India vs England Test Series: ಭಾರತೀಯ ಕ್ರಿಕೆಟ್​ಗೆ ಇಶಾಂತ್ ಶರ್ಮ ನೀಡಿರುವ ಸೇವೆ ಹೆಮ್ಮೆ ಮೂಡಿಸುತ್ತದೆ: ಸಚಿನ್ ತೆಂಡೂಲ್ಕರ್

|

Updated on: Feb 24, 2021 | 11:02 PM

ಚೆನೈಯಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಶಾಂತ್ ಟೆಸ್ಟ್ ಕ್ರಿಕೆಟ್​ನಲ್ಲಿ 300 ವಿಕೆಟ್​ ಪಡೆದ ಭಾರತದ 6ನೇ ಮತ್ತು 3ನೇ ವೇಗದ ಬೌಲರ್ ಎನಿಸಿದರು. ಅನಿಲ್ ಕುಂಬ್ಳೆ ಮತ್ತು ಕಪಿಲ್ ದೇವ್ ಅವರಂಥ ದಿಗ್ಗಜರ ಕ್ಲಬ್ ಅವರು ಸೇರಿದ್ದಾರೆ.

India vs England Test Series: ಭಾರತೀಯ ಕ್ರಿಕೆಟ್​ಗೆ ಇಶಾಂತ್ ಶರ್ಮ ನೀಡಿರುವ ಸೇವೆ ಹೆಮ್ಮೆ ಮೂಡಿಸುತ್ತದೆ: ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್ ಮತ್ತು ಇಶಾಂತ್ ಶರ್ಮ
Follow us on

ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬುಧವಾರದಂದು ತಮ್ಮ ನೂರನೇ ಟೆಸ್ಟ್ ಆಡಿದ ಇಶಾಂತ್ ಶರ್ಮ ಅವರನ್ನು ಅಭಿನಂದಿಸಿ, ವೇಗದ ಬೌಲರ್​ನೊಬ್ಬನಿಗೆ ಇದು ದೊಡ್ಡ ಸಾಹಸವೇ ಸರಿ ಎಂದು ಹೇಳಿದ್ದಾರೆ, ಆರಡಿ ಏಳಿಂಚು ಎತ್ತರವಿರುವ ಶರ್ಮ, ಭಾರತದ ಪರ 100 ನೇ ಟೆಸ್ಟ್​ ಅಡಿರುವ ಕೇವಲ ಎರಡನೇ ಬೌಲರ್​ ಆಗಿದ್ದಾರೆ. ಇವರಿಗಿಂತ ಮೊದಲು ಲೆಜೆಂಡರಿ ಆಲ್-ರೌಂಡರ್ ಕಪಿಲ್ ದೇವ್ ಈ ಸಾಧನೆ ಮಾಡಿದ್ದಾರೆ. ಅಹಮದಾಬಾದ್​ ಹೊರವಲಯದಲ್ಲಿರುವ ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬುಧವಾರದಂದು ಶುಭಾರಂಭ ಮಾಡಿದ ಶರ್ಮ ತಮ್ಮ ಎರಡನೇ ಓವರಿನಲ್ಲೇ ವಿಕೆಟ್ ಪಡೆದರು.

‘ಯಾವುದೇ ಒಬ್ಬ ಕ್ರಿಕೆಟ್​ ಅಟಗಾರನಿಗೆ ಅದರಲ್ಲೂ ವಿಶೇಷವಾಗಿ ಒಬ್ಬ ವೇಗದ ಬೌಲರ್​ನಿಗೆ 100 ಟೆಸ್ಟ್​ಗಳನ್ನಾಡುವುದೇ ಒಂದು ದೊಡ್ಡ ಮೈಲಿಗಲ್ಲು. ನಿಮ್ಮೊಂದಿಗೆ ಅಂಡರ್-19 ಪಂದ್ಯಗಳಲ್ಲಿ ಆಡುವುದರ ಜೊತೆಗೆ ನೀವು ಆಡಿದ ಮೊದಲ ಟೆಸ್ಟ್​ನಲ್ಲೂ ನಾನಿದ್ದೆ, ಟೀಮ್ ಇಂಡಿಯಾಗೆ ನೀವು ನೀಡಿರುವ ಸೇವೆಯ ಬಗ್ಗೆ ಹೆಮ್ಮೆಯೆನಿಸುತ್ತಿದೆ,’ ಎಂದು ಟ್ವೀಟ್ ಮಾಡಿರುವ ಸಚಿನ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

 

ಚೆನೈಯಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಶಾಂತ್ ಈ ಆವೃತ್ತಿಯಲ್ಲಿ 300 ವಿಕೆಟ್​ ಪಡೆದ ಭಾರತದ 6ನೇ ಮತ್ತು 3ನೇ ವೇಗದ ಬೌಲರ್ ಎನಿಸಿದರು. ಅನಿಲ್ ಕುಂಬ್ಳೆ ಮತ್ತು ಕಪಿಲ್ ದೇವ್ ಅವರಂಥ ದಿಗ್ಗಜರ ಕ್ಲಬ್ ಅವರು ಸೇರಿದ್ದಾರೆ.

ಕ್ರೀಡಾ ಚ್ಯಾನೆಲೊಂದರ ಜೊತೆ ಮಾತಾಡಿದ ಭಾರತದ ಮಾಜಿ ವೇಗದ ಬೌಲರ್ ಆಶಿಷ್ ನೆಹ್ರಾ ಸಹ ಇಶಾಂತ್ ಅವರ ಸಾಧನೆಯನ್ನು ಕೊಂಡಾಡಿದರು.
‘ವೇಗದ ಬೌಲರ್ ಯಾವುದೇ ದೇಶದವನಾಗಿರಲಿ, 100 ಟೆಸ್ಟ್​ ಪಂದ್ಯಗಳನ್ನಾಸುವುದು ಅವನ ಪಾಲಿಗೆ ದೊಡ್ಡ ಸಾಧನೆಯೇ ಸರಿ. ಜನ ಇಶಾಂತ್ ಶರ್ಮ ಬೌಲಿಂಗ್ ಮಾಡುವಾಗ ಎಸೆಯುವ ಲೆಂಗ್ತ್ ಕುರಿತು ಮಾತಾಡುತ್ತಾರೆ. ಆದರೆ ಅವರೀಗ ಅದನ್ನು ಬದಲಾಯಿಸಿಕೊಂಡು ಉತ್ತಮ ಬೌಲ್ ಎನಿಸಿಕೊಂಡಿದ್ದಾರೆ. ಅದಲ್ಲದೆ ಅವರಿನ್ನೂ ಹಳೆಯ ಇಶಾಂತ್ ಶರ್ಮ ಆಗಿಯೇ ಉಳಿದಿದ್ದಾರೆ. ಬಲಗೈ ಬ್ಯಾಟ್ಸ್​ಮನ್​ಗಳಿಗೆ ಅವರ ಎಸೆಯುವ ಇನ್​ಸ್ವಿಂಗರ್ ಈಗಲೂ ಪರಿಣಾಮಕಾರಿಯಾಗಿಯೇ ಉಳಿದಿದೆ,’ ಎಂದು ನೆಹ್ರಾ ಹೇಳಿದ್ದಾರೆ.

ಇಶಾಂತ್ ಇದುವರೆಗಿನ ತಮ್ಮ ಟೆಸ್ಟ್​ ಕರೀಯರ್​ನಲ್ಲಿ 11 ಬಾರಿ 5ವಿಕೆಟ್​ಗಳನ್ನು ಪಡೆದಿದ್ದಾರೆ ಮತ್ತು ಟೆಸ್ಟ್​ ಒಂದರಲ್ಲಿ 10 ವಿಕಟ್​ ಪಡೆಯುವ ಸಾಧನೆಯನ್ನು ಒಮ್ಮೆ ಮಾಡಿದ್ದಾರೆ. ತಮ್ಮ ಕರೀಯರ್​ನ ಆರಂಭದಲ್ಲಿ ಆಸ್ಟ್ರೇಲಿಯಾ ಪ್ರವಾಸ ಹೋಗಿದ್ದ ಇಶಾಂತ್ಟೆಸ್ಟ್ ಸರಣಿಯ ಪಂದ್ಯವೊಂದರಲ್ಲಿ ಆಗಿನ ನಾಯಕ ಮತ್ತು ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿದ್ದ ರಿಕ್ ಪಾಂಟಿಂಗ್ ಅವರಿಗೆ ಎಸೆದ ಒಂದು ಸ್ಪೆಲ್ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಇನ್ನೂ ಹಸಿರಾಗಿ ಉಳಿದಿದೆ.

ಆಶಿಷ್ ನೆಹ್ರಾ

ಇಶಾಂತ್ ಅವರ ಬೌಲಿಂಗ್ ಕುರಿತು ಇನ್ನಷ್ಟು ಮಾತಾಡಿರುವ ನೆಹ್ರಾ, ‘ಕಳೆದ 2 ವರ್ಷಗಳ ಅವಧಿಯಲ್ಲಿ ಅವರು ಎಡಗೈ ಬ್ಯಾಟ್ಸ್​ಮನ್​ಗಳಿಗೂ ಒಳನುಗ್ಗುವ ಎಸೆತಗಳನ್ನು ಬೌಲ್ ಮಾಡುತ್ತಿದ್ದಾರೆ. ಅದರರ್ಥ ಅವರ ಕ್ರೀಡೆಯ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿಲ್ಲ. ತಮ್ಮ ಬತ್ತಳಿಕೆಗೆ ಹೊಸ ಅಸ್ತ್ರಗಳನ್ನು ಸೇರಿಸಿಕೊಳ್ಳುವ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಅವರ ಪ್ರಯತ್ನಗಳು ಫಲ ನೀಡುತ್ತಿರುವುದು ಭಾರತಕ್ಕೆ ಮಹತ್ವದ ಸಂಗತಿ,’ ಎಂದು ಹೇಳಿದ್ದಾರೆ.

ಇಶಾಂತ್ ಶರ್ಮ ಅವರು ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು 2007ರಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಸರಣಿಯಲ್ಲಿ. ತೊಡೆ ನೋವಿನ ಕಾರಣದಿಂದಾಗಿ ಅವರು ಇತ್ತೀಚಿಗೆ ನಡೆದ 4-ಟೆಸ್ಟ್​ಗಳ ಆಸ್ಟ್ರೇಲಿಯಾ ಸರಣಿಯನ್ನು ಮಿಸ್​ ಮಾಡಿಕೊಂಡಿದ್ದರು.

ಇದನ್ನೂ ಓದಿ: India vs England Test Series: ಅಶ್ವಿನ್​ಗೆ ಸುಲಭ ತುತ್ತಾಗುತ್ತಿರುವ ಸ್ಟೋಕ್ಸ್​ಗೆ ಮಾಜಿ ಕ್ಯಾಪ್ಟನ್​ ನಾಸರ್ ಹುಸೇನ್ ಹಿತವಚನ