AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಭಾರತಕ್ಕೆ ವೀರಾವೇಷದ ಸೋಲು; ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟ ಹರ್ಮನ್​ಪ್ರೀತ್ ಪಡೆ

CWG 2022: ಆಸ್ಟ್ರೇಲಿಯಾ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಆಸ್ಟ್ರೇಲಿಯಾ ವಿರುದ್ಧ ಸತತ ಎರಡನೇ ಬಾರಿ ಟಿ20 ಫೈನಲ್‌ನಲ್ಲಿ ಸೋತ ಭಾರತ ತಂಡ ಬೆಳ್ಳಿ ಪದಕ ಗೆದ್ದುಕೊಂಡಿತು.

IND vs AUS: ಭಾರತಕ್ಕೆ ವೀರಾವೇಷದ ಸೋಲು; ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟ ಹರ್ಮನ್​ಪ್ರೀತ್ ಪಡೆ
TV9 Web
| Updated By: ಪೃಥ್ವಿಶಂಕರ|

Updated on:Aug 08, 2022 | 8:04 AM

Share

ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022)ರಲ್ಲಿ ಭಾನುವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಫೈನಲ್‌ನಲ್ಲಿ ಟಿ20 ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ರೋಚಕ ಪಂದ್ಯದಲ್ಲಿ ಭಾರತವನ್ನು 9 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಆಸ್ಟ್ರೇಲಿಯಾ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಆಸ್ಟ್ರೇಲಿಯಾ ವಿರುದ್ಧ ಸತತ ಎರಡನೇ ಬಾರಿ ಟಿ20 ಫೈನಲ್‌ನಲ್ಲಿ ಸೋತ ಭಾರತ ತಂಡ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯ್ತು. ಫೈನಲ್‌ನಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಸ್ಟಾರ್ ಓಪನರ್ ಬೆಥ್ ಮೂನಿ ಅವರ ಅತ್ಯುತ್ತಮ ಅರ್ಧಶತಕ ಮತ್ತು ನಾಯಕಿ ಮೆಗ್ ಲ್ಯಾನಿಂಗ್ ಅವರ ದೊಡ್ಡ ಜೊತೆಯಾಟದ ಆಧಾರದ ಮೇಲೆ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಭಾರತೀಯ ಬೌಲರ್‌ಗಳ ಬಿಗಿ ಪ್ರದರ್ಶನ ಮತ್ತು ರಾಧಾ ಯಾದವ್ ಮತ್ತು ದೀಪ್ತಿ ಶರ್ಮಾ ಅವರ ಅಮೋಘ ಕ್ಯಾಚ್‌ಗಳಿಂದಾಗಿ ಭಾರತ ತಂಡ ಆಸ್ಟ್ರೇಲಿಯಾ ಬಿಗ್ ಸ್ಕೋರ್ ಮಾಡದಂತೆ ತಡೆಯಿತು.

ಈ ಗುರಿಯನ್ನು ಬೆನ್ನಟ್ಟಿದ ಭಾರತದ ಆರಂಭ ಅತ್ಯಂತ ಕಳಪೆಯಾಗಿತ್ತು. ಗುಂಪು ಹಂತ ಮತ್ತು ಸೆಮಿಫೈನಲ್‌ಗಳಲ್ಲಿ ಸ್ಫೋಟಕ ಇನ್ನಿಂಗ್ಸ್‌ಗಳನ್ನು ಆಡಿದ್ದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಈ ಬಾರಿ ಬೇಗನೆ ಪೆವಿಲಿಯನ್ ಸೇರಿದರು. ಜೊತೆಗೆ ಶೆಫಾಲಿ ವರ್ಮಾ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಕೇವಲ 22 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡ ಭಾರತ ತಂಡಕ್ಕೆ ದೊಡ್ಡ ಹಾಗೂ ವೇಗದ ಜೊತೆಯಾಟದ ಅಗತ್ಯವಿತ್ತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರೋಡ್ರಿಗಸ್ ಈ ಜವಾಬ್ದಾರಿಯನ್ನು ನಿರ್ವಹಿಸಿದರು. ರೋಡ್ರಿಗಸ್ ನಿಧಾನವಾಗಿ ಆಡುವುದನ್ನು ಮುಂದುವರೆಸಿದರು, ಆದರೆ ಒಂದು ತುದಿಯಿಂದ ಕ್ಯಾಪ್ಟನ್ ಕೌರ್ ತನ್ನ ಆಕ್ರಮಣಕಾರಿ ಶೈಲಿಯನ್ನು ತೋರಿಸುವುದನ್ನು ಮುಂದುವರೆಸಿದರು.

ಈ ಕ್ರೀಡಾಕೂಟದ ಮೊದಲ ಪಂದ್ಯದ ಮುಖಾಮುಖಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಅರ್ಧಶತಕ ಗಳಿಸಿದ್ದ ಹರ್ಮನ್‌ಪ್ರೀತ್ ಮತ್ತೊಮ್ಮೆ ತನ್ನ ಅದ್ಭುತ ಆಟ ಪ್ರದರ್ಶಿಸಿ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಜೆಮಿಮಾ ಮತ್ತು ಹರ್ಮನ್‌ಪ್ರೀತ್ ಕೌರ್ ನಡುವಿನ ಜೊತೆಯಾಟವು ಭಾರತದ ಗೆಲುವಿನ ಭರವಸೆಯನ್ನು ಹೆಚ್ಚಿಸಿತ್ತು. ಆದರೆ 2017 ರ ವಿಶ್ವಕಪ್ ಫೈನಲ್‌ನಲ್ಲಿ ಸಂಭವಿಸಿದ ಘಟನೆಯೇ ಮತ್ತೆ ಇಲ್ಲಿ ಸಂಭವಿಸಿತು. ಭಾರತದ ಪಾಳಯದಲ್ಲಿ ಒಂದೊಂದೇ ವಿಕೆಟ್‌ಗಳು ಉರುಳಲು ಆರಂಭಿಸಿದವು. 15ನೇ ಓವರ್‌ನಲ್ಲಿ ಜೆಮಿಮಾ ವಿಕೆಟ್‌ನೊಂದಿಗೆ 96 ರನ್‌ಗಳ ಜೊತೆಯಾಟ ಮುರಿದ ನಂತರ ಮುಂದಿನ 7 ಎಸೆತಗಳಲ್ಲಿ ಪೂಜಾ ವಸ್ತ್ರಾಕರ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಪೆವಿಲಿಯನ್‌ಗೆ ಮರಳಿದರು.

ಸತತ ಆಘಾತಗಳಿಂದ ಭಾರತ ತಂಡ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದೀಪ್ತಿ ಶರ್ಮಾ ಕೊಂಚ ಸಮಯ ಗೆಲುವಿಗೆ ಪ್ರಯತ್ನಿಸಿದರಾದರೂ ಅವರಿಗೂ ಹೆಚ್ಚು ಕಾಲ ಮೈದಾನದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಭಾರತಕ್ಕೆ ಗೆಲುವಿಗೆ 11 ರನ್‌ಗಳ ಅಗತ್ಯವಿತ್ತು, ಆದರೆ ಭಾರತ ತಂಡವು ಕೇವಲ 1 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಇಡೀ ತಂಡವು ಕೇವಲ 152 ರನ್‌ಗಳಿಗೆ ಆಲೌಟ್ ಆಯಿತು.

Published On - 12:45 am, Mon, 8 August 22