T20 World Cup 2026: ದಕ್ಷಿಣ ಆಫ್ರಿಕಾ ತಂಡದಿಂದ ಇಬ್ಬರು ಔಟ್; ಬದಲಿಯಾಗಿ ಇಬ್ಬರ ಆಯ್ಕೆ
T20 World Cup 2026: 2026ರ ಟಿ20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ತಂಡ ಗಾಯದ ಸಮಸ್ಯೆಯಿಂದ ಕಂಗೆಟ್ಟಿದೆ. ಟೋನಿ ಡಿ ಜಾರ್ಜಿ ಮತ್ತು ಡೊನೊವನ್ ಫೆರೇರಾ ಗಾಯಗೊಂಡು ಹೊರಬಿದ್ದಿದ್ದು, ರಯಾನ್ ರಿಕಲ್ಟನ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ ಕೂಡ ಗಾಯಗೊಂಡಿದ್ದು, ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಿದ್ದಾರೆ. ತಂಡದಲ್ಲಿ ಮತ್ತಷ್ಟು ಬದಲಾವಣೆಗಳಾಗುವ ಸಾಧ್ಯತೆಯಿದೆ.

2026 ರ ಟಿ20 ವಿಶ್ವಕಪ್ಗಾಗಿ (T20 World Cup 2026) ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ತೀವ್ರಗೊಳಿಸಿವೆ. ಇದೆಲ್ಲದರ ನಡುವೆ ಕೆಲವು ತಂಡಗಳಿಗೆ ಆಟಗಾರರ ಇಂಜುರಿ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆಟಗಾರರ ಗಾಯದಿಂದ ಸಂಕಷ್ಟಕ್ಕೆ ಸಿಲುಕಿರುವ ತಂಡಗಳ ಪಟ್ಟಿಯಲ್ಲಿ ಟೀಂ ಇಂಡಿಯಾವೂ ಸೇರಿದೆ. ಇದೀಗ ಆ ಪಟ್ಟಿಗೆ ಕಳೆದ ಬಾರಿಯ ರನ್ನರ್ ಅಪ್ ದಕ್ಷಿಣ ಆಫ್ರಿಕಾ ತಂಡ ಸೇರಿಕೊಂಡಿದೆ. ಗಾಯದ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ತಂಡದ ಇಬ್ಬರು ಆಟಗಾರರು ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಅವರ ಬದಲಿಯಾಗಿ ಮತ್ತಿಬ್ಬರು ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿದೆ.
ಆಫ್ರಿಕಾ ತಂಡದಲ್ಲಿ 2 ಬದಲಾವಣೆ
2026 ರ ಟಿ20 ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ದೊಡ್ಡ ಹಿನ್ನಡೆ ಅನುಭವಿಸಿದೆ. ಟೋನಿ ಡಿ ಜಾರ್ಜಿ ಮತ್ತು ಡೊನೊವನ್ ಫೆರೇರಾ ಗಾಯದ ಕಾರಣದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಡಿಸೆಂಬರ್‌ನಲ್ಲಿ ಭಾರತ ಪ್ರವಾಸದ ಸಮಯದಲ್ಲಿ ಟೋನಿ ಡಿ ಜಾರ್ಜಿ ಅವರಿಗೆ ಮಂಡಿರಜ್ಜು ನೋವು ಕಾಣಿಸಿಕೊಂಡಿತು, ಅದರಿಂದ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇತ್ತ ಎಸ್‌ಎ 20 ಲೀಗ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಡೊನೊವನ್ ಫೆರೇರಾ ಕೂಡ ಭುಜದ ಗಾಯಕ್ಕೆ ತುತ್ತಾಗಿದ್ದರು. ಪರಿಣಾಮವಾಗಿ, ಇಬ್ಬರೂ ಆಟಗಾರರು ಟಿ20 ವಿಶ್ವಕಪ್ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.
ಈ ಇಬ್ಬರು ಆಟಗಾರರಿಗೆ ಬದಲಿಯಾಗಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಯಾನ್ ರಿಕಲ್ಟನ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರಸ್ತುತ ಉತ್ತಮ ಫಾರ್ಮ್ನಲ್ಲಿರುವ ರಿಕಲ್ಟನ್ SA20 ಲೀಗ್‌ನಲ್ಲಿ 156.01 ಸ್ಟ್ರೈಕ್ ರೇಟ್‌ನೊಂದಿಗೆ 337 ರನ್ ಗಳಿಸಿದ್ದಾರೆ.
SQUAD ANNOUNCEMENT and WORLD CUP UPDATE 🚨
Proteas Men’s batters Tony de Zorzi and Donovan Ferreira have been ruled out of the upcoming three-match KFC T20 International (T20I) series against West Indies and the ICC Men’s T20 World Cup 2026 in India and Sri Lanka due to injury.… pic.twitter.com/BG0fjU2eR0
— Proteas Men (@ProteasMenCSA) January 22, 2026
ಈ ಆಟಗಾರರು ಕೂಡ ಗಾಯಗೊಂಡಿದ್ದಾರೆ
ದಕ್ಷಿಣ ಆಫ್ರಿಕಾದ ಚಿಂತೆಗಳು ಇನ್ನೂ ದೂರವಾಗಿಲ್ಲ. ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ ಮತ್ತು ಡೆವಾಲ್ಡ್ ಬ್ರೆವಿಸ್ ಕೂಡ ಇಂಜುರಿಗೆ ತುತ್ತಾಗಿದ್ದು, ಫಿಟ್‌ನೆಸ್ ಪರೀಕ್ಷೆಗಳಿಗೆ ಒಳಗಾಗುತ್ತಿದ್ದಾರೆ. ಪರಿಣಾಮವಾಗಿ, ತಂಡದಲ್ಲಿ ಮತ್ತಷ್ಟು ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಐಸಿಸಿ ನಿಯಮಗಳ ಪ್ರಕಾರ, ಜನವರಿ 31 ರವರೆಗೆ ಪೂರ್ವಾನುಮತಿ ಇಲ್ಲದೆ ತಂಡ ಬದಲಾವಣೆಗಳನ್ನು ಮಾಡಬಹುದು. ಅದರ ನಂತರ, ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ಐಸಿಸಿ ಅನುಮೋದನೆ ಅಗತ್ಯವಿರುತ್ತದೆ.
T20 World Cup 2026: ಟಿ20 ವಿಶ್ವಕಪ್ ಬಹಿಷ್ಕರಿಸಿದ ಬಾಂಗ್ಲಾದೇಶ
ದಕ್ಷಿಣ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಕಾರ್ಬಿನ್ ಬಾಷ್, ಡೆವಾಲ್ಡ್ ಬ್ರೆವಿಸ್, ಕ್ವಿಂಟನ್ ಡಿ ಕಾಕ್, ಮಾರ್ಕೊ ಯಾನ್ಸೆನ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಕ್ವೆನಾ ಮಫಕಾ, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಅನ್ರಿಚ್ ನೋಕಿಯಾ, ಕಗಿಸೊ ರಬಾಡಾ, ರಯಾನ್ ರಿಕೆಲ್ಟನ್, ಜೇಸನ್ ಸ್ಮಿತ್ ಮತ್ತು ಟ್ರಿಸ್ಟಾನ್ ಸ್ಟಬ್ಸ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:53 pm, Thu, 22 January 26
