ಕಾಮನ್ವೆಲ್ತ್ ಗೇಮ್ಸ್ನಲ್ಲಿ (Commonwealth Games 2022) ಬಹಳ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯಕ್ಕೆ ಅವಕಾಶ ನೀಡಲಾಯಿತು. ಅದರಂತೆ ಎರಡು ಗುಂಪುಗಳ ಒಟ್ಟು ಎಂಟು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಂತಿಮವಾಗಿ ಭಾರತ ಮಹಿಳಾ ತಂಡ ಹಾಗೂ ಆಸ್ಟ್ರೇಲಿಯಾ (India Women vs Australia Women) ಫೈನಲ್ ತಲುಪಿದವು. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಫೈನಲ್ ಕಾದಾಟದಲ್ಲಿ ಆಸ್ಟ್ರೇಲಿಯಾ 9 ರನ್‌ಗಳ ಜಯ ಸಾಧಿಸಿ ಚಿನ್ನದ ಪದಕ ಬಾಚಿಕೊಂಡಿದೆ. ಗೆಲುವಿನ ಅಂಚಿನಲ್ಲಿ ಎಡವಿದ ಹರ್ಮನ್ಪ್ರೀತ್ ಪಡೆ ಸೋತು ಬೆಳ್ಳಿಗೆ ತೃಪ್ತಿ ಪಡೆದುಕೊಂಡಿತು. ಆದರೀಗ ಇಂಡೋ– ಆಸೀಸ್ ನಡುವಣ ಫೈನಲ್ ಕದನ ವಿವಾದಕ್ಕೆ ಕಾರಣವಾಗಿದೆ. ಯಾಕೆಂದರೆ ಕೊರೊನಾ ಪಾಸಿಟಿವ್ ಇದ್ದ ಆಟಗಾರ್ತಿ ತಲಿಯಾ ಮೆಘ್ರಾತ್ (Tahlia McGrath) ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಪರ ಕಣಕ್ಕಿಳಿದಿದ್ದರು.
ಕೋವಿಡ್ ಪಾಸಿಟಿವ್ ಇದ್ದರೂ ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ತಲಿಯಾ ಮೆಘ್ರಾತ್ ಬ್ಯಾಟಿಂಗ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದಾರೆ. ಅಲ್ಲದೆ ಬೌಲಿಂಗ್ ಕೂಡ ಮಾಡಿದ್ದಾರೆ. ಮಾಸ್ಕ್ ಕೂಡ ಹಾಕಿರಲಿಲ್ಲ ಎಂದು ನೆಟ್ಟಿಗರು ಟ್ವಿಟರ್ನಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಐಸಿಸಿ ನಿಯಮದಲ್ಲಿ ಇದಕ್ಕೆ ಒಪ್ಪಿಗೆ ಇದೆಯೇ? ಎಂದು ಪ್ರಶ್ನಿಸುತ್ತಿದ್ದಾರೆ.
ಪಂದ್ಯ ಆರಂಭಕ್ಕೂ ಮುನ್ನ ನಡೆದ ರಾಷ್ಟ್ರಗೀತೆಗೆ ಗೌರವ ಸೂಚಿಸುವ ಸಮಯದಲ್ಲಿ ತಲಿಯಾ ಮೈದಾನದಲ್ಲಿ ಹಾಜರಿರಲಿಲ್ಲ. ಅವರು ಡ್ರೆಸ್ಸಿಂಗ್ ರೂಮ್ನಲ್ಲಿ ಒಬ್ಬರೇ ಮಾಸ್ಕ್ ಹಾಕಿಕೊಂಡ ಕೂತಿದ್ದರು. ಆದರೆ, ಬ್ಯಾಟಿಂಗ್ ಮಾಡುವಾಗ ನಾಲ್ಕನೇ ಕ್ರಮಾಂಕದಲ್ಲಿ ಮಾಸ್ಕ್ ಇಲ್ಲದೆ ಆಟವಾಡಿದ್ದಾರೆ. ಬೌಲಿಂಗ್ ಕೂಡ ಮಾಡಿದ್ದಾರೆ. ಸಂಭ್ರಮಾಚರಣೆ ವೇಳೆ ಯಾರ ಹತ್ತಿರ ಕೂಡ ಬರಲಿಲ್ಲ. ಸದ್ಯ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
Tahila McGrath represents a country that ensured Novak Djokovic was deported and not allowed to play in Aus Open for being unvaccinated and was called a threat. When it came to one of their own – it was okay to let her play with covid?
— Karishma Singh (@karishmasingh22) August 7, 2022
Tahlia McGrath can’t sit with her teammates but she can play cricket.
Make this make sense! ??
— Cricketjeevi (@wildcardgyan) August 7, 2022
ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಅನುಭವಿಸಿತು. ಅಲಿಸ್ಸಾ ಹೀಲಿ (7 ರನ್) ಮೂರನೇ ಓವರ್‌ನಲ್ಲಿ ರೇಣುಕಾ ಸಿಂಗ್ಗೆ ವಿಕೆಟ್ ಒಪ್ಪಿಸಿದರು. ಆದರೆ, ನಂತರ ಜೊತೆಯಾದ ಬೆತ್ ಮೂನಿ ಹಾಗೂ ನಾಯಕಿ ಮೆಗ್ ಲ್ಯಾನಿಂಗ್ 50 ರನ್‌ಗಳ ಜೊತೆಯಾಟ ನೀಡಿದರು. ತಂಡದ ಮೊತ್ತ 83 ಆಗಿದ್ದಾಗ ರನ್ ಕದಿಯಲು ಹೋದ ಮೆಗ್ ಲ್ಯಾನಿಂಗ್ (36 ರನ್) ರನೌಟ್ಗೆ ಬಲಿಯಾದರು.
ಲ್ಯಾನಿಂಗ್ ಔಟಾದ ಬಳಿಕ ಬಂದ ಆಟಗಾರ್ತಿಯರು ರನ್ಗಳಿಸಲು ವಿಫಲರಾದರು. ಆಸ್ಟ್ರೇಲಿಯಾ ಪರ ಬೆತ್ ಮೂನಿ 41 ಎಸೆತಗಳಲ್ಲಿ 61 ರನ್ ಗಳಿಸಿದರೆ ಆಶ್ಲೀ ಗಾರ್ಡ್ನರ್ 25 ರನ್ ಹಾಗೂ ಹೇನ್ಸ್ ಅಜೇಯ 18 ರನ್ ಕಲೆಹಾಕಿದ ಪರಿಣಾಮ ಆಸ್ಟ್ರೇಲಿಯಾ ನಿಗದಿತ 20 ಓವರ್ಗಳಿಗೆ 8 ವಿಕೆಟ್ಗಳನ್ನು ಕಳೆದುಕೊಂಡು 161 ರನ್ ಗಳಿಸಿತು. ಭಾರತದ ಪರ ರೆಣುಕಾ ಸಿಂಗ್ ಮತ್ತು ಸ್ನೇಹ ರಾಣ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
162 ರನ್‌ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಭರ್ಜರಿ ಫಾರ್ಮ್ನಲ್ಲಿದ್ದ ಸ್ಮೃತಿ ಮಂಧಾನ (6 ರನ್) ಮತ್ತು ಶಪಾಲಿ ವರ್ಮಾ (11 ರನ್) ಕಡಿಮೆ ರನ್‌ಗಳಿಗೆ ಪೆವಿಲಿಯನ್ ಸೇರಿದರು. ಬಳಿಕ ರೋಡ್ರಿಗಾಸ್ (33 ರನ್) ಜತೆಗೂಡಿದ ಹರ್ಮನ್ ಪ್ರೀತ್ ಕೌರ್ ಇನಿಂಗ್ಸ್ ಕಟ್ಟಿದರು. ಈ ಜೋಡಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿ ಔಟಾಯಿತು.
ಕೌರ್ 43 ಎಸೆತಗಳಲ್ಲಿ 65 ರನ್ ಸಿಡಿಸಿದರು. ಇವರ ನಿರ್ಗಮನದ ಬಳಿಕ ಭಾರತ ಅಲ್ಪಾವಧಿಯಲ್ಲಿ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ 11 ರನ್‌ಗಳ ಅಗತ್ಯವಿತ್ತು. ಆದರೆ, ನಿಗದಿತ 20 ಓವರ್ಗಳಲ್ಲಿ ಸರ್ವ ಪತನಗೊಂಡು 152 ರನ್ಗಳಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ 9 ರನ್‌ಗಳ ಸೋಲು ಕಂಡಿತು. ಹೀಗಾಗಿ ಬೆಳ್ಳಿ ಪದಕವನ್ನು ಭಾರತ ಬಾಚಿಕೊಂಡಿತು.
Published On - 10:27 am, Mon, 8 August 22