CWG 2022: ಪದಕಗಳ ಅರ್ಧಶತಕ ಬಾರಿಸಿದ ಭಾರತ; ಬ್ಯಾಡ್ಮಿಂಟನ್‌ನಲ್ಲಿ ಕಂಚು ಗೆದ್ದ ಕಿಡಂಬಿ ಶ್ರೀಕಾಂತ್

| Updated By: ಪೃಥ್ವಿಶಂಕರ

Updated on: Aug 08, 2022 | 7:50 AM

CWG 2022: ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತ ಬ್ಯಾಡ್ಮಿಂಟನ್‌ನಲ್ಲಿ ಎರಡನೇ ಪದಕವನ್ನು ಪಡೆದುಕೊಂಡಿದೆ. ಸ್ಟಾರ್ ಷಟ್ಲರ್ ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

CWG 2022: ಪದಕಗಳ ಅರ್ಧಶತಕ ಬಾರಿಸಿದ ಭಾರತ; ಬ್ಯಾಡ್ಮಿಂಟನ್‌ನಲ್ಲಿ ಕಂಚು ಗೆದ್ದ ಕಿಡಂಬಿ ಶ್ರೀಕಾಂತ್
Follow us on

ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ (Commonwealth Games 2022) ಭಾರತ ಬ್ಯಾಡ್ಮಿಂಟನ್‌ನಲ್ಲಿ ಎರಡನೇ ಪದಕವನ್ನು ಪಡೆದುಕೊಂಡಿದೆ. ಸ್ಟಾರ್ ಷಟ್ಲರ್ ಕಿಡಂಬಿ ಶ್ರೀಕಾಂತ್ (Kidambi Srikanth) ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತದ ಪದಕಗಳ ಸಂಖ್ಯೆ 50 ದಾಟಿದೆ. ಭಾನುವಾರ ರಾತ್ರಿ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಸಿಂಗಾಪುರದ ಜಿಯಾ ಹೆಂಗ್ ತೆಹ್ ಅವರನ್ನು 21-15, 21-18 ನೇರ ಗೇಮ್‌ಗಳಿಂದ ಕಿಡಂಬಿ ಸೋಲಿಸಿದರು. ಆದಾಗ್ಯೂ, 2018 ರ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಈ ಕ್ರೀಡಾಕೂಟದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಏಕೆಂದರೆ ಅವರು ಚಿನ್ನದ ಪದಕ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲ್ಪಟ್ಟಿದ್ದರು.

ಗೆಲುವಿಗಾಗಿ ಸಾಕಷ್ಟು ಬೆವರು ಹರಿಸಬೇಕಾಯ್ತು

ಸೆಮಿಫೈನಲ್‌ನಲ್ಲಿ ಶ್ರೀಕಾಂತ್ ಅವರ ಸೋಲು ಭಾರತಕ್ಕೆ ಚಿನ್ನದ ಭರವಸೆಯನ್ನು ಕೊನೆಗೊಳಿಸಿತ್ತು. ಈ ಸೋಲಿನ ನಂತರ ಶ್ರೀಕಾಂತ್ ಸಂಜೆಯ ವೇಳೆಗೆ ಕಂಚಿನ ಪದಕದ ಪಂದ್ಯವನ್ನು ಆಡಬೇಕಾಯಿತು. ಪ್ರಬಲ ಸ್ಪರ್ಧಿಯಾಗಿದ್ದರೂ ಅದಕ್ಕಾಗಿ ಸಾಕಷ್ಟು ಬೆವರು ಹರಿಸಬೇಕಾಯಿತು. ಸಿಂಗಾಪುರದ ಜಿಯಾ ಹೆಂಗ್ ತೆಹ್ ಗಾಯಗೊಂಡ ನಂತರವೂ ಉತ್ತಮ ಆಟವನ್ನು ತೋರಿದರು. ಹೀಗಾಗಿ ಪಂದ್ಯವನ್ನು 21-15, 21-18 ರಲ್ಲಿ ಗೆದ್ದ ನಂತರ, ಶ್ರೀಕಾಂತ್ 87 ನೇ ಶ್ರೇಯಾಂಕದ ಆಟಗಾರನನ್ನು ಗೌರವಯುತವಾಗಿ ತಬ್ಬಿಕೊಂಡರು.

ಇದಕ್ಕೂ ಮೊದಲು ಭಾನುವಾರ ಕಿಡಂಬಿ ತಮ್ಮ ಸೆಮಿಫೈಲ್‌ನಲ್ಲಿ ಸೋಲನ್ನು ಎದುರಿಸಬೇಕಾಯಿತು, ಈ ಕಾರಣದಿಂದಾಗಿ ಫೈನಲ್‌ನಲ್ಲಿ ಇಬ್ಬರು ಭಾರತೀಯರ ನಡುವಿನ ಚಿನ್ನದ ಪಂದ್ಯದ ನಿರೀಕ್ಷೆಯು ಭಗ್ನಗೊಂಡಿತು. ಶ್ರೀಕಾಂತ್ ಪಂದ್ಯಕ್ಕೂ ಮುನ್ನವೇ ಲಕ್ಷ್ಯ ಸೇನ್ ಫೈನಲ್‌ಗೆ ಟಿಕೆಟ್ ಕಾಯ್ದಿರಿಸಿದ್ದರು. ಶ್ರೀಕಾಂತ್ ಅವರ ಈ ಸೋಲು ಮತ್ತೊಮ್ಮೆ ಆತಂಕ ಮೂಡಿಸಿದೆ. ವಾಸ್ತವವಾಗಿ, ಕ್ರೀಡಾಕೂಟದ ಮೊದಲ ವಾರದಲ್ಲಿ, ಭಾರತವು ಮಿಶ್ರ ತಂಡ ಸ್ಪರ್ಧೆಯ ಫೈನಲ್‌ನಲ್ಲಿ ಮಲೇಷ್ಯಾ ವಿರುದ್ಧ ಸೋಲುವುದರೊಂದಿಗೆ ಚಿನ್ನ ಗೆಲ್ಲುವುದನ್ನು ಮಿಸ್ ಮಾಡಿಕೊಂಡಿತ್ತು.

ಆ ಫೈನಲ್‌ನಲ್ಲಿ ಭಾರತಕ್ಕೆ ದೊಡ್ಡ ಹೊಡೆತವೆಂದರೆ ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ಅವರ ಸೋಲು. ನಂತರ ಶ್ರೀಕಾಂತ್ ಮೂರು ಗೇಮ್‌ಗಳ ಕಠಿಣ ಪಂದ್ಯದಲ್ಲಿ ಟಿಜೆ ಯೋಂಗ್‌ ಎದುರು ಸೋಲಿಸಲ್ಪಟ್ಟರು. ಇದೀಗ ಭಾನುವಾರದಂದು ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಇಬ್ಬರೂ ಮತ್ತೊಮ್ಮೆ ಮುಖಾಮುಖಿಯಾಗಿದ್ದರು. ಹೀಗಿರುವಾಗ ಶ್ರೀಕಾಂತ್ ಆ ಸೋಲಿನ ಖಾತೆಯನ್ನು ಇಲ್ಲಿ ಚುಪ್ತಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇದಕ್ಕೆ ಪೂರಕವೆಂಬಂತೆ ಭಾರತದ ಅನುಭವಿ ಷಟ್ಲರ್ ಉತ್ತಮವಾಗಿ ಪ್ರಾರಂಭಿಸಿ ಮೊದಲ ಗೇಮ್ ಗೆದ್ದರು. ಆದರೆ ನಂತರ ಅವರು ತಮ್ಮ ತಪ್ಪುಗಳನ್ನು ನಿಯಂತ್ರಿಸಲು ಸಾಧ್ಯವಾಗದೆ, ಪಂದ್ಯವನ್ನು 21-13, 19-21, 10-21 ರಿಂದ ಸೋತರು.

Published On - 12:13 am, Mon, 8 August 22