90 ಎಸೆತಗಳಲ್ಲಿ 190 ರನ್ ಚಚ್ಚಿದ ವೈಭವ್ ಸೂರ್ಯವಂಶಿ

Vaibhav Suryavanshi: ಐಪಿಎಲ್‌ನಲ್ಲಿ ಸಂಚಲನ ಮೂಡಿಸಿದ 14 ವರ್ಷದ ವೈಭವ್ ಸೂರ್ಯವಂಶಿ ಅವರು ಇತ್ತೀಚೆಗೆ ನಡೆದ ಅಭ್ಯಾಸ ಪಂದ್ಯದಲ್ಲಿ 90 ಎಸೆತಗಳಲ್ಲಿ 190 ರನ್ ಗಳಿಸಿ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಬಿಸಿಸಿಐ ಎಕ್ಸಲೆನ್ಸ್ ಸೆಂಟರ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಅವರ ಅದ್ಭುತ ಬ್ಯಾಟಿಂಗ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ ಅವರ ಈ ಪ್ರದರ್ಶನ ಭಾರತ ಅಂಡರ್-19 ತಂಡಕ್ಕೆ ಹೆಚ್ಚಿನ ಉತ್ಸಾಹ ತುಂಬಿದೆ.

90 ಎಸೆತಗಳಲ್ಲಿ 190 ರನ್ ಚಚ್ಚಿದ ವೈಭವ್ ಸೂರ್ಯವಂಶಿ
Vaibhav Suryavanshi

Updated on: Jun 11, 2025 | 5:29 PM

ಐಪಿಎಲ್‌ನಲ್ಲಿ (IPL 2025) ಕೋಲಾಹಲ ಸೃಷ್ಟಿಸಿದ್ದ 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi) ಇದೀಗ ಅಭ್ಯಾಸ ಪಂದ್ಯಗಳಲ್ಲಿಯೂ ತಮ್ಮ ಬ್ಯಾಟಿಂಗ್ ಮೂಲಕ ಸಂಚಲನ ಸೃಷ್ಟಿಸುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದ ಭಾರತದ ಅಂಡರ್ -19 ತಂಡದ ಅಭ್ಯಾಸ ಪಂದ್ಯದಲ್ಲಿ ವೈಭವ್ ಕೇವಲ 90 ಎಸೆತಗಳಲ್ಲಿ 190 ರನ್ ಬಾರಿಸಿ ಅಬ್ಬರದ ಇನ್ನಿಂಗ್ಸ್ ಆಡಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿರುವಂತೆ ಸೂರ್ಯವಂಶಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿದ್ದಾರೆ.

90 ಎಸೆತಗಳಲ್ಲಿ 190 ರನ್

14 ವರ್ಷದ ಎಡಗೈ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಇಂಗ್ಲೆಂಡ್‌ಗೆ ಹೋಗುವ ಮೊದಲು ಎನ್‌ಸಿಎಯಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಏಕಾಂಗಿಯಾಗಿ ಸ್ಫೋಟಕ ಪ್ರದರ್ಶನ ನೀಡಿದ್ದಾರೆ. ವರದಿಯ ಪ್ರಕಾರ 200 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದ ವೈಭವ್ ಕೇವಲ 90 ಎಸೆತಗಳಲ್ಲಿ 190 ರನ್ ಬಾರಿಸಿದರು. ಆದಾಗ್ಯೂ, ಅವರು ಎಷ್ಟು ಸಿಕ್ಸರ್‌ಗಳನ್ನು ಬಾರಿಸಿದರು ಎಂಬುದರ ಕುರಿತು ಖಚಿತ ಮಾಹಿತಿ ತಿಳಿದುಬಂದಿಲ್ಲ.

ಐಪಿಎಲ್​ನಲ್ಲಿ ವೇಗದ ಶತಕ

ಐಪಿಎಲ್ 2025 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದ ವೈಭವ್ ಸೂರ್ಯವಂಶಿ ಕೇವಲ 7 ಪಂದ್ಯಗಳನ್ನು ಆಡಿ, 206 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 250 ಕ್ಕೂ ಹೆಚ್ಚು ರನ್ ಗಳಿಸಿದರು. ಇದೇ ವೇಳೆ ಅವರು ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆಯನ್ನು ಬರೆದರು.ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್ ಸೂರ್ಯವಂಶಿ, ಇದರೊಂದಿಗೆ ಕ್ರಿಸ್ ಗೇಲ್ ನಂತರ ಐಪಿಎಲ್‌ನಲ್ಲಿ ವೇಗದ ಶತಕ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದರು.

ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ; ವಿಡಿಯೋ

ಭಾರತ ಅಂ-19 ತಂಡದಲ್ಲಿ ಸ್ಥಾನ

ಐಪಿಎಲ್‌ನಲ್ಲಿ ಅಬ್ಬರಿಸಿದ್ದ ವೈಭವ್​ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ಗೆ ಹೋಗುವ ಮೊದಲು, ಬೆಂಗಳೂರಿನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ವೈಭವ್ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ, ಭಾರತ ಅಂಡರ್ 19 ತಂಡವು ಇಂಗ್ಲೆಂಡ್ ಅಂಡರ್ 19 ತಂಡದ ವಿರುದ್ಧ 50 ಓವರ್‌ಗಳ ಅಭ್ಯಾಸ ಪಂದ್ಯದ ನಂತರ 5 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದರ ನಂತರ, 2 ಬಹು-ದಿನದ ಪಂದ್ಯಗಳನ್ನು ಸಹ ಆಡಲಾಗುವುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Wed, 11 June 25