Lakshya Sen: ಗುರಿ ತಪ್ಪದ ಲಕ್ಷ್ಯ: ಭಾರತಕ್ಕೆ ಮತ್ತೊಂದು ಚಿನ್ನ
CWG 2022 Men's Singles Badminton: ಸೆಮಿಫೈನಲ್ನಲ್ಲಿ ಸಿಂಗಾಪುರದ ಜಿಯಾ ಹೆಂಗ್ ತೇಹ್ ಅವರನ್ನು 21-10, 18-21, 21-16 ವಿರುದ್ದ ಕಠಿಣ ಜಯ ಸಾಧಿಸಿ ಲಕ್ಷ್ಯ ಫೈನಲ್ಗೆ ಎಂಟ್ರಿ ಕೊಟ್ಟಿದ್ದರು.
ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನ (CWG 2022) ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಭಾರತದ ಲಕ್ಷ್ಯ ಸೇನ್ (Lakshya Sen) ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಫೈನಲ್ನಲ್ಲಿ ಮಲೇಷ್ಯಾದ ಎನ್‌ಜಿ ತ್ಸೆ ಯೋಂಗ್ ಅವರನ್ನು 21-191, 21-9, 21-16 ಸೆಟ್ಗಳಿಂದ ಮಣಿಸುವ ಮೂಲಕ ಭಾರತೀಯ ಬ್ಯಾಡ್ಮಿಂಟನ್ ತಾರೆ ಈ ಸಾಧನೆ ಮಾಡಿದರು. ಆರಂಭದಿಂದಲೇ ಭರ್ಜರಿ ಪೈಪೋಟಿಗೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಇಬ್ಬರು ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮೊದಲ 7 ಪಾಯಿಂಟ್ಗಳವರೆಗೆ ಸಮಬಲ ಸಾಧಿಸಿದ್ದ ಈ ಪಂದ್ಯದಲ್ಲಿ ಆ ಬಳಿಕ ಎನ್‌ಜಿ ತ್ಸೆ ಯೋಂಗ್ ಕಾಯ್ದುಕೊಂಡರು. ಇದಾಗ್ಯೂ ಕಂಬ್ಯಾಕ್ ಮಾಡಿದ ಲಕ್ಷ್ಯ ಸೇನ್ ಮೊದಲ ಸುತ್ತಿನ ಅಂತ್ಯದವರೆಗೆ ಪೈಪೋಟಿ ನೀಡಿದರು. ಪರಿಣಾಮ ಕೇವಲ 2 ಪಾಯಿಂಟ್ಗಳ ಅಂತರದಿಂದ ಲಕ್ಷ್ಯ ಸೇನ್ ಸೋಲನುಭವಿಸಬೇಕಾಯಿತು. ಅದರಂತೆ ಯೋಂಗ್ ಮೊದಲ ಸುತ್ತನ್ನು 21-19 ಅಂತರದಿಂದ ಗೆದ್ದುಕೊಂಡರು.
ಇನ್ನು 2ನೇ ಸುತ್ತಿನಲ್ಲಿ ಲಕ್ಷ್ಯ ಸೇನ್ ಆರಂಭದಲ್ಲಿ ಮುನ್ನಡೆ ಪಡೆದರೂ, ಮಲೇಷ್ಯಾ ಆಟಗಾರರಿಂದ ತೀವ್ರ ಪೈಪೋಟಿ ಎದುರಿಸಿದ್ದರು. ಆದರೆ ಈ ಹಂತದಲ್ಲಿ ತಮ್ಮ ಅನುಭವವನ್ನು ಧಾರೆಯೆರೆದ ಲಕ್ಷ್ಯ ಎನ್‌ಜಿ ತ್ಸೆ ಯೋಂಗ್ ವಿರುದ್ದ ಸಂಪೂರ್ಣ ಹಿಡಿತ ಸಾಧಿಸಿದರು. ಅಲ್ಲದೆ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಗಳನ್ನು ಕಲೆಹಾಕುವ ಮೂಲಕ ಒತ್ತಡ ಹೇರಿದರು. ಈ ಮೂಲಕ 2ನೇ ಸೆಟ್ ಅನ್ನು 21-9 ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡರು.
ಭರ್ಜರಿ ಪೈಪೋಟಿಗೆ ಕಾರಣವಾಗಿದ್ದ ಮೊದಲ ಎರಡು ಸುತ್ತಿನ ಸಮಬಲದ ಬಳಿಕ ಫೈನಲ್ ರೌಂಡ್ಗೆ ಪಂದ್ಯ ಸಾಗಿತು. ಮೊದಲ ಲೆಮನ್ ಬ್ರೇಕ್ ವೇಳೆಗೆ 11 ಪಾಯಿಂಟ್ ಕಲೆಹಾಕುವ ಮೂಲಕ ಲಕ್ಷ್ಯ ಸೇನ್ ಮುನ್ನಡೆ ಕಾಯ್ದುಕೊಂಡರು. ಈ ವೇಳೆ ಎನ್‌ಜಿ ತ್ಸೆ ಯೋಂಗ್ ಗಳಿಸಿದ್ದು ಕೇವಲ 7 ಪಾಯಿಂಟ್ ಮಾತ್ರ. 11-7 ಅಂತರದಿಂದ ಮತ್ತೆ ಶುರುವಾದ ಪಂದ್ಯದಲ್ಲಿ ಲಕ್ಷ್ಯ ಸೇನ್ ಫಾರ್ವಡ್ ಶಾಟ್ಗಳ ಮೂಲಕ ಗಮನ ಸೆಳೆದರು. ಈ ಮೂಲಕ ಮರು ಆರಂಭದಲ್ಲೇ 6 ಪಾಯಿಂಟ್ಗಳನ್ನು ಕಲೆಹಾಕಿದರು. ಅಂತಿಮವಾಗಿ ಮೂರನೇ ಸೆಟ್ ಅನ್ನು 21-16 ಪಾಯಿಂಟ್ಗಳ ಅಂತರದಿಂದ ಗೆಲ್ಲುವ ಮೂಲಕ ಲಕ್ಷ್ಯ ಸೇನ್ ಭಾರತಕ್ಕೆ ಮತ್ತೊಂದು ಬಂಗಾರದ ತಂದುಕೊಟ್ಟರು.
ಇದಕ್ಕೂ ಮುನ್ನ ಸೆಮಿಫೈನಲ್ನಲ್ಲಿ ಸಿಂಗಾಪುರದ ಜಿಯಾ ಹೆಂಗ್ ತೇಹ್ ಅವರನ್ನು 21-10, 18-21, 21-16 ವಿರುದ್ದ ಕಠಿಣ ಜಯ ಸಾಧಿಸಿ ಲಕ್ಷ್ಯ ಫೈನಲ್ಗೆ ಎಂಟ್ರಿ ಕೊಟ್ಟಿದ್ದರು. ಸೆಮಿಫೈನಲ್ನಲ್ಲಿ 10ನೇ ಶ್ರೇಯಾಂಕಿತ ಲಕ್ಷ್ಯ ಸೇನ್ಗೆ 87ನೇ ಶ್ರೇಯಾಂಕಿತ ಜಿಯಾ ಹೆಂಗ್ ಪ್ರಬಲ ಪೈಪೋಟಿ ನೀಡಿದ್ದರು. ಹೀಗಾಗಿಯೇ ಫೈನಲ್ ಪಂದ್ಯದ ಫಲಿತಾಂಶದಲ್ಲೂ ರೋಚಕತೆಯನ್ನು ನಿರೀಕ್ಷಿಸಲಾಗಿತ್ತು. ಅದರಂತೆ ಮೂರು ಸುತ್ತಿನ ಹೋರಾಟದಲ್ಲಿ ಗೆಲ್ಲುವ ಮೂಲಕ ಲಕ್ಷ್ಯ ಸೇನ್ ಭಾರತ ಕೀರ್ತಿ ಪಾತಾಕೆಯನ್ನು ಎತ್ತಿ ಹಿಡಿದಿದ್ದಾರೆ,
ಇನ್ನು ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಭಾರತೀಯ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕೆನಡಾದ ಮಿಶೆಲ್ ಲಿ ಅವರನ್ನು 21-15, 21-13 ನೇರ ಸೆಟ್ಗಳಿಂದ ಸೋಲಿಸುವ ಮೂಲಕ ಸ್ವರ್ಣ ಪದಕಕ್ಕೆ ಕೊರೊಳೊಡ್ಡಿದ್ದರು. ಇದೀಗ ಲಕ್ಷ್ಯ ಸೇನ್ ಕೂಡ ಚಿನ್ನದ ಪದಕ ಗೆಲ್ಲುವ ಮೂಲಕ ಪುರುಷರ ಮತ್ತು ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಪಾರುಪತ್ಯ ಮೆರೆದಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ 2022 ಬ್ಯಾಡ್ಮಿಂಟನ್ ಫೈನಲ್‌ವರೆಗಿನ ಲಕ್ಷ್ಯ ಸೇನ್ ಅವರ ಪ್ರಯಾಣದ ಸಂಕ್ಷಿಪ್ತ ನೋಟ:
- 32 ರ ಸುತ್ತು: ಸೇಂಟ್ ಹೆಲೆನಾದ ಟ್ರಿಸ್ಟಾನ್ ಡ ಕುನ್ಹಾ ಅವರನ್ನು 21-4, 21-5 ಸೆಟ್ಗಳಿಂದ ಸೋಲಿಸಿ ಅಭಿಯಾನ ಆರಂಭಿಸಿದ ಲಕ್ಷ್ಯ ಸೇನ್
- 16 ರ ಸುತ್ತು: ಆಸ್ಟ್ರೇಲಿಯಾದ ಲಿನ್ ಯಿಂಗ್ ಕ್ಸಿಯಾಂಗ್ ವಿರುದ್ಧ 21-9, 16-21 ಭರ್ಜರಿ ಜಯ.
- ಕ್ವಾರ್ಟರ್ ಫೈನಲ್: ಮಾರಿಷಸ್‌ನ ಪೌಲ್ ಜೂಲಿಯನ್ ಜಾರ್ಜಸ್ ವಿರುದ್ಧ 21-12, 21-11 ವಿರುದ್ದ ಭರ್ಜರಿ ಜಯ.
- ಸೆಮಿಫೈನಲ್: ತೆಹ್ ಜಿಯಾ ಹೆಂಗ್ ವಿರುದ್ಧ 21-10, 18-21, 21-16 ಸೆಟ್ಗಳ ರೋಚಕ ಹೋರಾಟದ ಜಯದೊಂದಿಗೆ ಫೈನಲ್ಗೆ ಎಂಟ್ರಿ.
Published On - 4:38 pm, Mon, 8 August 22