ವಿರಾಟ್ ಕೊಹ್ಲಿ (Virat Kohli) ತಮ್ಮ ವೃತ್ತಿ ಜೀವನದಲ್ಲಿ ಹಲವು ರೋಚಕ ಪಂದ್ಯಗಳನ್ನು ಗೆದ್ದಿದ್ದಾರೆ. ಒಂದಷ್ಟು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಅದರಲ್ಲೂ ತಮ್ಮ ನಾಯಕತ್ವದಲ್ಲಿ ಕೊಹ್ಲಿ ಭರ್ಜರಿ ಪ್ರದರ್ಶನವನ್ನೇ ನೀಡಿದ್ದಾರೆ. ಇದಾಗ್ಯೂ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಟೀಮ್ ಇಂಡಿಯಾ ಐಸಿಸಿ ಟೂರ್ನಿಗಳಲ್ಲಿನ ನಿರ್ಣಾಯಕ ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ನಿರಾಸೆ ಮೂಡಿಸಿತ್ತು. ಅದು ಇತ್ತೀಚೆಗಿನ ಟಿ20 ವಿಶ್ವಕಪ್‌ನಲ್ಲಿನ ಹೀನಾಯ ಸೋಲಾಗಿರಬಹುದು, ಅಥವಾ 2019 ರ ವಿಶ್ವಕಪ್ನ ಸೆಮಿಫೈನಲ್ ಸೋಲಿರಬಹುದು. ಅಷ್ಟೇ ಅಲ್ಲದೆ 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ದ ಪರಾಜಯ ಆಗಿರಬಹುದು. ಈ ಮೂರು ಸೋಲುಗಳಿಗೆ ಸ್ವತಃ ವಿರಾಟ್ ಕೊಹ್ಲಿಯೇ ಸಾಕ್ಷಿ. ಆದರೆ ಈ ಎಲ್ಲಾ ಸೋಲುಗಳಿಗಿಂತ ತನ್ನನ್ನು ಕಾಡಿದ ಸೋಲುಗಳ ಬಗ್ಗೆ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಕೊಹ್ಲಿ, ಎರಡು ಸೋಲುಗಳು ನನಗೆ ತುಂಬಾ ನೋವುಂಟು ಮಾಡಿತ್ತು. ಆ ಪರಾಜಯದಿಂದಾಗಿ ನನ್ನ ಹೃದಯವೇ ಒಡೆದಂತಾಗಿತ್ತು. ಅದರಲ್ಲಿ ಒಂದು 2016ರ ವಿಶ್ವಕಪ್ ಸೆಮಿಫೈನಲ್ ಪಂದ್ಯ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಭಾರತ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 192 ರನ್ ಗಳಿಸಿತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ ಅಜೇಯ 89 ರನ್ ಗಳಿಸಿದ್ದರು. ಆದರೆ ವೆಸ್ಟ್ ಇಂಡೀಸ್ 2 ಎಸೆತಗಳು ಬಾಕಿಯಿರುವಾಗಲೇ 193 ರನ್ಗಳಿಸಿ ಭರ್ಜರಿ ಜಯ ಸಾಧಿಸಿತು. ಅಂದು ತವರಿನಲ್ಲಿ ಟಿ20 ವಿಶ್ವಕಪ್ ಗೆಲ್ಲದಿರುವುದು ತುಂಬಾ ದುಃಖಕರವಾಗಿತ್ತು ಎಂದು ಕೊಹ್ಲಿ ಹೇಳಿದ್ದಾರೆ.
ಇನ್ನು ಮತ್ತೊಂದು ಸೋಲೆಂದರೆ ಐಪಿಎಲ್ 2016 ರ ಫೈನಲ್ನಲ್ಲಿನ ಪರಾಜಯ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಕೇವಲ 8 ರನ್‌ಗಳಿಂದ ಸೋತಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಹೆಚ್ 208 ರನ್ ಗಳಿಸಿತು. 209 ರನ್ಗಳನ್ನು ಬೆನ್ನತ್ತಿದ RCB ಮೊದಲ ವಿಕೆಟ್‌ಗೆ 114 ರನ್ ಜೊತೆಯಾಟವಾಡಿದ್ದರು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ 54 ಮತ್ತು ಗೇಲ್ 76 ರನ್ ಗಳಿಸಿದ್ದರು. ಇದಾದ ಬಳಿಕ ಆರ್‌ಸಿಬಿ ಮಧ್ಯಮ ಕ್ರಮಾಂಕ ಸಂಪೂರ್ಣ ಕುಸಿಯಿತು. ಅಲ್ಲದೆ ಆರ್‌ಸಿಬಿ 8 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಸೋಲು ಕೂಡ ನನ್ನ ಪಾಲಿನ ಅತ್ಯಂತ ದುಃಖದಾಯಕ ಸೋಲಾಗಿದೆ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?
ಇದನ್ನೂ ಓದಿ: IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು