ಕಾಮನ್‌ವೆಲ್ತ್ ಗೇಮ್ಸ್‌ನ ಕೊನೆಯ ದಿನ ಭಾರತ ಬ್ಯಾಡ್ಮಿಂಟನ್‌ನಲ್ಲಿ ಮೂರು ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿವಿ ಸಿಂಧು ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಮತ್ತು ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಭಾರತದ ನಂಬರ್ ಒನ್ ಜೋಡಿ ಇಂಗ್ಲೆಂಡ್‌ನ ಲೇನ್ ಮತ್ತು ವೆಂಡಿ ಜೋಡಿಯನ್ನು ಸೋಲಿಸಿ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. ಮುನ್ನ ಈ ಜೋಡಿ 2018ರಲ್ಲಿ ಬೆಳ್ಳಿ ಪದಕ ಜಯಿಸಿತ್ತು. ಇದೀಗ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಪಾರುಪತ್ಯ ಮೆರೆದಿದ್ದಾರೆ.
45 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಸಾತ್ವಿಕ್ ಮತ್ತು ಚಿರಾಗ್ ಜೋಡಿ 21-15, 21-13 ಅಂತರದಿಂದ ನೇರ ಸೆಟ್ಗಳಿಂದ ಗೆದ್ದರು. ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತ ಬ್ಯಾಡ್ಮಿಂಟನ್‌ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿರುವುದು ಇದೇ ಮೊದಲು ಎಂಬುದು ವಿಶೇಷ.
ಈ ಬಾರಿಯ ಕ್ರೀಡಾಕೂಟದಲ್ಲಿ ಸಾತ್ವಿಕ್ ಮತ್ತು ಚಿರಾಗ್ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ಈ ಜೋಡಿಯಿಂದ ಚಿನ್ನವನ್ನು ನಿರೀಕ್ಷಿಸಲಾಗಿತ್ತು. ಮತ್ತೊಂದೆಡೆ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಮಹಿಳಾ ಸಿಂಗಲ್ಸ್‌ನಲ್ಲಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು.
ಇದರ ಬೆನ್ನಲ್ಲೇ ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಸಂಭ್ರಮಿಸಿದ್ದರು. ಈ ಗೆಲುವಿನ ಸಂಭ್ರಮ ಮಾಸುವ ಮುನ್ನವೇ ಇದೀಗ ಸಾತ್ವಿಕ್-ಚಿರಾಗ್ ಜೋಡಿಯು ಪರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕ ಬೇಟೆಯಾಡಿದ್ದಾರೆ. ಈ ಮೂಲಕ ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಭಾರತದ ಬ್ಯಾಡ್ಮಿಂಟನ್ ತಾರೆಗಳು ಮೂರು ವಿಭಾಗದಲ್ಲೂ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
Published On - 6:17 pm, Mon, 8 August 22