PV Sindhu: ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಪಿವಿ ಸಿಂಧು
CWG 2022 Badminton: ಎದುರಾಳಿಯ ಫೋರ್‌ಹ್ಯಾಂಡ್ ರಿಟರ್ನ್ ಶಾಟ್ ತಪ್ಪುಗಳನ್ನು ಬಳಸಿಕೊಂಡ ಸಿಂಧುಗೆ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಗಳಿಸುತ್ತಾ ಒತ್ತಡ ಹಾಕುವಲ್ಲಿ ಯಶಸ್ವಿಯಾಗಿದ್ದರು.
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು (PV Sindhu) ಕಾಮನ್ವೆಲ್ತ್ ಗೇಮ್ಸ್ನಲ್ಲಿ (CWG 2022) ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್ನಲ್ಲಿ ಕೆನಡಾದ ಮಿಶೆಲ್ ಲಿ ಅವರನ್ನು 21-15, 21-13 ನೇರ ಸೆಟ್ಗಳಿಂದ ಸೋಲಿಸುವ ಮೂಲಕ ಸಿಂಧು ಸ್ವರ್ಣ ಪದಕಕ್ಕೆ ಕೊರೊಳೊಡ್ಡಿದ್ದರು. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತದ ಒಟ್ಟಾರೆ ಚಿನ್ನದ ಪದಕದ ಸಂಖ್ಯೆಯನ್ನು 19 ಕ್ಕೇರಿಸಿದರು.
ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದ ಮೊದಲ ಸೆಟ್ ಅನ್ನು ಪಿವಿ ಸಿಂಧು 21-15 ಅಂತರದಿಂದ ಗೆದ್ದುಕೊಂಡರು. ಇನ್ನು 2ನೇ ಸೆಟ್ನಲ್ಲಿ ಆರಂಭದಲ್ಲೇ 6-3 ಅಂತರದಿಂದ ಮುನ್ನಡೆ ಕಾಯ್ದುಕೊಂಡ ಭಾರತೀಯ ಆಟಗಾರ್ತಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅಷ್ಟೇ ಅಲ್ಲದೆ ಮಿಶೆಲ್ 6 ಪಾಯಿಂಟ್ ಕಲೆಹಾಕುವ ವೇಳೆಗೆ ಸಿಂಧು 12 ಪಾಯಿಂಟ್ ಗಳಿಸಿದ್ದರು.ಆದರೆ ಇದಾದ ಬಳಿಕ ಕಂಬ್ಯಾಕ್ ಮಾಡಿದ ಕೆನಡಾ ಆಟಗಾರ್ತಿ ಬ್ಯಾಕ್ ಟು ಬ್ಯಾಕ್ ಪಾಯಿಂಟ್ ಗಳಿಸಿ ಅಂತರವನ್ನು 15-11 ಕ್ಕೆ ತಂದು ನಿಲ್ಲಿಸಿದರು. ಈ ಹಂತದಲ್ಲಿ ಆಕ್ರಮಣಕಾರಿ ಆಟವಾಡುವ ಮೂಲಕ ತಮ್ಮ ಅನುಭವವನ್ನು ತೆರೆದಿಟ್ಟ ಪಿವಿ ಸಿಂಧು ಎದುರಾಳಿ ಮೇಲೆ ಒತ್ತಡ ಹೆಚ್ಚಿಸಿದರು. ಅಲ್ಲದೆ 21 – 13 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
ಮಾಜಿ ವಿಶ್ವ ಚಾಂಪಿಯನ್ ಪಿವಿ ಸಿಂಧು 2014 ಮತ್ತು 2018 ರ ಕಾಮನ್ವೆಲ್ತ್ ಆವೃತ್ತಿಗಳಲ್ಲಿ ಕಂಚು ಮತ್ತು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು. ಇದೀಗ ಚಿನ್ನದ ಪದಕ ಗೆಲ್ಲುವ ಮೂಲಕ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕಾಗಿ ಮೂರು ವಿಭಿನ್ನ ಪದಕಗಳನ್ನು ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಇದಕ್ಕೂ ಮುನ್ನ ಸೆಮಿಫೈನಲ್ನಲ್ಲಿ ಸಿಂಗಾಪುರದ ಯೆಯೊ ಜಿಯಾ ಮಿನ್ ಅವರನ್ನು 21-19 21-17 ಅಂತರದಿಂದ ಸೋಲಿಸಿ ಫೈನಲ್ಗೆ ಲಗ್ಗೆಯಿಟ್ಟಿದ್ದರು. ಈ ಬಾರಿಯ ಕ್ರೀಡಾಕೂಟದಲ್ಲಿ ತನ್ನ ತಾಂತ್ರಿಕ ಕುಶಾಗ್ರಮತಿಯನ್ನು ಪ್ರದರ್ಶಿಸಿದ್ದ ಸಿಂಧು ಆರಂಭದಿಂದಲೂ ಪ್ರತಿ ಆಟಗಾರರ ವಿರುದ್ದ ಮೇಲುಗೈ ಸಾಧಿಸುತ್ತಾ ಬಂದಿದ್ದರು.
ಅದರಲ್ಲೂ ಸ್ಟಾರ್ ಆಟಗಾರ್ತಿ ಯೆಯೊ ಜಿಯಾ ಮಿನ್ ಸೆಮಿಫೈನಲ್ನಲ್ಲಿ ಭಾರೀ ಪೈಪೋಟಿ ಎದುರಿಸಬೇಕಾಯಿತು. ಇದಾಗ್ಯೂ ಪರಿಪೂರ್ಣವಾದ ನೆಟ್ ಶಾಟ್‌ನೊಂದಿಗೆ 19-12 ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಎದುರಾಳಿಯ ಫೋರ್‌ಹ್ಯಾಂಡ್ ರಿಟರ್ನ್ ಶಾಟ್ ತಪ್ಪುಗಳನ್ನು ಬಳಸಿಕೊಂಡ ಸಿಂಧುಗೆ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಗಳಿಸುತ್ತಾ ಒತ್ತಡ ಹಾಕುವಲ್ಲಿ ಯಶಸ್ವಿಯಾಗಿದ್ದರು.
ಅದರಂತೆ 49 ನಿಮಿಷಗಳ ಕಾದಾಟದಲ್ಲಿ ಅಂತಿಮವಾಗಿ ಯೊಯೊ ಜಿಯಾರನ್ನು 21-19 21-17 ನೇರ ಸೆಟ್ಗಳಿಂದ ಸೋಲಿಸಿ ಫೈನಲ್ಗೆ ಲಗ್ಗೆಯಿಟ್ಟಿದ್ದರು. ಫೈನಲ್ನಲ್ಲಿ ಮಿಶೆಲ್ ಲಿ ಅವರಿಗೆ ಸೋಲುಣಿಸುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಪಿವಿ ಸಿಂಧು ಅವರ ಫೈನಲ್ ಪಯಣ ಸಂಕ್ಷಿಪ್ತ ನೋಟ:
- 64 ರ ಸುತ್ತು – ಬೈ
- 32 ರ ಸುತ್ತು – ಮಾಲ್ಡೀವ್ಸ್‌ನ ಅಬ್ದುಲ್ ರಜಾಕ್ ಫಾತಿಮತ್ ನಬಾಹಾ ಅವರನ್ನು 21-4, 21-11 ಸೆಟ್ಗಳಿಂದ ಸೋಲಿಸಿದ್ದರು.
- 16 ರ ಸುತ್ತು – ಉಗಾಂಡಾದ ಹುಸಿನಾ ಕೊಬುಗಾಬೆ ಅವರನ್ನು 21-10, 21-9 ಸೆಟ್ಗಳಿಂದ ಮಣಿಸಿದ್ದರು.
- ಕ್ವಾರ್ಟರ್‌ಫೈನಲ್ – ಮಲೇಷ್ಯಾದ ಗೊಹ್ ಜಿನ್ ವೀ ವಿರುದ್ಧ 19-21, 21-14, 21-18 ಸೆಟ್ಗಳಿಂದ ಪರಾಜಯಗೊಳಿಸಿದ್ದರು.
- ಸೆಮಿಫೈನಲ್ – ಸಿಂಗಾಪುರದ ಯೋ ಜಿಯಾ ಮಿನ್ ಅವರನ್ನು 21-19, 21-17 ನೇರ ಸೆಟ್ಗಳಿಂದ ಸೋಲಿಸಿದ್ದರು.