Neeraj Chopra
ಭಾರತದ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ (Neeraj Chopra) ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿದಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ನೀರಜ್ ಚೋಪ್ರಾ, ಸ್ಪರ್ಧೆಯ ನಡುವೆ ಗಾಯಗೊಂಡಿದ್ದರು. ಹೀಗಾಗಿ ಕಾಮನ್‌ವೆಲ್ತ್ ಕ್ರೀಡಾಕೂಟದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದೀಗ ತಮ್ಮ ಗಾಯದ ಬಗ್ಗೆ ಹಾಗೂ ಮುಂದಿನ ಗುರಿಗಳ ಬಗ್ಗೆ ನೀರಜ್ ಚೋಪ್ರಾ ಮನಬಿಚ್ಚಿ ಮಾತನಾಡಿದ್ದಾರೆ. ಈ ಸಂದರ್ಶನದ ಆಯ್ದು ಭಾಗ ಇಲ್ಲಿದೆ.
ಗಾಯ ಎಷ್ಟು ಗಂಭೀರವಾಗಿದೆ?
- ತುಂಬಾ ಗಂಭೀರ ಗಾಯವೇನು ಆಗಿಲ್ಲ. ಹೀಗಾಗಿ ಆತಂಕ ಪಡುವ ಅವಶ್ಯಕತೆಯಿಲ್ಲ. ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಈ ವರ್ಷ ಇನ್ನೂ ಅನೇಕ ಕ್ರೀಡಾಕೂಟಗಳಿವೆ. ನಾನು ಅಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ. ನಾನು ಮುಂದಿನ ಸ್ಪರ್ಧೆಗಳ ಮೇಲೆ ಕಣ್ಣಿಟ್ಟಿದ್ದೇನೆ. ಹೀಗಾಗಿ ಈಗ ವೈದ್ಯಕೀಯ ವಿಶ್ರಾಂತಿ ಅಗತ್ಯ. ಅಲ್ಲದೆ ಗಾಯದಿಂದ ಚೇತರಿಸಿಕೊಂಡ ಬಳಿಕ ಮತ್ತೆ ಮೈದಾನಕ್ಕೆ ಮರಳುವುದಾಗಿ ಚೋಪ್ರಾ ತಿಳಿಸಿದ್ದಾರೆ.
ಒಲಿಂಪಿಕ್ಸ್ಗೆ ಹೋಲಿಸಿದರೆ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಿಮ್ಮ ಪ್ರದರ್ಶನ ಹೇಗೆ ವಿಭಿನ್ನವಾಗಿತ್ತು?
- ಮೊದಲ ಎಸೆತದಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂಬುದು ನನ್ನ ಮನಸ್ಸಿನಲ್ಲಿತ್ತು. ಆದರೆ ಕೆಲವೊಮ್ಮೆ ಯೋಜನೆಗಳ ಪ್ರಕಾರ ಎಲ್ಲವೂ ನಡೆಯುವುದಿಲ್ಲ. ನಮ್ಮ ಆಟವು ತಾಂತ್ರಿಕವಾಗಿದೆ. ತಪ್ಪು ಸಂಭವಿಸಿದೆ ಮತ್ತು ಇದರಿಂದಾಗಿ ನನ್ನ ಎರಡನೇ ಎಸೆತವು ಸರಿಯಾಗಿ ಹೋಗಲಿಲ್ಲ. ಆದರೆ ಮೂರನೇ ಎಸೆತವು ಉತ್ತಮವಾಗಿತ್ತು ಮತ್ತು ನಾಲ್ಕನೇ ಎಸೆತವು ಬೆಳ್ಳಿ ಪದಕಕ್ಕೆ ಕಾರಣವಾಯಿತು. ನಾನು ಪದಕ ಗೆಲ್ಲಲು ಅಲ್ಲಿಗೆ ಹೋಗಿದ್ದೆ. ದೇಶಕ್ಕಾಗಿ ಬೆಳ್ಳಿ ಪದಕದೊಂದಿಗೆ ಹಿಂತಿರುಗುತ್ತಿರುವುದು ನನಗೆ ಸಂತೋಷ ನೀಡಿದೆ. ಏಕೆಂದರೆ ನಾವು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದು ಹಲವು ವರ್ಷಗಳೇ ಕಳೆದಿವೆ. ಇದಾಗ್ಯೂ ಚಿನ್ನ ಗೆಲ್ಲಲು ಸಾಧ್ಯವಾಗಿಲ್ಲ. ಏಕೆಂದರೆ ಫೈನಲ್‌ನಲ್ಲಿ ಇತರ ಅಥ್ಲೀಟ್‌ಗಳು ಉತ್ತಮ ಪ್ರದರ್ಶನ ನೀಡಿದ್ದರು. ಇದಾಗ್ಯೂ ನನ್ನ ಪ್ರದರ್ಶನ ತೃಪ್ತಿ ನೀಡಿದೆ ಎಂದು ಚೋಪ್ರಾ ತಿಳಿಸಿದರು.
4ನೇ ಎಸೆತದಲ್ಲಿ ಜಾವೆಲಿನ್ ಬಿಡುಗಡೆ ಮಾಡಿದ ಬೆನ್ನಲ್ಲೇ ನೀವು ಘರ್ಜಿಸಿದ್ದೀರಿ…ನಿಮಗೆ ಆ ಎಸೆತ ದೂರಕ್ಕೆ ಹೋಗುತ್ತೆ ಎಂಬುದು ಮೊದಲೇ ಗೊತ್ತಾಗಿತ್ತಾ?
- ಹೌದು, ನನ್ನ ಪ್ರಯತ್ನದ ಕಾರಣ ಅದು ಉತ್ತಮ ಎಸೆತ ಎಂಬುದು ನನಗೆ ತಿಳಿದಿತ್ತು. ವರ್ಷಗಳ ಕಾಲದ ತರಬೇತಿ ಮತ್ತು ಅಭ್ಯಾಸದ ಕಾರಣದಿಂದಾಗಿ ನಿಮ್ಮ ಎಸೆತವು ಯಾವ ದೂರ ಕ್ರಮಿಸಲಿದೆ ಎಂಬುದು ಅಂದಾಜಾಗುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಭಾವನೆಗಳನ್ನು ವಿಭಿನ್ನವಾಗಿ ಹೊರಹಾಕುತ್ತೇವೆ.
ಪೀಟರ್ಸ್ ಅವರ 90 ಮೀ. ಎಸೆತ ನಿಮ್ಮಲ್ಲಿ ಒತ್ತಡವನ್ನುಂಟು ಮಾಡಿತೇ?
- ಆಂಡರ್ಸನ್ ಪೀಟರ್ಸ್ ಮೊದಲ ಮೂರು ಎಸೆತಗಳನ್ನು 90 ಮೀಟರ್ಗಿಂತ ದೂರ ಎಸೆದಿರುವುದು ಅದ್ಭುತ ಎನ್ನಬಹುದು. ಆದರೆ ನಾನು ಯಾವಾಗಲೂ ಏನನ್ನೂ ಅತಿಯಾಗಿ ಯೋಚಿಸುವ ಬದಲು ನನ್ನ ಮುಂದಿನ ಎಸೆತದತ್ತ ಗಮನ ಹರಿಸುತ್ತೇನೆ. ನಾನು ಪ್ರತಿ ಬಾರಿ 100% ಅನ್ನು ಹೇಗೆ ನೀಡುವುದು ಎಂಬುದರ ಬಗ್ಗೆ ಯೋಚಿಸುತ್ತೇನೆ. ಇದಾಗ್ಯೂ ಪ್ರತಿ ಎದುರಾಳಿಯ ಎಸೆತದ ನಂತರ ನಮ್ಮ ಮುಂದೆ ಒಂದು ಸವಾಲು ಇರುತ್ತದೆ. ಆದರೆ ನಾನು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಆಂಡರ್ಸನ್ ಅವರ ಎಸೆತಗಳ ಬಗ್ಗೆ ನನಗೆ ಅರಿವಿತ್ತು. ಹೀಗಾಗಿ ಒತ್ತಡಕ್ಕೆ ಒಳಗಾಗುವ ಬದಲು, ನನ್ನ ಗುರಿ ಮೇಲೆ ಗಮನ ಕೇಂದ್ರೀಕರಿಸಿದ್ದೆ.
ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಬಳಿಕ ನೀವು ಹಿತೈಷಿಗಳಿಂದ ದೂರ ಉಳಿದು ಬೇಗನೆ ಮೈದಾನದಲ್ಲಿ ಕಾಣಿಸಿಕೊಂಡಿದ್ದೀರಿ. ಇದಕ್ಕೇನು ಕಾರಣ?
- ಹೌದು. ನಾನು ಕಠಿಣವಾಗಿ ತರಬೇತಿ ಪಡೆಯಬೇಕಾಗಿತ್ತು. ನನ್ನ ಥ್ರೋಗಳಲ್ಲಿ ಸುಧಾರಣೆ ಮಾಡಬೇಕಿತ್ತು. ಅದರ ಪರಿಣಾಮ ಎರಡು ರಾಷ್ಟ್ರೀಯ ದಾಖಲೆಗಳು, ಅರ್ಹತಾ ಸುತ್ತುಗಳಲ್ಲಿನ ಥ್ರೋಗಳು ಮತ್ತು ನಂತರ ಒರೆಗಾನ್‌ನಲ್ಲಿನ ಫಲಿತಾಂಶವಾಗಿ ಹೊರಹೊಮ್ಮಿದೆ. ಇವೆಲ್ಲವೂ ತುಂಬಾ ತೃಪ್ತಿಕರವಾಗಿದೆ. ಆದರೆ ನಾನು ಇಷ್ಟಪಡುವಷ್ಟು ಅಥವಾ ಅಗತ್ಯವಿರುವ ಮಟ್ಟದಲ್ಲಿ ತರಬೇತಿ ಪಡೆಯಲು ನನಗೆ ಹೆಚ್ಚು ಸಮಯವಿರಲಿಲ್ಲ. ಆದರೂ, ಈ ಸಮಯದ ಅಭಾವದಲ್ಲಿ ನಾನು ಸಾಧಿಸಿದ್ದೆಲ್ಲವೂ ತೃಪ್ತಿಕರವಾಗಿದೆ. ವಿಶೇಷವಾಗಿ ನನ್ನ ಹೊಸ ದಾಖಲೆ ಖುಷಿ ನೀಡಿದೆ ಎಂದು ಚೋಪ್ರಾ ಹೇಳಿದರು.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಿಮ್ಮ ಕೊನೆಯ ಎರಡು ಎಸೆತಗಳಲ್ಲಿ ಏನೋ ತಪ್ಪಾಗಿದೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದೀರಿ. ಇದಕ್ಕೆ ಗಾಯ ಕಾರಣನಾ?
- ಆ ಸಮಯದಲ್ಲಿ ನಾನು 100% ನೀಡುವತ್ತ ಗಮನಹರಿಸಿದ್ದೆ. ಇದಾದ ಬಳಿಕವಷ್ಟೇ ಗಾಯಗೊಂಡಿರುವುದು ಬೆಳಕಿಗೆ ಬಂತು. ಕೊನೆಯ ಎರಡು ಥ್ರೋಗಳಲ್ಲಿ ನನಗೆ ಏನೋ ತಪ್ಪಾಗಿದೆ ಎಂಬುದು ಅರಿವಾಗಿತ್ತು. ಆಮೇಲೆ ಗಾಯಗೊಂಡಿರುವುದು ತಿಳಿಯಿತು.
90 ಮೀ ಮಾರ್ಕ್ ಜಾವೆಲಿನ್ ಎಸೆತವನ್ನು ನೀವು ಹೇಗೆ ಎದುರು ನೋಡುತ್ತೀರಿ?
- ನಾನು 90 ಮೀಟರ್‌ನ ಸಮೀಪಕ್ಕೆ ಬಂದಿದ್ದೇನೆ. ನಾನು ಸ್ಟಾಕ್‌ಹೋಮ್‌ನಲ್ಲಿ 89.94 ಮೀ ಎಸೆದಿದ್ದೇನೆ. ಅದು 90ರ ಮಾರ್ಕ್‌ಗೆ ಬಹಳ ಹತ್ತಿರದಲ್ಲಿದೆ. ಆದರೆ ನಿರ್ದಿಷ್ಟ ಸ್ಪರ್ಧೆಯಲ್ಲಿ 90 ಮೀಟರ್ ಎಸೆಯಬೇಕು ಎಂಬ ಆಲೋಚನೆ ಇಲ್ಲ. ನಾನು ಸ್ಪರ್ಧಿಸುವ ಕಡೆಯೆಲ್ಲಾ ನನ್ನ ಅತ್ಯುತ್ತಮವಾದದ್ದನ್ನು ನೀಡಲು ನಾನು ಬಯಸುತ್ತೇನೆ. ಯಾವುದೇ ದಿನ ನಾನು ಆ ಮಾರ್ಕ್ ಅನ್ನು ದಾಟುತ್ತೇನೆ. ಹೀಗಾಗಿ ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನಾನು ತರಬೇತಿಯ ಬಗ್ಗೆ ಯೋಚಿಸುತ್ತೇನೆ ಮತ್ತು ಸ್ಪರ್ಧೆಯು ಪ್ರಾರಂಭವಾದಾಗ, ನಾನು ನನ್ನ 100% ಅನ್ನು ನೀಡುತ್ತೇನೆ.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲಾಗುತ್ತಿಲ್ಲ ಎಂಬ ನಿರಾಸೆ ಕಾಡುತ್ತಿದೆಯಾ?
- ನಿಸ್ಸಂಶಯವಾಗಿ ಅದು ಇದ್ದೇ ಇರುತ್ತದೆ. ಕೆಲವೊಮ್ಮೆ ಹೀಗೆಲ್ಲಾ ಸಂಭವಿಸುತ್ತದೆ. ಕ್ರೀಡಾಪಟುವಿನ ಜೀವನವೇ ಹಾಗೆ, ಏನು ಮಾಡಲಾಗುವುದಿಲ್ಲ. ನಿರ್ದಿಷ್ಟ ಸಮಯದಲ್ಲಿ ನೀವು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾನು ಈ ಸಂದರ್ಭದಲ್ಲಿ ಎಲ್ಲರ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ತೆಗೆದುಕೊಂಡಿದ್ದೇನೆ. ಬರ್ಮಿಂಗ್ಹ್ಯಾಮ್ನಲ್ಲಿ ಸ್ಪರ್ಧಿಸುತ್ತಿರುವ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ಬೆಸ್ಟ್ ವಿಶಸ್…. ನಿಮ್ಮ 100% ಸಾಮರ್ಥ್ಯದೊಂದಿಗೆ ಸ್ಪರ್ಧಿಸಿ, ಭಾರತವನ್ನು ಹೆಮ್ಮೆಪಡುವಂತೆ ಮಾಡಿ ಎಂದು ಇದೇ ವೇಳೆ ನೀರಜ್ ಚೋಪ್ರಾ ಕಾಮನ್‌ವೆಲ್ತ್ ಕ್ರೀಡಾಪಟುಗಳಿಗೆ ಶುಭಾಶಯ ತಿಳಿಸಿದರು.