ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ (Commonwealth Games 2022) ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈಗಾಗಲೇ 4 ಪದಕಗಳನ್ನು ಬಾಜಿಕೊಂಡಿದೆ. ಆದರೆ, ಬಹುಕಾಲದ ಬಳಿಕ ಕಾಮನ್ವೆಲ್ತ್ನಲ್ಲಿ ನಡೆಯುತ್ತಿರುವ ಕ್ರಿಕೆಟ್ನಲ್ಲಿ ಭಾರತ ಇನ್ನೂ ಶುಭಾರಂಭ ಕಂಡಿಲ್ಲ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಸೋಲು ಕಂಡ ಪರಿಣಾಮ ಉಳಿದಿರುವ ಎರಡೂ ಪಂದ್ಯವನ್ನು ಗೆಲ್ಲಲೇ ಬೇಕಾಗಿದೆ. ಇದಕ್ಕಾಗಿ ಇಂದು ಮತ್ತೊಂದು ಅಗ್ನಿಪರೀಕ್ಷೆಗೆ ಹರ್ಮನ್‌ಪ್ರೀತ್ (Harmanpreet Kaur) ಪಡೆ ಸಜ್ಜಾಗುತ್ತಿದೆ. ಇಂದು ಎಡ್ಗಬ್ಸ್ಟರ್ ಕ್ರೀಡಾಂಗಣದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ ಮಹಿಳಾ ತಂಡ (India Women vs Pakistan Women) ಮಾಡು ಇಲ್ಲವೇ ಮಡಿ ಪಂದ್ಯವನ್ನು ಆಡುತ್ತಿದೆ. ಉಭಯ ತಂಡಗಳಿಗೆ ಇದು ಗೆಲ್ಲಲೇ ಬೇಕಾದ ಪಂದ್ಯವಾಗಿದ್ದು ಸೋತರೆ ಕಾಮನ್ವೆಲ್ತ್ನಿಂದ ಹೊರಬಿದ್ದಂತೆ.
ಟೂರ್ನಿಯಲ್ಲಿ ಉಭಯ ತಂಡಗಳು ಈಗಾಗಲೇ ಮೊದಲ ಪಂದ್ಯದಲ್ಲಿ ಸೋತಿರುವುದರಿಂದ ಇಂದಿನ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ದುರ್ಬಲ ಬಾರ್ಬಡೋಸ್ ತಂಡದ ವಿರುದ್ಧ ಸೋತರೆ, ಭಾರತ ತಂಡ ಆಸ್ಟ್ರೇಲಿಯಾ ಎದುರು ಸುಲಭ ಜಯ ಸಾಧಿಸು ಹಂತದಲ್ಲಿತ್ತಾದರು ಸೋಲುಂಡಿತು. ಭಾರತ ವನಿತೆಯರ ತಂಡ ಹಾಗೂ ಪಾಕಿಸ್ತಾನ ವನಿತೆಯರ ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು 11 ಅಂತರರಾಷ್ಟ್ರೀಯ ಟಿ20 ಮುಖಾಮುಖಿ ಪಂದ್ಯಗಳು ನಡೆದಿದ್ದು, ಈ ಪೈಕಿ ಭಾರತ ವನಿತೆಯರ ತಂಡ 9 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಉಳಿದೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಗೆಲುವು ಕಂಡಿದೆ. ಈ ಮೂಲಕ ಇಭಾರತ ವನಿತೆಯರ ತಂಡ ಸ್ಪಷ್ಟ ಮೇಲುಗೈ ಸಾಧಿಸಿದೆ.
ಕಳೆದ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆದುಕೊಂಡರೂ ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಬಿಟ್ಟರೆ ಉಳಿದವರೆಲ್ಲ ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಇಂದುಕೂಡ ಸ್ಮೃತಿ ಮಂದಾನ ಹಾಗೂ ಶೆಫಾಲಿ ವರ್ಮಾ ತಂಡಕ್ಕೆ ಸ್ಫೋಟಕ ಆರಂಭ ನೀಡಬೇಕಿದೆ. ಮೂರನೇ ಕ್ರಮಾಂಕದಲ್ಲಿ ಬರುವ ಯಸ್ತಿಕಾ ಭಾಟಿಯ ಕೂಡ ತಂಡಕ್ಕೆ ನೆರವಾಗಬೇಕಿದೆ. ಜಮಿಯಾ ರೋಡ್ರಿಗಸ್, ದೀಪ್ತಿ ಶರ್ಮಾ ಅವರಿಂದಲೂ ಕೊಡುಗೆ ಬೇಕಾಗಿದೆ. ಬೌಲರ್ಗಳ ಪೈಕಿ ರೇಣುಕಾ ಸಿಂಗ್ ಬಿಟ್ಟರೆ ಮತ್ಯಾರು ಅಪಾಯಕಾರಿಯಾಗಿ ಗೋಚರಿಸಿಲ್ಲ.
ಇನ್ನು, ಇಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ಗಳಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಲೈವ್ ಸ್ಟ್ರೀಮಿಂಗ್ ಸೋನಿ LIV ನಲ್ಲಿ ಇರುತ್ತದೆ. ಪಂದ್ಯವು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯಲಿದೆ.
ಸಂಭಾವ್ಯ ಪ್ಲೇಯಿಂಗ್ X:
ಭಾರತ ಮಹಿಳಾ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ (WK), ಹರ್ಮನ್‌ಪ್ರೀತ್ ಕೌರ್ (c), ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ರಾಧಾ ಯಾದವ್, ಮೇಘನಾ ಸಿಂಗ್, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್.
ಪಾಕಿಸ್ತಾನ ಮಹಿಳಾ ತಂಡ: ಇರಾಮ್ ಜಾವೇದ್, ಮುನೀಬಾ ಅಲಿ, ಒಮೈಮಾ ಸೊಹೈಲ್, ಬಿಸ್ಮಾ ಮಾರುಫ್, ನಿದಾ ದಾರ್, ಅಲಿಯಾ ರಿಯಾಜ್, ಆಯೇಶಾ ನಯೀಮ್, ಫಾತಿಮಾ ಸನಾ, ತುಬಾ ಹಸನ್, ಡಯಾನಾ ಬೇಗ್, ಅಮಮ್ ಅಮೀನ್.
Published On - 9:48 am, Sun, 31 July 22