ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಚಿನ್ನದ ಪದಕದ ರೇಸ್‌ನಿಂದ ಹೊರಬಿದ್ದಿದೆ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದ್ದರು. ಆದರೆ, ಈ ಪಂದ್ಯದ ಪೆನಾಲ್ಟಿ ಶೂಟೌಟ್ ಇದೀಗ ವಿವಾದಕ್ಕೆ ಸಿಲುಕಿದೆ. ಏಕೆಂದರೆ ಪೂರ್ಣ ಆಟದಲ್ಲಿ ಉಭಯ ತಂಡಗಳು 1-1 ಗೋಲುಗಳ ಸಮಬಲ ಸಾಧಿಸಿದ್ದರಿಂದ ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು. ಆದರೆ ಈ ವೇಳೆ ರೆಫರಿ ಮಾಡಿದ ಎಡವಟ್ಟಿನಿಂದ ಆಸ್ಟ್ರೇಲಿಯಾ ತಂಡಕ್ಕೆ ಅನುಕೂಲವಾಯಿತು.
ಮೊದಲ ಶೂಟೌಟ್ ಅವಕಾಶ ಪಡೆದ ಆಸ್ಟ್ರೇಲಿಯಾ ನಿರ್ದಿಷ್ಟ ಸಮಯದೊಳಗೆ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಭಾರತ ತಂಡದ ಗೋಲಿ ಸವಿತಾ ಪುನಿಯಾ ಚೆಂಡನ್ನು ತಡೆದಿದ್ದರು. ಆದರೆ ರೆಫರಿ ಈ ವೇಳೆ ಸಮಯದ ಪರಿಗಣಿಸದಿರುವುದು ಎಡವಟ್ಟಿಗೆ ಕಾರಣವಾಯಿತು. ಅಂದರೆ ನಿರ್ದಿಷ್ಟ ಸಮಯದೊಳಗೆ ಪೆನಾಲ್ಟಿ ಶೂಟೌಟ್ನಲ್ಲಿ ಗೋಲುಗಳಿಸಬೇಕು. ಆದರೆ ಇಲ್ಲಿ ತಾಂತ್ರಿಕ ದೋಷದಿಂದಾಗಿ ಸಮಯವನ್ನು ಲೆಕ್ಕ ಮಾಡಲು ಸಾಧ್ಯವಾಗಿಲ್ಲ ಎಂದು ರೆಫರಿ ತಿಳಿಸಿದರು. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾಗೆ ಮತ್ತೊಮ್ಮೆ ಶೂಟೌಟ್ ಅವಕಾಶ ನೀಡಲಾಯಿತು.
ಇದೀಗ ರೆಫರಿಯ ನಿರ್ಧಾರದ ಬಗ್ಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಟೀಮ್ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಹಾಕಿಯಲ್ಲಿ ಭಾರತ ಸೂಪರ್ ಪವರ್ ಅಲ್ಲದ ಕಾರಣ ಗಡಿಯಾರ ಹಾಳಾಗಿದೆ ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
— Guess Karo (@KuchNahiUkhada) August 6, 2022
ಭಾರತ ಸೂಪರ್ ಪವರ್ ಆದಾಗ ಗಡಿಯಾರ ಸಮಯಕ್ಕೆ ಸರಿಯಾಗಿ ಓಡುತ್ತದೆ ಎಂದು ರೆಫರಿ ನಿರ್ಧಾರವನ್ನು ಸೆಹ್ವಾಗ್ ವ್ಯಂಗ್ಯವಾಡಿದ್ದಾರೆ. ಅಷ್ಟೇ ಅಲ್ಲದೆ ನಾವು ಕ್ರಿಕೆಟ್‌ನಲ್ಲಿ ಸೂಪರ್ ಪವರ್‌ಗಳಾಗಿರದಿದ್ದರೆ, ಕ್ರಿಕೆಟ್‌ನಲ್ಲಿಯೂ ಹೀಗೆ ಸಂಭವಿಸುತ್ತಿತ್ತು. ಹಾಕಿಯನ್ನು ಕೂಡ ಸೂಪರ್ ಪವರ್ ಮಾಡಿದ್ರೆ ಎಲ್ಲಾ ಗಡಿಯಾರಗಳು ಸಮಯಕ್ಕೆ ಪ್ರಾರಂಭವಾಗುತ್ತವೆ. ನಮ್ಮ ಆಟಗಾರ್ತಿಯರು ಬಗ್ಗೆ ಹೆಮ್ಮೆಯಿದೆ ಸೆಹ್ವಾಗ್ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಈ ಪ್ರಕರಣವನ್ನು ಹಾಕಿ ಫೆಡರೇಶನ್ ಗಂಭೀರವಾಗಿ ಪರಿಗಣಿಸಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡ ಸೆಮಿಫೈನಲ್ ಸೋಲಿನ ಸಂದರ್ಭದಲ್ಲಿ ಗಡಿಯಾರಕ್ಕೆ ಸಂಬಂಧಿಸಿದ ವಿವಾದಕ್ಕಾಗಿ ಅಂತರಾಷ್ಟ್ರೀಯ ಹಾಕಿ ಫೆಡರೇಶನ್ ಕ್ಷಮೆಯಾಚಿಸುತ್ತಿರುವುದಾಗಿ ತಿಳಿಸಿದೆ. ಅಲ್ಲದೆ ಈ ಬಗ್ಗೆ ತನಿಖೆ ನಡೆಸಲು ಎಫ್‌ಐಎಚ್ ಆದೇಶಿಸಿದೆ. ಇನ್ನು ಪಂದ್ಯದ ಪೆನಾಲ್ಟಿ ಶೂಟೌಟ್ನಲ್ಲಿ ಆಸ್ಟ್ರೇಲಿಯಾ 3 ಗೋಲುಗಳಿಸಿದರೆ, ಭಾರತೀಯ ವನಿತೆಯರು ಗೋಲು ಬಾರಿಸಲು ವಿಫಲರಾಗಿದ್ದರು.