ ಆಗಲೇ ಇತರ ಆಟಗಾರರಿಗಿಂತ 171 ಪಾಯಿಂಟ್​ ಗಳಿಸಿ ದೊಡ್ಡ ಮುನ್ನಡೆ ಸಾಧಿಸಿದ್ದರು.

ಸಮೋವಾ ಲಿಫ್ಟರ್‌ನ ಪ್ರದರ್ಶನದಿಂದಾಗಿ ಆರಂಭದಲ್ಲೇ ಚಿನ್ನದ ಆಸೆಯನ್ನು ಕೈ ಬಿಡಬೇಕಾಯಿತು. ಹೀಗಾಗಿ ವಿಕಾಸ್ ಠಾಕೂರ್ ಬೆಳ್ಳಿ ಪದಕ್ಕಾಗಿ ಪೈಪೋಟಿ ಮುಂದುವರೆಸಿದ್ದರು. ಈ ವೇಳೆ ಆತಿಥೇಯ ಇಂಗ್ಲೆಂಡ್ ನ ಲಿಫ್ಟರ್ ವೈಫಲ್ಯವೂ ವಿಕಾಸ್​ಗೆ ನೆರವಾಯಿತು. ಅವರು ಸ್ನ್ಯಾಚ್‌ನಲ್ಲಿ ವಿಕಾಸ್‌ಗಿಂತ ಹೆಚ್ಚಿನ ತೂಕ ಎತ್ತಿದ್ದರು. ಆದರೆ ಕ್ಲೀನ್ ಮತ್ತು ಜರ್ಕ್‌ನಲ್ಲಿ ಅವರ ಎಲ್ಲಾ ಮೂರು ಪ್ರಯತ್ನಗಳು ವಿಫಲವಾದವು. ಇದರ ಲಾಭವನ್ನು ಪಡೆದ ವಿಕಾಸ್ ಎರಡನೇ ಪ್ರಯತ್ನದಲ್ಲಿ 191 ಕೆಜಿ ಎತ್ತುವ ಮೂಲಕ, ಒಟ್ಟು 346 ಕೆಜಿ ತೂಕದೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಈ ಬಾರಿಯ ಕ್ರೀಡಾಕೂಟದಲ್ಲಿ ವೇಟ್ ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಇದು ಎಂಟನೇ ಪದಕವಾಗಿದ್ದು, ಮೂರನೇ ಬೆಳ್ಳಿ ಪದಕ ಭಾರತದ ಖಾತೆಗೆ ಸೇರಿದೆ. ಇದಲ್ಲದೇ ಭಾರತ 3 ಚಿನ್ನ ಹಾಗೂ ಎರಡು ಕಂಚಿನ ಪದಕಗಳನ್ನು ಕೂಡ ಗೆದ್ದಿದೆ. ಇನ್ನು ವಿಕಾಸ್ ಠಾಕೂರ್​ಗೆ ಇದು ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಮೂರನೇ ಪದಕವಾಗಿದೆ. ಇದಕ್ಕೂ ಮುನ್ನ ಅವರು 2014ರ ಗೇಮ್ಸ್‌ನಲ್ಲಿ 86 ಕೆಜಿಯಲ್ಲಿ ಬೆಳ್ಳಿ ಗೆದ್ದರೆ, ಗೋಲ್ಡ್ ಕೋಸ್ಟ್ 2018ರಲ್ಲಿ 94 ಕೆಜಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದೀಗ ಬರ್ಮಿಂಗ್​ಹ್ಯಾಮ್​ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಮಿಂಚಿದ್ದಾರೆ.

 

 

Published On - 10:18 am, Wed, 3 August 22